More

    ಮಕ್ಕಳ ಮೇಲಿನ ದೌರ್ಜನ್ಯ ತಡೆ ಎಲ್ಲ ಇಲಾಖೆಗಳ ಹೊಣೆ: ನ್ಯಾಯಾಧೀಶ ಬಿ.ಜಿ.ದಿನೇಶ್ ಹೇಳಿಕೆ

    ಮೈಸೂರು: ಮಕ್ಕಳ ಮೇಲೆ ಯಾವುದೇ ದೌರ್ಜನ್ಯವಾದರೂ ಅದು ಸಾಂವಿಧಾನಿಕವಾದಂತಹ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಎಲ್ಲ ಇಲಾಖೆಗಳ ಸಮನ್ವಯ ಮುಖ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ನ್ಯಾಯಾಧೀಶ ಬಿ.ಜಿ.ದಿನೇಶ್ ಹೇಳಿದರು.
    ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಾಲನ್ಯಾಯ ಕಾಯ್ದೆ, ಮಿಷನ್ ವಾತ್ಸಲ್ಯ, ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವಿಕೆ ಮುಖ್ಯವಾಗುತ್ತದೆ. ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ವಿರುದ್ಧ ಯಾವ ಯಾವ ಇಲಾಖೆಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಕಾನೂನಿನಲ್ಲಿ ಸೂಚಿಸಲಾಗಿದೆ ಎಂದರು.
    ಮಕ್ಕಳೊಂದಿಗೆ ಸಂವೇದನೆಶೀಲತೆಯಿಂದ ವರ್ತಿಸಬೇಕು. ಒಂದು ಆ ಸೂಕ್ಷ್ಮತೆಯನ್ನು ನಾವು ಅಳವಡಿಸಿಕೊಳ್ಳದಿದ್ದರೆ ಮಕ್ಕಳ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತೇವೆ. ನಮ್ಮ ಕಚೇರಿ ಕೆಲಸದ ಒತ್ತಡದ ನಡುವೆಯೂ ಮಕ್ಕಳ ಮೇಲಿನ ಯಾವುದೇ ಪ್ರಕರಣ ಬಂದರೂ ಸಹ ನಾವು ಅತ್ಯಂತ ಸಂವೇದನಾಶೀಲತೆಯಿಂದ ನಡೆದುಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದರು.
    ಸೂಕ್ಷ್ಮರೀತಿಯಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ಮತ್ತೊಂದು ಪರಿಣಾಮ ಎದುರಿಸಬೇಕಾಗುತ್ತದೆ. ಮಕ್ಕಳ ದೌರ್ಜನ್ಯ ತಡೆಯಲು ಹಲವಾರು ಕಾನೂನುಗಳಿದ್ದರೂ ಸಹ ಎಲ್ಲೋ ಒಂದು ಕಡೆ ನಾವೆಲ್ಲ ಎಡವುತ್ತಿದ್ದೇವೆ ಎಂದು ವಿಷಾದಿಸಿದರು.
    ಒಂದು ತಿಂಗಳ ಹಿಂದೆ ಪಿರಿಯಾಪಟ್ಟಣದಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣದಲ್ಲಿ ಸಿಡಬ್ಲುೃಸಿ (ಚೈಲ್ಡ್ ವೆಲ್ಫೇರ್ ಕಮಿಟಿ) ಆ ಬಾಲ್ಯ ವಿವಾಹ ತಡೆಯಲು ಎಫ್‌ಐಆರ್ ಹಾಕಲು ಕ್ರಮ ಕೈಗೊಳ್ಳಿ ಎಂದು ಪೊಲೀಸರನ್ನು ಕೇಳಿತ್ತು. ಆದರೆ ದೇವಸ್ಥಾನ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಪಿರಿಯಾಪಟ್ಟಣ ಪೊಲೀಸರು, ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಹೋಗುವಂತೆ ಹೇಳಿದ್ದರು. ಅವರಿಗೂ ಮಾಹಿತಿ ನೀಡಿದರೂ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಎಫ್‌ಐಆರ್ ಮಾತ್ರ ದಾಖಲಾಗಿಲ್ಲ. ಇಂತಹ ಸಮನ್ವಯ ಕೊರತೆ ಉಂಟಾದರೆ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
    ಮೈಸೂರಿನಂತಹ ನಗರ ಪ್ರದೇಶಗಳಲ್ಲಿ ಹೀಗೆ ಆಗುತ್ತಿರುವುದು ಆಘಾತಕಾರಿ ಸಂಗತಿ. ಕಾನೂನು ಸಿಆರ್‌ಪಿಸಿ, ಜೆ.ಜೆ.ಆ್ಯಕ್ಟ್, ಫೋಕ್ಸೊ ಕಾಯ್ದೆ ಇರಬಹುದು, ಸುಪ್ರೀಂ ಕೋರ್ಟ್ ತೀರ್ಪುಗಳು ಯಾವುದೇ ಮಾಹಿತಿ ಬಂದರೆ ತ್ವರಿತವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಎಂದು ಹೇಳುತ್ತವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
    ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಚಿಕ್ಕಮಕ್ಕಳು ಸಸಿಗಳಂತೆ. ಗಿಡಗಳನ್ನು ಯಾವ ರೀತಿ ಪೋಷಣೆ ಮಾಡಿ ಬೆಳೆಸುತ್ತೇವೋ ಹಾಗೆಯೇ ಮಕ್ಕಳನ್ನು ಬೆಳೆಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದರು.
    ಉಪ ಪೊಲೀಸ್ ಕಮೀಷನರ್ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಎಸ್.ಮಂಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts