ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ: ಮಸೂದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅಂಕಿತ ಹಾಕಿದ್ದಾರೆ.

ಸಂವಿಧಾನ ತಿದ್ದುಪಡಿ ಮಸೂದಗೆ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿತ್ತು. ನಂತರ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿತ್ತು. ಶನಿವಾರ ರಾಷ್ಟ್ರಪತಿ ಮಸೂದೆಗೆ ಅಂಕಿತ ಹಾಕಿದ್ದಾರೆ.

ಎನ್​ಡಿಎ ಸರ್ಕಾರದ ಸಂವಿಧಾನ ತಿದ್ದುಪಡಿ ಪ್ರಸ್ತಾಪಕ್ಕೆ ಕಾಂಗ್ರೆಸ್, ಎನ್​ಸಿಪಿ, ಬಿಜೆಡಿ, ಟಿಎಂಸಿ ಸೇರಿ ಇತರ ಪ್ರತಿಪಕ್ಷಗಳು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ 2/3ನೇ ಬಹುಮತದ ಮೂಲಕ ಲೋಕಸಭೆಯಲ್ಲಿ ಅನುಮೋದನೆ ದೊರೆತಿತ್ತು. ಮಂಗಳವಾರ ಸದನದಲ್ಲಿ ಹಾಜರಿದ್ದ 323 ಸದಸ್ಯರಲ್ಲಿ 319 ಸಂಸದರು ತಿದ್ದುಪಡಿ ಪರವಾಗಿ ಮತ ಚಲಾಯಿಸಿದ್ದರು.

ಬುಧವಾರ ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಯ ಮೇಲೆ 8 ಗಂಟೆಗಳ ಸುದೀರ್ಘ ಚರ್ಚೆ ಬಳಿಕ ನಡೆದ ಮತದಾನದಲ್ಲಿ ತಿದ್ದುಪಡಿ ಪರವಾಗಿ 152, ವಿರುದ್ಧವಾಗಿ 13 ಸದಸ್ಯರು ಮತ ಹಾಕಿದ್ದರು. 78 ಸದಸ್ಯರು ಮತದಾನದಿಂದ ದೂರ ಉಳಿದಿದ್ದರು.

ಮೀಸಲಾತಿಯ ಫಲಾನುಭವಿಗಳು ಯಾರು? ಫಲಾನುಭವಿಗಳ ಆರ್ಥಿಕ ಮಾನದಂಡ ಹಾಗೂ ಇತರ ವಿಚಾರಗಳ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಪರಿಶೀಲನೆ ನಡೆಸಲಿವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ. 8 ಲಕ್ಷ ರೂ. ಸೇರಿ ಇತರ ಮಾನದಂಡಗಳನ್ನು ಕೇಂದ್ರ ನಿರ್ಧರಿಸಿಲ್ಲ ಎಂದು ಪ್ರಸಾದ್ ಸ್ಪಷ್ಟಪಡಿಸಿದ್ದರು.

Leave a Reply

Your email address will not be published. Required fields are marked *