More

  ಮಹಾರಾಜ ಮಾರಾಟ; ಏರ್​ ಇಂಡಿಯಾದ ಖಾಸಗೀಕರಣಕ್ಕೆ ಸಿದ್ಧತೆ

  ನವದೆಹಲಿ: ನಷ್ಟದ ಸುಳಿಯಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಖಾಸಗೀಕರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಸಂಸ್ಥೆಯ ಶೇ.100 ಪಾಲನ್ನು ಮಾರಾಟ ಮಾಡುವ ಯೋಜನೆಯನ್ನು ಸೋಮವಾರ ಪ್ರಕಟಿಸಿದೆ. ಸಂಸ್ಥೆಯ ಖಾಸಗೀಕರಣಕ್ಕೆ ಸರ್ಕಾರ ಮನಸ್ಸು ಮಾಡಿದರೂ ಅದರ ಸಂಪೂರ್ಣ ನಿಯಂತ್ರಣ ಭಾರತೀಯರ ಕೈಯಲ್ಲಿ ಇರಬೇಕೆಂದು ಪ್ರಾಥಮಿಕ ಷರತ್ತುಗಳಲ್ಲಿ ಬಯಸಿದೆ.

  ಸಾಲದ ಸುಳಿ: ಏರ್ ಇಂಡಿಯಾ 58,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿದೆ. ಅಲ್ಲದೆ ಸಾವಿರಾರು ಕೋಟಿ ರೂಪಾಯಿ ಸಂಚಿತ ನಷ್ಟವೂ ಸಂಸ್ಥೆಗಿದೆ. ಏರ್ ಇಂಡಿಯಾ ಮತ್ತು ಅದರ ಉಪಸಂಸ್ಥೆ ಏರ್ ಇಂಡಿಯಾ ಎಕ್ಸ್​ಪ್ರೆಸ್​ನಲ್ಲಿ ಪ್ರಸ್ತುತ ಸರ್ಕಾರ ಶೇ.100 ಷೇರುಗಳನ್ನು ಹೊಂದಿದೆ. ಇವೆರಡೂ ಸಂಸ್ಥೆಗಳ ಒಟ್ಟು 58,282.90 ಕೋಟಿ ರೂ. ಸಾಲದ ಪೈಕಿ 23,286.50 ಕೋಟಿ ರೂ. ಹೊರೆಯನ್ನು ಖರೀದಿಸುವವರು ಹೊರಬೇಕಾಗುತ್ತದೆ. ಉಳಿದ ಸಾಲವನ್ನು ಸಂಸ್ಥೆಯ ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್​ಗೆ ವರ್ಗಾಯಿಸಲಾಗುತ್ತದೆ. ಸಂಪೂರ್ಣ ಖಾಸಗೀಕರಣದ ಪ್ರಸ್ತಾಪ ಮುಂದಿಟ್ಟಿರುವುದರಿಂದ ಬಿಡ್​ದಾರರು ಮುಂದೆ ಬರುವ ನಿರೀಕ್ಷೆಯಿದೆ.

  ಆಕರ್ಷಕ ಪ್ಯಾಕೇಜ್: 2018ರಲ್ಲಿ ಸಂಸ್ಥೆಯ ಶೇ.76 ಷೇರು ಮಾರುವುದಾಗಿ ಸರ್ಕಾರ ಹೇಳಿದರೂ ಖರೀದಿಗೆ ಯಾರೂ ಮುಂದೆ ಬಂದಿರಲಿಲ್ಲ. ಈ ಸಲ ಎಲ್ಲ ಷೇರುಗಳನ್ನೂ ಮಾರಾಟಕ್ಕೆ ಇಡಲಾಗಿದೆ. ಅಲ್ಲದೆ ಸಾಲದ ಪ್ರಮಾಣವನ್ನು 62,000 ಕೋಟಿ ರೂಪಾಯಿಗಳಿಂದ 58,282 ಕೋಟಿ ರೂಪಾಯಿಗೆ ಇಳಿಸಿ ಅದರಲ್ಲಿ 23,286 ಕೋಟಿ ರೂ. ಮಾತ್ರ ಖರೀದಿದಾರರು ತೀರಿಸಿದರಾಯಿತು ಎಂದಿದೆ. ಇದು ಬಿಡ್​ದಾರರನ್ನು ಆಕರ್ಷಿಸುತ್ತದೆಂಬುದು ಸರ್ಕಾರದ ಲೆಕ್ಕಾಚಾರ.

  ಖರೀದಿದಾರರಿಗೇನು?
  • ಸಂಪೂರ್ಣ ಖಾಸಗೀಕರಣವಾ ಗುವ ಏರ್ ಇಂಡಿಯಾದಿಂದ ಖರೀದಿದಾರರಿಗೆ ಏನೇನು ಸಿಗಲಿದೆ ಎಂಬುದರ ಮಾಹಿತಿ ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಪ್ರಥಮ ಮಾಹಿತಿ ಒಡಂಬಡಿಕೆ ಪತ್ರದಲ್ಲಿ(ಪಿಐಎಂ) ಇದೆ.
  • 2019 ನ.1 ವೇಳೆಗೆ ಏರ್ ಇಂಡಿಯಾದಲ್ಲಿ 121 ವಿಮಾನಗಳಿವೆ. ಅವುಗಳಲ್ಲಿ 65 ವಿಮಾನ ಮಾತ್ರ ಸ್ವಂತದ್ದು. ಈ ಎಲ್ಲ ವಿಮಾನಗಳು ಖರೀದಿದಾರರದ್ದು
  • ಏರ್ ಇಂಡಿಯಾದ ಉದ್ಯೋಗಿಗಳು, ಮುಂಬೈನ ನಾರಿಮನ್ ಪಾಯಿಂಟ್​ನಲ್ಲಿರುವ ಕಚೇರಿ ಭಾವಿ ಖರೀದಿದಾರರಿಗೆ ಸೇರುತ್ತದೆ. ನಾಲ್ಕು ಬೋಯಿಂಗ್ 747 ವಿಮಾನಗಳನ್ನು ಮಾತ್ರ ವಿಐಪಿ ಕಾರ್ಯಾಚರಣೆಗಾಗಿ ಏರ್ ಇಂಡಿಯಾ ಇಟ್ಟುಕೊಳ್ಳಲಿದೆ
  • ಸರಕು ಸಾಗಾಟ ವ್ಯವಸ್ಥೆ
  ಮುಖ್ಯಾಂಶಗಳು
  1. ಏರ್ ಇಂಡಿಯಾ ಖರೀದಿಸುವ ಬಿಡ್ ಸಲ್ಲಿಸಲು ಮಾ.17 ಕೊನೆಯ ದಿನ
  2. ಈ ವ್ಯವಹಾರ ನಿಭಾಯಿಸಲು ಅರ್ನ್​ಸ್ ಅಂಡ್ ಯಂಗ್ ಎಲ್​ಎಲ್​ಪಿ ಇಂಡಿಯಾ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ
  3. 1932ರಲ್ಲಿ ಅಂಚೆ ಸಾಗಾಟಕ್ಕೆಂದು ಆರಂಭವಾಗಿದ್ದ ಸಂಸ್ಥೆ ಬಹುಬೇಗ ವಾಣಿಜ್ಯ ವಲಯದಲ್ಲಿ ಜನಪ್ರಿಯತೆ ಗಳಿಸಿತ್ತು
  4. ದಶಕಗಳ ಕಾಲ ಲಾಭ ಗಳಿಸಿದ್ದ ಸಂಸ್ಥೆ ಕ್ರಮೇಣ ಖಾಸಗಿಯವರ ತೀವ್ರ ಪೈಪೋಟಿಯಿಂದಾಗಿ ಸಾಲದ ಸುಳಿಗೆ ಸಿಲುಕಿತ್ತು

  ಬಿಡ್ ಗೆದ್ದವರಿಗೆ ಏರ್ ಇಂಡಿಯಾ ಬ್ರಾಂಡ್ ಬಳಸುವುದನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್ ಉತ್ತಮ ಆಸ್ತಿಯಾಗಿದೆ.

  | ಹರ್​ದೀಪ್ ಸಿಂಗ್ ಪುರಿ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ 

  ಖಾಸಗೀಕರಣ ಮಾಡಿದರೆ ಕೋರ್ಟ್ ಮೊರೆ

  ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಖಾಸಗೀಕರಿಸುವ ಕ್ರಮ ದೇಶ- ವಿರೋಧಿ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ‘ನಮ್ಮದೇ ಕುಟುಂಬದ ಬೆಳ್ಳಿಯನ್ನು ಮಾರಲಾಗದು’ ಎಂದಿರುವ ಅವರು ಈ ಪ್ರಕರಣವನ್ನು ಕೋರ್ಟ್​ಗೆ ಒಯ್ಯುವುದಾಗಿಯೂ ಎಚ್ಚರಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೂಡ ಖಂಡಿಸಿದ್ದಾರೆ. ‘ಭಾರತ ಸರ್ಕಾರದಲ್ಲಿ ಹಣವಿಲ್ಲ. ಜಿಡಿಪಿ ಶೇ.5ಕ್ಕಿಂತ ಕಡಿಮೆಯಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿ ಕೂಲಿ ಬಾಕಿಯಿದೆ. ಸರ್ಕಾರಗಳ ಬಳಿ ಹಣವಿಲ್ಲದಿದ್ದಾಗ ಅವು ಈ ರೀತಿ ಮಾಡುತ್ತವೆ. ದೇಶದ ಅತ್ಯಮೂಲ್ಯ ಆಸ್ತಿಗಳನ್ನು ಸರ್ಕಾರ ಮಾರುತ್ತಿದೆ’ ಎಂದು ಸಿಬಲ್ ಹೇಳಿದ್ದಾರೆ. ‘ನಮ್ಮ ದೇಶದ ಹೆಮ್ಮೆ’ಎನಿಸಿಕೊಂಡ ಏರ್ ಇಂಡಿಯಾವನ್ನು ಪುನಶ್ಚೇತನಗೊಳಿಸಲು ಮೋದಿ ಸರ್ಕಾರ ವಿಫಲವಾಗಿದೆ. ಇದು ಎದ್ದು ಕಾಣುವ ಇನ್ನೊಂದು ದೃಷ್ಟಾಂತವಾಗಿದೆ’

  ಎಂದು ಕಾಂಗ್ರೆಸ್ ನಾಯಕ ರಾಜೀವ್ ಸತಾವ್ ಟೀಕಿಸಿದ್ದಾರೆ. ತುಂಬಾ ಕಡಿಮೆ ಮೊತ್ತಕ್ಕೆ ದೇಶದ ಆಸ್ತಿಯನ್ನು ತನ್ನ ಬಂಡವಾಳಶಾಹಿ ಮಿತ್ರರಿಗೆ ಮಾರಾಟ ಮಾಡುವ ಕ್ರಮವಿದು ಎಂದು ಟ್ವೀಟ್ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts