ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹ

ಬಾಗಲಕೋಟೆ: ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪರಸ್ಪರ ಕಿತ್ತಾಟ ಮಾಡಿಕೊಂಡು ಬರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿವೆ. ಕೂಡಲೇ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ರೈತ ಸಂಘದ ಕಾರ್ಯಕರ್ತರು ರಾಜಕೀಯ ಪಕ್ಷಗಳ ವಿರುದ್ಧ ಘೊಷಣೆ ಕೂಗಿದರು. ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿ ನರಳುತ್ತಿದ್ದಾರೆ. ಜಾನುವಾರುಗಳು ಮೇವಿಲ್ಲದೆ ಪರದಾಡುತ್ತಿವೆ. ಹೀಗಿರುವಾಗ ರಾಜಕೀಯ ಪಕ್ಷಗಳು ಪರಸ್ಪರ ಕಿತ್ತಾಟದಲ್ಲಿ ತೊಡಗಿವೆ. ಅಧಿಕಾರಕ್ಕಾಗಿ ರಾಜ್ಯದ ಜನರ ಸಮಸ್ಯೆ ಆಲಿಸುವುದನ್ನು ಮರೆತಿದ್ದಾರೆ. ಸರ್ಕಾರವೂ ಕೂಡ ಅಭಿವೃದ್ಧಿ ಹಾಗೂ ಬರಗಾಲ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದು, ಕೂಡಲೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಶಶಿಕಾಂತ ಬಾಳಿಕಾಯಿ ಮಾತನಾಡಿ, ಕೂಲಿ ಕಾರ್ವಿುಕ ಹಾಗೂ ಸಮಸ್ತ ರಾಜ್ಯದ ಜನತೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ರಸೂಲ್​ಸಾಬ್ ತಹಸೀಲ್ದಾರ್, ವೀರೇಶ ಸೊಬರದಮಠ, ಆರ್.ಡಿ. ಬಾಬು, ತಿಪ್ಪಣ್ಣ ಮೇಟಿ, ಎಂ.ಎಸ್. ತಿವಾರಿ ಮಂಜು ಪವಾರ, ಸಂಜು ರಾಠೋಡ, ಲಕ್ಷ್ಮಣ ರಾಠೋಡ, ಶಕುಂತಲಾ, ಶೇಖರ ಹಿರೇಮಠ ಇತರರು ಇದ್ದರು.

ರಾಜ್ಯದ ಜನತೆಯ ಹಿತ ಕಾಪಾಡದೇ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಕೇವಲ ಸ್ವಾರ್ಥ ರಾಜಕೀಯ, ಭ್ರಷ್ಟಾಚಾರ, ಅಧಿಕಾರ ಲಾಲಸೆಯಿಂದ ರೆಸಾರ್ಟ್​ಗಳಲ್ಲಿ ಜೀವನ ಕಳೆಯುತ್ತಿದ್ದಾರೆ. ರಾಜಕೀಯ ಪಕ್ಷಗಳು ರೈತರು, ನೇಕಾರರು, ಕೂಲಿ ಕಾರ್ವಿುಕರ ವಿರೋಧಿ ನೀತಿ ಅನುಸರಿಸುತ್ತಿವೆ.

| ಶಶಿಕಾಂತ ಬಾಳಿಕಾಯಿ, ರಾಜ್ಯ ರೈತ ಸಂಘದ ಮುಖಂಡ

Leave a Reply

Your email address will not be published. Required fields are marked *