ಟೊಮ್ಯಾಟೋ ಬೆಲೆ ಏರಿಕೆಯಿಂದ ರೈತ ಸಂತಸ

ಚಿಕ್ಕಮಗಳೂರು: ಸುದೀರ್ಘ ಎರಡು ವರ್ಷದ ನಂತರ ಟೊಮ್ಯಾಟೋ ಬೆಲೆ ಏರಿಕೆಯಾಗಿದ್ದು, ಬೆಳೆಗಾರನ ಮೊಗದಲ್ಲಿ ಸಂತಸ ಕಂಡರೆ ಗ್ರಾಹಕ ಕಂಗೆಡುವಂತಾಗಿದೆ.

ಕೆಜಿಗೆ 10-15 ರೂ. ಇದ್ದ ಬೆಲೆ ಈಗ 40-45 ರೂ. ತನಕ ಜಿಗಿದಿದೆ. ವಾರಕ್ಕೆ ಎರಡು ಮೂರು ಕೆಜಿ ಖರೀದಿ ಮಾಡುವವರು ಈಗ ಅರ್ಧ ಕೆಜಿಗೆ ಸುಸ್ತಾಗುತ್ತಿದ್ದಾರೆ. ಕೆಲವರು ಟೊಮ್ಯಾಟೋಗೆ ಪರ್ಯಾಯವಾಗಿ ಹುಣುಸೆಹಣ್ಣಿನ ಮೊರೆ ಹೋಗಿದ್ದಾರೆ.

ಬರದ ಛಾಯೆ ಇನ್ನೂ ಮುಂದುವರಿಯುವ ಲಕ್ಷಣ ಇರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬೆಲೆ ಏರಿಕೆ ಬಿಸಿ ಮತ್ತಷ್ಟು ಹೆಚ್ಚಾಗಲಿದ್ದು, ಇದನ್ನು ತಡೆದುಕೊಳ್ಳಲು ಗ್ರಾಹಕರು ಮಾನಸಿಕವಾಗಿ ಸಿದ್ಧರಾಗಬೇಕಿದೆ.

ನಿರಂತರ ಬರ, ರೋಗ ರುಜಿನದ ಜತೆ, ನೆಲಕ್ಕೆ ಬಿದ್ದ ಬೆಲೆಯಿಂದ ಟೊಮ್ಯಾಟೋ ಬೆಳೆಗಾರರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಎರಡು ವರ್ಷ ಸತತವಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತ ಕುಟುಂಬಗಳು ಈಗ ಒಂದಿಷ್ಟು ಕಾಸು ನೋಡುವಂತಾಗಿದೆ.

10 ದಿನದಿಂದ ಸಗಟು ವ್ಯಾಪಾರದಲ್ಲಿ ತೀವ್ರ ಚೇತರಿಕೆ ಕಂಡಿದ್ದು 150-250 ರೂ.ಗೆ ಇದ್ದ ಕ್ರೇಟ್ ಬೆಲೆ ಈಗ 700-750 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಟೊಮ್ಯಾಟೋ ಬೆಳೆಗಾಗಿ ಮಾಡಿದ್ದ ಸಾಲ ತೀರಿಸಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ ರೈತರು.

ಬೆಲೆ ಇಲ್ಲದೆ ಕಳೆದ ವರ್ಷ ಟೊಮ್ಯಾಟೋ ಬೀದಿಗೆ ಸುರಿದು ಪ್ರತಿಭಟನೆ ಮಾಡಿದ್ದ ರೈತರು ಅಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಟೊಮ್ಯಾಟೋ ಬೆಳೆದ ಅನೇಕ ಕುಟುಂಬಗಳು ಆರ್ಥಿಕವಾಗಿ ದಿವಾಳಿಯಾಗುತ್ತಿರುವ ಬಗ್ಗೆ ಮಾರುಕಟ್ಟೆಯಲ್ಲೂ ಆತಂಕ ಉಂಟಾಗಿತ್ತು. ಅನೇಕ ರೈತರು ಟೊಮ್ಯಾಟೋ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ ತತ್ತರಿಸಿದ್ದರು. ಈಗ ಚೇತರಿಸಿಕೊಂಡಿರುವ ಮಾರುಕಟ್ಟೆ ದರದಿಂದ ಒಂದಿಷ್ಟು ಆಶಾ ಭಾವನೆ ಬೆಳೆಗಾರರಲ್ಲಿ ಮೂಡಿಸಿದೆ.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ 25 ಕೆಜಿ ತೂಕದ ಕ್ರೇಟ್ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಚಿಲ್ಲರೆ ವ್ಯಾಪಾರಿಗಳು ಸಗಟು ಮಾರಾಟಗಾರರ ಬಳಿ ಕ್ರೇಟ್ ಲೆಕ್ಕದಲ್ಲಿಯೇ ಟೊಮ್ಯಾಟೋ ಖರೀದಿಸಿ ನಂತರ ಚಿಲ್ಲರೆ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ.

ಚಿಕ್ಕಮಗಳೂರು ಜಿಲ್ಲೆ ತರಕಾರಿ ಬೆಳೆಯಲು ಹೆಚ್ಚು ಪ್ರಶಸ್ತ ಪ್ರದೇಶವಾಗಿದ್ದು, ಇಲ್ಲಿಂದ ಟೊಮ್ಯಾಟೋ ಮುಂಬೈ, ಬೆಂಗಳೂರು, ಮಂಗಳೂರು ಕಡೆಗೆ ರವಾನೆಯಾಗುತ್ತಿತ್ತು. ಈಗ ಅಂತರ್ಜಲ ಬತ್ತುತ್ತಿರುವುದರಿಂದ ಬೆಳೆ ಕೂಡ ಕಡಿಮೆಯಾಗಿದೆ. ಇರುವ ಬೆಳೆಯಲ್ಲಿಯೂ ಉಷ್ಣಾಂಶ ಹೆಚ್ಚಾಗಿ ಇಳುವರಿಯೂ ಕುಂಠಿತವಾಗಿದೆ. ಹೀಗಾಗಿ ಸದ್ಯ ಜಿಲ್ಲೆಗೆ ಬೇಕಾಗುವಷ್ಟು ಮಾತ್ರ ಟೊಮ್ಯಾಟೋ ದೊರೆಯುತ್ತಿದೆ.

ಬತ್ತುತ್ತಿರುವ ಬೋರ್​ವೆಲ್: ಜಿಲ್ಲೆಯ ಬಯಲು ಸೀಮೆ ಪ್ರದೇಶದಲ್ಲಿ ಕೊಳವೆಬಾವಿ ಆಶ್ರಯದಲ್ಲಿ ಮಾತ್ರ ತರಕಾರಿ ಬೆಳೆಯಲಾಗುತ್ತಿದೆ. ಕಡೂರು ತಾಲೂಕು, ಲಕ್ಯಾ ಹೋಬಳಿ, ತರೀಕೆರೆ, ಅಜ್ಜಂಪುರ ತಾಲೂಕು, ಅರಸೀಕೆರೆ ತಾಲೂಕು ಭಾಗದ ತರಕಾರಿಗಳು ಎಪಿಎಂಸಿಗೆ ಹೆಚ್ಚಾಗಿ ಬರುತ್ತದೆ. ಸತತ ಬರದಿಂದ ಕೊಳವೆ ಬಾವಿಗಳು ಬತ್ತಲಾರಂಭಿಸಿದ್ದು, ತರಕಾರಿ ಬೆಳೆಗಳ ಕ್ಷೇತ್ರ ಸಹ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇನ್ನೊಂದು ವಾರದಲ್ಲಿ ಮಳೆ ಬಂದರೆ ಪರವಾಗಿಲ್ಲ. ಇಲ್ಲವೆಂದರೆ ಅಲ್ಪಸ್ವಲ್ಪ ಉಳಿದಿರುವ ಕೊಳವೆ ಬಾವಿಗಳು ಸಹ ಒಣಗಿ ಹೋಗುವ ಆತಂಕ ಎದುರಾಗಿದೆ.

ದರ ಮತ್ತಷ್ಟು ಹೆಚ್ಚಳ ಸಾಧ್ಯತೆ: ಸದ್ಯ ಮಳೆ ಬರುವ ಲಕ್ಷಣ ಕಾಣುತ್ತಿಲ್ಲ. ಉಷ್ಣಾಂಶ ಹೆಚ್ಚಳ ಮುಂದುವರಿದಿದ್ದು, ಇರುವ ಬೆಳೆಯೂ ಹಾಳಾಗುವ ಸಾಧ್ಯತೆ ಇದೆ. ಇದರಿಂದ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ತಕ್ಷಣ ಅತಿವೃಷ್ಟಿಯಾಗುವ ಅಥವಾ ಗಾಳಿಧೂಳಿನ ಮಳೆಯಾದರೂ ಇರುವ ಬೆಳೆ ಹಾಳಾಗುತ್ತದೆ. ಇದರಿಂದ ತಕ್ಷಣ ಉತ್ಪನ್ನ ಇಲ್ಲದೆಯೂ ಬೆಲೆ ಏರಿಕೆಯಾಗುತ್ತದೆ. ಇದರಿಂದ ಬೆಲೆ ಏರಿಕೆ ಬಿಸಿ ಇನ್ನೊಂದು ತಿಂಗಳು ಮಾರುಕಟ್ಟೆಯಲ್ಲಿ ಆಟವಾಡಲಿದೆ ಎನ್ನಲಾಗುತ್ತಿದೆ.