ಮೂರು ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ

ಬೆಂಗಳೂರು: ಬೆಂಗಳೂರು ದಕ್ಷಿಣ, ಕೇಂದ್ರ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.

ಮತದಾನ ನಡೆದ ಒಂದು ತಿಂಗಳ ನಂತರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆಗೆ ಭದ್ರತಾ ಕೊಠಡಿಗಳಿಂದ ಮತ ಯಂತ್ರಗಳನ್ನು ಹೊರಗೆ ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮೊದಲು 11,626 ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಆನಂತರ ನಗರದ 24 ವಿಧಾನಸಭಾ ಕ್ಷೇತ್ರಗಳ ತಲಾ 5 ಮತಯಂತ್ರ ಮತ್ತು ವಿವಿ ಪ್ಯಾಟ್​ನಲ್ಲಿನ ಮತಗಳನ್ನು ತಾಳೆ ಹಾಕಲಾಗುತ್ತದೆ.

ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆ ಕಾರ್ಯ ವಿಠ್ಠಲ್ ಮಲ್ಯ ರಸ್ತೆಯಲ್ಲಿನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್​ನಲ್ಲಿ ನಡೆಯಲಿದೆ. ಬೆಂಗಳೂರು ದಕ್ಷಿಣ ಜಯನಗರದ ಎಸ್​ಎಸ್​ಎಂಕೆಆರ್​ವಿ ಕಾಲೇಜು ಮತ್ತು ಕೇಂದ್ರ ಕ್ಷೇತ್ರದ ಮತ ಎಣಿಕೆ ಮೌಂಟ್ ಕಾರ್ವೆಲ್ ಕಾಲೇಜಿನಲ್ಲಿ ನಡೆಯಲಿದೆ. ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರದ ಎಣಿಕೆ ಕೇಂದ್ರದಲ್ಲಿ ತಲಾ 14 ಟೇಬಲ್​ಗಳನ್ನು ಇಡಲಾಗಿರುತ್ತದೆ. ಕ್ಷೇತ್ರಗಳ ವ್ಯಾಪ್ತಿ ಹೆಚ್ಚಳವಿದ್ದರೆ ಹೆಚ್ಚಿನ ಟೇಬಲ್ ಬಳಸಲಾಗುತ್ತದೆ. ಕೆ.ಆರ್.ಪುರ, ಬ್ಯಾಟರಾಯನಪುರ, ದಾಸರಹಳ್ಳಿ ಕ್ಷೇತ್ರಗಳ ಮತಗಳು ಎಣಿಕೆಯಾಗುವ ಕೇಂದ್ರಗಳಲ್ಲಿ ತಲಾ 26, ಯಶವಂತಪುರ ಕ್ಷೇತ್ರದ ಕೇಂದ್ರದಲ್ಲಿ 24, ಸರ್ವಜ್ಞನಗರ ಕೇಂದ್ರದಲ್ಲಿ 21, ಮಹದೇವಪುರ ಕೇಂದ್ರದಲ್ಲಿ 28, ಬೊಮ್ಮನಹಳ್ಳಿ ಕೇಂದ್ರದಲ್ಲಿ 24 ಟೇಬಲ್​ಗಳಿರಲಿವೆ.

78 ಅಭ್ಯರ್ಥಿಗಳ ಭವಿಷ್ಯ ಪ್ರಕಟ: ಮೂರು ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 31, ಕೇಂದ್ರದಲ್ಲಿ 22 ಹಾಗೂ ದಕ್ಷಿಣದಲ್ಲಿ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ದೇವನಹಳ್ಳಿ ತಾಲೂಕಿನ ಆವತಿ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯ ರಾಮನಗರದ ಜಾನಪದ ಲೋಕದ ಬಳಿ ಇರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

14 ವೀಕ್ಷಕರ ನಿಯೋಜನೆ

ಕಳೆದ ಚುನಾವಣೆಯಲ್ಲಿ 7 ವೀಕ್ಷಕರನ್ನು ನಿಯೋಜಿಸಲಾಗಿತ್ತು, ಈ ಬಾರಿ 14 ವೀಕ್ಷಕರನ್ನು ನಿಯೋಜಿಸಲಾಗಿದೆ. ವೀಕ್ಷಕರು ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಬೇರೆಯವರು ಮೊಬೈಲ್ ತರುವುದನ್ನು ನಿಷೇಧಿಸ ಲಾಗಿದೆ. ಎಣಿಕೆ ಕೇಂದ್ರದಲ್ಲಿ ಕೆಲಸ ಮಾಡುವ ವಿಧಾನದ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಚುನಾವಣಾ ಸಿಬ್ಬಂದಿ ಯಾವ ಟೇಬಲ್​ನಲ್ಲಿ ಕೆಲಸ ಮಾಡಬೇಕೆಂಬುದನ್ನು ಗುರುವಾರ ಬೆಳಗ್ಗೆ ತಿಳಿಸಲಾಗುತ್ತದೆ.

ಪೊಲೀಸರು, ಅರೆಸೇನಾ ಪಡೆ ನಿಯೋಜನೆ

ಮತ ಎಣಿಕೆ ಕೇಂದ್ರಗಳು ಮತ್ತು ನಗರದಲ್ಲಿ ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿದೆ. 3 ಕೇಂದ್ರಗಳಲ್ಲಿ 7 ಡಿಸಿಪಿ, 24 ಎಸಿಪಿ, 76 ಇನ್ಸ್​ಪೆಕ್ಟರ್, 180 ಸಬ್ ಇನ್ಸ್​ಪೆಕ್ಟರ್, 2 ಸಾವಿರ ಎಎಸ್​ಐ, ಕಾನ್ಸ್​ಟೇಬಲ್​ಗಳನ್ನು ನಿಯೋಜಿಸಲಾಗಿದೆ. ಅವರ ಜತೆಗೆ 2 ಅರೆ ಸೇನಾ ಪಡೆ, 23 ಕೆಎಸ್​ಆರ್​ಪಿ ತುಕಡಿ, 30 ನಗರ ಸಶಸ್ತ್ರ ತುಕಡಿಗಳು ಭದ್ರತಾ ಕಾರ್ಯ ನಿರ್ವಹಿಸಲಿವೆ.

ಸಿಸಿ ಕ್ಯಾಮರಾ, ಬ್ಯಾರಿಕೇಡ್ ಅಳವಡಿಕೆ

ಮತ ಎಣಿಕೆ ಕೇಂದ್ರಗಳ ಸುತ್ತಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೇಂದ್ರಗಳ 100 ಮೀಟರ್ ಅಂತರದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ. ಮತ ಎಣಿಕೆ ಕೇಂದ್ರಗಳ ಬಳಿ ತಲಾ ಒಂದು ಅಗ್ನಿಶಾಮಕ ವಾಹನ, ತಲಾ ಎರಡು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲು ಕೇಂದ್ರದ ಹೊರಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಸಂಚಾರ ಮಾರ್ಗ ಮಾರ್ಪಾಡು

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರಗಳ ಸುತ್ತಲ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಗುರುವಾರ ತಾತ್ಕಾಲಿಕವಾಗಿ ಮಾರ್ಪಡಿಸಿ ಟ್ರಾಫಿಕ್ ಪೊಲೀಸರು ಆದೇಶಿಸಿದ್ದಾರೆ. ಪಕ್ಷಗಳ ಮುಖಂಡರು, ಬೆಂಬಲಿಗರು ಮತ್ತು ಸಾರ್ವಜನಿಕರು ಮತ ಎಣಿಕೆ ಕೇಂದ್ರಗಳ ಬಳಿ ಬರಲಿದ್ದು, ಸಂಚಾರ ದಟ್ಟಣೆ ಉಂಟಾಗಲಿದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು

ಬೆಳಗ್ಗೆ 6 ರಿಂದ ಸಂಜೆ 6ವರೆಗೆ ಸಂಚಾರ ಮಾರ್ಗವನ್ನು ಮಾರ್ಪಾಡು ಮಾಡಲಾಗಿದೆ. ಸಾರ್ವಜನಿಕರು ಮತ ಏಣಿಕೆ ಕೇಂದ್ರಗಳ ಸುತ್ತಲ ರಸ್ತೆಗಳ ಬದಲು ಪರ್ಯಾಯ ರಸ್ತೆ ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *