ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಪ್ರತಿಕ್ರಿಯೆ | ಶೆಟ್ಟರ್ ಪ್ರಕರಣವೇ ಮಾದರಿ
ವಿಜಯವಾಣಿ ಸುದ್ದಿಜಾಲ ಉಡುಪಿ
ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಕ್ಕೆ ಕಿಂಚಿತ್ತೂ ಬೇಸರವಿಲ್ಲ. ಪಕ್ಷದ ಶಿಸ್ತು ಸಮಿತಿಯ ಯಾವುದೇ ನೋಟಿಸ್ ಈವರೆಗೂ ನನಗೆ ತಲುಪಿಲ್ಲ. ಆದರೆ, ಉಚ್ಚಾಟನೆ ಮಾಡಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿದು ಮನಸ್ಸಿಗೆ ಸ್ವಲ್ಪ ನೋವಾಗಿದೆ ಅಷ್ಟೇ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯ ಸ್ವಗ್ರಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನದು ಕಾರ್ಯಕರ್ತ ಹುದ್ದೆ. ಬಿಜೆಪಿಯಲ್ಲಿ ನನಗೆ ಯಾವ ಹುದ್ದೆಯನ್ನೂ ಕೊಟ್ಟಿಲ್ಲ. ಪಕ್ಷ ನನ್ನನ್ನು ಯಾವ ಹುದ್ದೆಯಿಂದ ಉಚ್ಚಾಟಿಸಿದೆ ಎಂದು ಸ್ಪಷ್ಟ ಪಡಿಸಬೇಕು. ನಾನು ಮೋದಿಗೆ ಬೈದಿಲ್ಲ. ರಾಜ್ಯದ ಯಾವ ನಾಯಕರ ವಿರುದ್ಧವೂ ಮಾತನಾಡಿಲ್ಲ. ಜಗದೀಶ್ ಶೆಟ್ಟರ್ ಪ್ರಕರಣವೇ ನನಗೆ ಮಾದರಿ ಎಂದು ಹೇಳಿದರು.
ಕಾರ್ಯಕರ್ತರಿಗೆ ನಿರಂತರ ನೋವು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿದಾಗ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು. ಆದರೆ, ರಾಜ್ಯ ಕಾರ್ಯಕಾರಿ ಸದಸ್ಯನನ್ನೂ ಮಾಡಿಲ್ಲ. ಹೀಗಾಗಿ ನನ್ನ ವಜಾ ಮಾಡಿದ್ದಕ್ಕೆ ತಲೆಬಿಸಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯಲ್ಲಿ ಈಗಿನ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ಪಕ್ಷ ಎಂದರೆ ಜೀವ ಬಿಡುವ ನನ್ನಂತಹ ಹಲವು ಕಾರ್ಯಕರ್ತರಿಗೆ ನಿರಂತರ ನೋವಾಗುತ್ತಿದೆ ಎಂದರು.
ಗೆದ್ದರೆ ವಜಾ ರದ್ದು
ಪಕ್ಷ ತ್ಯಜಿಸಿ ಕಾಂಗ್ರೆಸ್ಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ನಮ್ಮ ಪಕ್ಷದ ಎಲ್ಲ ಹಿರಿಯ ನಾಯಕರನ್ನು ಟೀಕಿಸಿದ್ದರು. ಬಾಯಿಗೆ ಬಂದಂತೆ ಮಾತನಾಡಿದ್ದರು. ಆದರೂ ವರ್ಷದ ಬಳಿಕ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಾಸಾದರು. ಅವರಿಗೆ ಲೋಕಸಭಾ ಟಿಕೆಟ್ ಸಹ ನೀಡಿದರು. ಹೀಗಾಗಿ ನನ್ನ ಉಚ್ಚಾಟನೆಯೂ ಸಹ ಶಾಶ್ವತ ಅಲ್ಲ. ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ ಎಂದರು.
ಕರಾವಳಿಗೆ ಅನ್ಯಾಯ
ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ, ಶಿಕ್ಷೆಯೂ ಜಾಸ್ತಿ. ಉಡುಪಿಯಲ್ಲಿ ನಾಲ್ವರು ಹಾಲಿ ಶಾಸಕರನ್ನು ಬದಲಿಸಿದರು. ಇದನ್ನು ಶಿವಮೊಗ್ಗ, ಬೆಂಗಳೂರು, ಬಾಗಲಕೋಟೆ ಅಥವಾ ಹುಬ್ಬಳ್ಳಿಯಲ್ಲಿ ಮಾಡಲು ನಿಮಗೆ ಸಾಧ್ಯವೇ? ಉಡುಪಿಯಲ್ಲಿ ಪಾಪದ ಕಾರ್ಯಕರ್ತರು ಸಂಘ-ಪಕ್ಷ ಎನ್ನುತ್ತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಆದರೆ, ಕರಾವಳಿ ವಿಚಾರದಲ್ಲಿ ಬಿಜೆಪಿ ನಾಯಕರು ಮನಬಂದಂತೆ ನಡೆದುಕೊಳ್ಳುತ್ತಾರೆ. ಇದು ಸರಿಯೇ ಎಂದು ರಘುಪತಿ ಭಟ್ ಪ್ರಶ್ನಿಸಿದರು.
ಶಿಸ್ತು ಸಮಿತಿಯೂ ಉತ್ತರಿಸಲಿ
ಪಕ್ಷದ ಒಬ್ಬ ಕಾರ್ಯಕರ್ತನನ್ನು ವಜಾ ಮಾಡಲು ಸಾಧ್ಯವಿಲ್ಲ. ಬಿಜೆಪಿಯ ಶಿಸ್ತು ಸಮಿತಿಗೆ ನನ್ನ ಹಲವು ಪ್ರಶ್ನೆ ಇದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಏನು ಶಿಸ್ತು ಕ್ರಮವಾಗಿದೆ? ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರನ್ನು ವಜಾ ಮಾಡಿದ್ದೀರಾ? ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲಿಸಿದ ಶಾಸಕರನ್ನು ವಜಾ ಮಾಡಿದ್ದೀರಾ? ಅಗೋಚರವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡುವವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಬಹಿರಂಗ ಹೇಳಿಕೆ ಕೊಡುವ, ಭ್ರಷ್ಟಾಚಾರ ಆರೋಪ ಮಾಡುವ ನಾಯಕರ ವಿರುದ್ಧ ನಿಮ್ಮ ಕ್ರಮ ಏನು? ವಿಪ್ ಉಲ್ಲಂಘಿಸುವವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ರಘುಪತಿ ಭಟ್, ಪಕ್ಷದಿಂದ ವಜಾ ಮಾಡುವ ಸಮಾನ ನ್ಯಾಯ ಜಾರಿಗೆ ತನ್ನಿ ಎಂದರು.
ನಾನೊಬ್ಬ ಬಡಪಾಯಿ ಮಾತ್ರ ನಿಮಗೆ ವಜಾಮಾಡಲು ಸಿಕ್ಕಿದ್ದಾ? ನಾನು ಕೈಹಿಡಿದು ಬೆಳೆಸಿದವರೇ ನನ್ನ ಉಚ್ಚಾಟನೆಗೆ ಶಿಫಾರಸು ಮಾಡಿದ್ದಾರೆ. ನಾನು ವಿಚಲಿತನಾಗಿಲ್ಲ. ಕರಾವಳಿಗೆ ಮೀಸಲಿಟ್ಟ ಸ್ಥಾನವನ್ನು ಶಿವಮೊಗ್ಗಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಪಕ್ಷೇತರನಾಗಿ ಚುನಾವಣೆಯಲ್ಲಿ ಗೆದ್ದು, ಬಿಜೆಪಿಯಿಂದಲೇ ಶಾಸಕನಾಗುತ್ತೇನೆ.
ಕೆ.ರಘುಪತಿ ಭಟ್. ಮಾಜಿ ಶಾಸಕ, ಉಡುಪಿ