ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಮಾಡಿ: ಡಾ. ಚಂದ್ರಶೇಖರ ಕಂಬಾರ ಒತ್ತಾಯ

ಧಾರವಾಡ (ಅಂಬಿಕಾತನಯದತ್ತ ವೇದಿಕೆ): ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳ ಸಂರಕ್ಷಣೆ ಜವಾಬ್ದಾರಿ ಸರ್ಕಾರದ್ದು. ಇದನ್ನು ಅರಿತು ತನ್ನ ರಾಜ್ಯದ ಪ್ರಜೆಗಳಿಗೆ ಎಂಥ ಶಿಕ್ಷಣ ನೀಡಬೇಕು ಎಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರವೂ ಸರ್ಕಾರದ್ದು. ಈ ನಿಟ್ಟಿನಲ್ಲಿ 7ನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಒತ್ತಾಯಿಸಿದರು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಪ್ರಮುಖರ ಸಮ್ಮುಖದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಕನ್ನಡ ಮಾಧ್ಯಮ ಶಿಕ್ಷಣದ ಕುರಿತು ಗಂಭೀರವಾಗಿ ಒತ್ತಾಯಿಸುತ್ತಲೇ, ಭಾಷೆಯ ಸಂರಕ್ಷಣೆಯ ಮಹತ್ವವನ್ನು ವಿದ್ವತ್​ಪೂರ್ಣವಾಗಿ ಮನವರಿಕೆ ಮಾಡಿಕೊಟ್ಟರು.

ಕನ್ನಡ ಪ್ರಥಮಿಕ ಶಿಕ್ಷಣ ರಾಷ್ಟ್ರೀಕರಣದೊಟ್ಟಿಗೆ ತುರ್ತಾಗಿ ಸರ್ಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು. ಇದಾಗದಿದ್ದರೆ ಕನ್ನಡ ಸೇರಿ ರಾಜ್ಯ ಭಾಷೆಗಳಿಗೆ ಭವಿಷ್ಯವಿಲ್ಲ, ಖಂಡಿತ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು. ಬೇಕಿದ್ದರೆ 8ನೇ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು ಎಂದು ಅವರು ಸಲಹೆ ನೀಡಿದರು.

ಕನ್ನಡ ಭಾಷೆಗೆ ಮೊದಲ ಆದ್ಯತೆ

ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾಗಿರುವುದು ಕನ್ನಡವೇ. ಸರ್ಕಾರವಾಗಲೀ, ಶಿಕ್ಷಣ ಮತ್ತು ಸಂಸ್ಕೃತಿ ಸಂಸ್ಥೆಗಳಾಗಲೀ ವ್ಯಾಪಾರ-ವಾಣಿಜ್ಯ, ವ್ಯವಹಾರಗಳಲ್ಲಿ ಕೂಡ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ಕೊಡಬೇಕು. ರಾಜ್ಯಭಾಷೆಯ ವಿಚಾರದಲ್ಲಿ ಎಷ್ಟು ಶ್ರಮಿಸಿದರೂ ಸಾಲದು. ಎಷ್ಟು ಪೋತ್ಸಾಹ ನೀಡಿದರೂ ಅದೆಂದಿಗೂ ಅತಿರೇಕ ಎನಿಸಿಕೊಳ್ಳಲಾರದು ಎಂಬ ಕುವೆಂಪು ಅವರ ಆಗ್ರಹದ ಮಾತನ್ನು ಸರ್ವಾಧ್ಯಕ್ಷರು ನೆನಪಿಸಿಕೊಂಡರು.

ಪರಭಾಷಾ ಮಾಧ್ಯಮ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಮತ್ತೆಯನ್ನು ಬೆಂಡು ಮಾಡಿದೆ. ಪ್ರತಿಭಾನ್ವಿತರ ಸೃಷ್ಟಿ ಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ ಎಂಬ ಗಾಂಧೀಜಿ ಮಾತನ್ನು ಪ್ರಸ್ತಾಪಿಸಿದ ಅವರು, ಸ್ವಾತಂತ್ರ್ಯ ಬಂದ 70 ವರ್ಷದ ಮೇಲೆಯೂ ನಮ್ಮ ದೇಶದ ಶಿಕ್ಷಣದ ಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿ, ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಶುರುವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಮಾತೃಭಾಷೆ ಮತ್ತು ಕಲಿಕೆಯ ಭಾಷೆ ಯಾವುದಾಗಬೇಕು ಎಂಬ ಪ್ರಶ್ನೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿ ಅಂತಿಮ ತೀರ್ಪು ಹೊರಬಿದ್ದಾಗ ಕನ್ನಡ ಭಾಷೆಯ ಕುತ್ತಿಗೆಗೇ ಸಂಕಟ ಬಂದುದು ಗೊತ್ತಾಯಿತು. ಶಾಸಕರು ನಾಡಿನ ಮಕ್ಕಳ ಬಗ್ಗೆ ಆಸಕ್ತಿ ತಳೆದರು. ಇಂಗ್ಲಿಷ್ ಅನ್ನದ ಭಾಷೆ, ಇಂಗ್ಲಿಷ್ ಓದಿದವರು ವಿಶಾಲ ಪ್ರಪಂಚದ ನಾಗರಿಕರಾಗುವರೆಂದು ಪ್ರಚಾರ ಮಾಡಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಮಕ್ಕಳನ್ನು ಸೆಳೆಯತೊಡಗಿದರು. ಈಗ ಪ್ರತಿ ವರ್ಷ ಸಾವಿರಾರು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳು ಏಳತೊಡಗಿವೆ. ಇಂಥ ಶಾಲೆಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳೇ ಇದ್ದಾರೆ.

ಕನ್ನಡ ಮಾಧ್ಯಮ ಶಾಲೆಗಳಲ್ಲಿ 13 ಲಕ್ಷ ಮಕ್ಕಳು ಕಡಿಮೆ

ನ್ಯಾಯವಾಗಿ ಸರ್ಕಾರಿ ಶಾಲೆಗಳ ಸೌಲಭ್ಯ ಹೆಚ್ಚಿ ಅಲ್ಲಿ ಕಂಪ್ಯೂಟರ್​ಗಳು ಬರಬೇಕಿತ್ತು. ಆದರೆ, ಅಲ್ಲಿಯ ಮಕ್ಕಳನ್ನು ನೋಡಿದರೆ ನಿರ್ಗತಿಕರಂತೆ ಕಾಣುತ್ತಾರೆ. 2012-13ರಿಂದ 2017-18ರ ಅವಧಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ 13 ಲಕ್ಷ ಮಕ್ಕಳು ಕಡಿಮೆಯಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಸುಮಾರು 15 ಲಕ್ಷ ಪ್ರವೇಶ ಹೆಚ್ಚಾಗಿದೆ. ಸವೋಚ್ಚ ನ್ಯಾಯಾಲಯ ತೀರ್ಪಿನ ನಂತರ ಖಾಸಗಿ ಶಾಲೆಗಳು ಅಧಿಕೃತವಾಗಿ ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆ ಹೊಂದಿವೆ. ಸಾಲದ್ದಕ್ಕೆ ಪ್ರತಿವರ್ಷ ಒಂದೂವರೆ ಲಕ್ಷ ಮಕ್ಕಳನ್ನು ಸರ್ಕಾರವೇ ಶುಲ್ಕ ನೀಡಿ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಹಿಸುತ್ತಿದೆ. ಪ್ರಸ್ತುತ ಸಾಲಿನಲ್ಲಿ 3.5 ಲಕ್ಷ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾದದ್ದು ಭಯಾನಕ ಸಂಗತಿ ಎಂದ ಡಾ. ಕಂಬಾರ, ನಿಜವಾಗಿ ಈಗೀಂದೀಗ ಇಂಗ್ಲಿಷ್​ನಿಂದ ರಾಜ್ಯಭಾಷೆಗೆ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

ಇದ್ಯಾವುದೂ ತನ್ನ ಗಮನಕ್ಕೆ ಬಂದಿಲ್ಲವೆಂಬಂತೆ ಸರ್ಕಾರ ಜಾಣ ಮರೆವನ್ನು ಅಭಿನಯಿಸುತ್ತಿದೆ. ಅಕಾಡೆಮಿ ಬೇಕೆ? ಪ್ರಾಧಿಕಾರ ಬೇಕೆ? ಕಾವಲು ಸಮಿತಿ ಬೇಕೆ ಎಂದು ಕೇಳಿ, ಕೊನೆಗೆ ತಪ್ಪಿತಸ್ಥರನ್ನು ಶಿಕ್ಷಿಸಲು ಕಿಂಚಿತ್ತೂ ಅಧಿಕಾರವಿಲ್ಲದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಪಾರಾಗುತ್ತಿದೆ ಎಂದು ಛೇಡಿಸಿದರು.

ಇಂಗ್ಲಿಷ್ ಭಾಷೆ ಅನೇಕ ಪ್ರಲೋಭನೆಗಳನ್ನು ಒಡ್ಡಿದೆ. ಇಂದಿಗೂ ಅದನ್ನು ಕಲಿಯದವರನ್ನು ವಿದ್ಯಾವಂತರೇ ಅಲ್ಲ ಎಂಬಂತೆ ನೋಡಲಾಗುತ್ತಿದೆ. ಯಾವುದೇ ಭಾಷೆ ಮನುಷ್ಯನ ತಿಳಿವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ಹಾಗೇ ಮಾಡಿತು. ನಮ್ಮ ಸಮಾಜ ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತಿರುವುದಕ್ಕೆ ಈ ಮಾಧ್ಯಮ ಕಾರಣವಾಗಿದೆ. ಇಂಗ್ಲಿಷ್ ಕಲಿತ ಮೇಲೆ ನಾವು ನಮ್ಮ ಇತಿಹಾಸದ ಕಲ್ಪನೆ ರೂಪಿಸಿಕೊಂಡೆವು. ಈ ಐತಿಹಾಸಿಕ ಪ್ರಜ್ಞೆಯಿಂದ ನಮ್ಮ ಹಳೆಯ ಜ್ಞಾನಶಾಸ್ತ್ರ ರೂಪಿಸಿಕೊಂಡೆವು. ನಮ್ಮಲ್ಲಿರುವ ತರತಮ ಭಾವನೆಗಳಿಗೆ, ಮೌಲ್ಯಗಳಿಗೆ, ಕೀಳರಿಮೆಗೆ, ಸರಿ-ತಪ್ಪುಗಳ ಕಲ್ಪನೆಗೆ ಈ ಭಾಷೆಯೇ ಕಾರಣ ಎಂದರೂ ತಪ್ಪಲ್ಲ. ಇದರ ಪರಿಣಾಮವಾಗಿ ನಮ್ಮಲ್ಲಿದ್ದ ಆಯುರ್ವೇದ ವಿಜ್ಞಾನ, ಇಂಜಿನಿಯರಿಂಗ್ ಕಲೆಗಳೆಲ್ಲ ಗೊಡ್ಡು ಪುರಾಣಗಳಾಗಿ ವಿಶ್ವಾಸ ಕಳೆದುಕೊಂಡವು. ನೆಲ-ಜಲ-ಹೊಲ ಕನ್ನಡವಾಗಿದ್ದರೂ ಕೃಷಿ ಶಾಸ್ತ್ರ ಕೂಡ ಇಂಗ್ಲಿಷ್​ನಲ್ಲಿ ರೂಪುಗೊಂಡಿರುವುದು ವಿಪರ್ಯಾಸವಾಗಿದೆ ಎಂದು ಡಾ. ಕಂಬಾರ ಅವರು ಕೃಷಿ ವಿವಿ ಆವರಣದಲ್ಲೇ ನಡೆಯುತ್ತಿರುವ ಸಮ್ಮೇಳನದಲ್ಲಿ ವಿಶ್ಲೇಷಿಸಿ, ವಿಷಾದ ವ್ಯಕ್ತಪಡಿಸಿದರು.

ಇಂಥ ವಿಪರ್ಯಾಸ ತಡೆಗಟ್ಟಲು ನಮ್ಮೆದುರಿನ ದಾರಿಗಳೆಂದರೆ 7ನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವುದು ಹಾಗೂ ಸರ್ಕಾರಿ ಶಾಲೆಗಳ ಸುಧಾರಣೆ ಮಾಡುವುದು ಎಂದು ಅವರು ಮನವರಿಕೆ ಮಾಡಿದರು.

ತಾಯಿ ನುಡಿಯಲ್ಲಿ ಶಿಕ್ಷಣ ಕೊಡಬೇಕೆಂಬ ಸಿದ್ಧಾಂತ ಈಗ ಸರ್ವಸಮ್ಮತವಾಗಿದೆ. ಖಾಸಗಿ ಶಾಲೆ ನಡೆಸುವವರನ್ನು ಹೊರತುಪಡಿಸಿ ಶಿಕ್ಷಣ ತಜ್ಞರೆಲ್ಲ ಒಪ್ಪುವ ಮಾತಿದು. ಆದರೆ, ಅದಕ್ಕೆ ಅಡಚಣೆ ಇದೆ ಎಂದು ಹಿಂಜರಿಯುತ್ತಾರೆ. ಸಾಹಿತ್ಯ ಕಲಿಸಬಹುದು. ಆದರೆ, ಭೌತಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ತಂತ್ರಜ್ಞಾನ ಇವನ್ನೆಲ್ಲ ಕನ್ನಡದಲ್ಲಿ ಕಲಿಸುವುದು ಸಾಧ್ಯವಿಲ್ಲ ಎಂದೇ ಹೇಳುತ್ತಾರೆ. ನಾವು ಕಲಿಸಬೇಕಾದ ಶಾಸ್ತ್ರಗಳೆಲ್ಲ ಇಂಗ್ಲಿಷ್​ನಲ್ಲಿ ಲಭ್ಯವಿದೆ. ಇಂಗ್ಲಿಷ್ ಒಂದೇ ಇದಕ್ಕೆ ಸರಿಯಾದ ಮಾಧ್ಯಮ ಎಂದು ದೃಢವಾಗಿ ನಂಬಿದ್ದಾರೆ.

ಇಂಗ್ಲಿಷ್ ವಸಹಾತುಶಾಹಿ ಇತಿಹಾಸದ ಒಂದು ಕೊಡುಗೆ ನಿಜ. ಆದರೆ, ನಮ್ಮ ಇತಿಹಾಸವನ್ನು ಮರೆಯುವುದಾದರೂ ಹೇಗೆ? ಒಟ್ಟಿನಲ್ಲಿ ಶಿಕ್ಷಣ ಯಶಸ್ವಿಯಾಗಿ ನಡೆದುಬಿಟ್ಟರೆ ಭಾವನಾತ್ಮಕ ಕಾರಣಗಳಿಗಾಗಿ ತಾನಾಗಿ ಬಂದಿರುವ ಒಂದು ಭಾಷೆಯನ್ನು ಬಿಟ್ಟುಕೊಡುವುದು ಮೂರ್ಖತನವಾಗಬಹುದು. ಇಂಗ್ಲಿಷ್ ಭಾಷಾ ವ್ಯಾಮೋಹ ನಮ್ಮನ್ನು ಏನೂ ಯೋಚಿಸದಂತೆ ಮಾಡಿದೆ.

ಹಾಗಿದ್ದರೆ ಕನ್ನಡ ಭಾಷೆಗೆ ವಿಜ್ಞಾನದ ಮಾಧ್ಯಮವಾಗುವ ಶಕ್ತಿ ಇಲ್ಲವೆ? ಇದೆ. ಕನ್ನಡಕ್ಕೆ ವಚನಕಾರರು ಅದ್ಭುತವಾದ ಅಭಿವ್ಯಕ್ತಿ ಸಾಮರ್ಥ್ಯ ಕೊಟ್ಟರು. ಆದರೂ ಆಡಳಿತ, ಶಿಕ್ಷಣ ಹಾಗೂ ಬೌದ್ಧಿಕ ಚಟುವಟಿಕೆಗಳ ಭಾಷೆ ಇಂಗ್ಲಿಷ್. ಪೂಜೆ ಪುನಸ್ಕಾರಗಳ ಭಾಷೆ ಸಂಸ್ಕೃತ. ಕನ್ನಡವು ಸಾಹಿತ್ಯದ ಭಾಷೆಯಾಗಿ ಮಾತ್ರ ಇದೆ. ಇದರಿಂದಾಗಿ ಶಿಕ್ಷಣ ಮಾಧ್ಯಮವಾಗಲು ಕನ್ನಡ ಹಿಂಜರಿಯುತ್ತಿದೆ. ಈಗ ಕನ್ನಡಕ್ಕೆ ನೆರವಾಗಬಲ್ಲ ವ್ಯಕ್ತಿ ಮತ್ತು ಶಕ್ತಿ ಶಿಕ್ಷಕ ಮಾತ್ರ ಎಂದು ಡಾ. ಕಂಬಾರ ಪ್ರತಿಪಾದಿಸಿದರು.

ಶಿವರಾಮ ಕಾರಂತರು ಕನ್ನಡದಲ್ಲಿ ವಿಜ್ಞಾನ ಪುಸ್ತಕ ಬರೆದು ಪ್ರಕಟಿಸುವ ಮೂಲಕ ಇದು ಸಾಧ್ಯ ಎಂದು ತೋರಿಸಿದರು. ಮೈಸೂರು ವಿಶ್ವ ವಿದ್ಯಾಲಯದ ನಾಲ್ಕಾಣೆ ಪ್ರಚಾರ ಪುಸ್ತಿಕೆಗಳ ಕೊಡುಗೆಯೂ ಸ್ಮರಣೀಯ. ತಾವು ಕುಲಪತಿಯಿದ್ದಾಗಲೂ ಕೆಲವು ಕನ್ನಡ ವಿಜ್ಞಾನ ಪುಸ್ತಕ ಪ್ರಕಟಿಸಲಾಗಿತ್ತು ಎಂದು ನೆನಪಿಸಿಕೊಂಡ ಸರ್ವಾಧ್ಯಕ್ಷರು, ವಿಜ್ಞಾನದ ಪುಸ್ತಕ ಯಾವುದೇ ಭಾಷೆಯಲ್ಲಿರಲಿ; ಅದನ್ನು ಕನ್ನಡದಲ್ಲಿ ಕಲಿಸಬೇಕೆಂಬ ಸಂಕಲ್ಪಕ್ಕೆ ಶಿಕ್ಷಕರೆಲ್ಲ ಬದ್ಧರಾಗಬೇಕು. ಸರ್ಕಾರವೂ ಮನಸ್ಸು ಮಾಡಬೇಕು. ಜನತೆಯೂ ಅದನ್ನು ಬಯಸಬೇಕು. ಶಿಕ್ಷಕ, ಸರ್ಕಾರ, ಜನತೆ ಸೇರಿದಾಗಲೇ ಕನ್ನಡ ಮಾಧ್ಯಮ ಸುಲಭ ಸಾಧ್ಯ. ಈಗ ಸರ್ಕಾರ ಮುಂದೆ ಬಂದು ತಕ್ಷಣವೇ ಹಂಗಾಮಿ ಶಿಕ್ಷಕರನ್ನು ಕಾಯಮಾತಿಗೊಳಿಸಬೇಕು. ಶಿಕ್ಷಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಯಾವ ಸರ್ಕಾರಕ್ಕೂ ಶೋಭೆಯಲ್ಲ ಎಂದು ಕಿವಿಮಾತು ಹೇಳಿದರು.