ಗಜಪಡೆಯ ವಾಸ್ತವ್ಯಕ್ಕಾಗಿ ಭರದ ಸಿದ್ಧತೆ

ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಯ ವಾಸ್ತವ್ಯಕ್ಕಾಗಿ ನಗರದ ಅರಮನೆ ಅಂಗಳದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಗಜಪಯಣ ಕಾರ್ಯಕ್ರಮಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಆ.22ರಂದು ಬೆಳಗ್ಗೆ 11ಕ್ಕೆ ಸಚಿವ ಆರ್.ಅಶೋಕ್ ಚಾಲನೆ ನೀಡಲಿದ್ದಾರೆ.

ಈ ಸಲ 14 ಆನೆಗಳು ಆಗಮಿಸಲಿವೆ. ಈ ಪೈಕಿ ಮೊದಲ ತಂಡದಲ್ಲಿ ಬರುವ ಅರ್ಜುನ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ್ ಹಾಗೂ ವಿಜಯ ಗಜಪಯಣದಲ್ಲಿ ಹೆಜ್ಜೆ ಹಾಕಲಿವೆ. ಬಲರಾಮ, ಕಾವೇರಿ, ವಿಕ್ರಮ, ಗೋಪಿ, ದುರ್ಗಪರಮೇಶ್ವರಿ, ಜಯಪ್ರಕಾಶ್, ಲಕ್ಷ್ಮಿ, ರೋಹಿತ್ ಆನೆಗಳು 2ನೇ ಹಂತದಲ್ಲಿ ನಗರಕ್ಕೆ ಬರಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್ ತಿಳಿಸಿದ್ದಾರೆ.

ಕಾಡಿನಿಂದ ನಾಡಿಗೆ ಬರುವ ಆನೆಗಳು ನಗರದ ಹೊರವಲಯದ ಅಲೋಕದಲ್ಲಿ ವಾಸ್ತವ್ಯ ಹೂಡಲಿವೆ. ನಂತರ ಅಂಬಾರಿ ಹೊರುವ ಅರ್ಜುನ ಆನೆ ನೇತೃತ್ವದಲ್ಲಿ ಅವುಗಳು ಅರಮನೆ ಆವರಣಕ್ಕೆ ಪ್ರವೇಶಿಸಲಿವೆ. ಇವುಗಳೊಂದಿಗೆ ಮಾವುತರ ಮತ್ತು ಕವಾಡಿಗಳ ಕುಟುಂಬವು ಸಹ ಬರಲಿದೆ. ಈ ಕುಟುಂಬಗಳು ವಾಸ್ತವ್ಯ ಹೂಡಲು ಟೆಂಟ್, ಮಕ್ಕಳಿಗೆ ಟೆಂಟ್ ಶಾಲೆಯನ್ನೂ ನಿರ್ಮಾಣ ಮಾಡಲಾಗುತ್ತದೆ.

ಈಗಾಗಲೇ ಮಾವುತರಿಗೆ ಮತ್ತು ಕಾವಾಡಿಗಳಿಗೆ ಎಲ್ಲಿ ಶೆಡ್ ನಿರ್ಮಾಣ ಮಾಡಬೇಕೆಂಬುದರ ಬಗ್ಗೆ ಮತ್ತು ಆನೆಗಳನ್ನು ಕಟ್ಟಿ ಹಾಕುವ ಸ್ಥಳಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಇಲ್ಲಿರುವ ಕಾಯಂ ಕಾಂಕ್ರೀಟ್ ಪ್ಲಾಟ್‌ಾರಂ ಮೇಲೆ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ಸೌಲಭ್ಯ ಸೇರಿ ಇತರ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗುತ್ತಿವೆ. ಅರಮನೆ ಅಂಗಳದಲ್ಲೂ ಸ್ವಚ್ಛತೆ ಕಾರ್ಯ ನಡೆದಿದೆ.

ಗಜಪಡೆ ಅರಮನೆ ಆವರಣಕ್ಕೆ ಪ್ರವೇಶಿಸಿದ ಬಳಿಕ ಇವುಗಳನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಪುಂಡಾಟಿಕೆ ನಡೆಸುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಆನೆಗಳು ಬೀಡುಬಿಡುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆನೆಗಳಿಗೆ ಆಹಾರ ತಯಾರಿಸುವ ಸ್ಥಳ ಸೇರಿ ಪ್ರಮುಖ ಆಯ್ದ ಜಾಗಗಳಲ್ಲಿ ಇದನ್ನು ಅಳವಡಿಕೆ ಮಾಡಲಾಗುತ್ತಿದೆ.

ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಇದ್ದರೂ ದೂರದಿಂದ ಬರುವ ಪ್ರವಾಸಿಗರು ಫೋಟೊ ತೆಗೆಯುವ, ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಆನೆಗಳ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಕೇವಲ ಆನೆಗಳನ್ನಷ್ಟೆ ವೀಕ್ಷಿಸಿ ತೆರಳುವ ಬದಲು ಪುಂಡಾಟಿಕೆ ನಡೆಸುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಲು ಇದು ಅನುಕೂಲವಾಗಿದೆ.

Leave a Reply

Your email address will not be published. Required fields are marked *