ಭಾರತ ಭವಿಷ್ಯ ಉಜ್ವಲ

ಮಂಗಳೂರು: ವಿಶ್ವದಲ್ಲೇ ಭಾರತ, ಚೀನಾ ಸೇರಿದಂತೆ ಏಷ್ಯಾ ಬಲಿಷ್ಠ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮಲಿದ್ದು, ಇದಕ್ಕೆ ನಮ್ಮ ಯುವಜನರು ಸಿದ್ಧರಾಗಬೇಕು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಣಕಾಸು ತಜ್ಞ, ಆರಿನ್ ಕ್ಯಾಪಿಟಲ್ ಮುಖ್ಯಸ್ಥ ಟಿ.ವಿ.ಮೋಹನದಾಸ್ ಪೈ ಹೇಳಿದರು.
ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಶನಿವಾರ ವಿಶ್ವ ಕೊಂಕಣಿ ಕೇಂದ್ರ ಆಶ್ರಯದಲ್ಲಿ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ಹಳೇ ವಿದ್ಯಾರ್ಥಿ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪ್ರೇರಣಾ’ ಸಮಾವೇಶದಲ್ಲಿ ಸಮಾರೋಪದ ಮಾತುಗಳನ್ನಾಡಿದರು.

ಭಾರತದ ಭವಿಷ್ಯ ಉಜ್ವಲವಾಗಿದೆ, ಏಷ್ಯಾದ ಸೂಪರ್ ಪವರ್ ಆಗಿ ಭಾರತ, ಚೀನಾ ಹೊರಹೊಮ್ಮುತ್ತಿದ್ದರೆ ಯುರೋಪ್, ಅಮೆರಿಕಾ ರಾಷ್ಟ್ರಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಹಿಂದಿನ ‘ಗೋ ವೆಸ್ಟ್’ ನೀತಿಗೆ ಬದಲು ‘ಗೋ ಈಸ್ಟ್’ ಎನ್ನುವ ಕಾಲ ಬಂದಿದೆ ಎಂದರು.

ಕಳೆದ ಹಲವು ವರ್ಷಗಳಿಂದ ಸತತವಾಗಿ ಶೇ.8ರ ಸರಾಸರಿಯಲ್ಲಿ ಪ್ರಗತಿ ದಾಖಲಿಸುತ್ತಾ ಬಂದಿರುವ ಕಾರಣ ಭಾರತ ಸಾಕಷ್ಟು ಮುಂದುವರಿದಿದೆ. ಕೈಗಾರಿಕೆ, ಕೃಷಿ, ಸೇವಾ ವಲಯಗಳಲ್ಲಿನ ನೆಲೆ ಗಟ್ಟಿಯಾಗಿದೆ, ಹಣಕಾಸು ವಲಯದಲ್ಲೂ ನೆಲೆ ದೃಢವಾಗಿರುವುದು ಉತ್ತಮ ಸಂಗತಿ ಎಂದರು.

ಮ್ಯಾರಥಾನ್ ನಿದರ್ಶನ: ಮ್ಯಾರಥಾನ್ ಓಡುವ ಓಟಗಾರನಿಗೆ ಮೊದಲ ಕೆಲವು ಕಿ.ಮೀ ಓಡುವಾಗ ಬೆವರು ಬರುತ್ತದೆ, ಓಟ ಪೂರ್ಣಗೊಳಿಸುವುದೇ ಬೇಡವೇ ಎಂಬ ಸಂದಿಗ್ಧತೆ ಎದುರಾಗುತ್ತದೆ, ಓಡುತ್ತಲೇ ವಿವಿಧ ಅಂಗಾಂಗಗಳಲ್ಲಿ ನೋವು ಕಾಣಿಸುತ್ತದೆ, ಅದರ ಹೊರತಾಗಿಯೂ ಓಟ ಮುಂದುವರಿಸಿ, ಕೊನೆಯ ಕೆಲವು ಮೀಟರ್‌ಗಳನ್ನು ಆತ ಶಕ್ತಿ ಇಲ್ಲದಿದ್ದರೂ ವೇಗವಾಗಿ ಓಡಿ ಪೂರ್ಣಗೊಳಿಸುತ್ತಾನೆ, ಜೀವನವೂ ಇದೇ ರೀತಿ, ಎಲ್ಲ ಅಡೆತಡೆಗಳನ್ನು ನಿವಾರಿಸಿ ಮುಂದುವರಿಯಬೇಕು ಎಂದು ಸಲಹೆ ಮಾಡಿದರು.

ಮುಂಬೈಯ ಜ್ಯೋತಿ ಲ್ಯಾಬೊರೇಟರೀಸ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಥಿಕ ಅಡಚಣೆಯಿಂದಾಗಿ ಯಾವೊಬ್ಬ ಕೊಂಕಣಿ ಮಕ್ಕಳೂ ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ಉದ್ದೇಶವನ್ನಿಟ್ಟುಕೊಂಡು ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ಸ್ಥಾಪಿಸಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.

ಗ್ರಾಮಾಂತರ ಪ್ರದೇಶದ ಕೊಂಕಣಿ ಮಕ್ಕಳನ್ನು ಆಯ್ದು ಅವರಿಗೆ ವಿವಿಧ ತರಬೇತಿ ಕೊಡಲಾಗುತ್ತಿದೆ. ಈ ವರ್ಷ 346 ಮಂದಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಮೋಹನ್‌ದಾಸ್ ಪೈ ಕಾರ್ಯಕ್ರಮ ಉದ್ಘಾಟಿಸಿದರು. ಜ್ಯೋತಿ ಲ್ಯಾಬೊರೇಟರಿಸ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್ ಕಾಮತ್, ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ್ ಶೆಣೈ, ಸ್ಕಾಲರ್‌ಶಿಪ್ ಫಂಡ್ ಅಧ್ಯಕ್ಷ ರಾಮದಾಸ್ ಕಾಮತ್ ಯು, ಕಾರ್ಯದರ್ಶಿ ಪ್ರದೀಪ್ ಜಿ.ಪೈ, ಪ್ರೇರಣಾ ಕಾರ್ಯಕ್ರಮದ ಮಾರ್ಗದರ್ಶಕ ಸಂದೀಪ್ ಶೆಣೈ ಹಾಜರಿದ್ದರು.

ಮೋದಿಗೆ ಶ್ಲಾಘನೆ: ಕಳೆದ ಐದು ವರ್ಷಗಳಲ್ಲಿ ದೇಶದ ಬೆಳವಣಿಗೆ ಕುರಿತು ಉತ್ತಮ ಕಾರ್ಯಗಳನ್ನು ಪ್ರಧಾನಿ ಮೋದಿ ಮಾಡಿದ್ದಾರೆ, ಹಣದುಬ್ಬರ ಕಡಿಮೆಯಾಗುತ್ತಿದೆ ಈ ಬಗ್ಗೆ ಸಂದೇಹವಿಲ್ಲ ಎಂದು ಮೋಹನ್‌ದಾಸ್ ಪೈ ಹೇಳಿದರು. ಭಾರತ ದೊಡ್ಡ ದೇಶ, ಇಲ್ಲಿ ಸವಾಲುಗಳು, ಸಮಸ್ಯೆಗಳಿರುವುದು ನಿಜ, ಆದರೆ ವಿಶ್ವದಲ್ಲೆ ಪ್ರಬಲ ಶಕ್ತಿಯಾಗುವತ್ತ ದೇಶ ಹೆಜ್ಜೆ ಇರಿಸಿದೆ, ನಮ್ಮ ಯುವಜನರು ಪಾಶ್ಚಿಮಾತ್ಯ ದೇಶಗಳತ್ತ ಉದ್ಯೋಗಕ್ಕೆ ಹೋಗುವ ಬದಲು ದೇಶದಲ್ಲೇ ಇದ್ದು ಪ್ರಗತಿಯ ಭಾಗಿದಾರರಾಗಬೇಕು ಎಂದರು.

ನವೋದ್ಯಮಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿವೆ. ವಿಶ್ವದಲ್ಲೇ ಮೂರನೇ ಅತಿದೊಡ್ಡ ನವೋದ್ಯಮ ನಮ್ಮಲ್ಲಿದೆ, ಐದು ವರ್ಷದಲ್ಲಿ ಶೇ 270ರಷ್ಟು ಪ್ರಗತಿ ದಾಖಲಿಸಿದೆ. ದೇಶದಲ್ಲಿ ದೆಹಲಿ, ಮುಂಬೈ ಮತ್ತು ಬೆಂಗಳೂರು ಇದರಲ್ಲಿ ಮುಂಚೂಣಿಯಲ್ಲಿದ್ದರೆ ಮಂಗಳೂರು ಅಭಿವೃದ್ಧಿ ಸಾಲದು, ಇಲ್ಲಿನ ರಾಜಕೀಯ ಧುರೀಣರು ಈ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆ ಇದೆ .
ಟಿ.ವಿ.ಮೋಹನದಾಸ್ ಪೈ ಹಣಕಾಸು ತಜ್ಞ