ಮುದ್ದೇಬಿಹಾಳ: ತಾಲೂಕಿನ ಸುಕ್ಷೇತ್ರ ಕುಂಟೋಜಿಯ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಸ್ಥಾನದ ಸಾಗವಾನಿ ಮರದ ತೇರು ನಿರ್ಮಾಣ ಕಾರ್ಯಕ್ಕೆ ಕೊಪ್ಪಳದಲ್ಲಿ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕುಂಟೋಜಿ ದೈವದವರನ್ನು ಆಶೀರ್ವದಿಸುವ ಮೂಲಕ ಬುಧವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕೊಪ್ಪಳದ ಎಂ.ಜಿ.ರಥಶಿಲ್ಪಿ ಕಲಾಕೇಂದ್ರದ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಮಲ್ಲಪ್ಪ ಬಡಿಗೇರ ಮತ್ತು ಮಕ್ಕಳು ತೇರು ತಯಾರಿಸಲಿದ್ದಾರೆ. ಇವರ ವರ್ಕ್‌ಶಾಪ್‌ನಲ್ಲಿ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಗುರುಚನ್ನವೀರ ಶಿವಾಚಾರ್ಯರ ಸಾನಿಧ್ಯದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಮತ್ತು ಕುಂಟೋಜಿಯ ದೈವದ ಪ್ರಮುಖರು ರಥದ ಕಟ್ಟಿಗೆಗೆ ದೀಪ ಬೆಳಗಿ, ಕರ್ಪೂರದಾರತಿ ಸಮೇತ ಪೂಜಿಸಿದರು.
ಡಾ.ಚನ್ನವೀರ ಶಿವಾಚಾರ್ಯರು, ಗುರುಲಿಂಗಪ್ಪ ಸುಲ್ಲಳ್ಳಿ, ಮಾಜಿ ಸೈನಿಕ ನಾಗಲಿಂಗಯ್ಯ ಮಠ, ಶರಣು ಹಿರೇಮಠ ಅವರು ವರ್ಕ್‌ಶಾಪ್‌ನಲ್ಲಿಯೇ ಕುಂಟೋಜಿ ದೈವ ಮಂಡಳಿಯ ಸದ್ಭಕ್ತರ ಸಭೆ ನಡೆಸಿ ತೇರು ನಿರ್ಮಾಣದ ಕುರಿತು ಸೂಚ್ಯವಾಗಿ ಮಾತನಾಡಿ, ಔಚಿತ್ಯ ಪ್ರಸ್ತಾಪಿಸಿದರು.
ಕಳೆದ ಶ್ರಾವಣದ ಕೊನೆಯ ಮಂಗಳವಾರ ನಡೆದ ಬಸವೇಶ್ವರರ ಜಾತ್ರೆಯ ಸಂದರ್ಭ ಬಾಗಲಕೋಟೆ ಮೂಲದ ಭಕ್ತರೊಬ್ಬರು ದೇವಸ್ಥಾನಕ್ಕೆ ತೇರು ಮಾಡಿಸಿಕೊಡುವ ವಾಗ್ದಾನ ಮಾಡಿದ್ದರು. ಆ ಭಕ್ತರ ಗುಪ್ತದಾನದಲ್ಲಿ ತೇರು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
4 ಏಕಶಿಲೆಯ ಬೃಹತ್ ಚಕ್ರಗಳ ಮೇಲೆ 3 ಪೀಠಗಳುಳ್ಳ 25 ಅಡಿ ಎತ್ತರದ ಭವ್ಯ ತೇರನ್ನು 2025ರ ಶ್ರಾವಣ ಕೊನೆಯ ಮಂಗಳವಾರದಂದು ನಡೆಯಲಿರುವ ಬಸವೇಶ್ವರ ಜಾತ್ರೆಯಲ್ಲಿ ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ. ಇದರ ಲೋಕಾರ್ಪಣೆಗೆ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಆಹ್ವಾನಿಸಿದ್ದು, ಅವರು ಒಪ್ಪಿಗೆ ನೀಡಿದ್ದಾರೆ ಎಂದು ಚನ್ನವೀರ ಶಿವಾಚಾರ್ಯರು ಕೊಪ್ಪಳದಿಂದಲೇ ದೂರವಾಣಿ ಮೂಲಕ ವಿಜಯವಾಣಿಗೆ ತಿಳಿಸಿದರು.
ಪ್ರಮುಖರಾದ ಶಿವಲಿಂಗಪ್ಪ ಗಸ್ತಿಗಾರ, ಜುಮ್ಮಣ್ಣ ಹಿರೇಕುರುಬರ, ರಾಮಣ್ಣ ಹುಲಗಣ್ಣಿ, ಶಿವನಗೌಡ ಪಾಟೀಲ, ಕರಬಸ್ಸು ಬಿರಾದಾರ, ಎಂ.ಎಂ.ನಾಟೇಕಾರ, ಕಾಸಯ್ಯ ಮಠ, ಶಾಂತಗೌಡ ಬಿರಾದಾರ, ಸೋಮಣ್ಣ ಹೊಸಮನಿ, ಶ್ರೀಶೈಲ ಪಲ್ಲೇದ ಉಪಸ್ಥಿತರಿದ್ದರು.