ಬಸವನಬಾಗೇವಾಡಿ: ಬಸವಣ್ಣನವರ ಜನ್ಮಭೂಮಿಯಲ್ಲಿ ೆ.4 ರಂದು ಬೆಳಗ್ಗೆ 11ಕ್ಕೆ ನಾಡಿನ 1008 ಮಠಾಧೀಶರ ಪಾದಪೂಜೆ ಮತ್ತು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ನಡೆಯಲಿದ್ದು, ಈ ನಿಮಿತ್ತ ಪಟ್ಟಣದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಕ್ರಾಂತಿವೀರ ಬ್ರಿಗೇಡ್ ರಾಜ್ಯ ಕಾರ್ಯಧ್ಯಕ್ಷ ಕೆ.ಈ. ಕಾಂತೇಶ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಜನ್ಮ ಸ್ಥಳದಲ್ಲಿ ಐತಿಹಾಸಿಕ ಕಾರ್ಯಕ್ರಮ ಹೊರ ಹೊಮ್ಮಲಿದೆ. ರಾಜ್ಯದ ವಿವಿಧೆಡೆಯಿಂದ ಅಂದಾಜು ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹಿಂದುಳಿದ ವರ್ಗದ ಮಠಾಧೀಶರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ ಸೇರಿ ರಾಜ್ಯದ ಅನೇಕ ಹಿಂದುಳಿದ ವರ್ಗದ ಮುಖಂಡರು ಪಾಲ್ಗೊಳ್ಳುವರು ಎಂದರು.
ಬೆಳಗ್ಗೆ 9.30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ 1008 ಮಹಿಳೆಯರಿಂದ ಬೃಹತ್ ಕುಂಭಮೇಳ, ವಿವಿಧ ಕಲಾವಿದರಿಂದ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
50 ಸಾವಿರ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಘಟನೆ ರಾಜ್ಯ ಮಹಿಳಾ ಉಪಾಧ್ಯಕ್ಷೆ ರಾಜೇಶ್ವರಿ ಯರನಾಳ, ಕಾರ್ಯಕ್ರಮದ ಉಸ್ತುವಾರಿ ಕಲ್ಲು ಸೊನ್ನದ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರೇಶ, ರಾಜ್ಯ ಕಾರ್ಯದರ್ಶಿ ಮುದಕಣ್ಣ ಹೊರ್ತಿ, ಬಸವರಾಜ ಬಿಜಾಪುರ, ರಾಜು ಮುಳವಾಡ, ಸುನೀಲ ಜಮಖಂಡಿ, ಶಿವರಾಯ ಕಲಬುರ್ಗಿ, ಸಂಗಣ್ಣ ಹಚ್ಯಾಳ ಉಪಸ್ಥಿತರಿದ್ದರು.