More

  ಮುನ್ನೋಟ; ಬೌಂಡರಿ-ಸಿಕ್ಸರ್​ಗಳ 20-20

  ಹೇಳಿಕೇಳಿ ಇದು ‘ಟ್ವೆಂಟಿ ಟ್ವೆಂಟಿ’. ಸದ್ಯದ ಲಕ್ಷಣಗಳನ್ನು ಗಮನಿಸಿದರೆ 2020ರಲ್ಲಿ ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ಬೌಂಡರಿ-ಸಿಕ್ಸರ್​ಗಳ ಸಾಧ್ಯತೆ ಗೋಚರಿಸುತ್ತಿದೆ. ಈ ಸಲ ಎಲ್ಲ ಸ್ಟಾರ್​ಗಳ ಸಿನಿಮಾ ತೆರೆ ಕಾಣಲಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಚಿತ್ರಗಳ ಸಂಖ್ಯೆ ಲೆಕ್ಕದಲ್ಲೂ ಹ್ಯಾಟ್ರಿಕ್ ಲಕ್ಷಣ ಕಾಣುತ್ತಿದೆ. ಕಳೆದ ಸಲ ಯಶ್ ಎಂಟ್ರಿ ಆಗಲಿಲ್ಲ. ಆದರೆ ಈ ಸಲ ‘ಕೆಜಿಎಫ್: ಚಾಪ್ಟರ್ 2’ ಈಗಾಗಲೇ ಸದ್ದು ಮಾಡುತ್ತಿದ್ದು, ಅದರ ಶೂಟಿಂಗ್ ಕೂಡ ಬಹುತೇಕ ಮುಗಿದಿರುವುದರಿಂದ ಅವರು ಇದೇ ವರ್ಷ ತೆರೆ ಮೇಲೆ ಅಬ್ಬರಿಸುವ ಸಾಧ್ಯತೆಗಳಿವೆ. ಇನ್ನು ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಾಗಿ 3 ವರ್ಷ ತೆಗೆದುಕೊಂಡರೂ, ರಕ್ಷಿತ್ ತಮ್ಮ ಮುಂದಿನ ಚಿತ್ರಕ್ಕೆ ಅಷ್ಟೊಂದು ದೀರ್ಘಾವಧಿ ತೆಗೆದುಕೊಳ್ಳದಿರುವ ಸೂಚನೆ ನೀಡಿರುವುದರಿಂದ ಅವರೂ ಈ ವರ್ಷ ಮತ್ತೊಂದು ಅದ್ದೂರಿ ಸಿನಿಮಾ ಮೂಲಕ ಹ್ಯಾಟ್ರಿಕ್ ಬಾರಿಸುವ ಸಾಧ್ಯತೆ ಇದೆ. ಕಳೆದ ವರ್ಷ ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದ ಉಪೇಂದ್ರ, ಈ ಸಲ ಆರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ. ಪುನೀತ್ ರಾಜ್​ಕುಮಾರ್, ದರ್ಶನ್, ಸುದೀಪ್ ಮೂವರೂ ಬಿಗ್​ಬಜೆಟ್​ನ ತಲಾ ಒಂದೊಂದು ಬಹುನಿರೀಕ್ಷೆಯ ಅದ್ದೂರಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಅವೆಲ್ಲವೂ ಇದೇ ವರ್ಷದಲ್ಲಿ ಬಿಡುಗಡೆ ಆಗಲಿವೆ. ಇನ್ನೊಂದೆಡೆ ಯೋಗರಾಜ್ ಭಟ್, ದುನಿಯಾ ಸೂರಿ ಮುಂತಾದ ನಿರ್ದೇಶಕರ ಜತೆಗೆ ಪ್ರತಿಭಾನ್ವಿತ ಉದಯೋನ್ಮುಖ ಕಿರಿಯರ ನಿರ್ದೇಶನದಲ್ಲಿಯೂ ಹಲವಾರು ಸಿನಿಮಾಗಳು ಮೂಡಿ ಬರಲಿರುವುದರಿಂದ ಎಂದಿನಂತೆ ಮತ್ತಷ್ಟು ವೆರೈಟಿಯ ಚಿತ್ರಗಳು ಈ ಸಲವೂ ಬಿಡುಗಡೆ ಆಗಲಿರುವುದಂತೂ ಖಚಿತ.

  ಪುಣ್ಯಕೋಟಿ ರಕ್ಷಿತ್

  777 ಚಾರ್ಲಿ, ಪುಣ್ಯಕೋಟಿ

  ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಭರ್ಜರಿ ಯಶಸ್ಸಿನಿಂದ ಮೂರು ವರ್ಷಗಳ ಬಳಿಕ ಈಗಾಗಲೇ ಎಲ್ಲೆಡೆ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ, ಇನ್ನು ಅಷ್ಟೇ ಕಾಯಿಸುವುದಿಲ್ಲ. ಏಕೆಂದರೆ ಅವರ ನಟನೆಯ ‘777 ಚಾರ್ಲಿ’ ಸಿನಿಮಾ ಬಹುತೇಕ ಮುಗಿದಿದ್ದು, ಇದೇ ವರ್ಷ ಬರಲಿದೆ. ಈ ನಡುವೆ ‘ಪುಣ್ಯಕೋಟಿ’ ಎಂಬ ಚಿತ್ರಕ್ಕೆ ಅವರು ಆಕ್ಷನ್-ಕಟ್ ಹೇಳಲಿದ್ದು, ಈ ವರ್ಷವೇ ಇದು ಸೆಟ್ಟೇರುವ ಲಕ್ಷಣಗಳಿವೆ.

  ರಿಷಬ್ ಝುಲಕ್

  ರುದ್ರ ಪ್ರಯಾಗ, ಅಂಟಗನಿ ಶೆಟ್ಟಿ, ನಾಥೂರಾಮ್

  ‘ಬೆಲ್ ಬಾಟಂ’, ‘ಕಥಾ ಸಂಗಮ’ ಮೂಲಕ 2019ರಲ್ಲಿ ಗಮನ ಸೆಳೆದಿದ್ದ ರಿಷಬ್ ಶೆಟ್ಟಿ, ಸದ್ಯ ‘ರುದ್ರ ಪ್ರಯಾಗ’ ಹಾಗೂ ‘ಅಂಟಗನಿ ಶೆಟ್ಟಿ’ ಎಂಬ ವಿಭಿನ್ನ ಶೀರ್ಷಿಕೆಗಳ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು, ಎರಡರಲ್ಲಿ ಒಂದಾದರೂ ಈ ವರ್ಷ ತೆರೆ ಕಾಣುವ ಸಾಧ್ಯತೆ ಇದೆ. ಮತ್ತೊಂದೆಡೆ ಅವರು ನಾಯಕನಾಗಿರುವ ‘ನಾಥೂರಾಮ್ ಚಿತ್ರ ಕೂಡ ಬರುವುದಿದೆ.

  ನೀಲ್ ಜತೆ ಶ್ರೀಮುರಳಿ ಮದಗಜ

  ‘ಭರಾಟೆ’ ಸಿನಿಮಾ ಮೂಲಕ ಕಳೆದ ವರ್ಷ ಭರ್ಜರಿ ಎಂಟ್ರಿ ಕೊಟ್ಟಿದ್ದ ಶ್ರೀಮುರಳಿ ಈ ಸಲ ‘ಮದಗಜ’ನಾಗಿ ಇನ್ನೂ ಜೋರಾಗಿಯೇ ಅಬ್ಬರಿಸಲು ಸಜ್ಜಾಗಿದ್ದಾರೆ. ‘ಅಯೋಗ್ಯ’ ಚಿತ್ರ ನಿರ್ದೇಶಿಸಿದ್ದ ಮಹೇಶ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದರೂ, ಚಿತ್ರಕಥೆ ರಚನೆಯಲ್ಲಿ ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕೈಚಳಕ ಇರುವುದರಿಂದ ಹಾಗೂ ಟೈಟಲ್ ಬದಲಾವಣೆ ಸೇರಿ ಹಲವು ಮಾರ್ಪಾಡು ಸಾಧ್ಯತೆಗಳಿರುವುದರಿಂದ ಈ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಹೆಚ್ಚಾಗಿದೆ.

  ಸರ್ಜಾ ಪೊಗರು

  ಪೊಗರು

  ಕಳೆದ 2 ವರ್ಷಗಳಿಂದ ತಮ್ಮ ಯಾವುದೇ ಸಿನಿಮಾ ಬಿಡುಗಡೆ ಆಗದಿದ್ದರೂ ಈ ವರ್ಷ ಧ್ರುವ ಸರ್ಜಾ ‘ಪೊಗರು’ ತೋರಿಸುವುದು ನಿಚ್ಚಳವಾಗಿದೆ. ಇದು 2ವರ್ಷಗಳ ಬಳಿಕ ತೆರೆ ಕಾಣುತ್ತಿರುವ ಹಾಗೂ ಅವರ ಮದುವೆ ನಂತರ ಬಿಡುಗಡೆ ಆಗಲಿರುವ ಪ್ರಥಮ ಸಿನಿಮಾ ಆಗಿರುವುದರಿಂದ ಅಭಿಮಾನಿಗಳಲ್ಲಿ ಹೆಚ್ಚೇ ನಿರೀಕ್ಷೆ ಇದೆ.

  ಹೀರೋ ವಸಿಷ್ಠ

  ‘ಇಂಡಿಯಾ ವರ್ಸಸ್ ಇಂಗ್ಲೆಂಡ್, ತಲ್ವಾರ್​ಪೇಟೆ, ಪಂಥ, ಮಾಯಾಬಜಾರ್, ಕಾಲಚಕ್ರ ಇದುವರೆಗೂ ವಿಲನ್ ಅಥವಾ ನೆಗೆಟಿವ್ ಶೇಡ್​ನಲ್ಲೇ ಕಾಣಿಸಿಕೊಂಡಿದ್ದ ನಟ ವಸಿಷ್ಠ ಸಿಂಹ ಈ ಸಲ ಹೀರೋ ಆಗಿ ಹೊಸ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಇವರು ನಾಯಕನಾಗಿ ಕಾಣಿಸಿಕೊಳ್ಳಲಿರುವ ಪ್ರಥಮ ಸಿನಿಮಾ. ಮತ್ತೊಂದೆಡೆ ‘ತಲ್ವಾರ್​ಪೇಟೆ’, ‘ಪಂಥ’, ‘ಮಾಯಾಬಜಾರ್’, ‘ಕಾಲಚಕ್ರ’ ಚಿತ್ರಗಳಲ್ಲೂ ಅವರು ನಾಯಕರಾಗಿ ಇರಲಿದ್ದು, ಸದ್ಯ ಈ ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

  ಮತ್ತೆ ಬಿಜಿಯಾದ ಡಾಲಿ ಧನಂಜಯ

  ಪಾಪ್​ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್, ಡಾಲಿ, ಸಲಗ ಕಳೆದ ವರ್ಷ ‘ಯಜಮಾನ’ ಸಿನಿಮಾದಲ್ಲಷ್ಟೇ ಕಾಣಿಸಿಕೊಂಡಿದ್ದ ಡಾಲಿ ಧನಂಜಯ್, ಈ ಸಲ ಮತ್ತೆ ದರ್ಶನ ನೀಡಲಿದ್ದಾರೆ. ಏಕೆಂದರೆ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಸಲಗ’ ಇದೇ ವರ್ಷ ಬಿಡುಗಡೆ ಆಗಲಿದೆ. ಅಲ್ಲದೆ ಅವರ ನಾಯಕತ್ವದ ‘ಪಾಪ್​ಕಾರ್ನ್ ಮಂಕಿ ಟೈಗರ್’, ‘ಬಡವ ರಾಸ್ಕಲ್’, ‘ಡಾಲಿ’ ಚಿತ್ರಗಳೂ ಇದೇ ವರ್ಷ ರಿಲೀಸ್ ಆಗುವ ಸಾಧ್ಯತೆಗಳಿವೆ.

  ಮತ್ತೆ ಸದ್ದಿನ ನಿರೀಕ್ಷೆಯಲ್ಲಿ

  ಕಳೆದ ವರ್ಷ ಅಂಥ ಸದ್ದು ಮಾಡದೆ ತೆರೆಯಮರೆಯಲ್ಲೇ ಇದ್ದಂತಿದ್ದ ವಿಜಯ ರಾಘವೇಂದ್ರ, ಅಜೇಯ್ ರಾವ್, ನೆನಪಿರಲಿ ಪ್ರೇಮ್ ಪ್ರಜ್ವಲ್ ದೇವರಾಜ್ ಈ ಸಲ ಜಾಸ್ತಿ ಸೌಂಡ್ ಮಾಡುವ ನಿರೀಕ್ಷೆಯಲ್ಲಿದ್ದಾರೆ ಅವರ ಅಭಿಮಾನಿಗಳು. ವಿಜಯ ರಾಘವೇಂದ್ರ ‘ಮಾಲ್ಗುಡಿ ಡೇಸ್’ ಸಿನಿಮಾ ಮೂಲಕ ವೃದ್ಧನ ಪಾತ್ರವೂ ಸೇರಿ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆನಪಿರಲಿ ಪ್ರೇಮ್ ‘ಪ್ರೇಮಂ ಪೂಜ್ಯಂ’ ಎನ್ನುತ್ತ ಬರುತ್ತಿದ್ದರೆ, ಅಜೇಯ್ ರಾವ್ ‘ಕೃಷ್ಣನ್ ಟಾಕೀಸ್’, ‘ಶೋಕಿವಾಲಾ’ ಸಿನಿಮಾಗಳ ಮೂಲಕ ತೆರೆ ಮೇಲೆ ಬರಲಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ಈ ಸಲ ‘ಜಂಟಲ್​ವ್ಯಾನ್’, ‘ಇನ್ಸ್​ಪೆಕ್ಟರ್ ವಿಕ್ರಂ’ ಚಿತ್ರಗಳ ಮೂಲಕ ಈಗಾಗಲೇ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ‘ಬಜಾರ್’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ್ದ ಧನ್ವೀರ್ ಈ ಸಲ ‘ಬಂಪರ್’ ಚಿತ್ರದ ಮೂಲಕ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ದಿಗಂತ್ ಈ ಸಲ ‘ಗಾಳಿಪಟ 2’, ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಮೂಲಕ ಗಮನ ಸೆಳೆಯುವ ಸಾಧ್ಯತೆಗಳಿವೆ. ಚಿರಂಜೀವಿ ಸರ್ಜಾ ಅಭಿನಯದ ‘ರಣಂ’, ‘ಖಾಕಿ’ ಬಿಡುಗಡೆಗೆ ಸಜ್ಜಾಗಿವೆ. ತೆಲುಗು ನಿರ್ದೇಶಕ ವಿಜಯ್ಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಲಿರುವ ಚಿತ್ರ ಈ ವರ್ಷ ಸೆಟ್ಟೇರಲಿದೆ. ನಿರ್ದೇಶಕ ಕಾಶೀನಾಥ್ ಪುತ್ರ ಅಭಿಮನ್ಯು ಕೆಲ ವರ್ಷಗಳ ಬಳಿಕ ನಾಯಕನಾಗಿ ಅಭಿನಯಿಸಿದ್ದು, ನಿರೀಕ್ಷೆ ಹುಟ್ಟಿಸಿದ್ದಾರೆ.

  ಹೊಸಬರ ಆಗಮನ
  1. ಯುವ ರಾಜ್​ಕುಮಾರ್ (ರಾಘವೇಂದ್ರ ರಾಜ್​ಕುಮಾರ್ ಪುತ್ರ)- ಶೀರ್ಷಿಕೆ ನಿಗದಿ ಆಗಿಲ್ಲ
  2. ರಾಣಾ (ರಕ್ಷಿತಾ ಪ್ರೇಮ್ ಸಹೋದರ)- ಏಕಲವ್​ಯು
  3. ಸಂಜಿತ್ ಸಂಜೀವ್ (ಸುದೀಪ್ ಸಂಬಂಧಿ)- ಶೀರ್ಷಿಕೆ ಅಂತಿಮಗೊಂಡಿಲ್ಲ
  4. ಧೀರೇನ್ ರಾಜ್​ಕುಮಾರ್ (ರಾಮ್​​ಕುಮಾರ್ ಪುತ್ರ)- ಶಿವ 143
  5. ಧನ್ಯಾ ರಾಮ್​​ಕುಮಾರ್ (ರಾಮ್​​ಕುಮಾರ್ ಪುತ್ರಿ) – ನಿನ್ನೆ ಸ್ನೇಹಕೆ
  6. ಜೈದ್ ಖಾನ್- ಬನಾರಸ್ (ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ)
  ಉದಯೋನ್ಮುಖ ನಟಿಯರು

  ಸೋನಲ್ ಮೊಂತೆರೊ, ಸಂಜನಾ ಆನಂದ್, ಶ್ರೀಲೀಲಾ,

  | ರವಿಕಾಂತ ಕುಂದಾಪುರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts