ಯಾರಿಗೂ ಕೇಳದ ಶ್ರಮಜೀವಿಗಳ ಕೂಗು

blank

ಚಿತ್ರದುರ್ಗ: ಮಳೆ, ಚಳಿ, ಗಾಳಿ ಮಧ್ಯೆ ನಾಯಿಗಳ ಉಪಟಳ ಲೆಕ್ಕಿಸದ ಪತ್ರಿಕಾ ವಿತರಕರು, ಓದುಗ ಮಹಾಪ್ರಭು ಕಾಫಿ ಸೇವಿಸುವುದಕ್ಕೂ ಮುನ್ನ ಅವರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವ ನಿಜವಾದ ಕಾಯಕ ಜೀವಿಗಳು. ಸೂರ್ಯನ ರಶ್ಮಿ ಭೂವಿಗೆ ಬೀಳುವ ಮುನ್ನವೇ ನಸುಕಿನಲ್ಲಿ ದಿನಪತ್ರಿಕೆಗಳನ್ನು ಜೋಡಿಸಿಕೊಳ್ಳುವುದರಲ್ಲಿ ನಿರತರಾಗುವ ಸಾವಿರಾರು ಮಂದಿ ವೃತ್ತಿಪರರಿಗೆ ಅವರೇ ಸರಿಸಾಟಿ. ಶ್ರದ್ಧೆಯಿಂದ ದುಡಿಯುವ ಈ ವರ್ಗಕ್ಕೆ ಸರ್ಕಾರದ ವಿವಿಧ ಸೌಲಭ್ಯ ಬೇಕಿದೆ. ಈ ನಿಟ್ಟಿನಲ್ಲಿ ಶ್ರಮ ಜೀವಿಗಳ ಧ್ವನಿಯನ್ನು ಪತ್ರಿಕೆಯಲ್ಲಿ ಬಿಂಬಿಸಲಾಗಿದ್ದು, ಇವರ ಪ್ರಾಮಾಣಿಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ ಎಂಬುದು ನಮ್ಮ ಒತ್ತಾಸೆ.

ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ: ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯ ಸಿಗುವಂತೆ ಮಾಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ತಾಲೂಕುಗಳ ಶಾಸಕರು ವಿತರಕರಿಗೆ ತ್ವರಿತವಾಗಿ ನಿವೇಶನ ಸೌಲಭ್ಯ ಕಲ್ಪಿಸಬೇಕು. ಪತ್ರಿಕೆ ಸರಬರಾಜು ಮಾಡುವಾಗ ಅಪಘಾತವಾದರೆ ಪರಿಹಾರ ನಿಧಿ ಘೋಷಿಸಬೇಕು ಎನ್ನುತ್ತಾರೆ ಚಿತ್ರದುರ್ಗ ಕಾರ್ಯನಿರತ ಪತ್ರಿಕಾ ವಿತರಕರ-ಹಂಚಿಕೆದಾರರ ಸಂಘದ ಜಿಲ್ಲಾಧ್ಯಕ್ಷ ಎಸ್.ತಿಪ್ಪೇಸ್ವಾಮಿ.

ಸರ್ಕಾರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲಿ: ರಾಜ್ಯ ಸರ್ಕಾರ ಪತ್ರಿಕಾ ವಿತರಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಕುರಿತು ವಿಶೇಷ ಆಸಕ್ತಿ ವಹಿಸಬೇಕು. ಏನೇ ಸಮಸ್ಯೆ ಎದುರಾದರೂ ಬಗೆಹರಿಸಲು ಮುಂದಾಗಬೇಕು. ವಿತರಕರಿಗಾಗಿ ಪ್ರತ್ಯೇಕ ಯೋಜನೆ ರೂಪಿಸಿ ಜಿಲ್ಲಾಡಳಿತದ ಮೂಲಕ ಕಾರ್ಯಕ್ರಮ ಜಾರಿಗೊಳಿಸಿ ಸ್ಪಂದಿಸಬೇಕು ಎನ್ನುತ್ತಾರೆ ಪತ್ರಿಕಾ ಚಿತ್ರದುರ್ಗ ವಿತರಕ ಇ.ಪಾಲಯ್ಯ.

ಯಾರಿಗೂ ಕೇಳದ ಶ್ರಮಜೀವಿಗಳ ಕೂಗು

ಸಮಗ್ರ ವಿಮೆ ಜಾರಿಗೊಳಿಸಿ: ಮಳೆ, ಚಳಿ ಲೆಕ್ಕಿಸದೆ ಕಷ್ಟಪಡುವ ಪತ್ರಿಕಾ ವಿತರಕರಿಗೆ ಪ್ರತ್ಯೇಕ ಆರೋಗ್ಯ ಕಾರ್ಡ್ ನೀಡುವುದು ಸೇರಿ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಸಮಗ್ರ ವಿಮೆ ಜಾರಿಗೊಳಿಸಬೇಕು. ಸೂಕ್ತ ಸ್ಥಳದಲ್ಲಿ ಪತ್ರಿಕೆ ವಿಂಗಡಿಸಲು ಅನುವು ಮಾಡಿಕೊಡಬೇಕು. ವಿಮೆಯಲ್ಲಿ ಪತ್ರಿಕೆ ಹಂಚುವ ಹುಡುಗರಿಗೂ ಅವಕಾಶ ಕಲ್ಪಿಸಬೇಕು. ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಅಪಘಾತವಾದ ವೇಳೆ ಆಸ್ಪತ್ರೆಯ ವೆಚ್ಚ ಭರಿಸಲು ತ್ವರಿತವಾಗಿ ಸ್ಪಂದಿಸಬೇಕು ಎನ್ನುತ್ತಾರೆ ಚಿತ್ರದುರ್ಗ ಕಾರ್ಯನಿರತ ಪತ್ರಿಕಾ ವಿತರಕರ-ಹಂಚಿಕೆದಾರರ ಸಂಘ ಖಜಾಂಚಿ ನಾಗರಾಜ್ ಶೆಟ್ಟಿ.

ಸಮಾಜ ಸೇವೆಗೆ ಭದ್ರತೆ ಕಲ್ಪಿಸಿ: ಪ್ರತಿ ಮನೆಗೆ ಜ್ಞಾನ ಸಂಪತ್ತು ತಲುಪಿಸುವ ಪತ್ರಿಕಾ ವಿತರಣೆಯಲ್ಲಿ ತಾಳ್ಮೆ, ವಿನಯ, ವಿಧೇಯತೆ ಇರಬೇಕು. ಇದೊಂದು ಸಮಾಜ ಸೇವೆಯಾಗಿದ್ದು, ಬದುಕಿನ ಭದ್ರತೆ ಇಲ್ಲವಾಗಿದೆ. ಕರೊನಾ ಪರಿಸ್ಥಿತಿಯಲ್ಲಿ ವಿತರಕರಿಗೆ ಆರ್ಥಿಕ ಸದೃಢತೆ ಮತ್ತು ವಿಮಾ ಸೌಲಭ್ಯ ನೀಡುವುದಾಗಿ ಸರ್ಕಾರ ಹೇಳಿತ್ತು. ಇದುವರೆಗೂ ಯಾವುದೇ ಸೌಲಭ್ಯ ದೊರಕಿಲ್ಲ. ಸರ್ಕಾರ ಇತ್ತ ಗಮನಹರಿಸಲಿ ಎನ್ನುತ್ತಾರೆ ಪುರ‌್ಲೆಹಳ್ಳಿ ಪತ್ರಿಕಾ ವಿತರಕ ಎಚ್.ಲಂಕಪ್ಪ.

ಪತ್ರಿಕೆ ವಿತರಣೆಯಿಂದ ಸ್ವಯಂ ಉದ್ಯೋಗ: ನಿರುದ್ಯೋಗಿಯಾಗಿದ್ದ ನಾನು ಗ್ರಾಮದಲ್ಲಿ ಪತ್ರಿಕೆಯನ್ನು ಹಂಚುವ ಮೂಲಕ ಸ್ವಯಂ ಉದ್ಯೋಗ ಪಡೆದುಕೊಂಡಿದ್ದು, ಸ್ವಾವಲಂಬಿಯಾಗಿದ್ದೇನೆ. ಜನರ ವಿಶ್ವಾಸದ ನಡುವೆ ಪತ್ರಿಕಾ ವಿತರಣಾ ಕೆಲಸದಿಂದ ಹೊಸ ಭರವಸೆ ಮೂಡಿದೆ. ಗ್ರಾಮಾಂತರ ಪತ್ರಿಕಾ ವಿತರಕರಿಗೆ ಸರ್ಕಾರದ ನೆರವು ದೊರೆಯಬೇಕಿದೆ ಎನ್ನುತ್ತಾರೆ ಗೋಪನಹಳ್ಳಿ ಪತ್ರಿಕಾ ವಿತರಕ ಎನ್.ಓಂಕಾರಪ್ಪ.

ಶ್ರಮಕ್ಕೆ ತಕ್ಕ ದುಡಿಮೆ ಇಲ್ಲ: ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿತರಕರಿಗೆ ಮೂಲ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರ ಬಜೆಟ್‌ನಲ್ಲಿ ಪತ್ರಿಕಾ ವಿತರಕರಿಗಾಗಿ ಮೀಸಲಿಟ್ಟ ಹಣ ಇಲ್ಲಿಯವರೆಗೆ ಬಳಕೆಯಾಗಿಲ್ಲ. ಶ್ರಮಕ್ಕೆ ತಕ್ಕ ದುಡಿಮೆಯೂ ಇಲ್ಲದೆ ಬದುಕು ದುಸ್ತರವಾಗಿದೆ. ಸರ್ಕಾರ ವಿತರಕರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಿ ಸಾಲ, ಸಹಾಯಧನ, ಆರೋಗ್ಯ, ಅಪಘಾತ ಸೌಲಭ್ಯಗಳನ್ನು ಒದಗಿಸಬೇಕು ಎನ್ನುತ್ತಾರೆ ಹೊಸದುರ್ಗ ಪತ್ರಿಕಾ ವಿತರಕ ಆದಿತ್ಯ.

ಪ್ರೋತ್ಸಾಹ ಧನ ನಿಗದಿಪಡಿಸಿ: ಬಡತನ ಸುಧಾರಣೆಗೆ ದುಡಿಯುತ್ತಿರುವ ವಿತರಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವಲ್ಲಿ ಸರ್ಕಾರ ನಿರ್ಲಕ್ಷೃ ವಹಿಸಿರುವುದು ಸರಿಯಲ್ಲ. ಸರ್ಕಾರದಿಂದ ಪ್ರೋತ್ಸಾಹ ಧನ ನಿಗದಿ ಪಡಿಸಬೇಕು. ಆರೋಗ್ಯ ಸುರಕ್ಷೆ ವಿಮೆ ಹಾಗೂ ಪ್ರತ್ಯೇಕ ಪ್ಯಾಕೇಜ್ ಘೋಷಿಸುವ ಮೂಲಕ ವಿತರಕರ ಹಿತ ಕಾಪಾಡಬೇಕಿದೆ ಎನ್ನುತ್ತಾರೆ ಮೊಳಕಾಲ್ಮೂರು ಪತ್ರಿಕಾ ವಿತರಕ ಪಿ.ಸುರೇಶ್.

ಜಾಣತನ ಕೈಬಿಡಬೇಕು: ಆಳುವ ಸರ್ಕಾರಗಳು ವಿತರಕರ ಬೇಡಿಕೆಗಳನ್ನು ಆಲಿಸಿ ನುಣುಚಿಕೊಳ್ಳುವ ಜಾಣತನ ಕೈಬಿಟ್ಟು, ಪ್ರಾಮಾಣಿಕ ಸೇವೆ ಪರಿಗಣಿಸಿ ಸವಲತ್ತು ಕಲ್ಪಿಸಬೇಕು. ವರದಿಗಾರರಿಗೆ ಕೊಟ್ಟಂತೆ ನಮಗೂ ನೋಂದಣಿ ಕಾರ್ಡ್ ಕೊಡಬೇಕು. ಪತ್ರಿಕೆ ಹಂಚುವ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡಬೇಕು ಎನ್ನುತ್ತಾರೆ ಮೊಳಕಾಲ್ಮೂರು ಪತ್ರಿಕಾ ವಿತರಕ ಸಂತೋಷ್.

blank

ಸ್ವಾವಲಂಬಿ ಜೀವನಕ್ಕೆ ಪತ್ರಿಕೆ ಆಧಾರ: ಪತ್ರಿಕಾ ವಿತರಣೆ ಕಾಯಕ ಸಮಾಜ ಸೇವೆಯಾಗಿದ್ದು, ಸುದ್ದಿಯ ಜ್ಞಾನ ಭಂಡಾರವನ್ನು ಮುಂಜಾನೆ ಓದುಗರ ಮನೆ ಬಾಗಿಲಿಗೆ ತಲುಪಿಸುವುದೇ ಖುಷಿಯ ವಿಚಾರವಾಗಿದೆ. ಬಡ ವಿದ್ಯಾರ್ಥಿಗಳು, ಯುವಕರಿಗೆ ಜೀವನದ ಪಾಠ ಕಲಿಸುವುದರ ಜತೆಗೆ ಸ್ವಾವಲಂಬಿ ಜೀವನಕ್ಕೆ ದಿನ ಪತ್ರಿಕೆ ಆಧಾರವಾಗಿದೆ. ನಮ್ಮಂತಹವರಿಗೆ ಸರ್ಕಾರಿ ಸೌಲಭ್ಯ ಬೇಕು ಎನ್ನುತ್ತಾರೆ ಹಿರಿಯೂರು ಪತ್ರಿಕಾ ವಿತರಕ ನಟರಾಜ್.

blank

ನಿರುದ್ಯೋಗಿಗಳಿಗೆ ದಾರಿ ದೀಪ: ಪತ್ರಿಕೆಗಳು ಮಹಿಳೆಯರಿಗೆ ಅಚ್ಚುಮೆಚ್ಚು. ಜ್ಞಾನದ ದೀವಿಗೆಯಾಗಿ ಪ್ರಪಂಚದ ಸುದ್ದಿಗಳನ್ನು ಓದುಗರ ನಿರೀಕ್ಷೆಗೆ ತಕ್ಕಂತೆ ಪತ್ರಿಕಾ ಧರ್ಮ ಪಾಲಿಸಿ, ಅಚ್ಚುಕಟ್ಟಾಗಿ ಮುದ್ರಿಸಿದ ಪತ್ರಿಕೆಗಳನ್ನು ಮಳೆ, ಚಳಿ ಎನ್ನದೆ ಪ್ರತಿ ಮನೆಗೆ ತಲುಪಿಸುವಲ್ಲಿ ಮಹಿಳೆಯರ ಪಾತ್ರವೂ ಇದೆ. ನಿರುದ್ಯೋಗಿಗಳಿಗೆ ಪತ್ರಿಕೆ ದಾರಿ ದೀಪವಾಗಿದೆ. ಸರ್ಕಾರವೇ ನಮ್ಮ ಸಮಸ್ಯೆ ಅರಿತು ಯೋಜನೆ ರೂಪಿಸಬೇಕು ಎನ್ನುತ್ತಾರೆ ಹಿರಿಯೂರು ಪತ್ರಿಕಾ ವಿತರಕರಾದ ಅಂಬುಜಾಕ್ಷಿ.

Share This Article

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…

honeymoon destinations : 2024 ರಲ್ಲಿ ನವವಿವಾಹಿತರನ್ನು ಆಕರ್ಷಿಸಿದ ನೆಚ್ಚಿನ ಹನಿಮೂನ್ ತಾಣಗಳು ಇವು..!

 honeymoon destinations  : ವ್ಯಕ್ತಿಯ ಆದ್ಯತೆಗಳು ಮತ್ತು ಆಯ್ಕೆಗಳು ವರ್ಷಗಳಲ್ಲಿ ಬದಲಾಗುತ್ತವೆ. ಈಗ ನಾವು 2024…