Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ತ್ಯಾಗಮೂರ್ತಿಯ ಮಹಾಮಜ್ಜನ ಮಹೋತ್ಸವ ಆರಂಭ

Thursday, 08.02.2018, 3:03 AM       No Comments

ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲಿನ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಪಂಚಕಲ್ಯಾಣ ನಗರದ ಚಾವುಂಡರಾಯ ಸಭಾಮಂಟಪದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಬುಧವಾರ ಚಾಲನೆ ನೀಡಿದರು. ಫೆ.17ರಿಂದ25ರ ತನಕ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆಯಲಿದೆ.

 ವಿಶ್ವಕಲ್ಯಾಣಕ್ಕೆ ಸಮ್ಯಕ್ ಮಾರ್ಗದರ್ಶಕ

ಜೈನ ಧರ್ಮ ಬೋಧಿಸಿರುವ ಮೂರು ರತ್ನಗಳಾದ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚಾರಿತ್ರ್ಯಗಳು ಇಡೀ ವಿಶ್ವದ ಕಲ್ಯಾಣಕ್ಕೆ ಅಗತ್ಯ ಮಾರ್ಗದರ್ಶಕಗಳಾಗಿವೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಹೇಳಿದರು.

ಉಜ್ಜಯನಿಯಿಂದ ಬಂದ ಆಚಾರ್ಯ ಭದ್ರಬಾಹು ಹಾಗೂ ಸಾಮ್ರಾಟ ಚಂದ್ರಗುಪ್ತ ಮೌರ್ಯ ಕೂಡ ಇಲ್ಲಿಗೆ ಬಂದು ನೆಲೆಸಿ ದೇಹತ್ಯಾಗ ಮಾಡಿದ್ದಾರೆ. ಅಂತಹ ರಾಷ್ಟ್ರ ನಿರ್ವತೃಗಳು ಶಾಂತಿ, ನೆಮ್ಮದಿ, ತ್ಯಾಗದ ಪ್ರತೀಕವಾಗಿ ಇಲ್ಲಿ ನೆಲೆಸಿದ್ದಾರೆ. ವಿಂಧ್ಯಗಿರಿ ಮೇಲಿನ ಒಂದು ನಿರ್ಜೀವ ಶಿಲೆಗೆ ಶಿಲ್ಪಿಗಳು ಜೀವ ತುಂಬಿದ್ದಾರೆ. ಈ ದಿಗಂಬರ ಮೂರ್ತಿ ಜಗತ್ತಿನ ಎಲ್ಲ ಜಂಜಡಗಳಿಂದ ಮುಕ್ತವಾದ ಮುಖಭಾವದೊಂದಿಗೆ ಎಲ್ಲರಿಗೂ ಶಾಂತಿ, ತ್ಯಾಗ, ಅಹಿಂಸೆಯ ಸಂದೇಶ ಸಾರುತ್ತಿದೆ. ಅದನ್ನು ನಾವೆಲ್ಲರೂ ಗ್ರಹಿಸಬೇಕು. ಜೈನ ಧರ್ಮದಲ್ಲಿ ಪ್ರಕೃತಿ ಸಂರಕ್ಷಣೆಯ ಪಾಠವಿದೆ. ಆತಂಕವಾದ ಹಾಗೂ ಹಿಂಸೆಯಿಂದ ಜಗತ್ತು ನಲುಗುತ್ತಿರುವ ಸಮಯದಲ್ಲಿ ಗೊಮ್ಮಟೇಶ್ವರನ ಸಂದೇಶ ಎಲ್ಲರಿಗೂ ಪಾಠವಾಗಬೇಕು ಎಂದು ಅಭಿಪ್ರಾಯಪಟ್ಟರು.

 

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್ ಮತ್ತು ಆಯೋಜಕರು ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಾಗಿಯಾಗುವಂತೆ ಆಹ್ವಾನಿಸಿದರು. ಕನ್ನಡಿಗರ ಆತಿಥ್ಯ ನನ್ನನ್ನು ಪದೇಪದೆ ರಾಜ್ಯಕ್ಕೆ ಬರುವಂತೆ ಪ್ರೇರೇಪಿಸುತ್ತದೆ. ಹೀಗಾಗಿ ಅಧಿಕಾರ ವಹಿಸಿಕೊಂಡ ಕಡಿಮೆ ಅವಧಿಯಲ್ಲೇ ಮೂರನೇ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದೇನೆ.

| ರಾಮನಾಥ ಕೋವಿಂದ, ರಾಷ್ಟ್ರಪತಿ

 

ಕನ್ನಡದಲ್ಲಿ ಶುಭಾಶಯ

‘ಸಹೋದರ, ಸಹೋದರಿಯರೇ ಎಲ್ಲರಿಗೂ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ರಾಷ್ಟ್ರದ ಪ್ರಥಮ ಪ್ರಜೆ ರಾಮನಾಥ ಕೋವಿಂದ ನೆರೆದಿದ್ದವರಲ್ಲಿ ಸಂಚಲನ ಮೂಡಿಸಿದರು. ಕನ್ನಡ ಪದಗಳನ್ನು ಕೇಳಿದ ಸಭಿಕರು ಚಪ್ಪಾಳೆ ತಟ್ಟಿ, ಹಷೋದ್ಗಾರ ಮಾಡಿದರು.

 

ಸ್ವಧರ್ಮಕ್ಕೆ ನಿಷ್ಠರಾಗಿ, ಅನ್ಯ ಧರ್ಮವನ್ನು ಗೌರವಿಸುವ ಸಹಿಷ್ಣುತಾ ಮನೋಭಾವ ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ನೆಮ್ಮದಿ ವಾತಾವರಣ ಸೃಷ್ಟಿಯಾಗಲು ಸಾಧ್ಯ.

| ಸಿದ್ದರಾಮಯ್ಯ ಮುಖ್ಯಮಂತ್ರಿ

 

ಚಾವುಂಡರಾಯನು ಭಗವಾನ್ ಬಾಹುಬಲಿ ಮೂರ್ತಿಯನ್ನು ಶಿಲೆಯ ಬದಲಾಗಿ ಚಿನ್ನದಿಂದ ಕೆತ್ತಿಸಿದ್ದರೆ ಶ್ರವಣಬೆಳಗೊಳ ಯುದ್ಧಭೂಮಿ ಆಗಿರುತ್ತಿತ್ತು. ವಿಶ್ವಶಾಂತಿಗಾಗಿ ಪ್ರಾರ್ಥಿಸಲು ರೂಪಿಸಿರುವ ಅದ್ಭುತ ಕಲಾಕೃತಿ ಇದಾಗಿದೆ. ಆಡಳಿತಗಾರರು ಧರ್ಮದ ಭಾಗವಾಗುವ ಮೂಲಕ ಉತ್ತಮ ಕೆಲಸಗಳಿಗೆ ನೆರವಾಗಬೇಕು.

| ಡಾ. ಡಿ.ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ

 

12ನೇ ಮಹಾಮಸ್ತಕಾಭಿಷೇಕ ಎಂದ ಮುಖ್ಯಮಂತ್ರಿ

ಭಾಷಣದ ವೇಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯ 88ನೇ ಮಹಾಮಸ್ತಕಾಭಿಷೇಕ ಎಂದು ಹೇಳುವ ಬದಲು 12ನೇ ಮಹಾಮಸ್ತಕಾಭಿಷೇಕ ಎಂದರು. ಅಷ್ಟೇ ಅಲ್ಲ, ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ 4ನೇ ಮಹಾಮಸ್ತಕಾಭಿಷೇಕ ಎನ್ನುವ ಬದಲು 3ನೇ ಮಹಾಮಸ್ತಕಾಭಿಷೇಕ ಎಂದರು.

ಶತಮಾನದ ಎರಡನೇ ಮಜ್ಜನ

ಚಾವುಂಡರಾಯ ಸಭಾಮಂಟಪದ ಅಲಂಕೃತ ವೇದಿಕೆಯಲ್ಲಿ ಸ್ವರ್ಣ ಲೇಪಿತ ಬೆಳ್ಳಿ ಮಂಟಪದಲ್ಲಿ ಇರಿಸಿದ್ದ ಭಗವಾನ್ ಬಾಹುಬಲಿಯ ಬೆಳ್ಳಿ ವಿಗ್ರಹವನ್ನು ಅನಾವರಣಗೊಳಿಸುವ ಮೂಲಕ ರಾಷ್ಟ್ರಪತಿ ಕೋವಿಂದ ಮಹಾಮಜ್ಜನಕ್ಕೆ ಸಂಬಂಧಿಸಿದ ಧಾರ್ವಿುಕ ಚಟುವಟಿಕೆಗಳನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿದ್ದ ಆಚಾರ್ಯ ವರ್ಧಮಾನ ಸಾಗರ ಮಹಾರಾಜ್ ಸೇರಿದಂತೆ ನೂರಾರು ತ್ಯಾಗಿಗಳು, ಶ್ರಾವಕಿಯರು, ಮಾತಾಜಿಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಗುರುವಾರ(ಫೆ.8)ದಿಂದ ಮಹಾಮಸ್ತಕಾಭಿಷೇಕ ಪೂರ್ವ ಪಂಚಕಲ್ಯಾಣ ಮಹೋತ್ಸವ ಸೇರಿದಂತೆ ಇತರ ಧಾರ್ವಿುಕ ವಿಧಿವಿಧಾನಗಳು ಜರುಗಲಿವೆ. 17ರಂದು ಮುಂಜಾನೆಯಿಂದ ಬಾಹುಬಲಿ ಪಾದ ಪೂಜೆ, ವಿವಿಧ ದ್ರವ್ಯಗಳ ಸಿದ್ಧತೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಪ್ರಥಮ ಕಳಸ ಅಭಿಷೇಕದೊಂದಿಗೆ ವಿರಾಟ ವಿರಾಗಿಗೆ ಶತಮಾನದ 2ನೇ ಮಹಾಮಜ್ಜನ ಆರಂಭವಾಗಲಿದೆ. 18ರಿಂದ 25ರವರೆಗೆ ನಿತ್ಯ 1008 ಕಳಸಗಳಿಂದ ಮಹಾಮಸ್ತಕಾಭಿಷೇಕ ಜರುಗಲಿದೆ.

ಪ್ರಥಮ ಪ್ರಜೆಗೆ ಅಭಿನಂದನೆ

ಮಹಾಮಜ್ಜನ ಮಹೋತ್ಸವಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ವಿಂಧ್ಯಗಿರಿ ಬೆಟ್ಟದ ಮೇಲೆ ನಿಂತ ಬಾಹುಬಲಿಯ ಪ್ರತಿಕೃತಿ ಹೊಂದಿರುವ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಹೆಲಿಕಾಪ್ಟರ್​ನಲ್ಲಿ ಗೊಮ್ಮಟನಿಗೆ ಪ್ರದಕ್ಷಿಣೆ

ಇದಕ್ಕೂ ಹಿಂದಿನ ಮಹಾಮಸ್ತಕಾಭಿಷೇಕಗಳನ್ನು ಅಂದಿನ ರಾಷ್ಟ್ರಪತಿಗಳಾದ ಶಂಕರ್ ದಯಾಳ ಶರ್ವ, ಅಬ್ದುಲ್ ಕಲಾಂ ಉದ್ಘಾಟಿಸಿದ್ದರು. ಆದರೆ, ಅವರಿಬ್ಬರೂ ಬೆಟ್ಟವೇರಿ ಬಾಹುಬಲಿ ದರ್ಶನ ಪಡೆದಿಲ್ಲ. ಈ ಸಂಪ್ರದಾಯವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಸಹ ಮುಂದುವರಿಸಿದರು. ಆದರೆ, ರಾಷ್ಟ್ರಪತಿ ಹಾಗೂ ಅವರ ಪತ್ನಿ ಸವಿತಾರಿಗೆ ವಾಯುಪಡೆ ಹೆಲಿಕಾಪ್ಟರ್​ನ ಪೈಲಟ್ ವಿಂಧ್ಯಗಿರಿಯ ಮೇಲೆ ಕೆಳಮಟ್ಟದಲ್ಲಿ ಮೂರು ಸುತ್ತು ಹಾಕಿ ವಿರಾಟ್ ವಿರಾಗಿಯ ದರ್ಶನ ಮಾಡಿಸಿದರು.

ಸಿದ್ದರಾಮಯ್ಯ ದೇವೇಗೌಡ ಕೋಪ-ತಾಪ!

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಡುವೆ ಆರಂಭವಾದ ಮುನಿಸು ಬುಧವಾರ ವೇದಿಕೆ ಹಂಚಿಕೊಂಡರೂ ಕಡಿಮೆಯಾಗಿರಲಿಲ್ಲ. ಸಿಎಂ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದ ದೇವೇಗೌಡರ ಮನವೊಲಿಸುವಲ್ಲಿ ಜಿಲ್ಲಾಡಳಿತ ಸಫಲವಾದರೂ, ಮುನಿಸು ಶಮನಗೊಳಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ್ದ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯ ವೇದಿಕೆ ಏರುವಾಗ ಎದುರು ಬದುರಾದರೂ ಮುಖ ತಿರುಗಿಸಿಕೊಂಡು ಆಸನಗಳತ್ತ ನಡೆದಿದ್ದರು. ಅಲ್ಲೂ, ರಾಜ್ಯಪಾಲರ ಪಕ್ಕದ ಕುರ್ಚಿಯಲ್ಲಿ ದೇವೇಗೌಡರು ಆಸೀನರಾದರೆ, ರಾಷ್ಟ್ರಪತಿಗಳ ಪಕ್ಕದ ಆಸನದಲ್ಲಿ ಸಿದ್ದರಾಮಯ್ಯ ಕುಳಿತು ಅಂತರ ಕಾಯ್ದುಕೊಂಡರು.

Leave a Reply

Your email address will not be published. Required fields are marked *

Back To Top