More

    ಗೋಕೇಂದ್ರಿತ ಬದುಕಿಗೊಂದು ಮಾದರಿ- ಸಾವಯವ ಕೃಷಿಯೊಂದಿಗೆ ಗೋ ಉತ್ಪನ್ನಗಳ ತಯಾರಿ

    ಸ್ವದೇಶಿ ಆಂದೋಲನದ ಹರಿಕಾರ ರಾಜೀವ್ ದೀಕ್ಷಿತ್ ಪ್ರೇರಣೆಯಿಂದ ಸಾವಯವ ಕೃಷಿ ಜತೆಗೆ ಗೋವಿನ ಉತ್ಪನಗಳನ್ನು ತಯಾರಿಕೆ ಮಾಡುವ ಮೂಲಕ ರಾಯಚೂರು ಜಿಲ್ಲೆ ಸಿರವಾರ ತಾಲೂಕು ಜಂಬಲದಿನ್ನಿ ಗ್ರಾಮದ ಸ್ನೇಹಿತರ ಬಳಗ ಗಮನ ಸೆಳೆದಿದೆ.

    ಗ್ರಾಮದ ಡಾ. ಅಶೋಕ, ಸುರೇಶಗೌಡ, ಅಮರೇಗೌಡ ಮತ್ತು ಸ್ನೇಹಿತರು ಮೂರು ವರ್ಷದ ಹಿಂದೆ ಮೂರು ಹಸುಗಳಿಂದ ಗೋ ಶಾಲೆ ಪ್ರಾರಂಭ ಮಾಡಿದರು. ಗೋಶಾಲೆಯಲ್ಲಿ ದೇಶಿ ತಳಿಗಳಾದ ದೇವಣಿ, ಕಾಂಕ್ರೇಜ್, ಓಂಗೋಲ್, ಮಲೆನಾಡು ಗಿಡ್ಡ ಸೇರಿ ವಿವಿಧ ತಳಿಯ ಸುಮಾರು 30 ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಗೋ ಶಾಲೆ ಒಂದೇ ಮಾಡಿದರೆ ಸಾಲದು ಎಂದು ಅರಿತ ಸ್ನೇಹಿತರು, ಬೇರೆ ಬೇರೆ ಊರುಗಳಿಗೆ ಭೇಟಿ ನೀಡಿ, ಗೋವಿನ ಉತ್ಪನ್ನಗಳನ್ನು ಹೇಗೆ ಮಾಡಬೇಕು ಎಂದು ಮಾಹಿತಿ ಪಡೆದಿದ್ದಾರೆ. ಇದರ ಪರಿಣಾಮ ಆರು ತಿಂಗಳಿಂದ ಗೋ ಮೂತ್ರದಿಂದ ಅರ್ಕವನ್ನು ತಾವೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

    ಗೋವಿನ ಸಗಣಿ ಮತ್ತು ಗೋ ಮೂತ್ರದಿಂದ ಊದಿನಕಡ್ಡಿ, ಧೂಪ, ಹಲ್ಲಿನ ಪುಡಿ, ಸ್ಕೀನ್ ಸಾಬೂನ್, ಪಿನಾಯಿಲ್, ಮೊಬೈಲ್ ಬಿಸಿ ತಡೆಯಲು ಪ್ಯಾಡ್​ಗಳನ್ನು ಸೇರಿ 12 ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇವರ ವಸ್ತುಗಳಿಗೆ ಹೈದರಾಬಾದ್, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಅನೇಕ ರಾಜ್ಯಗಳಿಂದ ಬೇಡಿಕೆ ಇದೆ. ಇಲ್ಲಿಯವರೆಗೆ ಸುಮಾರು 10 ರಿಂದ 12 ಲಕ್ಷ ರೂ.ಗೂ ಹೆಚ್ಚು ಬಂಡವಾಳ ಹೂಡಲಾಗಿದೆ. ತಿಂಗಳಿಗೆ 10 ರಿಂದ 15 ಸಾವಿರ ರೂ. ಲಾಭ ಬರುತ್ತಿದೆ.

    ಇನ್ನು ತಮ್ಮ ಹೊಲಗಳಿಗೆ ತಾವೇ ತಯಾರಿಸಿದ ಔಷಧಗಳನ್ನು ಬಳಸುತ್ತಿದ್ದಾರೆ. ಎರೆಹುಳಗಳ ತೊಟ್ಟಿ ಮಾಡಿ ಎರೆಹುಳ ಗೊಬ್ಬರ ತಯಾರಿಕೆ ಮಾಡುತ್ತ ಗ್ರಾಮದಲ್ಲಿ ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದಾರೆ. ಕಳೆದ ವರ್ಷದಿಂದ ಗ್ರಾಮದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಮಳೆ ಕೊರತೆ ಮಧ್ಯ ಉತ್ತಮ ಬೆಳೆ ಬೆಳೆಯಲಾಗಿದೆ. ಬೆಳೆಯುವವರಿಗೆ ಮಾಹಿತಿ ಕೂಡ ನೀಡುತ್ತಿದ್ದಾರೆ. ಗ್ರಾಮದಲ್ಲಿ ಅರ್ಧದಷ್ಟು ಜನರು ಸಿರಿಧಾನ್ಯಗಳು ಉಪಯೋಗ ಮಾಡುತ್ತಿರುವುದು ವಿಶೇಷ.

    ರಾಯಚೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಗೋ ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪಿಸಿ ವಸ್ತುಗಳನ್ನು ಮಾರಾಟ ಮಾಡಿ ಸ್ವದೇಶ ವಸ್ತುಗಳ ಬಳಕೆ, ಅವುಗಳ ಲಾಭಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎನ್ನುತ್ತಾರೆ ಸುರೇಶಗೌಡ.

    ಇಲ್ಲಿಯವರೆಗೆ ಲಾಭ ಸಿಗದಿದ್ದರೂ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಿರುವ ಸಮಾಧಾನ ಇದೆ ಎನ್ನುತ್ತಾರೆ. ರಾಜೀವ್ ದೀಕ್ಷಿತ್ ಅವರ ಪ್ರೇರಣೆಯಿಂದ ಪ್ರತಿಯೊಬ್ಬರೂ ಗೋ ಉತ್ಪನ್ನಗಳ ಬಳಕೆ ಮಾಡಬೇಕು ಮತ್ತು ಗ್ರಾಮೀಣ ಭಾಗದ ಜನರಲ್ಲಿ ಸ್ಥಳಿಯವಾಗಿ ಉದ್ಯೋಗ ಸಿಗಬೇಕು ಎನ್ನುವ ಸದುದ್ದೇಶ ಹೊಂದಿದ್ದಾರೆ. (ಸಂಪರ್ಕಕ್ಕೆ: ಡಾ.ಅಶೋಕ 89701 96502; ಸುರೇಶ ಗೌಡ 9880670301)

    ಜನರಲ್ಲಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡುತ್ತಿದೆ. ಆರೋಗ್ಯದ ದೃಷ್ಟಿಯಿಂದ ಗೋ ಉತ್ಪನ್ನಗಳನ್ನು ಬಳಕೆ ಮಾಡಬೇಕು. ಜನರು ಈ ವಸ್ತುಗಳನ್ನು ಉಪಯೋಗ ಮಾಡುವುದರಿಂದ ಆರೋಗ್ಯ ಹೆಚ್ಚುತ್ತದೆ.

    | ಡಾ. ಅಶೋಕ ಜಂಬಲದಿನ್ನಿ

    ಇತ್ತೀಚಿನ ದಿನಗಳಲ್ಲಿ ಜನರು ನಮ್ಮ ಉತ್ಪನ್ನಗಳನ್ನು ಹೆಚ್ಚುಹೆಚ್ಚು ಬಳಕೆ ಮಾಡುತ್ತಿದ್ದಾರೆ. ಸಂತೋಷವಿದೆ. ಮುಂದಿನ ದಿನಗಳಲ್ಲಿ ಇನ್ನೂ ಜಾಸ್ತಿ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ.

    | ಸುರೇಶಗೌಡ ಜಂಬಲದಿನ್ನಿ

    | ವೀರೇಶ ಹರಕಂಚಿ ಸಿರವಾರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts