ಕೃಷ್ಣನೂರಲ್ಲಿ ಜನ್ಮಾಷ್ಟಮಿ ಸಿದ್ಧತೆ

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಪ್ರಾರಂಭಗೊಂಡಿದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಕ್ಷಾಂತರ ಉಂಡೆ-ಚಕ್ಕುಲಿ ತಯಾರಿ ಆ.20ರಿಂದ ಪ್ರಾರಂಭವಾಗಲಿದೆ. 

ರಾಜ್ಯದ ವಿವಿಧ ಭಾಗದಿಂದ ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಇದರ ಅಂಗವಾಗಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಲಾಗಿತ್ತು.

1.5 ಲಕ್ಷ ಚಕ್ಕುಲಿ: ಶ್ರೀ ಕೃಷ್ಣಮಠದಿಂದ ಭಕ್ತರಿಗೆ ಹಾಗೂ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ದಲ್ಲಿ ಉಂಡೆ, ಚಕ್ಕುಲಿ ಪ್ರಸಾದವನ್ನು ವಿಶೇಷವಾಗಿ ಕಳುಹಿಸಿಕೊಡಲಾಗುತ್ತದೆ. ಅದಕ್ಕಾಗಿ 1.5 ಲಕ್ಷ ಚಕ್ಕುಲಿ ಹಾಗೂ 1 ಲಕ್ಷ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಅನ್ನಬ್ರಹ್ಮ ಹಾಗೂ ಮಧ್ವಾಂಗಣದಲ್ಲಿ ನೂರಕ್ಕೂ ಹೆಚ್ಚು ಬಾಣಸಿಗರು ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಿಸಲಿದ್ದಾರೆ.

ಅಷ್ಟಮಿಯಂದು ಕೃಷ್ಣ ದೇವರಿಗೆ ಸಮರ್ಪಿಸಲು ಮಡಿಯಲ್ಲಿ ತಯಾರಿಸುವ ಲಡ್ಡಿಗೆ ಮುಹೂರ್ತ 23ರಂದು ಬೆಳಗ್ಗೆ 9.30ಕ್ಕೆ ಭೋಜನ ಶಾಲೆಯಲ್ಲಿ ನಡೆಯಲಿದೆ. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ರಥಬೀದಿಯಲ್ಲಿ ಗುರ್ಜಿ ಸಿದ್ಧತೆ: ವಿಟ್ಲಪಿಂಡಿ ಉತ್ಸವದಲ್ಲಿ ಮೊಸರು ಕುಡಿಕೆ ಹೊಡೆಯಲು ರಥಬೀದಿಯಲ್ಲಿ ಗುರ್ಜಿಗಳನ್ನು ನಿಲ್ಲಿಸಲಾಗುತ್ತಿದೆ. 13 ಮರದ ತ್ರಿಕೋನಾಕೃತಿಯ ಗುರ್ಜಿಗಳನ್ನು ನಿರ್ಮಿಸಿ ಮೊಸರು ಕುಡಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಶ್ರೀ ಕೃಷ್ಣಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ಮೊಸರುಕುಡಿಕೆ ಒಡೆಯುವ ಕಾಯಕ ನಿರ್ವಹಿಸುತ್ತಾರೆ. ರಥಬೀದಿ ತೆಂಕ ಪೇಟೆ ಮತ್ತು ಕನಕ ಗೋಪುರದ ಕೆಳಗೆ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ.

ಎಸ್‌ಪಿಯಿಂದ ಭದ್ರತಾ ಪರಿಶೀಲನೆ: ಕರಾವಳಿಗೆ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಕೃಷ್ಣ ಮಠಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಎಸ್‌ಪಿ ನಿಶಾ ಜೇಮ್ಸ್ ಕೃಷ್ಣಾಷ್ಟಮಿ ಮತ್ತು ವಿಟ್ಲ ಪಿಂಡಿ ಉತ್ಸವದಲ್ಲಿ ಕೈಗೊಳ್ಳಬೇಕಾದ ಭದ್ರತೆ ಪರಿಶೀಲನೆ ನಡೆಸಿದರು. ಬಳಿಕ ಗೀತಾ ಮಂದಿರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಮಠದ ಆಡಳಿತ ಮಂಡಳಿ ಜತೆಗೆ ಸಭೆ ನಡೆಸಿ, ಸಲಹೆ ಸೂಚನೆ ನೀಡಿದರು. ಎಎಸ್‌ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *