ಅನುದಾನ ವಾಪಸ್ಸಾದರೆ ಕ್ರಮ

ಚಿಕ್ಕಮಗಳೂರು: ಮಾರ್ಚ್ ಒಳಗೆ ಇಲಾಖೆಗೆ ನಿಗದಿಯಾದ ಅನುದಾನ ಪೂರ್ಣಬಳಕೆ ಮಾಡಬೇಕು. ಅನುದಾನ ವಾಪಸ್ ಹೋದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ತಾಲೂಕು ಪಂಚಾಯಿತಿ ಅಧಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಎಚ್ಚರಿಕೆ ನೀಡಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವುದು, ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸುವುದು, ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸುವಾಗ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲು ಅನುದಾನ ನೀಡಿದೆ. ಸಮಸ್ಯೆ ಇರುವ ಕಡೆ ತಕ್ಷಣ ಸ್ಪಂದಿಸುವ ಜತೆಗೆ ಅನುದಾನ ದುರುಪಯೋಗವಾಗದಂತೆ ಕ್ರಮಕೈಗೊಳ್ಳಬೇಕು. ಟ್ಯಾಂಕರ್​ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿ ನಿಗಾ ವಹಿಸುವಂತೆ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರ್​ಗೆ ಸೂಚಿಸಿದರು.

ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಬೊರ್​ವೆಲ್ ಹತ್ತಿರ ಇದ್ದರೆ ಬಳಸಿಕೊಳ್ಳಿ. ಅನವಶ್ಯಕವಾಗಿ ಟ್ಯಾಂಕರ್ ನೀರು ಬೇಡ. ಟ್ಯಾಂಕರ್ ನೀರು ಸರಬರಾಜು ಮಾಡುವಾಗ ಆಯಾ ವಾರ್ಡ್ ಸದಸ್ಯರ ಸಹಿ ಹಾಗೂ ಛಾಯಾ ಚಿತ್ರ ಕಡ್ಡಾಯವಾಗಿ ತೆಗೆದು ಕೊಳ್ಳಬೇಕು. ಶಾಸಕ ಸಿ.ಟಿ.ರವಿ ಅವರು ತಮ್ಮ ಅನುದಾನದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ 50 ಲಕ್ಷ ರೂ. ನೀಡಿದ್ದಾರೆ. ತಾಲೂಕಿನ 36 ಹಳ್ಳಿಗಳಲ್ಲಿ ಅಗತ್ಯ ಇರುವ ಕಾಮಗಾರಿ ಈ ಅನುದಾನದಲ್ಲಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಒಂದೇ ಮನೆ ಮೂವರಿಗೆ ಸಹಾಯಧನ: ಸಾದರಹಳ್ಳಿಯ ಒಂದೇ ಮನೆಯ ಗಂಡ, ಹೆಂಡತಿ ಹಾಗೂ ಸೊಸೆಗೆ ಮೂರು ಯೋಜನೆಗಳ ಸಹಾಯಧನ ನೀಡಿರುವ ತೋಟಗಾರಿಕೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಲೋಹಿತ್ ಅವರನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಸರ್ಕಾರದ ಸಹಾಯಧನ ಕೊಡುವಾಗ ಅರ್ಹ ಬಡವರಿಗೆ ಆದ್ಯತೆ ನೀಡಬೇಕು. ನೀವು ಶ್ರೀಮಂತ ಒಂದೇ ಕುಟುಂಬದ ಮೂವರಿಗೆ ಸಹಾಯಧನ ಕೊಡಲಾಗಿದೆ. ಸರ್ಕಾರದ ಉದ್ದೇಶ ದುರುಪಯೋಗ ಮಾಡಿಕೊಂಡಂತಾಗುತ್ತದೆ. ಮುಂದೆ ಈ ರೀತಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.