ಕೊಳ್ಳೇಗಾಲ: ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಗುರುವಾರ ಶಾಸಕ ಆರ್.ನರೇಂದ್ರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಕೈಗೊಂಡಿರುವ ಸಿದ್ಧತೆಗಳನ್ನು ಪರಾಮರ್ಶಿಸಿದರು.
ಜಾತ್ರೆ ಜ.10 ರಿಂದ ಜ.14 ರವರೆಗೆ ನಡೆಯುವ ಹಿನ್ನೆಲೆ ಕೈಗೊಳ್ಳಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಬೇಕು. ಪೂರ್ವ ತಯಾರಿ ಪರಿಪೂರ್ಣವಾಗಿ ಮಾಡಿಕೊಳ್ಳಬೇಕು ಎಂದು ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಸೂಚಿಸಿದರು.
ಗಡಿನಾಡಿನ ಹಬ್ಬವಾದ ಜಾತ್ರೆಗೆ ಮೊದಲ ದಿನವೇ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುವ ಕಾರಣ ಸೌಲಭ್ಯಗಳಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಭಕ್ತರ ಆರೋಗ್ಯ ರಕ್ಷಣೆ ಸಂಬಂಧ ಎಚ್ಚರವಹಿಸಬೇಕು. ಜಾತ್ರೆಗೆ ಬರುವ ಭಕ್ತರಿಗೆ ಸಮರ್ಪಕ ಕನಿಷ್ಠ 150ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಜಾತ್ರೆಗೆ ಬರುವ ಜನರು ದೇವಾಲಯದ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಲು ಅಗತ್ಯ ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಆಡಳಿತದಿಂದ ಮಾಡಿಸಬೇಕು. ಶೌಚಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ನಿಖಿತ ಎಂ.ಚಿನ್ನಸ್ವಾಮಿ ಅವರಿಗೆ ಸೂಚನೆ ನೀಡಿದರು.
ಭಕ್ತರು ಸ್ನಾನ ಮಡಿ ಮಾಡಿಕೊಳ್ಳಲು ಜಾತ್ರೆ ಭಾಗದಲ್ಲಿರುವ ಹಳ್ಳ ಮತ್ತು ಚೆಕ್ ಡ್ಯಾಂಗಳಿಗೆ ಕಬಿನಿ ನಾಲೆಯಿಂದ ನೀರು ಬಿಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸ್ಕೂಟರ್, ಕಾರು ಹಾಗೂ ಭಾರಿ ವಾಹನಗಳಿಗೆ ಚಿಕ್ಕಲ್ಲೂರು ಸಮೀಪದ ಸುಂಡ್ರಹಳ್ಳಿ ಗ್ರಾಮದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಚಿಕ್ಕಲ್ಲೂರಿಗೆ ಸಂಪರ್ಕ ಕಲ್ಪಿಸುವ ಪಾಳ್ಯ ಮಾರ್ಗದ ರಸ್ತೆಯ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಕ್ರಮವಹಿಸಲಾಗುವುದು. ಜಾತ್ರೆಯ ಸ್ಥಳದಲ್ಲಿ 2 ಆಂಬುಲೆನ್ಸ್, 24ಗಂಟೆ ತಾತ್ಕಾಲಿಕ ಆರೋಗ್ಯ ಸೇವೆ, ಸಮರ್ಪಕ ವಿದ್ಯುತ್ ನಿರ್ವಹಣೆ, ಅಗ್ನಿಶಾಮಕದಳದ ವಾಹನ ಸ್ಥಳದಲ್ಲಿ ಇರುವಂತೆ ಕ್ರಮವಹಿಸಲಾಗುವುದು ಎಂದರು.
ಪ್ರಾಣಿ ಸಾಗಣೆ, ಬಲಿ ನಿಷೇಧ: ಹೈಕೋರ್ಟ್ ಆದೇಶದ ಪ್ರಕಾರ ಶ್ರೀ ಸಿದ್ದಪ್ಪಾಜಿ ದೇವಾಲಯದ ಆವರಣದ 1.5ಕಿಮೀ ಸುತ್ತಲಿನ ಪ್ರದೇಶದಲ್ಲಿ ಪ್ರಾಣಿ ಸಾಗಣೆ, ಬಲಿಯನ್ನು ನಿಷೇಧಿಸಲಾಗಿದೆ. ಜಾತ್ರೆ ಪ್ರದೇಶದ ಸುತ್ತಲೂ 8 ಚೆಕ್‌ಪೋಸ್ಟ್ ನಿರ್ಮಿಸಿ ಅಲ್ಲಿಗೆ 18ಅಧಿಕಾರಿಗಳನ್ನು ನಿಯೋಜಿಸಲಾಗುವುದು. ದಿನದ 3ಪಾಳಿಯಲ್ಲಿ ತಲಾ 6ಜನರು ತಪಾಸಣಾ ಕಾರ್ಯ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಲಕ್ಷಾಂತರ ಜನರು ಭೇಟಿ ಕೊಡುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳು ಎಚ್ಚರವಹಿಸಬೇಕು. ದೇಗುಲದ ಆವರಣದಲ್ಲಿ 20ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದ್ದು ಜತೆಗೆ ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಪ್ರಾಣಿ ಸಾಗಣೆ ತಡೆಗೆ ಸೂಕ್ಷ್ಮವಾಗಿ ನಿಗಾ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಚ್.ನಾರಾಯಣ್‌ರಾವ್, ತಹಸೀಲ್ದಾರ್ ಕುನಾಲ್, ಡಿವೈಎಸ್‌ಪಿ ನವೀನ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಶೋಕ್, ಚಿಕ್ಕಲ್ಲೂರು ಹಳೆ ಮಠದ ಸಂಚಾಲಕ ಚೇತನ್ ಇತರರು ಹಾಜರಿದ್ದರು.