Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ನಮ್ಮ ವ್ಯಕ್ತಿತ್ವದ ವಿಕಸನ ನಮ್ಮಿಂದಲೇ ಸಾಧ್ಯ

Wednesday, 11.07.2018, 3:00 AM       No Comments

ಆಂಗ್ಲ ಭಾಷೆಯಲ್ಲಿ ಒಂದು ಒಳ್ಳೆಯ ಮಾತಿದೆ. There is a difference between a House and a Home. House is built by bricks and Home is built by hearts. Similarly there is a difference between wife and a life partner as well as a person and personality. ಇದರ ತಾತ್ಪರ್ಯ ಇಷ್ಟೆ: ಮನೆಗಳ ಕಟ್ಟಲು ಇಡಬೇಕು ಇಟ್ಟಿಗೆಗಳ ಒಟ್ಟಿಗೆ, ಆದರೆ ಮನೆಗಳ ನಡೆಸಲು ಇರಬೇಕು ಮನಗಳು ಒಟ್ಟಿಗೆ. ವಿವಾಹದ ವೇಳೆ ಕೈ ಹಿಡಿದವಳು ಹೆಂಡತಿ. ಆದರೆ ಜೀವನ ಪರ್ಯಂತ ಕೈ ಬಿಡದವಳು, ಕೈ ಕೊಡದವಳು ಬಾಳ ಸಂಗಾತಿ. ಅಂತೆಯೇ ಓರ್ವ ಸಾಮಾನ್ಯ ವ್ಯಕ್ತಿಗೂ, ಧೀಮಂತ ವ್ಯಕ್ತಿತ್ವಕ್ಕೂ ವ್ಯತ್ಯಾಸವಿದೆ. ವಿಕಸನ ಅಂದರೆ ವಿಕಸಿತಗೊಳ್ಳುವಿಕೆ ಅಥವಾ ತೆರೆದುಕೊಳ್ಳುವಿಕೆ ಎಂದರ್ಥ. ಒಂದರ್ಥದಲ್ಲಿ ನೋಡಿದರೆ, ಸ್ವಾಮಿ ವಿವೇಕಾನಂದರ ವಾಣಿಯಂತೆ, It is the manifestation of perfection already in man ಎನ್ನಬಹುದು. ಆದ್ದರಿಂದಲೇ ‘ಜಗವ ತಿದ್ದುವುದಿರಲಿ, ನಿನ್ನ ನೀ ತಿದ್ದಿಕೋ ಮಂಕುತಿಮ್ಮ’ ಎನ್ನುತ್ತಾರೆ ಡಿವಿಜಿ.

ಒಟ್ಟಿನಲ್ಲಿ ನಮ್ಮ ಸುಧಾರಣೆ ನಮ್ಮಿಂದಲೇ ಆರಂಭವಾಗಬೇಕು. ಇದು ವ್ಯಕ್ತಿತ್ವ ವಿಕಸನದಿಂದ ಮಾತ್ರ ಸಾಧ್ಯ. ಜಗತ್ತಿನ ಮಹಾನ್ ಸಾಧಕರೆಲ್ಲ, ಮೊದಲು ತಮ್ಮ ಸುಧಾರಣೆ ಮಾಡಿಕೊಂಡವರೇ. ಪ್ರತಿಯೊಬ್ಬ ವ್ಯಕ್ತಿಗೂ ಆತ ಏನೇ ಆಗಿರಲಿ, ತನ್ನಲ್ಲೇ ಅನೇಕ ಸುಧಾರಣೆಗಳನ್ನು ತಂದುಕೊಳ್ಳುವ ಅವಶ್ಯಕತೆ, ಅವಕಾಶ ಇದ್ದೇ ಇರುತ್ತದೆ. ಇದು ವ್ಯಕ್ತಿತ್ವ ವಿಕಸನದಿಂದ ಮಾತ್ರ ಸಾಧ್ಯ. ‘ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ’ ಎಂಬ ದಾಸರವಾಣಿಯಲ್ಲೂ ಇದೇ ಸಂದೇಶವಿದೆ.

ನಮಗೆ ಗೊತ್ತಿಲ್ಲದ ವಿಷಯಗಳನ್ನು ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದನ್ನು ಹಾಗೂ ನಮ್ಮಲ್ಲಿರುವ ದೌರ್ಬಲ್ಯಗಳನ್ನು ಅರಿತುಕೊಳ್ಳುವುದನ್ನು ಅವಮಾನವೆಂದು ಭಾವಿಸಬಾರದು. ಹಾಗೆ ಮಾಡಿದರೆ, ನಮಗೆ ನಾವೇ ಕೇಡು ಬಯಸಿದಂತೆ. ಇದೇ ಸತ್ಯವನ್ನು ‘ಇತರರನ್ನು ಅರಿತವನು ಜಾಣ, ತನ್ನನ್ನು ತಾನೇ ಅರಿತವನು ಜ್ಞಾನಿ.’ ಎಂಬುದಾಗಿ ಬಲ್ಲವರು ಹೇಳಿದರು.

ಶಿಲ್ಪಿಯೊಬ್ಬನನ್ನು ‘ನೀನು ಈ ಕಲ್ಲಿನಿಂದ ಇಷ್ಟೊಂದು ಸುಂದರವಾದ ಮೂರ್ತಿಯನ್ನು ಹೇಗೆ ಕೆತ್ತಿದೆ?’ ಎಂದು ಕೇಳಿದಾಗ, ಅವನ ಮಾರ್ವಿುಕವಾದ ಉತ್ತರ ಹೀಗಿತ್ತು. ‘ನಾನೇನೂ, ಮೂರ್ತಿಯನ್ನು ಕೆತ್ತಲಿಲ್ಲ. ಅದು ಮೊದಲೇ ಈ ಕಲ್ಲಿನೊಳಗಿತ್ತು. ನಾನು ಆ ಮೂರ್ತಿಯನ್ನು ಆವರಿಸಿಕೊಂಡಿದ್ದ ಬೇಡವಾದ ಅಂಶಗಳನ್ನು ಆಚೆಗೆ ತೆಗೆದು ಹಾಕಿ, ಮೂರ್ತಿಯನ್ನು ಈಚೆಗೆ ತಂದೆ, ಅಷ್ಟೆ.’ ಇದುವೇ ವ್ಯಕ್ತಿತ್ವ ವಿಕಸನ. ನಮ್ಮ ವ್ಯಕ್ತಿತ್ವದ ಶಿಲ್ಪಿಗಳು ನಾವೇ ಆಗಬೇಕು. ವ್ಯಕ್ತಿಯ ನಿಜವಾದ ಗೆಲುವು ಎಂದರೆ, ಇತರರ ವಿರುದ್ಧ ಸಾಧಿಸಿದ ಗೆಲುವಿಗಿಂತಲೂ, ತನ್ನನ್ನು ತಾನೇ ಗೆದ್ದುಕೊಂಡ ಗೆಲುವು! ತನ್ನನ್ನು ತಾನೇ ಗೆಲ್ಲುವುದೆಂದರೆ, ಬೇರೇನೂ ಅಲ್ಲ; ಹಿಂದಿಗಿಂತ ನಾವು ಇನ್ನೂ ಉತ್ತಮರಾಗೋದು ಎಂದರ್ಥ. ನಾವು ಇತರರಲ್ಲಿ ಬಯಸುವ ಬದಲಾವಣೆ ನಮ್ಮಿಂದಲೇ ಆರಂಭಗೊಂಡರೆ, ನಮ್ಮ ವ್ಯಕ್ತಿತ್ವದ ವಿಕಸನ ಶುರುವಾದಂತೆ. ನಮಗಾಗುವ ವಯಸ್ಸಿನೊಂದಿಗೆ ನಮ್ಮ ವ್ಯಕ್ತಿತ್ವವೂ ಮಾಗಬೇಕು. ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಇದ್ದುದಕ್ಕಿಂತ ಯೌವ್ವನದಲ್ಲಿ ಭಿನ್ನವಾಗಿರುತ್ತಾನೆ; ತನ್ನ ಮಧ್ಯ ವಯಸ್ಸಿನಲ್ಲಿ ಇನ್ನಷ್ಟು ಬದಲಾಗುತ್ತಾನೆ; ಅಂತೆಯೇ ವೃದ್ಧಾಪ್ಯದಲ್ಲಿ ಬಹಳಷ್ಟು ಬದಲಾಗುತ್ತಾನೆ. ಇದು ಆತನ ವ್ಯಕ್ತಿತ್ವದ ವಿಕಸನದ ಸಂಕೇತ. ಈ ಎಲ್ಲ ಬದಲಾವಣೆಗಳು ಅಗತ್ಯವೂ ಹೌದು; ಅನಿವಾರ್ಯವೂ ಹೌದು. ಇವೆಲ್ಲ ವ್ಯಕ್ತಿತ್ವ ವಿಕಸನದ ಫಲಗಳು. ಬದಲಾವಣೆ ಇಲ್ಲದೆ ಬೆಳವಣಿಗೆ ಅಸಾಧ್ಯ. ಹಿಂದಿನ ದಿನಗಳಲ್ಲಿನ ನಮ್ಮ ನಡವಳಿಕೆ, ವಿಚಾರಧಾರೆಗಳನ್ನು ನೆನಪಿಸಿಕೊಂಡರೆ, ಕೆಲವೊಮ್ಮೆ ನಮಗೇ ಆಶ್ಚರ್ಯ ಹಾಗೂ ನಾಚಿಕೆಯಾಗುತ್ತದೆ.

ನಮ್ಮ ವ್ಯಕ್ತಿತ್ವದ ವಿಕಸನ ಮಾಡಿಕೊಳ್ಳಲು ನಾವು ಯಾವುದೇ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳಿಗೆ ಹೋಗಬೇಕಿಲ್ಲ. ನಮ್ಮ ವ್ಯಕ್ತಿತ್ವ ವಿಕಸನವನ್ನು ನಾವು ನಾವೇ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾದುದು ಮುಕ್ತ ಮನಸ್ಸು. ಸಂಕುಚಿತ ಮನಸ್ಸಿನಿಂದ, ನಮ್ಮ ವ್ಯಕ್ತಿತ್ವ ವಿಕಸನಗೊಳ್ಳದು. ‘ಆನೋ ಭಧ್ರಾಹ ಕೃತವೋ ಯಂತು ವಿಶ್ವತಃ’ ಎಂಬ ಋಗ್ವೇದದ ವಾಕ್ಯ ಇದೇ ಅಗತ್ಯವನ್ನು ತಿಳಿಸುತ್ತದೆ. ಅಂದರೆ ‘ಸದ್ವಿಚಾರಗಳು ಎಲ್ಲಿಂದಲೇ ಬರಲಿ, ನಾನದನ್ನು ಸ್ವಾಗತಿಸುತ್ತೇನೆ-ಸ್ವೀಕರಿಸುತ್ತೇನೆ ಎಂಬ ಅರ್ಥ’. ಎಲ್ಲರಿಂದಲೂ ನಾವು ಏನಾದರೊಂದು ಪಾಠ ಕಲಿಯುವುದಿದೆ. ಕೆಟ್ಟವರಿಂದ ಏನನ್ನು ಮಾಡಬಾರದು ಎಂಬುದನ್ನು ಕಲಿತರೆ, ಒಳ್ಳೆಯವರಿಂದ ಏನನ್ನು ಮಾಡಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಪ್ರಮಾಣಗಳು ಬೇರೆ ಬೇರೆಯಾಗಿರಬಹುದು, ಆದರೆ ಪ್ರತಿಯೊಬ್ಬರಲ್ಲೂ, ಗುಣ-ದೋಷ, ದೌರ್ಬಲ್ಯ-ಸಾಮರ್ಥ್ಯಗಳು ಇದ್ದೇ ಇರುತ್ತವೆೆ. ಬಹಳ ಸಲ ಇವೆರಡರ ಅರಿವು ವ್ಯಕ್ತಿಗೇ ಇರುವುದಿಲ್ಲ. ಈ ಜಗತ್ತಿನಲ್ಲಿ ಯಾರೂ ಪರಿಶುದ್ಧರಲ್ಲ; ಯಾರೂ ಪರಿಪೂರ್ಣರಲ್ಲ. ಎಲ್ಲರಲ್ಲೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಆದರೆ ಇದರ ಅರಿವು ಅವರಿಗೆ ಇರುವುದಿಲ್ಲ- ನಮ್ಮ ಬೆನ್ನು ನಮಗೆ ಕಾಣದಂತೆ! ಆದರೆ ಇತರರಿಗೆ ಇವೆಲ್ಲ ಬೇಗನೆ ಗೋಚರಿಸುತ್ತವೆ. ಅವರ ದುರ್ಗಣ-ದೌರ್ಬಲ್ಯಗಳು ನಮಗೆ ತಕ್ಷಣ ಗೋಚರಿಸಿದಂತೆ! ಇದು ಮನುಷ್ಯನ ಸಹಜ ಸ್ವಭಾವ.

ಅಂತೆಯೇ ಈ ಜಗತ್ತಿನಲ್ಲಿ ಯಾರೂ ನಿಷ್ಪ್ರಯೋಜಕರಲ್ಲ; ಯಾವುದೂ ನಿಷ್ಪ್ರಯೋಜಕವಲ್ಲ. ಯಾವ ವ್ಯಕ್ತಿಯೂ ಓರ್ವ ಸಂಪೂರ್ಣ ವ್ಯರ್ಥ ವ್ಯಕ್ತಿಯಲ್ಲ. ಎಲ್ಲರಲ್ಲೂ ಏನಾದರೊಂದು ಶಕ್ತಿ ಸಾಮರ್ಥ್ಯ, ಪ್ರತಿಭೆ ಪಾಂಡಿತ್ಯ ಇದ್ದೇ ಇರುತ್ತದೆ. ಆದರೆ ಹೆಚ್ಚಿನವರಿಗೆ, ಅವರೊಳಗೆ ಅಂತರ್ಗತವಾಗಿರುವ, ಸುಪ್ತ ಶಕ್ತಿ ಸಾಮರ್ಥ್ಯಗಳ ಪರಿಚಯವೇ ಇರುವುದಿಲ್ಲ. ಈ ಸತ್ಯದಡಿ, ನಮ್ಮ ವ್ಯಕ್ತಿತ್ವದ ವಿಕಸನಕ್ಕೆ ನೆರವಾಗಬಲ್ಲ ಎರಡೇ ಎರಡು ಸೂತ್ರಗಳೆಂದರೆ ನಮ್ಮಲ್ಲಿರುವ ದುರ್ಗಣ-ದೌರ್ಬಲ್ಯ, ಕೊರತೆ-ನ್ಯೂನತೆಗಳನ್ನು ನಾವು ನಾವೇ ಪತ್ತೆ ಹಚ್ಚಿ ಗುರುತಿಸಿಕೊಳ್ಳಬೇಕು. ಆದರೆ ಇದು ಎಲ್ಲರಿಗೂ ಸುಲಭ ಸಾಧ್ಯವಾಗುವ ಕೆಲಸವಲ್ಲ. ಕಾರಣ ‘ನಾನೂ ತಪ್ಪು ಮಾಡುವುದುಂಟೇ? ನನ್ನಲ್ಲೂ ದುರ್ಗಣಗಳಿರಲು ಸಾಧ್ಯವೇ?’ ಎಂಬ ಅಹಂನಿಂದ, ಅಷ್ಟು ಬೇಗ ಎಲ್ಲರೂ ಹೊರಬರಲಾರರು. ಇಂತಹ ಸಂದರ್ಭದಲ್ಲಿ, ನಮ್ಮ ಆತ್ಮೀಯರ, ಹಿತೈಷಿಗಳ ನೆರವು ಪಡೆದುಕೊಳ್ಳೋದು ಜಾಣತನವಾದೀತು. ಸಾಮಾನ್ಯರಲ್ಲಿರುವಂತೆ ನಮ್ಮಲ್ಲೂ ಇರಬಹುದಾದ ಕೊರತೆಗಳ ಬಗ್ಗೆ ಆತ್ಮಾವಲೋಕನವಿರಲಿ.

ಉದಾಹರಣೆಗೆ ನಮ್ಮದು ಶಿಸ್ತಿನ ಜೀವನವೇ? ನಾವು ಶಿಸ್ತಿಗೆ ಎಷ್ಟು ಮಹತ್ವ ನೀಡುತ್ತಿದ್ದೇವೆ; ಶಿಸ್ತು ಇಲ್ಲದ ಜೀವನ ಕಡಿವಾಣ ಇಲ್ಲದ ಕುದುರೆಯಂತೆ. ನಮ್ಮ ದೈನಂದಿನ ಎಲ್ಲ ಕೆಲಸ ಕಾರ್ಯಗಳಲ್ಲಿ ಶಿಸ್ತು ಅತಿ ಮುಖ್ಯವಾದುದಲ್ಲವೇ!

  • ಸಮಯಪ್ರಜ್ಞೆ ಉತ್ತಮ ವ್ಯಕ್ತಿತ್ವದ ಒಂದು ಗುಣಲಕ್ಷಣ. ಹಾಗೂ ಯಶಸ್ವೀ ವ್ಯಕ್ತಿಗಳ ಮೂಲ ಮಂತ್ರ. ಬೆಳಗ್ಗೆ 12 ಗಂಟೆಗೆ ಏಳುವವರು, ಯಾವತ್ತೂ ತಡವಾಗಿ ಬರುವವರು ಏನು ತಾನೆ ಸಾಧಿಸಲು ಸಾಧ್ಯ? ಸಮಯಪ್ರಜ್ಞೆ ಇಲ್ಲದವರು ಇತರರ ಸಮಯವನ್ನು ಹಾಳು ಮಾಡುತ್ತಾರಲ್ಲವೇ? ಆ ಹಕ್ಕು ನಮಗಿಲ್ಲವಲ್ಲ!
  • ನಮ್ಮ ಸಂವಹನ ಸಾಮರ್ಥ್ಯವನ್ನು ಪರಿಶೀಲಿಸಿಕೊಳ್ಳೋದು ವ್ಯಕ್ತಿತ್ವ ವಿಕಸನಕ್ಕೆ ಅವಶ್ಯ. ಸಂವಹನದ ಕೊರತೆ, ನಮ್ಮನ್ನು ಯಶಸ್ವೀ ವ್ಯಕ್ತಿಗಳನ್ನಾಗಿ ಮಾಡದು.
  • ಅಂತೆಯೇ ನಮ್ಮಿಂದ ತಪ್ಪುಗಳಾದಾಗ ಅದನ್ನ ಒಪ್ಪಿಕೊಳ್ಳೋದು, ತಪ್ಪುಗಳಿಂದ ಪಾಠ ಕಲಿಯೋದು ಹಾಗೂ ಮತ್ತೆ ಅದೇ ತಪ್ಪುಗಳಾಗದಂತೆ ನೋಡಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವ ಬಲಗೊಳ್ಳುತ್ತದೆ.
  • ವಿಕಸಿತಗೊಂಡ ವ್ಯಕ್ತಿತ್ವದ ಇನ್ನೊಂದು ಗುಣಲಕ್ಷಣವೆಂದರೆ, ‘ಸಿಟ್ಟಿಗೆದ್ದವರಲ್ಲ; ಸಿಟ್ಟನ್ನು ಗೆದ್ದವರು’ ನಾವಾಗಬೇಕು.
  • “There is a difference between a boss and a leader. Boss orders. He says ‘do it’. But a leader says ‘Let us do it’ ಈ ದೃಷ್ಟಿಯಿಂದ, ಎಲ್ಲರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಲೆಯನ್ನು ಕರಗತ ಮಾಡಿಕೊಳ್ಳುವುದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶ. ಕಾರಣ, ನಮ್ಮ ಸಾಮಾಜಿಕ ಮತ್ತು ವೃತ್ತಿ ಜೀವನದಲ್ಲಿ ನಮ್ಮ ವ್ಯಕ್ತಿತ್ವದ ಪರಿಚಯ ಜನರಿಗೆ ಆಗುತ್ತಿರುತ್ತದೆ.

ವ್ಯಕ್ತಿತ್ವ ವಿಕಸನದ ಎರಡನೆಯ ಸೂತ್ರವೆಂದರೆ, ನಮ್ಮೊಳಗಿರುವ ಶಕ್ತಿ ಸಾಮರ್ಥ್ಯಗಳ ಪರಿಚಯವನ್ನು ನಾವೇ ಮಾಡಿಕೊಂಡು, ಅದನ್ನು ಬೆಳೆಸುವುದು. ಇದನ್ನು ಕಂಡುಕೊಳ್ಳಲು ನಮ್ಮಿಂದ ಸಾಧ್ಯವಾಗದಿದ್ದರೆ, ನಮ್ಮ ಹಿತಚಿಂತಕರ ಸಹಾಯ ಪಡೆದುಕೊಳ್ಳಬೇಕು. ನಮ್ಮೊಳಗೆ ಓರ್ವ ಸಾಹಿತಿ ಇರಬಹುದು; ಕಲಾಕಾರನಿರಬಹುದು, ನಾಯಕನಿರಬಹುದು; ನಟನಿರಬಹುದು- ಇವೆಲ್ಲದರ ಅರಿವು ಕೆಲವೊಮ್ಮೆ ನಮಗೇ ಇರೋದಿಲ್ಲ. ಅವನ್ನು ಆಚೆಗೆ ತಂದು ಬೆಳೆಸಿಕೊಳ್ಳುವುದೇ ವ್ಯಕ್ತಿತ್ವ ವಿಕಸನದ ಸೂತ್ರ. ವ್ಯಕ್ತಿತ್ವ ವಿಕಸನವನ್ನು ಆಂಗ್ಲಭಾಷೆಯಲ್ಲಿ ವಿವರಿಸುವುದಿದ್ದರೆ”First know your weaker areas and stronger areas. Next weaken its weaker areas and strengthen its stronger areas. This is personality development.’ ’ ಅರ್ಥಾತ್, ನಮ್ಮಲ್ಲಿರುವ ದುರ್ಗಣ ಹಾಗೂ ಶಕ್ತಿ ಸಾಮರ್ಥ್ಯಗಳನ್ನು ಅರಿತು ಶಕ್ತಿ ಸಾಮರ್ಥ್ಯಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳೋಣ. ಇದುವೇ ವ್ಯಕ್ತಿತ್ವ ವಿಕಸನ.

Leave a Reply

Your email address will not be published. Required fields are marked *

Back To Top