ಶ್ರೀಕಂಠೇಶ್ವರ ದೇಗುಲಕ್ಕೆ ರಾಷ್ಟ್ರಪತಿ ಭೇಟಿ

ನಂಜನಗೂಡು: ಪುರಾಣ ಪ್ರಸಿದ್ಧ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ (ಅ.11) ಭೇಟಿ ನೀಡಿ ದರ್ಶನ ಪಡೆಯಲಿದ್ದು, ಈ ಮೂಲಕ ಭೇಟಿ ನೀಡಿದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಲಿದ್ದಾರೆ.
1972ರಲ್ಲಿ ದೇಶದ ನಾಲ್ಕನೇ ರಾಷ್ಟ್ರಪತಿಯಾಗಿದ್ದ ವರಹಗಿರಿ ವೆಂಕಟಗಿರಿ(ವಿ.ವಿ.ಗಿರಿ) ಅವರು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸುಪ್ರಭಾತ ಧ್ವನಿಸುರುಳಿ ಲೋಕಾರ್ಪಣೆಗೊಳಿಸುವ ಸಲುವಾಗಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಅವರ ಬಳಿಕ ಬಂದ 10 ರಾಷ್ಟ್ರಪತಿಗಳ ಪೈಕಿ ಯಾರೂ ದೇವಾಲಯಕ್ಕೆ ಭೇಟಿ ಕೊಟ್ಟ ಉದಾಹರಣೆಗಳಿಲ್ಲ.
14ನೇ ರಾಷ್ಟ್ರಪತಿಯಾಗಿರುವ ರಾಮನಾಥ ಕೋವಿಂದ ಐದು ದಶಕಗಳ ಬಳಿಕ ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ದೇಶದ ಪ್ರಥಮ ಪ್ರಜೆ ಭೇಟಿ ನೀಡುತ್ತಿರುವುದು ಸಹಜವಾಗಿಯೇ ಪಟ್ಟಣದ ಜನರಲ್ಲಿ ಪುಳಕ ಹೆಚ್ಚಿಸಿದೆ. ಆದರೆ ಅವರನ್ನು ಕಾಣುವ ತವಕ ಮಾತ್ರ ಈಡೇರುವುದಿಲ್ಲ ಎಂಬುದು ಸಾರ್ವಜನಿಕರ ಬೇಸರವಾಗಿದೆ.
ಹೆಚ್ಚಿನ ಭದ್ರತೆ: ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಶ್ರೀಕಂಠೇಶ್ವರಸ್ವಾಮಿ ದೇವಾಲಯವನ್ನು ಶುಕ್ರವಾರ ಬೆಳಗ್ಗೆ 8.30 ರಿಂದ 10.30ರವರೆಗೆ ವಿಶೇಷ ಭದ್ರತಾ ಪಡೆ ವಶಕ್ಕೆ ಪಡೆಯಲಿದ್ದು, ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ರಾಷ್ಟ್ರಪತಿಗಳು ಪಟ್ಟಣ ಪ್ರವೇಶಿಸುವ ಅವಧಿಯಲ್ಲಿ ಮೈಸೂರು-ನಂಜನಗೂಡು ಹೆದ್ದಾರಿ, ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಈಗಾಗಲೇ ನಿರ್ದೇಶನ ನೀಡಿದೆ. ಅಲ್ಲದೇ, ಭದ್ರತಾ ದೃಷ್ಟಿಯಿಂದ ದೇವಾಲಯ ಆವರಣ ಸುತ್ತ ಹಾಗೂ ಆಗಮಿಸುವ ರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.
ಬೈಪಾಸ್ ರಸ್ತೆಯ ಮೂಲಕವೇ ರಾಷ್ಟ್ರಪತಿಗಳು ದೇವಾಲಯಕ್ಕೆ ತೆರಳುವುದರಿಂದ ಅಪೋಲೋ ವೃತ್ತದಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ಶುಕ್ರವಾರದ ಸಂತೆಯನ್ನು ಎಪಿಎಂಸಿ ರದ್ದು ಮಾಡಿದೆ.
ರಸ್ತೆಗೆ ನಾಮಕರಣ: ವಿ.ವಿ.ಗಿರಿ ಅವರು 1972ರಲ್ಲಿ ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ಕೊಟ್ಟ ನೆನಪಿಗಾಗಿ ಅವರು ದೇಗುಲಕ್ಕೆ ಸಂಚರಿಸಿದ ನಂಜನಗೂಡಿನ ಪ್ರಮುಖ ರಸ್ತೆಗೆ ರಾಷ್ಟ್ರಪತಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಮದುವಣಗಿತ್ತಿಯಂತೆ ಸಿಂಗಾರ: ಇನ್ನು ರಾಷ್ಟ್ರಪತಿಗಳ ಆಗಮನದಿಂದಾಗಿ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ದೇವಾಲಯದ ಹೊರ ಹಾಗೂ ಒಳ ಆವರಣದ ಸುತ್ತ ಸ್ವಚ್ಛಗೊಳಿಸಲಾಗಿದೆ. ತಳಿರು ತೋರಣಗಳಿಂದ ದೇವಾಲಯವನ್ನು ಸಿಂಗಾರಗೊಳಿಸಿ ಸಜ್ಜುಗೊಳಿಸಲಾಗಿದೆ.
ರಾಷ್ಟ್ರಪತಿಗಳು ಬರುವ ವೇಳೆ ಆಯ್ದ ಆಗಮಿಕರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಉಳಿದಂತೆ ವಿಶೇಷ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Leave a Reply

Your email address will not be published. Required fields are marked *