ದರ ಘೋಷಣೆ ವರೆಗೆ ಕಾರ್ಖಾನೆ ಬಂದ್ ಮಾಡಿ

ಬೆಳಗಾವಿ: ಜಿಲ್ಲೆಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳನ್ನು ಉಳಿಸಲು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಕಾರ್ಖಾನೆಗಳಿಂದ ಬಾಕಿ ವಸೂಲಿ ಮಾಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಬಾಕಿ ಬಿಲ್ ನೀಡುವ ವರೆಗೆ, ದರ ಪಟ್ಟಿ ಪ್ರಕಟಿಸುವ ವರೆಗೆ ಸಕ್ಕರೆ ಕಾರ್ಖಾನೆಗಳನ್ನು ಬಂದ್ ಮಾಡಿ. ಇಲ್ಲದಿದ್ದರೆ ನಮ್ಮ ಕಬ್ಬನ್ನು ನಾವೇ ಸುಟ್ಟು ಹಾಕುತ್ತೇವೆ ವಿನಃ ಕಾರ್ಖಾನೆಗಳಿಗೆ ಕಳುಹಿಸುವುದಿಲ್ಲ.

ಇದು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರು, ವಿವಿಧ ರೈತ ಸಂಘಟನಗಳ ಮುಖಂಡರ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ ಪರಿ.

ಜಿಲ್ಲೆಯಲ್ಲಿರುವ 22 ಸಕ್ಕರೆ ಕಾರ್ಖಾನೆಗಳ ಪೈಕಿ 15ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳು 2014-15ನೇ ಸಾಲಿನಿಂದ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. 2017-18ನೇ ಸಾಲಿನಲ್ಲಿ ಇಳುವರಿ ಆಧಾರದ ಮೇಲೆ ಚಿಕ್ಕೋಡಿ ಭಾಗದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2900 ರೂ., ಬೆಳಗಾವಿ ಭಾಗದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2500 ರೂ.ವರೆಗೆ ಘೋಷಣೆ ಮಾಡಿದ್ದವು. ಆದರೆ, ರೈತರಿಗೆ ಬಿಲ್ ನೀಡುವ ಸಂದರ್ಭದಲ್ಲಿ ಟನ್ ಕಬ್ಬಿಗೆ 400 ರಿಂದ 600 ರೂ. ಬಾಕಿ ಉಳಿಸಿಕೊಂಡಿವೆ.

ಬಾಕಿ ಬಿಲ್‌ನ ಹಣ ನೀಡುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಬಂದ್ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ನೆರೆಯ ಮಹಾರಾಷ್ಟ್ರದಲ್ಲಿನ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 3200 ರಿಂದ 3500 ರೂ. ನೀಡುತ್ತಿವೆ. ಗುಜರಾತಿನಲ್ಲಿ ಟನ್ ಕಬ್ಬಿಗೆ 4000 ರಿಂದ 4500 ರೂ. ದರ ಸಿಗುತ್ತಿದೆ. ಆದರೆ, ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಬೇಕಾಬಿಟ್ಟಿ ದರ ನೀಡುತ್ತಿದ್ದು, ರೈತರಿಗೆ ಮೋಸ ಮಾಡುತ್ತಿವೆ.

ಘೋಷಣೆ ಮಾಡಿದ ಕಬ್ಬಿನ ದರವನ್ನು ಒಂದೇ ಕಂತಿನಲ್ಲಿ ಪಾವತಿಸುತ್ತಿಲ್ಲ. ಕೆಲ ಸಕ್ಕರೆ ಕಾರ್ಖಾನೆಗಳು 2ನೇ ಕಂತಿನ ಬಿಲ್ ನೀಡಿಲ್ಲ. ಇದರಿಂದ ರೈತರಿಗೆ ನೂರಾರು ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ ರೈತರಿಗೆ ಅನ್ಯಾಯ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳ ಮೇಲೆ ಜಿಲ್ಲಾಡಳಿತ ನಿಗಾವಹಿಸುವ ಬದಲು ಒತ್ತಡಕ್ಕೆ ಮಣಿದು ರಕ್ಷಣೆ ಮಾಡುತ್ತಿದೆ. ಪ್ರಸ್ತುತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭವಾಗಿ 15 ದಿನಗಳಾಗಿದ್ದು, ದರ ಘೋಷಣೆ ಮಾಡದೆ ಕಬ್ಬು ನುರಿಸುತ್ತಿವೆ. ಇಂತಹ ಕಾರ್ಖಾನೆಗಳನ್ನು ತಕ್ಷಣ ಬಂದ್ ಮಾಡಬೇಕು. ಶಾಸಕರ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳನ್ನು ಉಳಿಸಲು ಸಹಕಾರಿ ಕಾರ್ಖಾನೆಗಳನ್ನು ಬಂದ್ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದರು.

ಬಡ್ಡಿ ವ್ಯವಹಾರ ನಿಲ್ಲಿಸಿ: ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಸೊಸೈಟಿಗಳ ಮೂಲಕ ಬಡ್ಡಿ ವ್ಯವಹಾರ, ಕಾರ್ಖಾನೆಗಳ ಆರ್ಥಿಕ ವಹಿವಾಟು ನಡೆಸುತ್ತಿದ್ದು, ಈ ಸೊಸೈಟಿಗಳ ಮೂಲಕವೇ ರೈತರ ಕಬ್ಬಿನ ಬಿಲ್ ಪಾವತಿಸಲಾಗುತ್ತಿದೆ. ಬಡ್ಡಿ ಆಸೆಗಾಗಿ ಕಬ್ಬಿನ ಬಿಲ್‌ಅನ್ನು ಸಮಯಕ್ಕೆ ಸರಿಯಾಗಿ ನೀಡುವ ಬದಲು 10 ರಿಂದ 15 ದಿನ ತಡ ಮಾಡಿ ನೀಡುತ್ತಿವೆ. ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಹಾಗಾಗಿ ಕಾರ್ಖಾನೆಗಳ ಬಡ್ಡಿ ವ್ಯವಹಾರ ನಿಲ್ಲಿಸಲು ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಕಬ್ಬು ಬೆಳೆಗಾರರು ಒತ್ತಾಯಿಸಿದರು.

ಸಕ್ಕರೆ ಟೆಂಡರ್‌ಗೆ ಯಾರೂ ಬರುತ್ತಿಲ್ಲ

ಕಬ್ಬು ಬೆಳೆಗಾರರಿಗೆ 12 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ ಎರಡು ಬಾರಿ ಸಕ್ಕರೆ ಟೆಂಡರ್ ಕರೆಯಲಾಗಿದೆ. ಆದರೆ, ಯಾರೂ ಭಾಗಿಯಾಗಿಲ್ಲ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ನಿರ್ದೇಶನದ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ತೂಕದಲ್ಲಿ ರೈತರಿಗೆ ಮೋಸ

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿವೆ. ರೈತರಿಂದ ಪಡೆಯುವ ಕಬ್ಬನ್ನು ಮತ್ತು ಮಾರಾಟ ಮಾಡವ ಸಕ್ಕರೆಯನ್ನು ಬೇರೆ ಯಂತ್ರಗಳಲ್ಲಿ ತೂಕ ಮಾಡುತ್ತಾರೆ. ತೂಕದ ಯಂತ್ರದಿಂದಲೆ ನಿತ್ಯ 10 ರಿಂದ 20 ಟನ್ ಕಬ್ಬನ್ನು ಕಾರ್ಖಾನೆಗಳು ಅಕ್ರಮವಾಗಿ ಪಡೆಯುತ್ತಿವೆ. ಇದು ರೈತರಿಗೆ ಸಕ್ಕರೆ ಕಾರ್ಖಾನೆಗಳು ಮಾಡುತ್ತಿರುವ ಮೋಸ. ಇದನ್ನು ಈ ಕೂಡಲೇ ಜಿಲ್ಲಾಡಳಿತ ಖುದ್ದಾಗಿ ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದರು.

ಡಿಸಿಗೆ ಮುತ್ತಿಗೆ ಹಾಕಿದ ರೈತರು

ಕಬ್ಬಿನ ಬಾಕಿ ಬಿಲ್ ನೀಡದಿರುವ ಮತ್ತು ದರ ಘೋಷಣೆ ಮಾಡದಿರುವ ಸಕ್ಕರೆ ಕಾರ್ಖಾನೆಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಮತ್ತು ರೈತ ಸಂಘಟನೆಗಳ ಮುಖಂಡರು ಡಿಸಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು. ಕಾರ್ಖಾನೆಗಳ ಎಂಡಿಗಳ ಸಭೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ವಾಪಸ್ ಪಡೆದುಕೊಂಡರು.

ಸರ್ಕಾರ ಘೋಷಣೆ ಮಾಡಿರುವ ಎಫ್‌ಆರ್‌ಪಿ ಅನುಸಾರ ಕಬ್ಬಿನ ಬಿಲ್‌ಅನ್ನು ಕಬ್ಬು ನುರಿಸಿದ 14 ದಿನಗಳ ಒಳಗಾಗಿ ರೈತರಿಗೆ ನೀಡಬೇಕು ಎಂದು ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಲಾಗಿದೆ. ಎಫ್‌ಆರ್‌ಪಿಗಿಂತ ಕಡಿಮೆ ನೀಡುವ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಕಳೆದ ಹಂಗಾಮಿನಲ್ಲಿ ಘೋಷಣೆ ಮಾಡಿದ ದರಕ್ಕಿಂತ ಕಡಿಮೆ ದರ ನೀಡಿರುವ ಕಾರ್ಖಾನೆಗಳಿಗೆ ಬಾಕಿ ಬಿಲ್ ನೀಡಲು ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಯಾರ ಒತ್ತಡಕ್ಕೂ ಮಣಿದು ಕೆಲಸ ಮಾಡುತ್ತಿಲ್ಲ. ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ.

| ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ, ಬೆಳಗಾವಿ