ಸ್ವಪ್ರಶಂಸೆ, ಪರನಿಂದನೆ ಎರಡೂ ತರವಲ್ಲ

| ಡಾ. ಕೆ.ಪಿ.ಪುತ್ತೂರಾಯ

ಕೆಲವರಿಗೊಂದು ದುರಭ್ಯಾಸ. ಅದೇನೆಂದರೆ ತಮ್ಮನ್ನು ತಾವೇ ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ ಹೊಗಳಿಕೊಳ್ಳುವುದು ಅರ್ಥಾತ್ ಆತ್ಮಸ್ತುತಿ. ತಮ್ಮ ಬಗ್ಗೆ ಯಾರೂ ಏನನ್ನೂ ಕೇಳದಿದ್ದರೂ, ಸಮಯ ಸಿಕ್ಕಿದಾಗೆಲ್ಲಾ ತಮ್ಮ ಸಾಧನೆ, ಸಾಮರ್ಥ್ಯ, ಸ್ವತ್ತು, ಸಂಪತ್ತುಗಳ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಪಮತಿಗಳು ನೇರವಾಗಿ ಹೇಳಿಕೊಂಡರೆ, ‘ಬೃಹಸ್ಪತಿ’ಗಳು ಪರೋಕ್ಷವಾಗೇ ತಮ್ಮ ಹಿರಿಮೆ-ಗರಿಮೆಗಳನ್ನು ಕೇಳುಗರಿಗೆ ರವಾನಿಸುತ್ತಿರುತ್ತಾರೆ. ಉದಾಹರಣೆಗೆ: ‘ದೇಶ ವಿದೇಶಗಳಲ್ಲಿ ನನಗೆ ಈವರೆಗೆ ಹಲವಾರು ಸನ್ಮಾನ- ಪ್ರಶಸ್ತಿಗಳು ಸಂದಿದ್ದರೂ, ನೀವು ಮಾಡುತ್ತಿರುವ ಸನ್ಮಾನ ನನ್ನ ಜೀವನದಲ್ಲೇ ಅತ್ಯಮೂಲ್ಯವಾದದ್ದು’…ಹೀಗೆ…

ತಾವು ದೇಶ ವಿದೇಶಗಳನ್ನು ಸುತ್ತಿರುವುದು, ಅಲ್ಲಿ ಸಿಕ್ಕಿರುವ ಸನ್ಮಾನ- ಪ್ರಶಸ್ತಿಗಳ ಬಗ್ಗೆ ಸಭಿಕರಿಗೆ ಒತ್ತಿ ಹೇಳುವುದು ಅವರ ಮಾತಿನ ಮರ್ಮವಾಗಿರುತ್ತದೆ. ಇಂಥ ಸ್ವಪ್ರಶಂಸೆ ಅಸಹ್ಯವೆನಿಸಿದರೂ ಸಭಾ ಮರ್ಯಾದೆ ಅಥವಾ ಶಿಷ್ಟಾಚಾರದ ಕಾರಣಗಳಿಂದ ಅಲ್ಲಿರುವ ಇತರ ಅತಿಥಿಗಳು ಒಲ್ಲದ ಮನಸ್ಸಿನಿಂದಲೇ ಒಂದೆರಡು ಮೆಚ್ಚುಗೆಯ ಮಾತುಗಳನ್ನು ಆಡಬೇಕಾಗುತ್ತದೆ.

ಹಾಗಾದರೆ ನುಡಿ ನಮನ ಹೇಗಿರಬೇಕು? ಬಸವಣ್ಣನವರು ಹೇಳುವಂತೆ ‘ನುಡಿದರೆ ಮುತ್ತಿನ ಹಾರದಂತಿರಬೇಕು’. ಅಂದರೆ ನಾವೇ ನಮ್ಮ ಬಗ್ಗೆ ಹೇಳಿಕೊಳ್ಳಬಾರದು. ಒಂದು ವೇಳೆ ನಮ್ಮ ಬಗ್ಗೆ ಇತರರು ಕೇಳಲಿಚ್ಛಿಸಿದಾಗಲೂ ನಮ್ಮ ಬಗ್ಗೆ ಹೆಚ್ಚು ಕೊಚ್ಚಿಕೊಳ್ಳದೇ, ಕೊಂಚ ಕಮ್ಮಿಯಾಗೇ ಹೇಳಬೇಕು. ಆಗ ಮಾತಿಗೊಂದು ಬೆಲೆ ಪ್ರಾಪ್ತವಾಗುತ್ತದೆ. ಇಲ್ಲವಾದಲ್ಲಿ ಮಾತು ಸ್ವಪ್ರಶಂಸೆ ಎನಿಸಿ, ಕೇಳುವವರಿಗೂ ಹಿತವೆನಿಸದೆ, ಹೇಳುವವರ ಗೌರವಕ್ಕೂ ಕುಂದು ತರುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಆದರೆ ನಮ್ಮ ಸಾಧನೆಯನ್ನು ಇನ್ನೊಬ್ಬರು ಬಣ್ಣಿಸಿದಾಗ ಅದಕ್ಕೆ ಇನ್ನಷ್ಟು ಮೆರುಗು, ಗಾಂಭೀರ್ಯಗಳ ಸ್ತರವೇ ಬೇರೆ. ಬಹುಶಃ ಬಸವಣ್ಣನವರ ‘ತನ್ನ ಬಣ್ಣಿಸಬೇಡ’ ಎಂಬ ವಚನ ವಾಕ್ಯದ ಒಳಾರ್ಥ ಇದೇ ಆಗಿರಬಹುದಲ್ಲವೇ? ಮೇಲಾಗಿ ‘ಈಛಿಛಿಛಠ ಠಟಛಿಚk ್ಝ್ಠಛ್ಟಿ ಠಿಜಚ್ಞ ಡಿಟ್ಟಛಠ’ ಎಂಬ ಮಾತಿನಂತೆ, ನಮ್ಮ ಸಾಧನೆಗಳು ತಾವೇ ಮಾತನಾಡಬೇಕು. ಆಗ ಅವು ಒಂದಲ್ಲ ಒಂದು ದಿನ ಅನ್ಯರ ಗಮನ ಸೆಳೆಯುತ್ತವೆ, ಮಾನ್ಯವಾಗುತ್ತವೆ. ಆದರೆ ನಾವು ನಮ್ಮ ಸಾಧನೆ- ಸದ್ಗುಣ ಸಮಾಜಕ್ಕೆ ತಿಳಿಯದೆ ಹೋದೀತೋ ಎಂಬ ಆತಂಕದಲ್ಲಿ ಖಿನ್ನರಾಗಿ ಸಿಕ್ಕ ಅವಕಾಶದಲ್ಲಿ ಮನುಷ್ಯ ಸಹಜ ದೌರ್ಬಲ್ಯದಿಂದ ಬಡಬಡಿಸಿಬಿಡುತ್ತೇವೆ. ಇಂಥ ದೌರ್ಬಲ್ಯವೇ ನಮ್ಮ ಶತ್ರುವಾಗುತ್ತದೆ. ಏಕೆಂದರೆ, ಸ್ವಪ್ರಶಂಸೆಯೇ ವ್ಯಕ್ತಿ, ಸಭೆ, ಸಮಾಜಗಳಲ್ಲಿ ನಮ್ಮ ಬಗ್ಗೆಯೇ ಸಂಶಯದ ಬೀಜ ಬಿತ್ತುತ್ತದೆ. ಆದರೆ ವಿಷಾದ ಎಂದರೆ, ಇದನ್ನು ಅರಿತೂ ಹಲವರು ಸ್ವಪ್ರಶಂಸೆಯನ್ನು ಕರಗತ ಮಾಡಿಕೊಂಡಿರುತ್ತಾರೆ.

ಎಲ್ಲೆಂದರಲ್ಲಿ ಸ್ವಗುಣಗಾನಕ್ಕೆ ಜಾಣ ಅವಕಾಶವನ್ನು ಸೃಷ್ಟಿಸಿಕೊಳ್ಳುವುದರಲ್ಲಿ, ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುವುದರಲ್ಲಿ ಹಲವರು ನಿಸ್ಸೀಮರಾಗಿರುತ್ತಾರೆ. ತಮ್ಮ ಜಾಣ್ಮೆ ಇತರರಿಗೆ ತಿಳಿಯದು ಎಂಬ ಭಾವಕ್ಕೆ ಅವರೇ ಸತತವಾಗಿ ಬಲಿಯಾಗಿ ನಗೆಪಾಟಲಿಗೆ ಒಳಗಾಗುತ್ತಿರುತ್ತಾರೆ. ಇಂಥವರ ಬೂಟಾಟಿಕೆ ಎನ್ನಬಹುದಾದ ಜಾಣ್ಮೆಯ ಮಾತುಗಳು ಕೇಳುಗರಿಗೆ ಕ್ರಮೇಣ ಅರ್ಥವಾಗುತ್ತದೆ. ‘ಆ ಮನುಷ್ಯ ಎಲ್ಲಾ ಸರಿ. ಆದರೆ ತನ್ನ ಬಗ್ಗೆ ತಾನೇ ಹೇಳ್ಕೊಳ್ಳೋದು ಸ್ವಲ್ಪ ಜಾಸ್ತೀನೇ…’ ಎಂಬ ಟೀಕೆ ವ್ಯಕ್ತವಾಗುತ್ತದೆ. ವಿಷಾದವೆಂದರೆ, ಸ್ವಪ್ರಶಂಸೆ ಎಂಬುದು ಬದುಕಿನ ಎಲ್ಲ ವಲಯಗಳಲ್ಲೂ ಹಾಸುಹೊಕ್ಕಾಗಿರುವ ಅಂಶ. ಜಾಡ್ಯವೆಂದರೂ ತಪ್ಪಾಗದ ಜೈವಿಕ ಅಂಶ.

ತನ್ನ ಅಡುಗೆಯನ್ನು ತಾನೇ ಸಮರ್ಥನೆಯೊಂದಿಗೆ ಹೊಗಳಿಕೊಳ್ಳುವ ಗೃಹಿಣಿ, ತಮ್ಮ ಮಕ್ಕಳನ್ನೇ ವರ್ಣರಂಜಿತವಾಗಿ ಶ್ಲಾಘಿಸುವ ಹೆತ್ತವರು, ತಮ್ಮ ಸಾಹಿತ್ಯವೇ ಶ್ರೇಷ್ಠವೆಂದು ಬಿಂಬಿಸಿಕೊಳ್ಳುವ ಲೇಖಕರು, ತಮ್ಮನ್ನಷ್ಟೇ ಎತ್ತರದಲ್ಲಿ ಗುರುತಿಸಿಕೊಳ್ಳುವ ಕಲಾಕೋವಿದರು, ತಾವು ಸಲ್ಲಿಸಿದ ಅಲ್ಪ-ಸ್ವಲ್ಪ ಪ್ರಮಾಣ-ಪರಿಮಾಣದ ಸಮಾಜ ಸೇವೆಯನ್ನೇ ವೈಭವೀಕರಿಸುವ ರಾಜಕೀಯ ಧುರೀಣರು… ಇಂಥವರ ಸ್ವಪ್ರಶಂಸೆ ಅಂತರಂಗದ ಹಾದಿ ತಪ್ಪಿಸುವುದಾಗಿದೆ. ‘ಸ್ವಪ್ರಶಂಸೆ’ ಎಂಬ ಮಾದಕ ದ್ರವ್ಯ ಚಟವಾಗಿ ದೈನಿಕ ಚಟುವಟಿಕೆಯಾಗುತ್ತಿರುವುದನ್ನು ನಾವು ಅಲ್ಲಗಳೆಯಲಾಗುವುದೇ?

ಸ್ವಪ್ರಶಂಸೆಯನ್ನು ಒಂದು ಅವಗುಣ ಎಂದು ಹೇಳುವುದಾದರೆ ಪರ ನಿಂದನೆ ಅದನ್ನು ಮೀರಿದ ಆತ್ಮನಾಶಿ ದುರ್ಗಣ. ಇವೆರಡೂ ಒಂದು ನಾಣ್ಯದ ಎರಡು ಮುಖಗಳು. ಹೇಗೆಂದರೆ ಸ್ವಪ್ರಶಂಸೆ ವ್ಯಕ್ತಿ ತನ್ನನ್ನು ತಾನೇ ಮೇಲೆಂದು ಪರಿಗಣಿಸುವುದಷ್ಟೇ ಆಗಿದೆ. ಆದರೆ ಪರನಿಂದನೆ ಎಂಬುದು ತನ್ನನ್ನು ತಾನೇ ಮೇಲೆಂದು ಬಗೆದು ಇನ್ನೊಬ್ಬರನ್ನು ಸಾರ್ವಜನಿಕವಾಗಿಯೇ ಕೀಳೆಂದು ಬಗೆಯುವುದಾಗಿದೆ. ಇದು ಇನ್ನೊಬ್ಬರ ತೇಜೋವಧೆ ಮಾಡುವ ಅತ್ಯಂತ ಅಪಾಯಕಾರಿ ಹಾಗೂ ಹೀನಾಯ ಮನಸ್ಥಿತಿಯಲ್ಲವೇ? ಒಬ್ಬ ಇನ್ನೊಬ್ಬನನ್ನು ಅಳೆಯುವ ಮುನ್ನ ಎಲ್ಲರೂ ಅವರವರ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲೇಬೇಕಾದ ಮೂಲ ಪ್ರಶ್ನೆ ಇದು.

ವ್ಯಕ್ತಿ ವ್ಯಕ್ತಿಗಳನ್ನು ಇಂತಿಷ್ಟೇ ಎಂದು ನಿಂದನಾ ಸ್ವರೂಪದಲ್ಲಿ ಅಳೆಯುವುದು ಸಾಧ್ಯವೇ ? ತಿಳಿದವರ ಪ್ರಕಾರ ಒಬ್ಬರು ಇನ್ನೊಬ್ಬರನ್ನು ಅಳೆಯುವುದು ಅಂದರೆ ಅರ್ಥಮಾಡಿಕೊಳ್ಳುವುದು. ಎಂದರೆ ಅದು ಆಯಾ ಕ್ಷಣಗಳ ಸ್ಮರಣೆ ಮಾತ್ರ.

ಮನುಷ್ಯನ ಬುದ್ಧಿ ಭಾವಗಳ ಲಯ ಅರಿಯದೆ, ವಸುಸ್ಥಿತಿ ತಿಳಿಯುವ ಗೋಜಿಗೂ ಹೋಗದೆ, ಅಹಂ, ದುರುದ್ದೇಶ ಹಾಗೂ ದುರಭಿಮಾನಗಳ ಪ್ರೇರಣೆಗೆ ಮಣೆಹಾಕಿ ಬುದುಕಿನುದ್ದಕ್ಕೂ ‘ಅವರು ಹಾಗೆಯೇ, ಹೀಗೆಯೇ’ ಎಂದು ಜರೆಯುವುದು ಸಭ್ಯವೇ? ಸಭ್ಯರಿಗೆ ಸಲ್ಲುವ ವರ್ತನೆಯೇ? ಉದಾಹರಣೆಗೆ ಹೊಸದಾಗಿ ಕಚೇರಿಯ ಸಾರಥ್ಯ ವಹಿಸಿಕೊಂಡ ವಿದ್ಯಾವಂತರೊಬ್ಬರು, ‘ನೋಡ್ರೀ ಇವತ್ತು ಹೇಗಿದೆ ನಮ್ಮಾಫೀಸು… ಓಹ್ ನಾನು ಚಾರ್ಜ್ ತಗೊಂಡಾಗ ಹೇಗಿತ್ತು ಗೊತ್ತಾ ? ಅದನ್ನ ಈ ಮಟ್ಟಕ್ಕೆ ತರೋಹೊತ್ಗೆ ನನ್ಗೆ ಸಾಕ್ಸಾಕಾಯು’ ಎಂದು ಉದ್ಗರಿಸಿದಾಗ ಅವರ ಮಾತೇ ಅವರ ಮನಸ್ಸಿಗೆ ಹಿಡಿದ ದರ್ಪಣವಾಗುವುದಿಲ್ಲವೇ?

ಬದುಕಿನಲ್ಲಿ ವ್ಯಕ್ತಿಗಳನ್ನು ಹೊಗಳಬೇಕಾದ ಸಂದರ್ಭ ಅನಿವಾರ್ಯವಾಗಬಹುದು. ಆದರೆ ತೆಗಳುವುದು, ನಿಂದಿಸುವುದು ಅನಿವಾರ್ಯವೇ? ಅದರಲ್ಲೂ ಮುಂದೆ ಸ್ತುತಿಸಿ, ಹಿಂದೆ ತೆಗಳುವುದು ಹೀನಾಯವಾದದ್ದು, ಬೆನ್ನಿಗೆ ಚೂರಿ ಹಾಕುವಷ್ಟೇ ಅನಾಗರಿಕವಾದದ್ದಲ್ಲವೇ?

ಒಟ್ಟಿನಲ್ಲಿ ಪ್ರಶಂಸೆಗೆ ಪಾತ್ರರಾಗಬೇಕೆಂಬುದು ಸಹಜ ಸ್ವಾಭಾವಿಕ ಬಯಕೆಯಾದರೂ ಅದು ಪ್ರಶಂಸೆಗೆ ಅರ್ಹವಾಗುವಂಥದ್ದನ್ನು ಸಾಧಿಸುವಲ್ಲಿ ಲೀನವಾಗಿರಬೇಕೇ ಹೊರತು, ಅನ್ಯರನ್ನು ಆಕ್ಷೇಪಿಸುವುದರಲ್ಲಿ, ಸ್ವಪ್ರಶಂಸೆಯಲ್ಲಿ ಸಾರ್ವಜನಿಕವಾಗಿ ವ್ಯಕ್ತವಾಗಬಾರದು. ಇಂಥ ಮನಃಸ್ಥಿತಿಯನ್ನು ಸಾಧಿಸಲು ಜಗತ್ತಿನ ಮಹಾನ್ ಸಾಧಕರ ನಡೆನುಡಿಗಳೇ ಸ್ಪೂರ್ತಿ. ಇದರಿಂದಾಗಿಯೇ ‘ಆಡದೇ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನಧಮ ತಾನಾಡಿ ಮಾಡದವನು ಸರ್ವಜ್ಞ’ ಎಂದು ಸರ್ವಜ್ಞ ಸಾರಿದ್ದಾರೆ. ಈ ಮೊದಲನೆಯ ವರ್ಗಕ್ಕೆ ಸೇರಿದವರು ನಾವಾಗೋಣ.

Leave a Reply

Your email address will not be published. Required fields are marked *