Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸೋಲುಗಳನ್ನೆದುರಿಸುವುದೆಂತು?

Wednesday, 19.09.2018, 3:03 AM       No Comments

ಕಪ್ಪು ಕೂಡ ಒಂದು ಬಣ್ಣ; ಕಹಿ ಕೂಡ ಒಂದು ಸ್ವಾದ. ಅಂತೆಯೇ ಸೋಲು ಕೂಡ ಜೀವನವೆಂಬ ಹೋರಾಟದ ಅಂಗ. ಈ ಸತ್ಯವನ್ನು ಅರಿತುಕೊಂಡಾಗ ಮಾತ್ರ ಗೆಲ್ಲಲು ಸುಲಭ ಸಾಧ್ಯ. ಎಲ್ಲರ ಜೀವನದಲ್ಲೂ ಸೋಲು-ಗೆಲುವು, ಏಳು-ಬೀಳುಗಳು ಸರ್ವೆ ಸಾಮಾನ್ಯ. ಹಾಗೂ ಒಂದರ ಹಿಂದೆ ಒಂದರಂತೆ ಬರುತ್ತಿರುತ್ತವೆ. ಹಾಗೆ ನೋಡಿದರೆ, ಸೋಲು ಅತಿಯಾಗಿ ದುಃಖಿಸುವಂತಹ ವಿಚಾರವೇನೂ ಅಲ್ಲ. ಕಾರಣ ವ್ಯಕ್ತಿಯ ಬೆಳವಣಿಗೆಗೆ ಗೆಲುವಿಗಿಂತ ಸೋಲೇ ಹೆಚ್ಚು ಸಹಕಾರಿ. ಅದು ಹೇಗೆಂದರೆ ಗೆಲುವು ನೆತ್ತಿಗೆ ಏರಿ ಗರ್ವವನ್ನು ತಂದರೆ, ಸೋಲು ಹೃದಯಕ್ಕೆ ಇಳಿದು ವಿನಯವನ್ನು ತರುತ್ತದೆ ಹಾಗೂ ಮುಂದೆ ಜಾಗರೂಕತೆಯಿಂದ ಇರುವುದನ್ನು ತಿಳಿಸುತ್ತದೆ. ಗೆಲುವು, ಗೈದ ತಪ್ಪುಗಳನ್ನು ಮುಚ್ಚಿ ಹಾಕಿದರೆ, ಸೋಲು ಆದ ತಪ್ಪುಗಳನ್ನು ಎತ್ತಿ ತೋರಿಸಿ, ಮುಂದೆ ತಿದ್ದಿಕೊಳ್ಳಲು ಒಂದು ಅವಕಾಶ ಮಾಡಿ ಕೊಡುತ್ತದೆ. ಒಬ್ಬರಿಗೆ ಸೋಲಾಗದೆ, ಇನ್ನೊಬ್ಬರಿಗೆ ಗೆಲುವಾಗದು. ಇದು ಜಗದ ನಿಯಮ. ಸೋಲು ಎಂದರೆ ‘ನಿನ್ನಿಂದ ಈ ಕೆಲಸ ಎಂದೆಂದಿಗೂ ಸಾಧ್ಯವೇ ಇಲ್ಲ’ವೆಂಬ ಅರ್ಥವಲ್ಲ! ಬದಲಾಗಿ, ಅಜಾಗರೂಕತೆಯಿಂದಲೋ ಅಚಾತುರ್ಯದಿಂದಲೋ ನಡೆದು ಹೋದ ತಪ್ಪುಗಳನ್ನು ಸರಿಪಡಿಸಿಕೊಂಡು, ಹೆಚ್ಚಿನ ಪರಿಶ್ರಮದಿಂದ ‘ಮರಳಿ ಪ್ರಯತ್ನಿಸು’-ಎಂದಷ್ಟೇ ಅರ್ಥ. ಯಾವುದೇ ಒಂದು ಬರವಣಿಗೆಯಲ್ಲಿ ಪೂರ್ಣ ವಿರಾಮವೇ ಕೊನೆಯಲ್ಲವಲ್ಲ; ನಂತರವೂ ಹೊಸ ವಾಕ್ಯಗಳನ್ನು ಬರೆಯಬಹುದಲ್ಲ! ಅಂತೆಯೇ ಸೋಲೆಂದರೆ ಬದುಕಿನ ಹೋರಾಟದಲ್ಲಿ ಎಲ್ಲ ದಾರಿಗಳು ಮುಚ್ಚಲ್ಪಟ್ಟವು ಎಂಬರ್ಥವಲ್ಲ. ಹಳೆಯ ದಾರಿಯನ್ನು ತೊರೆದು, ಹೊಸ ದಾರಿಯನ್ನು ಹುಡುಕಿ, ಮಾರ್ಗ ಬದಲಿಸಿಕೋ ಎಂದಷ್ಟೇ ಅರ್ಥ. ಸೋಲುಗಳೆಂದರೆ ಗೆಲುವಿನ ಹಾದಿಯಲ್ಲಿ ಸಾಲು ಮರಗಳಿದ್ದಂತೆ. ಒಂದೊಂದು ಮರದ ಕೆಳಗೂ ಕೊಂಚ ಹೊತ್ತು ವಿಶ್ರಮಿಸಿ, ಮುಂದಕ್ಕೆ ಸಾಗಬೇಕೇ ಹೊರತು, ಅಲ್ಲೇ ಕೂತಿರಬಾರದು. ‘ನಡೆವವರು ಎಡಹುವರಲ್ಲದೆ, ಕುಳಿತವರು ಎಡಹುವರೇ?’ ಎಂಬ ರಾಘವಾಂಕ ಕವಿಯ ಮಾತಿನಂತೆ, ಸಾಧಕರಿಗಷ್ಟೇ ಸೋಲಿನ ಪರಿಚಯವಿರುತ್ತದೆ ಹೊರತು, ಹೇಡಿಗಳಿಗಲ್ಲ, ಸೋಮಾರಿಗಳಿಗಲ್ಲ! ಒಟ್ಟಿನಲ್ಲಿ ಸೋಲನ್ನು ಹೃದಯಕ್ಕೆ ಇಳಿಸಬಾರದು, ಗೆಲುವನ್ನು ತಲೆಗೆ ಏರಿಸಿಕೊಳ್ಳಬಾರದು.

ಗೆಲುವಿಗೆ ಹೆತ್ತವರು ಹತ್ತಾರು. ಆದರೆ ಸೋಲಿಗೆ ಹೆತ್ತವರೇ ಇಲ್ಲ. ಅದು ಅನಾಥ. ಸೋಲನ್ನು ಒಪ್ಪಿಕೊಳ್ಳಲು ಎದೆಗಾರಿಕೆಯೂ ಬೇಕು. ಎದೆ ಆಳವೂ ಬೇಕು. ಈ ಗುಣ ಎಲ್ಲರಲ್ಲೂ ಇರುವುದಿಲ್ಲ. ಆದರೆ, ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಲ್ಲಿತ್ತು. ಅವರು ಡಿಆರ್​ಡಿಒದ ಮುಖ್ಯಸ್ಥರಾಗಿದ್ದಾಗ ಉಡಾಯಿಸಿದ ಕ್ಷಿಪಣಿಯೊಂದು ಪತನ ಹೊಂದಿದಾಗ ಆ ಸೋಲಿನ ಹೊಣೆಗಾರಿಕೆಯನ್ನು ತಾವೇ ಹೊತ್ತರು. ಮುಂದಿನ ಸಲ ಅದು ಯಶಸ್ವಿಯಾದಾಗ ಆ ಯಶಸ್ಸನ್ನು ತನ್ನ ಸಹದ್ಯೋಗಿಗಳಿಗೆ ಸಮರ್ಪಿಸಿದರು. ಆದ್ದರಿಂದ ನಮ್ಮ ಗೆಲುವಿಗೆ, ಹಲವಾರು ಜನರು ಕಾರಣಕರ್ತರೆಂದೂ, ನಮ್ಮ ಸೋಲಿಗೆ ನಾವೇ ಕಾರಣರೆಂದೂ ತಿಳಿದು ಮುಂದುವರಿಯಬೇಕು. ನಮ್ಮ ಸೋಲಿಗೆ ಇತರರನ್ನು ಹೊಣೆಗಾರರನ್ನಾಗಿ ಮಾಡೋದು ತರವಲ್ಲ; ಅದು ಆತ್ಮವಂಚನೆ. ಸೋಲಿಗೆ ಸಾವಿರ ನೆಪಗಳಿರಬಹುದು. ಆದರೆ ಗೆಲುವಿಗೆ ಇರೋದು ಒಂದೇ ಮಾರ್ಗ; ಅದುವೇ ಎದೆಗುಂದದೆ ಮರಳಿ ಮರಳಿ ಮಾಡುವ ಪ್ರಾಮಾಣಿಕ ಪ್ರಯತ್ನ. ಸೋಲನ್ನು ಒಂದು ಸಮಸ್ಯೆಯನ್ನಾಗಿ ಅಲ್ಲ; ಸವಾಲಾಗಿ ಸ್ವೀಕರಿಸಬೇಕು. Convert failure into a challenge, not a defeat.

ಜೀವನದಲ್ಲಿ ಗೆದ್ದರೆ ನಾವು ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು; ಸೋತರೆ ನಾವೇ ಒಂದು ಪಾಠವನ್ನು ಕಲಿತುಕೊಳ್ಳಬಹುದು. ಒಟ್ಟಿನಲ್ಲಿ ಎರಡರಿಂದಲೂ ನಷ್ಟವಿಲ್ಲ. ಸೋಲಾಗದೆ ಗೆಲುವು ಬಾರದು. ಕಷ್ಟಪಡದೆ ಇಷ್ಟ ಸಿಗದು. ಭೂಗರ್ಭದೊಳಗೆ ಸಿಕ್ಕ ಚಿನ್ನವನ್ನು ಕಾಯಿಸಿದರೆ ಮಾತ್ರ ಅದು ಧರಿಸಲು ಯೋಗ್ಯವಾದ ಅಪ್ಪಟ ಬಂಗಾರದ ಒಡವೆಯಾಗುತ್ತದೆ. ಶಿಲ್ಪಿಯ ಕೈಯಿಂದ ಅನೇಕ ಪೆಟ್ಟುಗಳನ್ನು ತಿಂದ ಮೇಲೆ ಮಾತ್ರ ಕಗ್ಗಲ್ಲು ಕೂಡ ಒಂದು ಸುಂದರ ಮೂರ್ತಿಯಾಗುತ್ತದೆ. ಅಂತೆಯೇ ಕಷ್ಟ-ನಷ್ಟ, ಸೋಲು-ಬೀಳುಗಳನ್ನು ಅನುಭವಿಸಿದವರು ಮಾತ್ರ ಬಲಿಷ್ಠ ವ್ಯಕ್ತಿಗಳಾಗುತ್ತಾರೆ. ಆದ್ದರಿಂದ ನೆಲಕ್ಕೆ ಬಿದ್ದೆವು, ಎಲ್ಲ ಮುಗಿಯಿತೆಂದು ಬೇಸರಿಸಬಾರದು. ನೆಲಕ್ಕೆ ಬಿದ್ದ ಎಲೆ, ಮತ್ತೆ ಗಾಳಿಗೆ ಹಾರಿ ಮೇಲಕ್ಕೆ ಏರಿಲ್ಲವೇ? ಸೋತಾಗ ಮರಳಿ ಪ್ರಯತ್ನಿಸದಿರುವುದು, ಸೋಲನ್ನು ಒಪ್ಪಿಕೊಂಡಂತೆ; ಪುನಃ ಪುನಃ ಪ್ರಯತ್ನಿಸೋದು ಸೋಲನ್ನು ಪ್ರಶ್ನಿಸಿದಂತೆ. ಸೋಲನ್ನು ಪ್ರಶ್ನಿಸುವುದೇ ಗೆಲುವಿಗೆ ಮುನ್ನುಡಿ. ಗೆಲ್ಲುವ ತನಕ ಆಟ ಮುಗಿದಿಲ್ಲವೆಂದು ಭಾವಿಸಬೇಕು. ಆಗ ನಾವು ಸೋಲುವುದೆ ಇಲ್ಲ. ಗೆದ್ದವನು ಗೆದ್ದ. ಸೋತರೂ ಮರಳಿ ಪ್ರಯತ್ನಿಸಿದವನು ಒಂದು ದಿನ ಗೆದ್ದೇ ಗೆಲ್ಲುತ್ತಾನೆ.

Success is never final and failure is never total. ಸೋಲಿನಿಂದ ಕಲಿತಷ್ಟೇ, ಗೆಲುವಿನಿಂದಲೂ ಕಲಿಯುವುದಿದೆ. ಸೋಲಿನಿಂದ ಏಕೆ ಸೋಲಾಯಿತು ಎಂಬುದನ್ನು ಕಲಿಯುವಂತಾದರೆ, ಗೆಲುವಿನಿಂದ ಮುಂದೆ ಹೇಗೆ ಸೋಲದಿರಬೇಕೆಂಬುದನ್ನು ಕಲಿತುಕೊಳ್ಳಬೇಕು. ಒಟ್ಟಿನಲ್ಲಿ ಸೋಲುಗಳನ್ನು ಹ್ಯಾಂಡಲ್ ಮಾಡಿದ ಹಾಗೆ, ಗೆಲುವುಗಳನ್ನು ಹ್ಯಾಂಡಲ್ ಮಾಡಲು ಗೊತ್ತಿರಬೇಕು. ಜಯ-ಲಾಭ-ಗೆಲುವು-ಸಂತಸಗಳು ನಮ್ಮದಾದಾಗ ನಾವು ಮೈಮರೆಯುತ್ತೇವೆ. ಅಂತೆಯೇ ನಷ್ಟ-ದುಃಖ-ಸೋಲು-ಅಪಜಯಗಳಾದಾಗ, ಹತಾಶರಾಗುತ್ತೇವೆ; ಖಿನ್ನ ಮನಸ್ಕರಾಗುತ್ತೇವೆ. ಎರಡೂ ತರವಲ್ಲ. ಯಾವುದೂ ಶಾಶ್ವತವಲ್ಲವೆಂಬ ಅರಿವಿನೊಂದಿಗೆ ಬಾಳೋದೇ ಜೀವಿಸುವ ವಿಧಾನ. ಎಲೆಗಳೆಲ್ಲ ಉದುರಿದ ಒಣಗಿಡದಲ್ಲಿ ಹಸಿರೆಲೆಗಳು ಮತ್ತೆ ಚಿಗುರೋದು, ಪ್ರಕೃತಿಯ ನಿಯಮವೇ ಆಗಿದೆ. ನಾವೂ, ನಮ್ಮ ಜೀವನವೂ ಪ್ರಕೃತಿಯ ಅಂಶವೇ ಆಗಿರುವ ಕಾರಣ ಇಂತಹ ಪ್ರಕ್ರಿಯೆಗಳಿಂದ ನಾವೂ ಹೊರತಾಗಿಲ್ಲ. ಎಲ್ಲ ಗ್ರಹಣಗಳಿಗೂ ಮೋಕ್ಷಕಾಲವೆಂಬುದಿದೆ; ಮುಂದೆ ಮೋಕ್ಷದ ನಂತರ ಇನ್ನೊಂದು ಗ್ರಹಣ ಬರಲಿದೆ. ಅಂತೆಯೇ ಇಷ್ಟದ ಕ್ಷಣಗಳ ಹಿಂದೆ ಕಷ್ಟದ ಕ್ಷಣಗಳು ಕಾಯುತ್ತಿರುತ್ತವೆ. ಆದರೆ ಕಷ್ಟದ ಕ್ಷಣಗಳಿಗೂ ಒಂದು ಕೊನೆ ಇದೆ. ಒಟ್ಟಿನಲ್ಲಿ ಒಂದರ ಹಿಂದೆ ಇನ್ನೊಂದು ಹೊಂಚು ಹಾಕುತ್ತಲೇ ಇರುತ್ತದೆ. ಆದರೆ ಕೊನೆಯಾದುದಕ್ಕೆ ಆರಂಭವೂ ಇದೆ ಎಂಬ ಅರಿವಿನೊಂದಿಗೆ ಬಾಳುವುದೇ ಜೀವಿಸುವ ವಿಧಾನ.

ಗೆಲ್ಲಬೇಕಾದುದು ಸಹಜ ಸ್ವಾಭಾವಿಕವಾದ ಬಯಕೆ ಹಾಗೂ ಮುಖ್ಯ. ಆದರೆ, ಗೆಲುವಿಗಾಗಿ ಕ್ರಮಿಸುವ ಮಾರ್ಗ ಕೂಡ ಅಷ್ಟೇ ಮುಖ್ಯ. ಅದು ಸನ್ಮಾರ್ಗವಾಗಿರಬೇಕು. ಅನೈತಿಕ ರೀತಿಯಲ್ಲಿ ಗಳಿಸಿದ ಗೆಲುವಿಗಿಂತ, ನೈತಿಕ ಮಾರ್ಗದಲ್ಲಿದ್ದು ಸೋಲುವುದೇ ಹೆಚ್ಚು ಗೌರವಯುತವಾದುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳು ಕಡಿಮೆ, ಆಕಾಂಕ್ಷಿಗಳು ಅಧಿಕ. ಅಂದಮೇಲೆ ಸ್ಪರ್ಧೆ, ಸ್ಪರ್ಧೆಯಲ್ಲಿ ಸೋಲು-ಗೆಲುವು ಅನಿವಾರ್ಯ. ಸ್ಪರ್ಧೆಯಲ್ಲಿ ಗೆಲ್ಲಲೇಬೇಕೆಂಬ ಛಲದಿಂದ ಸ್ಪರ್ಧಿಸಬೇಕು ನಿಜ. ಆದರೆ ಒಂದು ವೇಳೆ ಸೋತರೆ ಕಂಗೆಡಬಾರದು. ‘ಸೋಲೇ ಗೆಲುವಿನ ಸೋಪಾನ’ವೆಂದು ತಿಳಿಯಬೇಕು. ಸೋತ ಮೇಲೆ ನಾವು ನಮ್ಮ ಪ್ರಯತ್ನವನ್ನು ನಿಲ್ಲಿಸಿದರೆ, ನಾವು ಶಾಶ್ವತವಾಗಿ ಸೋತಂತೆ. An attempt may be a failure; but we should not fail to make an attempt ಎಂಬ ಮಾತಿನಂತೆ ನಾವು ಮಾಡಿದ ಯತ್ನದಲ್ಲಿ ನಮಗೆ ಸೋಲಾಗಬಹುದು. ಆದರೆ ಮರಳಿ ಪ್ರಯತ್ನಿಸುವುದರಲ್ಲಿ ಮಾತ್ರ ನಾವು ಸೋಲಬಾರದು. ‘‘ಗೆದ್ದವರೆಲ್ಲಾ ಗೆಲ್ಲುತ್ತಲೇ ಬಂದವರಲ್ಲ. ಸೋತು ಗೆದ್ದವರು’’ ಎಂಬ ಮಾತು ನೆನಪಿರಲಿ. ಒಂದು ದೃಷ್ಟಿಯಲ್ಲಿ ನೋಡಿದರೆ ಸೋಲು ಗೆಲುವುಗಳೆರಡೂ ಒಂದೇ. ಕಾರಣ ಸೋತವ ಗೆಲ್ಲನೇ? ಗೆದ್ದವ ಸೋಲನೇ? ಬಿದ್ದವರು ಎದ್ದಿಲ್ಲವೇ? ಎದ್ದವರು ಬಿದ್ದಿಲ್ಲವೇ? ಒಟ್ಟಿನಲ್ಲಿ ಗೆಲುವು ಬಂದಾಗ ಗರ್ವ ಪಡದೆ, ಸೋಲು ಬಂದಾಗ ಕಂಗೆಡದೆ, ಮುಂದುವರಿಯುವುದೇ ಬದುಕುವ ಕಲೆ!

Leave a Reply

Your email address will not be published. Required fields are marked *

Back To Top