ಕಾರ್ಗಲ್: ಇಲ್ಲಿನ ಅರಣ್ಯ ವಾಸಿಗಳು ಕೆಎಫ್‌ಡಿಯಿಂದ ಸಾಕಷ್ಟು ಸಾವು-ನೋವು ಅನುಭವಿಸಿದ್ದಾರೆ. ಇದೀಗ ಗಾಳಿ-ಮಳೆಯಿಂದ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಕೂಡಲೇ ಮಳೆಹಾನಿ ವರದಿಯನ್ನು ಅಧಿಕಾರಿಗಳು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.
ಅರಳಗೋಡು ಗ್ರಾಪಂನಲ್ಲಿ ಮಳೆಹಾನಿ ಕುರಿತು ಬುಧವಾರ ಏರ್ಪಡಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ವರದಿ ಸಿದ್ಧಪಡಿಸುವಲ್ಲಿ ಲೋಪ ಕಂಡುಬಂದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.
ಮಳೆಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಮನೆ ಹಾಗೂ ನಾಲ್ಕು ಕೊಟ್ಟಿಗೆಗಳು ಹಾನಿಯಾಗಿವೆ. ಬಿದ್ದಿರುವ ಮನೆಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು. ಹಕ್ಕುಪತ್ರ ಇಲ್ಲದಿರುವ ಮನೆಗಳಿಗೂ ಒಂದು ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ. ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಬೇಕು ಎಂದರು.
ಕಾಲುಸಂಕ ದುರಸ್ತಿಗೆ ಕ್ರಮ: ವಾಟೆಮಕ್ಕಿ ಸೇರಿ ಇತರ ಕಡೆಗಳಲ್ಲಿ ಹಾಳಾಗಿರುವ ಕಾಲುಸಂಕಗಳ ದುರಸ್ತಿಗೆ ಅನುದಾನ ನೀಡಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಅರಳಗೋಡಿನಲ್ಲಿ ಪಶು ಆಸ್ಪತ್ರೆಗೆ ವೈದ್ಯರ ನೇಮಕ ಮಾಡಲು ಸರ್ಕಾರದ ಗಮನಕ್ಕೆ ತರಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವಶ್ಯವಿರುವ ಸಿಬ್ಬಂದಿ ಒದಗಿಸಲಾಗುವುದು ಎಂದರು. ಕೊಳೆ ರೋಗದಿಂದ ಅಡಕೆ ನಾಶವಾಗಿರುವ ವರದಿ ಸಲ್ಲಿಸಬೇಕು. ಅರಳಗೋಡಿನಿಂದ ನಂದೋಡಿಗೆ ಸಾಗುವ ರಸ್ತೆ ಬದಿಗಳಲ್ಲಿ ಬೀಳುವ ಸ್ಥಿತಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಅರಳಗೋಡು ಮತ್ತು ಕೋಗಾರು ಮಾರ್ಗವಾಗಿ ಭಟ್ಕಳಕ್ಕೆ ಓಡಾಡುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಮತ್ತೆ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಕೆಡಿಪಿ ನಾಮನಿರ್ದೇಶಿತ ಸದಸ್ಯೆ ಪ್ರಭಾವತಿ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಎಂ.ಪಿ.ಲೋಕರಾಜ್ ಮರಬಿಡಿ, ಬಗರ್‌ಹುಕುಂ ಸಮಿತಿ ಸದಸ್ಯ ಹೊಳಿಯಪ್ಪ, ಅರಳಗೋಡು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ದಿನೇಶ್, ಉಪಾಧ್ಯಕ್ಷ ರಾಜೇಶ್, ಸದಸ್ಯರಾದ ಮೇಘರಾಜ್, ಶರತ್, ಸೋಮಾವತಿ, ಲಕ್ಷ್ಮೀ ಕೃಷ್ಣಮೂರ್ತಿ, ತಾಪಂ ಇಒ ಗುರುಕೃಷ್ಣ ಶೆಣೈ, ಮೆಸ್ಕಾಂ ಎಇಇ ಪ್ರವೀಣ್‌ಕುಮಾರ್, ಆರ್‌ಎಫ್‌ಒ ಸಂತೋಷ್ ಪವಾರ್, ಡಿಆರ್‌ಎಫ್‌ಒ ಸುಧಾಕರ್, ಎಇಇ ಶಿವಣ್ಣ, ಪಿಡಿಒ ಪ್ರವೀಣ್‌ಕುಮಾರ್ ಇತರರಿದ್ದರು.