More

    ಉತ್ಪಾದನೆ ವೆಚ್ಚದ ನೆಪದಲ್ಲಿ ಬೆಲೆ ಹೆಚ್ಚಳ, ಅರಣ್ಯ ವಿಸ್ತರಣೆ ಯೋಜನೆಗೆ ಹೊಡೆತ

    ಶಿವಕುಮಾರ ಶಶಿಮಠ ಗಜೇಂದ್ರಗಡ
    ತಾಲೂಕಿನ ನೆಲ್ಲೂರ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ಪ್ರಾದೇಶಿಕ ವಲಯದ ಸಸ್ಯ ಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ಆದರೆ, ಹೆಚ್ಚಿನ ದರ ನಿಗದಿಪಡಿಸಿದ್ದರಿಂದ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.


    ಕೇಂದ್ರದಲ್ಲಿ ವಿವಿಧ ಜಾತಿಯ ಅಂದಾಜು 82 ಸಾವಿರ ಸಸಿಗಳನ್ನು ಬೆಳೆಸಲಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ರೈತರು ಸಸಿ ಖರೀದಿಗೆ ಮುಂದಾಗುತ್ತಿದ್ದರು. ಆದರೆ, ಈ ವರ್ಷ ಅಧಿಕ ಬೆಲೆಯಿಂದಾಗಿ ಸಸಿ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.

    ಸಸಿ ಉತ್ಪಾದನಾ ವೆಚ್ಚದ ನೆಪದಲ್ಲಿ ಹಿಂದಿನ ಸರ್ಕಾರವು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಶಿಫಾರಸಿನಂತೆ 2022ರ ನವೆಂಬರ್ 10ರಂದು ವಿವಿಧ ಬ್ಯಾಗ್‌ನ ಸಸಿ ಮಡಿಗೆ ಬೆಲೆ ಹೆಚ್ಚಳ ಮಾಡಿದೆ. ದರ ಕಡಿಮೆ ಮಾಡದಿದ್ದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಅರಣ್ಯ ವಿಸ್ತರಿಸುವ ಯೋಜನೆಗೆ ಹೊಡೆತ ಬೀಳಲಿದೆ.


    ಶ್ರೀಗಂಧ, ರಕ್ತ ಚಂದನಕ್ಕೆ ಬೇಡಿಕೆ

    ಈ ಭಾಗದಲ್ಲಿ ಶ್ರೀಗಂಧ, ರಕ್ತ ಚಂದನ, ಮಹಾಘನಿ, ತೇಗ, ಹೆಬ್ಬೇವು ಸೇರಿ ವಿವಿಧ ಹಣ್ಣಿನ ಸಸಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಂತೆ ನೆಲ್ಲೂರ ಸಸ್ಯ ಕ್ಷೇತ್ರದಲ್ಲಿ ಈ ಬಾರಿ ಬಿಸಿಲಿನ ಬೇಗೆಯ ನಡುವೆಯೂ ಸಮೃದ್ಧವಾಗಿ ಬೆಳೆಸಲಾಗಿದೆ. ಆದರೆ, ಖರೀದಿಸುವ ರೈತರು ಹೆಚ್ಚಿನ ಬೆಲೆಯಿಂದ ವಿಮುಖರಾಗಿದ್ದಾರೆ. ಅರಣ್ಯ ಇಲಾಖೆ ಬೆಳೆಸಿರುವ ಸಸಿಗಳಿಗೆ ಹಿಂದಿನ ಸರ್ಕಾರ ನಿಗದಿ ಮಾಡಿರುವ ದರ ಹಿಂಪಡೆಯಬೇಕು ಎಂಬುದು ರೈತರ ಆಗ್ರಹವಾಗಿದೆ.


    ಯಾವುದಕ್ಕೆ ಎಷ್ಟು ದರ?

    5*8 ಅಳತೆ ಪಾಲಿಥಿನ್ ಬ್ಯಾಗ್‌ನಲ್ಲಿ ಬೆಳೆಸಿರುವ ಸಸಿಗೆ ಈ ಮೊದಲು ಒಂದು ರೂ. ದರ ಇತ್ತು. ಈಗ 5 ರೂ., 6*9 ಅಳತೆಯ ಬ್ಯಾಗ್‌ನ ಸಸಿಗೆ ಒಂದು ರೂ.ನಿಂದ 6 ರೂ., 8*12ರ ಅಳತೆಯ ಬ್ಯಾಗ್‌ನ ಸಸಿಗೆ 3 ರೂ.ನಿಂದ 23 ರೂ. ಗೆ ಹೆಚ್ಚಿಸಲಾಗಿದೆ. ಅರಣ್ಯ ಇಲಾಖೆಯು ರಸ್ತೆ ಬದಿ ನೆಡಲು ಉಪಯೋಗಿಸುವ ಸಸಿ ಬೇಕಾದಲ್ಲಿ 10*16 ಅಳತೆ ಬ್ಯಾಗ್‌ನ ಸಸಿಗೆ 72 ರೂ. ಹಾಗೂ 14*20 ಅಳತೆಯ ಬ್ಯಾಗ್‌ನ ಸಸಿಗೆ 111 ರೂ. ನಿಗದಿಪಡಿಸಲಾಗಿದೆ. ರೈತರು ದುಬಾರಿ ದರ ತೆತ್ತು ಸಸಿ ಖರೀದಿಸಿ ನೆಟ್ಟು ಬೆಳೆಸಿ ಪ್ರೋತ್ಸಾಹಧನ ಪಡೆಯುವುದು ದುಸ್ತರವಾಗಿದೆ. ಹೀಗಾಗಿ, ಸರ್ಕಾರದ ಉದ್ದೇಶಿತ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಹಿನ್ನಡೆಯಾಗಲಿದೆ. ಈ ಯೋಜನೆಯಡಿ ಮೊದಲ ವರ್ಷ 35 ರೂ., ಎರಡನೇ ವರ್ಷ 40 ರೂ., ಮೂರನೇ ವರ್ಷ 50 ರೂ. ಸೇರಿ ಒಟ್ಟು 125 ರೂ. ಪ್ರೋತ್ಸಾಹಧನ ಪಡೆಯಬಹುದಾಗಿದೆ.


    ಸಸಿಗಳ ದರವನ್ನು ರಾಜ್ಯ ಸರ್ಕಾರವೇ ನಿಗದಿಪಡಿಸುತ್ತದೆ. ದರ ಬದಲಾವಣೆ ಮಾಡುವ ಜವಾಬ್ದಾರಿ ನಮ್ಮ ಕಡೆ ಇರುವುದಿಲ್ಲ. 10 ವರ್ಷಗಳ ಹಿಂದೆ ಸಸಿಗಳ ಬೆಲೆ ಹೆಚ್ಚಿಸಲಾಗಿತ್ತು. — ದೀಪಿಕಾ ಭಾಜಪೇಯಿ ಡಿಸಿಎಫ್ ಗದಗ


    ಸರ್ಕಾರ ಸಸಿಗಳ ಬೆಲೆ ಏರಿಕೆ ಮಾಡಿರುವ ನಿರ್ಧಾರ ವಾಪಸ್ ಪಡೆಯಬೇಕು. ತಾಲೂಕಿನಾದ್ಯಂತ ಪ್ರತಿ ವರ್ಷ ಸಾಕಷ್ಟು ಪ್ರಮಾಣದಲ್ಲಿ ಸಸಿಗಳನ್ನು ರೈತರಿಗೆ, ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಇಲಾಖೆ ಮಾಡಿದೆ. ಆದರೂ ಈ ಬಾರಿ ಬೆಲೆ ಏರಿಕೆಯಿಂದ ಸಸಿಗಳ ಖರೀದಿಗೆ ಹಿಂದೇಟು ಹಾಕಲಾಗುತ್ತಿದೆ. ಸಸಿಗಳನ್ನು ನೆಟ್ಟು, ಬೆಳೆಸುವ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆ ಮಾಡಿ ಪ್ರೋತ್ಸಾಹಿಸಬೇಕು. –ಬಸವರಾಜ ಹೂಗಾರ ವೃಕ್ಷಪ್ರೇಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts