ತಪ್ಪೇ ಮಾಡಿದವರ್ ಇಲ್ಲವ್ರೆ…

ಈ ಜಗತ್ತಿನಲ್ಲಿ ತಪ್ಪುಗಳನ್ನು ಮಾಡದವರೇ ಇಲ್ಲವೆನ್ನಬಹುದು. ದೈವ ದೇವರುಗಳೂ ತಪ್ಪುಗಳನ್ನು ಮಾಡಿ, ಕಷ್ಟ ಅನುಭವಿಸಿದ್ದನ್ನು, ಪ್ರಾಯಶ್ಚಿತ್ತ ಮಾಡಿಕೊಂಡಿದ್ದನ್ನು ನಾವು ಪುರಾಣ ಕತೆಗಳಲ್ಲಿ ಓದಿದ್ದೇವೆ; ಪ್ರವಚನಾಕಾರರಿಂದ ಕೇಳಿಸಿಕೊಂಡಿದ್ದೇವೆ. ತಪ್ಪುಗಳೆಂದರೆ, ಆ ಕ್ಷಣದಲ್ಲಿ ನಮ್ಮ ಗಮನಕ್ಕೆ ಬಾರದೇ ನಡೆದು ಹೋಗುವ ಅಚಾತುರ್ಯಗಳು. ತಪ್ಪುಗಳು ನಡೆದು ಹೋಗುತ್ತವೆ. ನಡೆವವರು ಎಡಹುವರಲ್ಲದೆ, ಕುಳಿತವರು ಎಡಹುವರೇ? ಎಂಬ ಮಾತಿನಂತೆ, ಕ್ರಿಯಾಶೀಲ ವ್ಯಕ್ತಿಗಳಷ್ಟೇ ತಪ್ಪುಗಳನ್ನು ಮಾಡುತ್ತಿರುತ್ತಾರೆ; ಸೋಮಾರಿಗಳಲ್ಲ! ತಪ್ಪುಗಳನ್ನೇ ಮಾಡದವ, ಜೀವನದಲ್ಲಿ ಏನನ್ನೂ ಸಾಧಿಸಿಲ್ಲವೆಂಬ ಅರ್ಥ. ತಪ್ಪುಗಳನ್ನು ಮಾಡೋದು ತಪ್ಪಲ್ಲ; ಆದರೆ ಗೈದ ತಪ್ಪುಗಳಿಂದ ಕಲಿತುಕೊಂಡು, ತಿದ್ದಿಕೊಳ್ಳದಿರೋದು ಮಹಾ ತಪ್ಪು.

ಈ ಹಿನ್ನೆಲೆಯಲ್ಲಿ ತಪ್ಪುಗಳಾದಾಗ ಅನುಸರಿಸಬೇಕಾದ ಸೂತ್ರಗಳೆಂದರೆ: ನಮ್ಮ ಕಡೆಯಿಂದ ತಪ್ಪಾದರೆ ತಕ್ಷಣ ಒಪ್ಪಿಕೊಂಡು ಬಿಡಬೇಕು. ಇದು ದೊಡ್ಡತನ. ತಪ್ಪಾಗಿದ್ದರೂ ಗೈದ ತಪ್ಪಿನ ಸಮರ್ಥನೆಗಿಂತ ದೊಡ್ಡ ತಪ್ಪು ಬೇರೊಂದಿಲ್ಲ. ನಾನೇನೂ ಅಂತಹ ದೊಡ್ಡ ತಪ್ಪು ಮಾಡಿಲ್ಲ; ಇತರರೂ ಇಂತಹ ತಪ್ಪನ್ನು ಮಾಡಿಲ್ಲವೇ ಎಂಬ ಉತ್ತರವನ್ನು ಕೊಟ್ಟು ಜಾರಿಕೊಳ್ಳೋದು ಹಾಗೂ ಸಮಾಧಾನಪಟ್ಟುಕೊಳ್ಳೋದು ತರವಲ್ಲ; ಇದು ಆತ್ಮವಂಚನೆ !

ತಪ್ಪುಗಳು ಚಿಕ್ಕದಿರಲಿ, ದೊಡ್ಡದಿರಲಿ, ತಪ್ಪುಗಳು ಎಂದೆಂದೂ ತಪ್ಪುಗಳೇ. ಗಡಿಗೆ ಎಷ್ಟೇ ದೊಡ್ಡದಾಗಿದ್ದರೂ, ಒಂದು ಚಿಕ್ಕ ರಂಧ್ರ ಅದರೊಳಗಿನ ನೀರನ್ನು ಖಾಲಿ ಮಾಡಬಹುದು. ಅಂತೆಯೇ ವ್ಯಕ್ತಿ ಎಷ್ಟೇ ದೊಡ್ಡವನಾದರೂ, ಅವನ ಒಂದು ತಪ್ಪು ನಡೆ-ನುಡಿ, ಅವನ ವ್ಯಕ್ತಿತ್ವವನ್ನೇ ನಾಶ ಮಾಡಬಲ್ಲುದು. ಸಾಮಾನ್ಯವಾಗಿ ನಾವು ಗೈಯುವ ತಪ್ಪುಗಳು ನಮ್ಮ ಗಮನಕ್ಕೆ ಅಷ್ಟು ಬೇಗ ಬಾರದಿರೋದು ಒಂದು ದುರಂತವಾದರೆ, ಬೇರೆಯವರು ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದಾಗ ನಾವು ಅವರ ಮೇಲೆ ಸಿಟ್ಟಾಗುತ್ತೇವೆ ಹಾಗೂ ಅದು ನಮ್ಮ ತಪ್ಪಲ್ಲವೆಂದು ನಮ್ಮ ಪರ ನ್ಯಾಯವಾದಿಗಳಂತೆ ವಾದಿಸುತ್ತೇವೆ. ಆದರೆ, ಬೇರೆಯವರು ತಪ್ಪು ಮಾಡಿದಾಗ, ಅದು ನಮ್ಮ ಗಮನಕ್ಕೆ ಬೇಗನೆ ಬರುತ್ತದೆ ಹಾಗೂ ಅವರ ತಪ್ಪಿನ ವಿರುದ್ಧ ನ್ಯಾಯಾಧೀಶರಂತೆ ತೀರ್ಪಕೊಟ್ಟುಬಿಡುತ್ತೇವೆ. ಇದು ತರವಲ್ಲ. ನಾವು ಗೈದ ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ಇದುವೇ ಹಿರಿತನ.

ಹೀಗಾಗಲು ನಾವು ನಮ್ಮ ಅಹಂನ ಕೋಟೆಯಿಂದ ಹೊರ ಬರಬೇಕು ಹಾಗೂ ಸಂಸ್ಕಾರವಂತರಾಗಬೇಕು. ತನ್ನಿಂದಲೂ ತಪ್ಪುಗಳಾಗುತ್ತವೆ ಎಂದು ಅರಿತವನು ಇತರರಲ್ಲಿ ಹೆಚ್ಚು ತಪ್ಪುಗಳನ್ನು ಕಾಣಲಾರ. ನಾವು ಸದಾ ಇತರರ ತಪ್ಪುಗಳನ್ನೇ ಹುಡುಕೋದರಲ್ಲಿ ಮಗ್ನರಾದರೆ, ನಮ್ಮಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳೋದು ಯಾವಾಗ? ಇತರರ ತಪ್ಪುಗಳನ್ನೇ ಹುಡುಕುತ್ತಿರುವವರಲ್ಲಿ, ತಾವೇ ಸರಿ ಎಂಬ ಭಾವನೆ ಒಂದು ಮನೋರೋಗವಾಗಿ ಮನೆಮಾಡುತ್ತದೆ.

ನಾವು ಗೈದ ತಪ್ಪಿನಿಂದ ಪಾಠವೊಂದನ್ನು ಕಲಿಯಬೇಕು. ಇಲ್ಲವಾದರೆ ನಾವು ಸುಧಾರಣೆ ಹೊಂದುವುದಿಲ್ಲ. ಇತರರ ತಪ್ಪುಗಳಿಂದ ಕಲಿಯುವವನು ಜಾಣ; ತನ್ನ ತಪ್ಪುಗಳಿಂದಲೇ ಕಲಿಯುವವನು ಸಾಧಾರಣ; ತಪ್ಪು ಮಾಡಿಯೂ ಕಲಿಯದವನು ಶುದ್ಧ ಕೋಣ ಎನ್ನಲಾಗಿದೆ. ಮಾತ್ರವೇ ಅಲ್ಲ ಮುಂದೆ ನಮ್ಮಿಂದ ತಪ್ಪುಗಳಾಗದಂತೆ ಮುಂಜಾಗ್ರತೆ ವಹಿಸೋದು ನಮ್ಮ ಕೈಯಲ್ಲಿ ಇದೆ.

ಗೈದ ತಪ್ಪು ಮತ್ತೆ ಪುನರಾವೃತ್ತಿಯಾಗದಂತೆ ನೋಡಿಕೊಳ್ಳಬೇಕು. ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿದರೆ, ಅದು ಅತಿ ದೊಡ್ಡ ತಪ್ಪು ಎಂದೆನಿಸುತ್ತದೆ. ತಪ್ಪುಗಳು ನಮ್ಮ ಅನುಭವವನ್ನು ಹೆಚ್ಚಿಸಬೇಕು; ಅನುಭವಗಳು ಮುಂದೆ ಮಾಡಬಹುದಾದ ತಪ್ಪುಗಳನ್ನು ಕಡಿಮೆ ಮಾಡಬೇಕು.

ಅಂತೆಯೇ, ನಮ್ಮ ತಪ್ಪಿಗೆ ಇತರರನ್ನು ಹೊಣೆಗಾರರನ್ನಾಗಿ ಮಾಡುವುದು ಆತ್ಮದ್ರೋಹ ಎಂದೆನಿಸೀತು. ಇದು ಹೇಡಿಗಳ ಲಕ್ಷಣ. ತಪ್ಪುಗಳನ್ನು ಒಪ್ಪಿಕೊಳ್ಳಲು ಎದೆಗಾರಿಕೆಯೂ ಬೇಕು; ಎದೆ ಆಳವೂ ಬೇಕು.ಸಣ್ಣ ಪುಟ್ಟ ತಪ್ಪುಗಳಿಗಾಗಿ, ಸಂಬಂಧಗಳನ್ನೇ ಹಾಳು ಮಾಡಿಕೊಳ್ಳಬಾರದು; ಬಂಧು ಮಿತ್ರರನ್ನೇ ಕಳೆದುಕೊಳ್ಳಬಾರದು. ಕಾರಣ ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ; ಪರಿಶುದ್ಧರಲ್ಲ. ಈ ಹಿನ್ನೆಲೆಯಲ್ಲಿ ತಪ್ಪು ಮಾಡಿದವರನ್ನು ಕ್ಷಮಿಸುವ ಗುಣ ನಮ್ಮದಾಗಬೇಕು. ಕ್ಷಮಿಸೋದು ಹಾಗೂ ಕ್ಷಮೆ ಕೇಳೋದು- ಎರಡೂ ದೊಡ್ಡ ಗುಣಗಳೇ! ಕ್ಷಮೆ ಎಂದರೆ, ಪ್ರೀತಿಯ ಕೊನೆಯ ರೂಪವೂ ಹೌದು; ಮಧುರವಾದ ಒಂದು ಪ್ರತಿಕಾರವೂ ಹೌದು. ಕ್ಷಮೆ, ಕೆಟ್ಟುಹೋದ ಸಂಬಂಧಗಳನ್ನು ಮತ್ತೆ ಹಸಿರಾಗಿಸುತ್ತದೆ.

ಕ್ಷಮೆ ಎಂಬುದು ಮಾನವ ಸಂಬಂಧಗಳ ಹೂ ತೋಟದಲ್ಲಿ ಅರಳುವ ಒಂದು ಸುಂದರ ಪುಷ್ಪ. ಕ್ಷಮೆ ಎಂದರೆ, ತಪ್ಪಿತಸ್ಥರನ್ನು ಕ್ಷಮಿಸುವುದಕ್ಕಿಂತಲೂ ಹೆಚ್ಚಾಗಿ, ನಮ್ಮನ್ನು ನಾವೇ ಬಹುಮಾನಿಸಿ ಕೊಂಡಂತೆ! ಕ್ಷಮೆ ಪಡೆಯುವ ಅರ್ಹತೆ, ಇತರರಲ್ಲಿ ಇರಲಿ, ಇರದಿರಲಿ, ಆದರೆ ಕ್ಷಮಿಸುವ ಗುಣ ನಮ್ಮಲ್ಲಿ ಇರಬೇಕು. ದಹಿಸಲು ಮುಂದಾಗಿರುವ ದ್ವೇಷದ ಜ್ವಾಲೆಯನ್ನು ಶಮನಗೊಳಿಸಬಲ್ಲ ಅಗ್ನಿಶಾಮಕ ಜೀವ ಜಲವೇ ಕ್ಷಮೆ. ಆದರೆ, ತಪ್ಪಿತಸ್ಥರನ್ನು ಶಿಕ್ಷಿಸೋದಕ್ಕಿಂತ ಹೆಚ್ಚಿನ ಸಾಮರ್ಥ್ಯ ಕ್ಷಮಿಸೋದಕ್ಕೆ ಬೇಕಾಗುತ್ತದೆ. ತಪ್ಪು ಮಾಡಿದವರನ್ನು ನಾವು ಕ್ಷಮಿಸಬೇಕು. ಅವರಿಗೋಸ್ಕರ ಅಲ್ಲ; ನಮಗೋಸ್ಕರ ನಮ್ಮ ಮನಃ ಶಾಂತಿಗೋಸ್ಕರ! ಅಂತೆಯೇ ಕ್ಷಮೆ ಯಾಚಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳೋದು, ಪಾಪ ಪ್ರಜ್ಞೆಯಿಂದ ನರಳೋದಕ್ಕಿಂತ ಲೇಸು. ತಪ್ಪುಗಳಾದಾಗ ತಪ್ಪಿತಸ್ಥರನ್ನು ಕ್ಷಮಿಸೋದು ಹಾಗೂ ತಪ್ಪು ನಮ್ಮದಾಗಿದ್ದಲ್ಲಿ, ಕ್ಷಮೆ ಯಾಚಿಸೋದು ಎರಡೂ ದೊಡ್ಡ ಗುಣಗಳೇ. ನಾವು ತಪ್ಪು ಮಾಡಿದವರನ್ನು ಕ್ಷಮಿಸುವಷ್ಟು ಪ್ರೌಢರಾಗಬೇಕು. ಅದರೆ, ಅವರನ್ನು ಮತ್ತೆ ಮತ್ತೆ ನಂಬುವಷ್ಟು ದಡ್ಡರಾಗಬಾರದು. ಅಹಂಕಾರ ಕ್ಷಮೆಯನ್ನು ನಿರೀಕ್ಷಿಸುತ್ತದೆ; ಆದರೆ, ವಿನಯ ಕ್ಷಮೆಯನ್ನು ಯಾಚಿಸುತ್ತದೆ. ಆದುದರಿಂದ ಅಹಂಕಾರದ ಅರಮನೆಯನ್ನು ವಿನಯವು ಆವರಿಸಲಿ. ಹೂವನ್ನು ನಾವು ಕೋಪಾವೇಶದಿಂದ ಎಷ್ಟೇ ಹಿಸುಕಿದರೂ, ಸುಗಂಧವನ್ನು ಬೀರುತ್ತಿರುತ್ತದೆ. ಶ್ರೀಗಂಧದ ಮರ, ತನ್ನನ್ನು ಕಡಿದು ಕತ್ತರಿಸಿದ ಕೊಡಲಿಯನ್ನೂ, ಸುವಾಸನೆ ಉಳ್ಳದಾಗಿ ಮಾಡುತ್ತದೆ. ಇದುವೇ ಕ್ಷಮೆಯ ಗುಣ.

ಮಕ್ಕಳ ತಪ್ಪುಗಳನ್ನು ಕ್ಷಮಿಸೋದರ ಜತೆ, ಅದನ್ನು ಅವರಿಗೆ ಏಕಾಂತದಲ್ಲಿ ತಿಳಿ ಹೇಳಿ, ಮತ್ತೆ ಅವರು ತಪ್ಪು ಮಾಡದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿಯೂ ಹೆತ್ತವರ ಮೇಲಿದೆ. ಒಟ್ಟಿನಲ್ಲಿ ನಮ್ಮ ಆಶಯವು ಹೀಗಿರಲಿ- ದಿನದಿಂದ ದಿನಕ್ಕೆ ನಾವು ಮಾಡುವ ತಪ್ಪುಗಳು ಕಡಿಮೆಯಾಗುತ್ತಿರಲಿ; ಗೈದ ತಪ್ಪು ಮರುಕಳಿಸದಿರಲಿ, ತಪ್ಪುಗಳು ನಮ್ಮನ್ನು ಇನ್ನಷ್ಟು ಪ್ರಬುದ್ಧರನ್ನಾಗಿ ಅನುಭವಿಗಳನ್ನಾಗಿ ಮಾಡಲಿ.

Leave a Reply

Your email address will not be published. Required fields are marked *