ಲೋಕಸಭೆ ಮತ ಎಣಿಕೆಗೆ ಸಿದ್ಧತೆ ಪೂರ್ಣ

ವಿಜಯವಾಣಿ ಸುದ್ದಿಜಾಲ ಧಾರವಾಡ

ಲೋಕಸಭೆ ಹಾಗೂ ಕುಂದಗೋಳ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಮೇ 23ರಂದು ನಡೆಯಲಿದೆ. ಮತ ಎಣಿಕೆಗೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 23ರಂದು ಬೆಳಗ್ಗೆ 8 ಗಂಟೆಗೆ ಎಲ್ಲ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಮತಯಂತ್ರ ಇಟ್ಟಿರುವ ಸ್ಟ್ರಾಂಗ್ ರೂಂಗಳನ್ನು ತೆರೆದು ಮತ ಎಣಿಕೆ ಆರಂಭಿಸಲಾಗುವುದು. ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯವು 8 ಕೊಠಡಿಗಳಲ್ಲಿ, ಪ್ರತಿಯೊಂದರಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಕೃಷಿ ವಿವಿಯ ಅಗ್ರೋನಮಿ ವಿಭಾಗದ ಕಟ್ಟಡದಲ್ಲಿ ಅಂಚೆ ಮತಪತ್ರ ಹಾಗೂ ಸೇವಾ ಮತದಾರರ ಅಂಚೆ ಮತಯಂತ್ರಗಳ ಎಣಿಕೆ ಜರುಗುವುದು. ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಚುನಾವಣಾಧಿಕಾರಿ ನೀಡಿರುವ ಗುರುತಿನ ಪತ್ರ ಕಡ್ಡಾಯ ಎಂದರು.

ಮತ ಎಣಿಕಾ ಕೇಂದ್ರದೊಳಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಎಣಿಕೆಯ ಪ್ರಗತಿಯನ್ನು ಪಬ್ಲಿಕ್ ಅಡ್ರೆಸ್ ಸಿಸ್ಟಂ ಮೂಲಕ ಪ್ರತಿ ಸುತ್ತಿನ ಹಂತಕ್ಕೆ ತಿಳಿಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಡಾ. ಸತೀಶ ಇಟ್ನಾಳ, ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿಸಿಪಿ ನಾಗೇಶ ಸುದ್ದಿಗೋಷ್ಠಿಯಲ್ಲಿದ್ದರು.

ಕುಂದಗೋಳ ಕ್ಷೇತ್ರದಲ್ಲಿ 214 ಮತಗಟ್ಟೆ: ಮೇ 19ರಂದು ಕುಂದಗೋಳ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಜರುಗಲಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯುವುದು. ಕ್ಷೇತ್ರದಲ್ಲಿ 214 ಮತಗಟ್ಟೆ ತೆರೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಹಾಗೂ ನೋಟಾ ಇದೆ. ಅಗತ್ಯ ಮತಯಂತ್ರಗಳನ್ನು ಮತಗಟ್ಟೆ ಕೇಂದ್ರಗಳಿಗೆ ರವಾನಿಸಲಾಗಿದೆ. ಜಿಲ್ಲಾ ಮತದಾರರ ಸಹಾಯವಾಣಿಗೆ 1564 ಕರೆಗಳು ಬಂದಿವೆ. ಕ್ಷೇತ್ರದಲ್ಲಿ 97,526 ಪುರುಷ, 91,907 ಮಹಿಳೆಯರು, 4 ತೃತೀಯ ಲಿಂಗಿಗಳು ಸೇರಿ 1,89,437 ಮತದಾರರಿದ್ದಾರೆ. 2487 ಅಂಗವಿಕಲ ಮತದಾರರಿದ್ದು, ಅಗತ್ಯ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅಂಧ ಮತದಾರರಿಗೆ ಮತಗಟ್ಟೆಗೊಂದರಂತೆ ಪೀನ ಮಸೂರ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ 16 ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಮೇ 17ರ ಸಂಜೆ 6ರಿಂದ 19ರಂದು ಮಧ್ಯರಾತ್ರಿ 12ರವರೆಗೆ ಕುಂದಗೋಳ ಕ್ಷೇತ್ರದಲ್ಲಿ ಹಾಗೂ ಮತ ಎಣಿಕೆ ಅಂಗವಾಗಿ ಜಿಲ್ಲೆಯಾದ್ಯಂತ ಮೇ 22ರ ಮಧ್ಯರಾತ್ರಿ 12ರಿಂದ 23ರ ಮಧ್ಯರಾತ್ರಿ 12ರವರೆಗೆ ಮದ್ಯಪಾನ, ಮಾರಾಟ ನಿಷೇಧಿಸಲಾಗಿದೆ ಎಂದರು.

7 ವಿವಿ ಪ್ಯಾಟ್​ಗಳ ಸ್ಲಿಪ್ ಎಣಿಕೆ:ಮತದಾನ ಖಾತ್ರಿಗೆ ವಿವಿ ಪ್ಯಾಟ್​ಗಳನ್ನು ಬಳಸಲಾಗಿದೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆಯ್ದ 5 ವಿವಿ ಪ್ಯಾಟ್​ಗಳ ಸ್ಲಿಪ್​ಗಳನ್ನು ಎಣಿಸಬೇಕು ಎಂದು ಚುನಾವಣಾ ಆಯೋಗದ ನಿರ್ದೇಶನವಿದೆ. ಅದರೊಂದಿಗೆ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 198 ಹಾಗೂ 249ರ ವ್ಯಾಪ್ತಿಯಲ್ಲಿ ಅಣಕು ಮತದಾನದ ಫಲಿತಾಂಶ ಕ್ಲಿಯರ್ ಮಾಡದೇ ಮತದಾನ ಆರಂಭಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಎರಡೂ ಮತಗಟ್ಟೆಗಳ ಮತ ಎಣಿಕೆ ವೇಳೆ ಸಿಯು ಮತ್ತು ವಿದ್ಯುನ್ಮಾನ ಮತಯಂತ್ರದ ಅಂಕಿ- ಅಂಶಗಳನ್ನು ಪರಿಗಣಿಸದೇ ವಿವಿ ಪ್ಯಾಟ್ ಮತಯಂತ್ರದಲ್ಲಿಯ ಪೇಪರ್ ಸ್ಲಿಪ್​ಗಳ ಅಂಕಿ- ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಸದರಿ ಮತಗಟ್ಟೆಗಳ ವಿವಿ ಪ್ಯಾಟ್ ಮತಯಂತ್ರಗಳ ಪೇಪರ್ ಸ್ಲಿಪ್​ಗಳ ಮತ ಎಣಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

72.19 ಲಕ್ಷ ರೂ. ನಗದು, ವಸ್ತು ವಶ: ಕುಂದಗೋಳ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ 42 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 22,091 ರೂ. ಮೌಲ್ಯದ 35.29 ಲೀ. ಮದ್ಯ, 30,00,480 ರೂ. ಮೌಲ್ಯದ 1.11 ಕೆಜಿ ಬಂಗಾರ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ಷೇತ್ರದಾದ್ಯಂತ ಒಟ್ಟು 72,19,591 ರೂ. ಮೌಲ್ಯದ ನಗದು, ಚಿನ್ನ, ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *