More

    ಅಂಡರ್‌ಪಾಸ್‌ಗೆ ಸಿದ್ಧತೆ ಕೈಗೊಳ್ಳಿ

    ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ಟರ್ಮಿನಲ್ ನಡುವೆ ಸಂಪರ್ಕ ಕಲ್ಪಿಸಲು ಅಂಡರ್‌ಪಾಸ್ ನಿರ್ಮಿಸುವ ಸಂಬಂಧ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡದಲ್ಲಿರುವ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ಜರುಗಿತು.

    ಸಭೆ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಸ್ಮಾರ್ಟ್‌ಸಿಟಿ ಎಂಡಿ ಶಶಿಧರ ಕುರೇರ ಮಾತನಾಡಿ, ಅಂಡರ್‌ಪಾಸ್ ಕಾಮಗಾರಿ ಆರಂಭಗೊಳ್ಳುವ ಮೊದಲು ವಿದ್ಯುತ್ ಕಂಬಗಳ ಸ್ಥಳಾಂತರ ಹಾಗೂ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಸಹಕಾರ ನೀಡಿ: ಅಂಡರ್‌ಪಾಸ್ ನಿರ್ಮಾಣ ಯೋಜನೆ ಮಾಹಿತಿ ನೀಡಿದ ಅವರು, ಬಳಿಕ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದೊಯ್ದು ಮಾರ್ಗದರ್ಶನ ನೀಡಿದರು. ಪ್ರಯಾಣಿಕರ ಅನುಕೂಲಕ್ಕೆ ಈ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಎಲ್ಲ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

    ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣ: ಅಂಡರ್‌ಪಾಸ್ ನಿರ್ಮಾಣ ಸುತ್ತಲಿನ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಹೀಗಾಗಿ ರಸ್ತೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ಬಳಿಕ ಅಂಡರ್‌ಪಾಸ್ ನಿರ್ಮಿಸುವ ಕಾರ್ಯ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುರೇರ, ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿಗಳು ಮುಗಿಯಲಿವೆ ಎಂದು ತಿಳಿಸಿದರು.

    ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ದಂಡು ಮಂಡಳಿ ಸಿಇಒ ಬರ್ಚಸ್ವ, ಹೆಸ್ಕಾಂ ಎಇಇ ಗದಗಕರ, ಡಿಸಿಪಿ ಯಶೋಧಾ, ಬಿಎಸ್‌ಸಿಎಲ್ ಇಒ ಅಜಿತ್ ಪಾಟೀಲ ಹಾಗೂ ಮೆಗಾ ಇಂಜಿನಿಯರಿಂಗ್ ಇನ್‌ಫ್ರಾ ಲಿಮಿಟೆಡ್ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

    ಒತ್ತುವರಿ ತೆರವು ಮಾಡಿಸಿ

    ಅಂಡರ್‌ಪಾಸ್ ನಿರ್ಮಾಣ ಸ್ಥಳವನ್ನು ಈಗಾಗಲೇ ಪರಿಶೀಲಿಸಲಾಗಿದೆ. ಇಲ್ಲಿ ಗ್ಯಾಸ್‌ಪೈಪ್ ಲೈನ್/ಯುಜಿಡಿ ಕೇಬಲ್‌ಗಳಿಲ್ಲ. ಹೀಗಾಗಿ ಕಾಮಗಾರಿಗೆ ಅಡ್ಡಿಯಾಗುವುದಿಲ್ಲ. ಆದರೆ, ಕಾಮಗಾರಿ ಮಾರ್ಗದಲ್ಲಿ ಬರುವ ಅಂಗಡಿಯವರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಪಾಲಿಕೆ ಅಧಿಕಾರಿಗಳು ತೆರವು ಮಾಡಬೇಕು. ಸಂಚಾರಿ ಪೊಲೀಸರು ಕಾಮಗಾರಿ ವೇಳೆ ಸಂಚಾರ ದಟ್ಟಣೆ ಆಗದಂತೆ ಕ್ರಮ ವಹಿಸಬೇಕು ಎಂದು ಶಶಿಧರ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts