ಮತ್ತೆ ರಫೇಲ್ ಪೇಚಿಗೆ ಸಿಕ್ಕ ರಾಗಾ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ಸಂಬಂಧ ನಿರೂಪಿಸಿಯೇ ತೀರುವೆ ಎಂಬ ಅವಸರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪೇಚಿಗೆ ಸಿಲುಕಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿಯನ್ನು ಫ್ರಾನ್ಸ್​ನಲ್ಲಿ ಘೋಷಿಸುವ ಮುನ್ನವೇ ರಿಲಯನ್ಸ್ ಡಿಫೆನ್ಸ್ ಮಾಲೀಕ ಅನಿಲ್ ಅಂಬಾನಿ ಫ್ರಾನ್ಸ್ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದರು. ಒಪ್ಪಂದಕ್ಕೆ ಹಸಿರು ನಿಶಾನೆ ತೋರುವ 10 ದಿನಗಳ ಹಿಂದೆಯೇ ಒಪ್ಪಂದದ ಬಗ್ಗೆ ಅನಿಲ್ ಅಂಬಾನಿ ಖಾತ್ರಿಪಡಿಸಿರುವ ಇ-ಮೇಲ್ ದೊರೆತಿದೆ ಎಂದು ರಾಹುಲ್ ಗಾಂಧಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಏರ್​ಬಸ್ ಹಾಗೂ ಅಂಬಾನಿ ನಡುವಿನ ಸಂವಹನದ ಇ-ಮೇಲ್ ಪ್ರತಿಯನ್ನು ತೋರಿಸಿದರು.

ಇದರಿಂದ ಮೋದಿ ಹಾಗೂ ಅಂಬಾನಿ ನಡುವಿನ ವ್ಯವಹಾರ ಬಹಿರಂಗವಾಗಿದೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 30 ಸಾವಿರ ಕೋಟಿ ರೂ. ಲೂಟಿ ಮಾಡಿರುವುದು ಖಾತ್ರಿಯಾಗಿದೆ ಎಂದು ರಾಹುಲ್ ಕಿಡಿಕಾರಿದರು. ಆದರೆ ರಿಲಯನ್ಸ್ ಡಿಫೆನ್ಸ್ ಹಾಗೂ ಕೇಂದ್ರ ಸರ್ಕಾರದ ಸ್ಪಷ್ಟನೆ ಬಳಿಕ ಇ-ಮೇಲ್ ಸಂವಹನ ರಫೇಲ್​ಗೆ ಸಂಬಂಧಿಸಿರಲಿಲ್ಲ. ಬದಲಿಗೆ ಹೆಲಿಕಾಪ್ಟರ್ ವಿಚಾರಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಆತುರದಲ್ಲಿ ದಾಖಲೆ ಬಿಡುಗಡೆ ಮಾಡಿದರೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಹೆಲಿಕಾಪ್ಟರ್ ಮೇಲ್!

ರಾಹುಲ್ ಗಾಂಧಿ ಸುದ್ದಿಗೋಷ್ಠಿ ಆಗುತ್ತಿದ್ದಂತೆ ರಿಲಯನ್ಸ್ ಡಿಫೆನ್ಸ್ ಕಂಪನಿ ಪ್ರಕಟಣೆ ಹೊರಡಿಸಿ, ಆರೋಪವನ್ನು ಅಲ್ಲಗಳೆಯಿತು. ರಾಹುಲ್ ಬಿಡುಗಡೆ ಮಾಡಿರುವ ಇ-ಮೇಲ್​ನಲ್ಲಿ ರಫೇಲ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬದಲಾಗಿ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಏರ್​ಬಸ್ ಹೆಲಿಕಾಪ್ಟರ್ ಉತ್ಪಾದನೆ ಕುರಿತು ಮಾತುಕತೆ ನಡೆದಿತ್ತು. ಈ ಹೆಲಿಕಾಪ್ಟರ್ ಉತ್ಪಾದನೆ ಆರಂಭಿಕ ಹಂತದಲ್ಲಿ ವಾಣಿಜ್ಯ ಉದ್ದೇಶಕ್ಕೆ ಸೀಮಿತವಾಗಿದೆ. ಅನವಶ್ಯಕವಾಗಿ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಜತೆ ನಂಟು ಹಾಕಲಾಗುತ್ತಿದೆ ಎಂದು ವಕ್ತಾರರು ಸ್ಪಷ್ಟನೆ ನೀಡಿದರು. ಈ ಸ್ಪಷ್ಟನೆಗೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್​ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಚೌಕಿದಾರ್ ಆಡಿಟರ್!

ರಫೇಲ್ ಕುರಿತ ಸಿಎಜಿ ವರದಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್​ಚಿಟ್ ದೊರೆಯುವ ಸಾಧ್ಯತೆಯಿದೆ ಎಂಬ ವರದಿಗಳು ಬರುತ್ತಿದ್ದಂತೆ ರಾಹುಲ್ ಗಾಂಧಿ ಯೂ-ಟರ್ನ್ ಹೊಡೆದಿದ್ದಾರೆ. ‘ಸಿಎಜಿ ವರದಿ ಎಲ್ಲಿದೆ?’ ಎಂದು ಈ ಹಿಂದೆ ಪ್ರಶ್ನಿಸುತ್ತಿದ್ದ ರಾಹುಲ್, ಈಗ ಸಿಎಜಿ ವರದಿಯನ್ನು ‘ಚೌಕಿದಾರ್ ಆಡಿಟರ್ ಜನರಲ್ ರಿಪೋರ್ಟ್’ ಎಂದಿದ್ದಾರೆ. ಮೋದಿಯು, ಮೋದಿಗಾಗಿ, ಮೋದಿಯಿಂದ ತಯಾರಾಗಿರುವ ವರದಿ ಇದಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಮತ್ತೆ ಕಾನೂನು ಹೋರಾಟ ಅನಿವಾರ್ಯ ಎಂದು ರಾಹುಲ್ ತಿಳಿಸಿದ್ದಾರೆ.

ವಂಚಕ ಕಂಪನಿಯ ಏಜೆಂಟ್!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಫೇಲ್ ಒಪ್ಪಂದ ವಿಚಾರವಾಗಿ ಪ್ರತಿದಿನ ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿಗೆ ಸರ್ಕಾರ ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ರಫೇಲ್ ಪ್ರತಿಸ್ಪರ್ಧಿ ಹಾಗೂ ವಂಚಕ ಕಂಪನಿಗಳ ಏಜೆಂಟ್​ರಂತೆ ರಾಹುಲ್ ವರ್ತಿಸುತ್ತಿದ್ದಾರೆ. ಯಾವ ಕಂಪನಿಯ ಏಜೆಂಟ್ ಎನ್ನುವುದನ್ನು ರಾಹುಲ್ ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಏರ್​ಬಸ್ ಕಂಪನಿ ಜತೆಗಿನ ಇ-ಮೇಲ್ ರಾಹುಲ್​ಗೆ ಹೇಗೆ ದೊರೆಯಿತು? ಏರ್​ಬಸ್ ಹಾಗೂ ರಾಹುಲ್ ನಡುವಿನ ನಂಟೇನು? ರಫೇಲ್ ಒಪ್ಪಂದ ರದ್ದುಪಡಿಸಲು ಅಷ್ಟೊಂದು ಆಸಕ್ತಿ ತೋರುತ್ತಿರುವುದೇಕೆ? ಯಾವ ಪ್ರತಿಸ್ಪರ್ಧಿ ಕಂಪನಿ ಜತೆ ರಾಹುಲ್ ಸೇರಿಕೊಂಡಿದ್ದಾರೆ ಎನ್ನುವುದನ್ನು ದೇಶಕ್ಕೆ ತಿಳಿಸಲಿ. ಯುಪಿಎ ಅವಧಿಯಲ್ಲಿ ಸಂಪುಟ ಸಭೆಯ ಪ್ರತಿಗಳು ಮಿಶೆಲ್​ಗೆ ತಲುಪುತ್ತಿತ್ತು. ಆದರೆ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಅಂತಹ ಕಾರ್ಯ ಆಗಿಲ್ಲ. ದುರುದ್ದೇಶದಿಂದ ಹೆಲಿಕಾಪ್ಟರ್ ಕುರಿತ ಸಂವಹನವನ್ನು ರಫೇಲ್ ಜತೆ ನಂಟು ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಏರ್​ಬಸ್​ನಿಂದ -ಠಿ;100 ಕೋಟಿ ಲಂಚ

ಯುಪಿಎ ಅವಧಿಯಲ್ಲಿ ಏರ್​ಬಸ್ ಕಂಪನಿ ಜತೆ ನಡೆದ ವ್ಯವಹಾರದಲ್ಲಿ ಮಧ್ಯವರ್ತಿ ರಾಜೀವ್ ಸಕ್ಸೇನಾ ಖಾತೆ ಮೂಲಕ 100 ಕೋಟಿ ರೂ.ಗೂ ಅಧಿಕ ಮೊತ್ತದ ಲಂಚ ರವಾನೆಯಾಗಿರುವ ದಾಖಲೆಗಳು ಲಭ್ಯವಾಗಿವೆ. ಸದ್ಯ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇಂತಹ ವಂಚಕ ಕಂಪನಿಯ ಇ-ಮೇಲ್ ಇರಿಸಿಕೊಂಡು ಜಾಮೀನಿನ ಮೇಲೆ ಹೊರಗಿರುವ ವ್ಯಕ್ತಿ ಪ್ರಧಾನಿ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ರಾಹುಲ್ ವಿರುದ್ಧ ಪರೋಕ್ಷವಾಗಿ ಸಚಿವ ರವಿಶಂಕರ್ ಪ್ರಸಾದ್ ಕುಟುಕಿದ್ದಾರೆ.

ಸಿಎಜಿ ವರದಿ ಗದ್ದಲ

ಪ್ರಸಕ್ತ ಲೋಕಸಭೆಯ ಕೊನೆಯ ಕಲಾಪ ಬುಧವಾರ ನಡೆಯಲಿದೆ. ಹೀಗಾಗಿ ರಫೇಲ್ ಕುರಿತ ಸಿಎಜಿ ವರದಿಯು ಮಂಗಳವಾರ ಮಂಡನೆಯಾಗುವ ನಿರೀಕ್ಷೆಯಿತ್ತು. ಆದರೆ ಬುಧವಾರ ಬೆಳಗ್ಗೆ ಮಂಡನೆಯಾಗುವ ಸಾಧ್ಯತೆಯಿದೆ. ಏತನ್ಮಧ್ಯೆ ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲೇ ಮಾಧ್ಯಮಗಳಿಗೆ ವರದಿ ಸೋರಿಕೆಯಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆದರೆ ಈ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.

ಅನಿಲ್ ಅಂಬಾನಿ ಕಂಪನಿಗೆ ಆಫ್​ಸೆಟ್ ಗುತ್ತಿಗೆ ಕೊಡಿಸಲು ಪ್ರಧಾನಿ ಮೋದಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ರಫೇಲ್ ಒಪ್ಪಂದ ಕುರಿತು ಮೊದಲೇ ಅಂಬಾನಿಗೆ ಮಾಹಿತಿ ಇತ್ತು. ದೇಶದ ಚೌಕಿದಾರ್ ಕಳ್ಳ ಎನ್ನುವುದು ಮತ್ತೆ ಸಾಬೀತಾಗಿದೆ.

| ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ