ಚೀನಾದ ಕುಟಿಲ ಯೋಜನೆಗಳಿಂದ ಕೇಡುಗಾಲ

ಚೀನಾದ ಕುಟಿಲ ಯೋಜನೆಗಳಿಗೆ ಪ್ರತಿಯಾಗಿ ಅಮೆರಿಕದ ರಕ್ಷಣಾ ಹಿತಾಸಕ್ತಿಗಳು ಮತ್ತು ಜಾಗತಿಕ ಜವಾಬ್ದಾರಿಗಳ ಕುರಿತಾಗಿ ಯಾವುದೇ ಮಹತ್ವದ ತೀರ್ವನಗಳನ್ನು ಕೈಗೊಳ್ಳಲು ಹಿಂಜರಿದ ಅಧ್ಯಕ್ಷ ಒಬಾಮರ ನೀತಿಗಳು ಚೀನಾದ ಮಹತ್ವಾಕಾಂಕ್ಷಿ ಅಧ್ಯಕ್ಷನ ಹುಮ್ಮಸ್ಸನ್ನು ತಾರಾಮಾರು ಏರಿಸಿಬಿಟ್ಟವು. ಅದರಿಂದಾಗಿಯೇ ಚೀನಾ ‘ಜಾಗತಿಕ ಕಂಟಕ’ವಾಗುವ ಹಾದಿಯಲ್ಲಿ ಎಗ್ಗಿಲ್ಲದೆ ಸಾಗಿದ್ದು.

‘ಅಲ್ಲೊಬ್ಬ ದೈತ್ಯ ಮಲಗಿದ್ದಾನೆ. ಮಲಗಿರಲಿ ಬಿಡಿ. ಅವನು ಎದ್ದಾಗ ಇಡೀ ಜಗತ್ತನ್ನೇ ಅಲುಗಿಸಿಬಿಡುತ್ತಾನೆ!’ ಇದು ಚೀನಾದ ಬಗ್ಗೆ ಎರಡು ಶತಮಾನಗಳ ಹಿಂದೆ ನೆಪೊಲಿಯಾನ್ ಬೊನಪಾರ್ತ್ ಹೇಳಿದ ಎನ್ನಲಾದ ಮಾತು. ಒಂದಿಡೀ ಶತಮಾನದ ಯೂರೋಪಿಯನ್ ಮತ್ತು ಜಪಾನಿ ಸೇನಾ ಒತ್ತಡ ಮತ್ತು ಆಂತರಿಕ ಅರಾಜಕತೆಯಿಂದ ಜಝುರಿತವಾಗಿದ್ದ ಚೀನೀ ದೈತ್ಯ ‘ಎದ್ದು’ ಇದೇ ಅಕ್ಟೋಬರ್ 1ಕ್ಕೆ ಎಪ್ಪತ್ತು ವರ್ಷಗಳಾದವು. 1949 ಅಕ್ಟೋಬರ್ 1 ರಂದು ಯಶಸ್ವಿ ಕಮ್ಯೂನಿಸ್ಟ್ ಕ್ರಾಂತಿಯೊಂದಿದೆ ಸುಭದ್ರ ಕೇಂದ್ರ ಸರ್ಕಾರವನ್ನು ಪಡೆದುಕೊಂಡ ಚೀನಾ, ಆ ಮಹಾನ್ ಫ್ರೆಂಚ್ ಸಮರಚತುರ ಹೇಳಿದ್ದಂತೇ ಕಳೆದ ಏಳು ದಶಕಗಳಲ್ಲಿ ಜಗತ್ತನ್ನು ಸಾಕಷ್ಟು ಅಲುಗಿಸಿಯಾಗಿದೆ. ಈ ಚೀನೀ ‘ಅಲುಗಿಸುವಿಕೆ’ಯ ಒಂದು ವಿಹಂಗಮ ನೋಟ ಇಂದಿನ ‘ಜಗದಗಲ’ದಲ್ಲಿ.

ಚೀನಾ ಜಗತ್ತನ್ನು ಅಲುಗಿಸಬಲ್ಲುದೆಂಬ ಮೊದಲ ಸೂಚನೆ ಸಿಕ್ಕಿದ್ದು 1950ರ ಜೂನ್​ನಲ್ಲಿ ಆರಂಭವಾದ ಕೊರಿಯನ್ ಯುದ್ಧದಲ್ಲಿ. ಕಮ್ಯೂನಿಸ್ಟ್ ಉತ್ತರ ಕೊರಿಯಾದ ಪರ ನಿಂತ ಚೀನಾ, ಅಮೆರಿಕದ ಆಧುನಿಕ ಹಾಗೂ ಅಗಾಧ ಶಸ್ತ್ರಾಸ್ತ್ರಗಳ ವಿರುದ್ಧ ತನ್ನ ಜನಬಾಹುಳ್ಯವನ್ನೇ ಒಂದು ಪ್ರಬಲ ಅಸ್ತ್ರವಾಗಿ ಬಳಸಿತು. ರೈತಾಪಿ ವರ್ಗದಿಂದಲೇ ತುಂಬಿದ್ದ ಅಂದಿನ ಚೀನೀ ಸೇನೆ ಯುದ್ಧದಲ್ಲಿ ಅಮೆರಿಕನ್ನರಿಗಿಂತ ಏಳು ಪಟ್ಟು ಹೆಚ್ಚು ಸೈನಿಕರನ್ನು ಕಳೆದುಕೊಂಡರೂ ಹಿಂದೆಗೆಯದೆ ಉತ್ತರ ಕೊರಿಯಾದಿಂದ ಅಮೆರಿಕನ್ ಸೇನೆಯನ್ನು ಹೊರಗಟ್ಟುವಲ್ಲಿ ಯಶಸ್ವಿಯಾದದ್ದು ಶೀತಲಸಮರದ ಗತಿಯನ್ನೇ ಬದಲಿಸಿ ವಿಶ್ವನಾಯಕನ ಹಮ್ಮಿನಲ್ಲಿ ಬೀಗುತ್ತಿದ್ದ ಅಮೆರಿಕವನ್ನು ಕಂಗೆಡಿಸಿತು. ಮುಂದಿನ ವರ್ಷಗಳಲ್ಲಿ, ಫ್ರೆಂಚ್ ವಸಾಹತುಶಾಹಿಯ ವಿರುದ್ಧ ಕಾದಾಡುತ್ತಿದ್ದ ವಿಯೆಟ್ನಾಮೀ ಕಮ್ಯೂನಿಸ್ಟ್ ಸ್ವಾತಂತ್ರ್ಯಹೋರಾಟಗಾರರ ಬೆಂಬಲಕ್ಕೆ ಚೀನಾ ನಿಂತಾಗ ಆಗ್ನೇಯ ಏಷ್ಯಾದ ಅಂದಿನ ರಾಜಕೀಯ-ಸೇನಾ ವಾಸ್ತವಗಳು ಸಂಪೂರ್ಣವಾಗಿ ಬದಲಾಗಿಹೋದವು. ಇಂಡೋಚೀನಾ ಪರ್ಯಾಯದ್ವೀಪ ಕಮ್ಯೂನಿಸ್ಟರ ಹಿಡಿತಕ್ಕೆ ಸಿಲುಕಿಹೋಗುವುದನ್ನು ತಡೆಯಲು ವಿಯೆಟ್ನಾಂ ಕೆಸರುಗುಂಡಿಯಲ್ಲಿ ಕಾಲಿಟ್ಟ ಅಮೆರಿಕ ಎರಡು ದಶಕಗಳ ವ್ಯರ್ಥ ಹೋರಾಟದ ನಂತರ ಅಲ್ಲಿಂದ ಹೊರಬರಲು ಚೀನಾದ ಮುಂದೆಯೇ ಮೊರೆಯಿಡುವಂತಾಯಿತು. ಜಗತ್ತನ್ನು ಅಲುಗಿಸುವುದೆಂದರೆ ಇದು!

ಈ ನಡುವೆ, ಬಂಡವಾಳಶಾಹಿ ಮತ್ತು ಕಮ್ಯೂನಿಸ್ಟ್ ವ್ಯವಸ್ಥೆಗಳ ನಡುವೆ ‘ಸಹಬಾಳ್ವೆ’ಯನ್ನು ಪ್ರತಿಪಾದಿಸಿದ ಸೋವಿಯೆತ್ ನೇತಾರ ನಿಕಿತಾ ಕೃಶ್ಚೆವ್​ರ ನೀತಿಗಳನ್ನು ’ಛಿಡಜಿಠಜಿಟ್ಞಜಿಠಠಿ’ ಎಂದು ಉಗ್ರವಾಗಿ ಖಂಡಿಸಿದ ಮಾವೋ ಝೆದಾಂಗ್ ಅಂತಾರಾಷ್ಟ್ರೀಯ ರಂಗದಲ್ಲಿ ಚೀನಾವನ್ನು ಸ್ವತಂತ್ರ ಹಾದಿಗಿಳಿಸಿದರು. ಅಂತಾರಾಷ್ಟ್ರೀಯ ರಾಜಕಾರಣದ ವಿದ್ವಾಂಸರು ಜಗತ್ತನ್ನು ವಿಭಾಗಿಸಿದ್ದು ಅಮೆರಿಕ ಮತ್ತು ಪಶ್ಚಿಮ ಯೂರೋಪಿಯನ್ ಪ್ರಜಾಪ್ರಭುತ್ವವಾದಿ ದೇಶಗಳನ್ನು ‘ಪ್ರಥಮ ಜಗತ್ತು’ ಎಂದೂ, ಸೋವಿಯೆತ್ ಯೂನಿಯನ್, ಚೀನಾ ಮತ್ತು ಪೂರ್ವ ಯೂರೋಪಿನ ಕಮ್ಯೂನಿಸ್ಟ್ ಸರ್ವಾಧಿಕಾರಿ ದೇಶಗಳನ್ನು ‘ದ್ವಿತೀಯ ಜಗತ್ತು’ ಎಂದೂ ಹಾಗೂ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಉಳಿದೆಲ್ಲ ದೇಶಗಳನ್ನು ‘ತೃತೀಯ ಜಗತ್ತು’ ಎಂದಾಗಿ. ಇದನ್ನು ತಿರಸ್ಕರಿಸಿದ ಮಾವೋ ಮೂರು ಜಗತ್ತುಗಳ ಪರಿಕಲ್ಪನೆಯನ್ನೇ ಬದಲಾಯಿಸಿ ಚೀನಾವನ್ನು ‘ತೃತೀಯ’ ಜಗತ್ತಿನಲ್ಲಿಟ್ಟರು. 1960ರ ದಶಕದ ಆರಂಭದಲ್ಲಿ ಅವರು ರೂಪಿಸಿದ ಈ ಸಿದ್ಧಾಂತದ ಪ್ರಕಾರ ‘ಶೋಷಕ’ ರಾಷ್ಟ್ರಗಳಾದ ಅಮೆರಿಕ ಮತ್ತು ಸೋವಿಯೆತ್ ಯೂನಿಯನ್​ಗಳೆರಡಷ್ಟೇ ‘ಪ್ರಥಮ’ ಜಗತ್ತಿನಲ್ಲಿ, ಅವುಗಳ ಹಿಂಬಾಲಕರಾದ ಪಶ್ಚಿಮ ಮತ್ತು ಪೂರ್ವ ಯೂರೋಪಿಯನ್ ರಾಷ್ಟ್ರಗಳು ‘ದ್ವಿತೀಯ’ ಜಗತ್ತಿನಲ್ಲಿ, ಚೀನಾವೂ ಸೇರಿದಂತೆ ಉಳಿದೆಲ್ಲ ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳು ‘ತೃತೀಯ’ ಜಗತ್ತಿನಲ್ಲಿ!

ತನ್ನ ಘನಿಷ್ಟ ಸಹಯೋಗಿ ಸೋವಿಯೆತ್ ಯೂನಿಯನ್​ನಿಂದ ಹೀಗೆ ಚೀನಾ ದೂರ ಸರಿದದ್ದು ಪ್ರಚಲಿತ ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ ಚೀನೀ ನಾಯಕತ್ವ ತೋರಿದ ವಾಸ್ತವವಾದಿ ನಿಲುವಿಗೆ ದ್ಯೋತಕವಾಗುತ್ತದೆ. ಚೀನಾಗೆ ವಿಶ್ವದಲ್ಲಿ ಎರಡನೆಯ ಸೂಪರ್ ಪವರ್ ಸ್ಥಾನ ದೊರಕಿಸಲು ಸೋವಿಯೆತ್ ಯೂನಿಯನ್ ಅನ್ನು ನಿರ್ವೀರ್ಯಗೊಳಿಸುವುದು ಅಗತ್ಯ ಮತ್ತು ಈ ಕ್ರಿಯೆ ಆರ್ಥಿಕವಾಗಿ ಬಲಾಢ್ಯವಾಗಿದ್ದ ಅಮೆರಿಕವನ್ನು ನಿರ್ವೀರ್ಯಗೊಳಿಸುವುದಕ್ಕಿಂತ ಸುಲಭ ಎಂಬ ಅರಿವು ಮಾವೋರಿಗಿತ್ತು. ಈ ನೀತಿಯ ಅನುಷ್ಠಾನದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಟ್ಟ ಮಾವೋ ಐವತ್ತರ ದಶಕದ ಅಂತ್ಯದಲ್ಲಿ ಮಾಸ್ಕೋ ಜತೆ ಆರಂಭವಾಗಿದ್ದ ಸೈದ್ಧಾಂತಿಕ ಸಂಘರ್ಷವನ್ನು ಮುಂದಿನ ದಶಕದಲ್ಲಿ ಸೇನಾ ಸಂಘರ್ಷದ ಮಟ್ಟಕ್ಕೊಯ್ದರು. ಪರಿಣಾಮವಾಗಿ ಎರಡೂ ಕಮ್ಯೂನಿಸ್ಟ್ ಸೇನೆಗಳು 1969ರ ಮಾರ್ಚ್​ನಲ್ಲಿ ಸೈಬೀರಿಯಾ-ಮಂಚೂರಿಯಾ ಗಡಿಯಂತಿರುವ ಉಸ್ಸೂರಿ ನದಿತೀರದಲ್ಲಿ ಒಂದನ್ನೊಂದು ಎದುರಿಸಿದವು. ಈ ಸಂಘರ್ಷದ ಮೂಲ ಆಸಕ್ತಿಕರ.

ಎರಡು ದೇಶಗಳನ್ನು ನದಿಯೊಂದು ವಿಭಾಗಿಸಿದರೆ ನದಿ ಹರಿವಿನ ನಡುಮಧ್ಯದಲ್ಲಿ ಅಂತಾರಾಷ್ಟ್ರೀಯ ಗಡಿರೇಖೆ ಹಾದುಹೋಗಬೇಕೆನ್ನುವುದು ಜಾಗತಿಕವಾಗಿ ಮಾನ್ಯತೆ ಪಡೆದ ನೀತಿ. ಇದನ್ನು ತಿರಸ್ಕರಿಸಿದ ಮಾಸ್ಕೋ ಇಡೀ ಉಸ್ಸೂರಿ ನದಿ ಸೋವಿಯೆತ್ ಯೂನಿಯನ್​ಗೆ ಸೇರಿದ್ದೆಂದೂ, ಸೋವಿಯೆತ್ ಪರಮಾಧಿಕಾರ ನದಿಯ ಚೀನೀ ದಡದವರೆಗೂ ಹರಡಿರುವುದೆಂದೂ ವಾದಿಸಿ ಚೀನೀ ದಡಕ್ಕೆ ಹತ್ತಿರದಲ್ಲಿದ್ದ ದಮೋನ್​ಸ್ಕಿ ದ್ವೀಪವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಹಲವು ವರ್ಷಗಳ ವಿಫಲ ಮಾತುಕತೆಗಳ ನಂತರ 1969 ಮಾರ್ಚ್​ನ ಒಂದು ನಿರ್ಣಾಯಕ ಬೆಳಗ್ಗೆ ಚೀನಿ ಸೈನಿಕರು ಸೋವಿಯೆತ್ ಠಿಕಾಣೆ ಮೇಲೆ ಹಠಾತ್ ದಾಳಿಯೆಸಗಿ ದಮೋನ್​ಸ್ಕಿ ದ್ವೀಪ ವಶಪಡಿಸಿಕೊಂಡರು. ಆನಂತರ ಮೇ-ಸೆಪ್ಟೆಂಬರ್ ಅವಧಿಯಲ್ಲಿ ಸಾಮರಿಕವಾಗಿ ತಮಗೆ ಅನುಕೂಲಕರವಾಗಿದ್ದ ಕಝಾಕಸ್ತಾನ್-ಝಿನ್​ಜಿಯಾಂಗ್ ಗಡಿಯಲ್ಲಿ ರಷ್ಯನ್ನರು ಯುದ್ಧ ಆರಂಭಿಸಿದರೂ ಅದರಿಂದ ಹೇಳಿಕೊಳ್ಳುವ ಪ್ರಯೋಜನವೇನೂ ಆಗಲಿಲ್ಲ.

ಕಮ್ಯೂನಿಸ್ಟ್ ದೈತ್ಯ ಎರಡರ ನಡುವಿನ ಕದನದಲ್ಲಿ ರೋಚಕ ಸಂಗತಿಯೆಂದರೆ ತಮ್ಮ ಪ್ರಭಾವವಲಯದೊಳಗೆ ತಮಗೆದುರಾದ ಸ್ಪರ್ಧೆ ಸೋವಿಯೆತ್ ನಾಯಕರಲ್ಲಿ ಉಂಟುಮಾಡಿದ ಭೀತಿ. ಕಮ್ಯೂನಿಸ್ಟ್ ಜಗತ್ತಿನ ಯಾವುದೇ ಸದಸ್ಯ ರಾಷ್ಟ್ರ ತನ್ನ ಹಿಡಿತದಿಂದ ಹೊರಗೆ ನುಸುಳಿಹೋಗಲು ಪ್ರಯತ್ನಿಸಿದಾಗಲೆಲ್ಲ ಅದನ್ನು ಬಲಪ್ರಯೋಗದಿಂದ ಹಿಂದಕ್ಕೆಳೆದು ತರುವುದು ಮಾಸ್ಕೋದ ಅದುವರೆಗಿನ ನೀತಿಯಾಗಿತ್ತು. 1952ರಲ್ಲಿ ಪೂರ್ವ ಜರ್ಮನಿ, 1956ರಲ್ಲಿ ಹಂಗೆರಿ ಮತ್ತು 1968ರಲ್ಲಿ ಜೆಕೋಸ್ಲೊವೇಕಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸಿ ಅವುಗಳನ್ನು ಮಾಸ್ಕೋ ಯಶಸ್ವಿಯಾಗಿ ತನ್ನ ಹಿಡಿತದೊಳಗೇ ಇರಿಸಿಕೊಂಡಿತ್ತು. ಆದರೆ ಅಂತಹದೇ ಬಲಪ್ರಯೋಗವನ್ನು ಚೀನಾ ಮೇಲೆ ಎಸಗಲು ಮಾಸ್ಕೋ ಹಿಂಜರಿಯಿತು. ಚೀನಾ ಹೊಂದಿದ್ದ ಅಣ್ವಸ್ತ್ರಗಳಲ್ಲದೆ ವಿಶ್ವದಲ್ಲೇ ಅತಿದೊಡ್ಡ ಸೇನೆಯಾದ ಚೀನಿ ಸೇನೆ ಸಹಾ ರಷ್ಯನ್ನರನ್ನು ಎದೆಗುಂದಿಸಿದವು. ಈ ಬಗ್ಗೆ ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಕರು ಒಂದು ಕುತೂಹಲದ ಕಥೆ ಹೇಳುತ್ತಾರೆ. ನಿಜವೋ, ಕಲ್ಪಿತವೋ, ಅದರ ಪ್ರಕಾರ ಚೀನಾ ಮೇಲೆ ದಾಳಿಯೆಸಗಿ ಅಲ್ಲಿನ ಸರ್ಕಾರವನ್ನು ಬದಲಾಯಿಸುವುದರಲ್ಲಿ ಯಶಸ್ವಿಯಾಗುವುದರ ಸಾಧ್ಯತೆಯನ್ನು ವಿಶ್ಲೇಷಿಸಿ ವರದಿ ಸಲ್ಲಿಸುವಂತೆ ರಕ್ಷಣಾ ತಂತ್ರಜ್ಞರ ತಂಡವೊಂದನ್ನು ಸೋವಿಯೆತ್ ಸರ್ಕಾರ ಕೇಳಿಕೊಂಡಿತು. ಆ ತಂಡ ಸಲ್ಲಿಸಿದ ವರದಿಯ ಸಂಕ್ಷಿಪ್ತ ರೂಪ-‘ಸೋವಿಯೆತ್-ಚೀನಾ ಯುದ್ಧ ಐದು ದಿನಗಳವರೆ ಮಾತ್ರ ನಡೆಯುತ್ತದೆ. ಮೊದಲ ದಿನ ನಾವು ಒಂದುಸಾವಿರ ಚೀನೀಯರನ್ನು ಯುದ್ಧ ಕೈದಿಗಳನ್ನಾಗಿ ತೆಗೆದುಕೊಳ್ಳುತ್ತೇವೆ, ಎರಡನೆಯ ದಿನ ಹತ್ತುಸಾವಿರ, ಮೂರನೆಯ ದಿನ ಒಂದು ಲಕ್ಷ, ನಾಲ್ಕನೆಯ ದಿನ ಹತ್ತು ಲಕ್ಷ, ಐದನೆಯ ದಿನ ಒಂದು ಕೋಟಿ ಚೀನಿಯರನ್ನು ಕೈದಿಗಳನ್ನಾಗಿ ತೆಗೆದುಕೊಳ್ಳುತ್ತೇವೆ, ಮತ್ತು… ಆರನೆಯ ದಿನ ನಾವು ಶರಣಾಗತರಾಗುತ್ತೇವೆ!’ ನಂಬಲಸಾಧ್ಯವೆನಿಸುವ ಈ ವಿಶ್ಲೇಷಣೆಯ ಒಳಾರ್ಥ ಹೀಗಿದೆ-ಯುದ್ಧಕೈದಿಗಳ ಸಂಖ್ಯೆ ದಿನದಿನಕ್ಕೆ ಹತ್ತುಪಟ್ಟು ಹೆಚ್ಚುತ್ತ ಹೋದಂತೆ ಆರನೆಯ ದಿನ ರಷ್ಯನ್ನರು ಹತ್ತುಕೋಟಿ ಚೀನೀ ಕೈದಿಗಳನ್ನು ಸೈಬೀರಿಯಾಗೆ ಕರೆತಂದರೆ ಅಲ್ಲಿ ರಷ್ಯನ್ನರಿಗಿಂತ ಚೀನೀಯರೇ ಅಧಿಕವಾಗಿಬಿಡುತ್ತಾರೆ! ವಿಶಾಲ ಸೈಬೀರಿಯಾ ನಿರಾಯಾಸವಾಗಿ ಚೀನೀ ನೆಲವಾಗಿಬಿಡುತ್ತದೆ! ಇಂಥ ಪರಿಸ್ಥಿತಿಯಲ್ಲಿ ರಷ್ಯನ್ನರಿಗೆ ಶರಣಾಗತಿಯಲ್ಲದೆ ಬೇರಿನ್ನಾವ ಮಾರ್ಗವಿದೆ?!

ಹೀಗೆ ಸೋವಿಯೆತ್ ಯೂನಿಯನ್​ನಿಂದ ದೂರದೂರ ಸರಿಯುತ್ತಲೇ ಮಾವೋ ಝೆದಾಂಗ್ ತಮ್ಮ ದೇಶದ ಅಗತ್ಯವನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡುತ್ತಲೂ ಸಾಗಿದರು. ವಿಯೆಟ್ನಾಂ ಕೆಸರುಗುಂಡಿಯಿಂದ ಹೊರಬರಲು ಅಮೆರಿಕನ್ನರು ವಿಯೆಟ್ನಾಮಿಗಳ ಜತೆ ಶಾಂತಿ ಬಯಸಿದಾಗ ಹನೋಯ್ನಿಂದ ಬಂದ ಉತ್ತರ- ‘ವಿಯೆಟ್ನಾಂಗೆ ಹಾದಿ ಬೀಜಿಂಗ್ ಮೂಲಕ ಸಾಗಿಬರುತ್ತದೆ!’ ತನ್ನ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುವ ಅತ್ಯುತ್ತಮ ವಿಧಾನವೆಂದರೆ ಇತರರ ಮೇಲೆ ತನ್ನನ್ನು ಹೇರುವುದಕ್ಕಿಂತಲೂ ತನ್ನ ಸ್ನೇಹದ ಅಗತ್ಯ ಮನವರಿಕೆಯಾಗುವಂತಹ ಪರಿಸ್ಥಿತಿಯನ್ನು ನಿರ್ವಿುಸುವುದು ಎಂಬ ನೀತಿಯನ್ನು ಮಾವೋರ ಚೀನಾ ಅನುಸರಿಸಿಕೊಂಡು ಬಂದದ್ದು ನಿರೀಕ್ಷಿತ ಫಲ ನೀಡಿತು. ಪರಿಣಾಮವಾಗಿ ಅಧ್ಯಕ್ಷ ರಿಚರ್ಡ್ ನಿಕ್ಸನ್ 1972ರ ಫೆಬ್ರವರಿಯಲ್ಲಿ ಬೀಜಿಂಗ್​ಗೆ ಭೇಟಿ ನೀಡಿ ಚೀನೀಯರತ್ತ ಸ್ನೇಹಹಸ್ತ ಚಾಚಿದರು, ಹನ್ನೊಂದು ತಿಂಗಳ ನಂತರ ವಿಯೆಟ್ನಾಮೀಯರು ಅಮೆರಿಕ ಜತೆ ರಾಜಿಯಾಗಿ ಯುದ್ಧ ನಿಲ್ಲಿಸಲು ಮುಂದಾದರು.

1976ರಲ್ಲಿ ಮಾವೋ ನಿಧನಾನಂತರ ಡೆಂಗ್ ಝಿಯಾವೋ ಪಿಂಗ್ ಮಾರ್ಗದರ್ಶನದಲ್ಲಿ ಚೀನಾ ಅನುಸರಿಸಿದ್ದು ಮತ್ತೊಂದು ವ್ಯಾವಹಾರಿಕ ಮಾರ್ಗ. ಜಾಗತಿಕ ಮಹಾಶಕ್ತಿಯಾಗಲು ಅತ್ಯಗತ್ಯವಾಗಿ ಬೇಕಾಗಿರುವುದು ಸುಭದ್ರ ಅರ್ಥವ್ಯವಸ್ಥೆ ಎಂದು ನಂಬಿದ ದೆಂಗ್ 1978ರ ನಂತರ ಆ ದಿಸೆಯಲ್ಲಿ ದೃಢ ಹೆಜ್ಜೆಗಳನ್ನಿಟ್ಟರು. ಆರ್ಥಿಕ ಬಲಹೀನತೆಯೇ ಸೋವಿಯೆತ್ ಪತನಕ್ಕೆ ಪ್ರಮುಖ ಕಾರಣ ಎಂದು 1980ರ ದಶಕದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಚೀನೀಯರ ಈ ನೀತಿ ಅರ್ಥಪೂರ್ಣ. ಆ ನೀತಿಯಿಂದಾಗಿಯೇ ಚೀನಾ ಹೊಸ ಶತಮಾನದ ಆರಂಭದ ಹೊತ್ತಿಗೆ ವಿಶ್ವದ ಎರಡನೆಯ ಬೃಹತ್ ಅರ್ಥವ್ಯವಸ್ಥೆಯಾಗಿ ಬೆಳೆದುನಿಂತಿತು. ಆದರೆ ಅಲ್ಲಿಂದಾಚೆಗೆ ಚೀನಾ ಹಿಡಿದದ್ದು ನಕಾರಾತ್ಮಕ ಹಾದಿ.

ಅಗಾಧ ಆರ್ಥಿಕ ಸಾಮರ್ಥ್ಯವನ್ನು ಚೀನಾ 2010-11ರ ನಂತರ ಸೇನಾ ಸಾಮರ್ಥ್ಯವನ್ನಾಗಿ ಬದಲಾಯಿಸಿಕೊಳ್ಳುತ್ತ, ನೆರೆಯ ದೇಶಗಳ ಮೇಲೆ ಒತ್ತಡ ಹೇರುತ್ತ, ಪೆಸಿಫಿಕ್ ವಲಯದಲ್ಲಿ ಶಾಂತಿಗೆ ತಾನು ಅತ್ಯಗತ್ಯ ಎನ್ನುವುದನ್ನು ಅಮೆರಿಕಕ್ಕೆ ಮನಗಾಣಿಸತೊಡಗಿತು. ಚೀನಾ ಶಾಂತಿಮಾರ್ಗದಲ್ಲೇ ಜಾಗತಿಕ ಶಕ್ತಿಯ ಸ್ಥಾನಕ್ಕೇರುತ್ತಿದೆ ಎಂಬ ಅಲ್ಲಿಯವರೆಗಿನ ನಂಬಿಕೆಯನ್ನು ಈ ಹೊಸ ನೀತಿ ಅಲುಗಿಸತೊಡಗಿತು. 2013ರಲ್ಲಿ ಕ್ಸಿ ಜಿನ್​ಪಿಂಗ್ ಅಧ್ಯಕ್ಷ ಗಾದಿಗೇರಿದಾಗಿನಿಂದ ಚೀನೀ ನೀತಿಯಲ್ಲಿ ನಕಾರಾತ್ಮಕತೆ ಇನ್ನಷ್ಟು ಉಗ್ರವಾಯಿತು. ಪೂರ್ವಾರ್ಧ ಗೋಲದ ಉದ್ದಗಲಕ್ಕೂ ಚೀನಾ ಹಲವಾರು ದೇಶಗಳಿಗೆ ನಿರರ್ಥಕ ಕೆಲಸಗಳಿಗೆ ಅಗಾಧ ಸಾಲ ಕೊಟ್ಟು, ಅವುಗಳನ್ನು ತನ್ನ ಸಾಲಸಂಕೋಲೆಯಲ್ಲಿ ಸಿಲುಕಿಸಿಕೊಂಡು, ಆ ದೇಶಗಳ ನೆಲದ ಮೇಲೆ ಹತೋಟಿ ಸ್ಥಾಪಿಸುತ್ತಿದೆ. ಅಂದರೆ ಜಿನ್​ಪಿಂಗ್​ರ ಚೀನಾ ವಸಾಹತುಶಾಹಿಯ ಹೊಸ ಯುಗವೊಂದನ್ನು ಆರಂಭಿಸುತ್ತಿದೆ! ನೆಪೊಲಿಯಾನ್ ಹೇಳಿದ್ದ ಅಂತ ಜಗತ್ತನ್ನು ಹೀಗೆ ಹಿಗ್ಗಾಮುಗ್ಗಾ ಅಲುಗಾಡಿಸಹೋಗುವುದೇ? ಇದನ್ನೇ ಅಲ್ಲವೇ ‘ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತದೆ!’ ಎನ್ನುವುದು?

ಚೀನಾದ ಕುಟಿಲ ಯೋಜನೆಗಳಿಗೆ ಪ್ರತಿಯಾಗಿ ಅಮೆರಿಕದ ರಕ್ಷಣಾ ಹಿತಾಸಕ್ತಿಗಳು ಮತ್ತು ಜಾಗತಿಕ ಜವಾಬ್ದಾರಿಗಳ ಕುರಿತಾಗಿ ಯಾವುದೇ ಮಹತ್ವದ ತೀರ್ವನಗಳನ್ನು ಕೈಗೊಳ್ಳಲು ಹಿಂಜರಿದ ಅಧ್ಯಕ್ಷ ಒಬಾಮರ ನೀತಿಗಳು ಚೀನಾದ ಮಹತ್ವಾಕಾಂಕ್ಷಿ ಅಧ್ಯಕ್ಷನ ಹುಮ್ಮಸ್ಸನ್ನು ತಾರಾಮಾರು ಏರಿಸಿಬಿಟ್ಟವು. ಅದರಿಂದಾಗಿಯೇ ಚೀನಾ ‘ಜಾಗತಿಕ ಕಂಟಕ’ವಾಗುವ ಹಾದಿಯಲ್ಲಿ ಎಗ್ಗಿಲ್ಲದೆ ಸಾಗಿದ್ದು. ಇದೆಲ್ಲವೂ ಬದಲಾದದ್ದು, 2017ರ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಶ್ವೇತಭವನವನ್ನು ಪ್ರವೇಶಿಸಿದಾಗ.

ಚೀನಾ ಕುರಿತಾಗಿ ಅಧ್ಯಕ್ಷ ಟ್ರಂಪ್ ಮತ್ತವರ ಸಲಹೆಗಾರರು ಹೆಚ್ಚು ವಾಸ್ತವವಾದಿಗಳಂತೆ ಕಾಣುತ್ತಿದ್ದಾರೆ. ಟ್ರಂಪ್​ರ ಚೀನಾ ಬಗೆಗಿನ ಸಲಹೆಗಾರ ಪೀಟರ್ ನವಾರೋ ಚೀನಾವನ್ನು ವಿಶ್ವದ ಅತ್ಯಂತ ‘ಸಮರ್ಥ ಹಂತಕ’ ಎಂದು ಬಣ್ಣಿಸುತ್ತಾರೆ. ಮುಂದುವರಿದು ಅವರು ಜಿನ್​ಪಿಂಗ್​ರ ಚೀನಾವನ್ನು ‘ಪರಭಕ್ಷಕ’ ಎಂದೂ ಕರೆಯುತ್ತಾರೆ. ಇದರರ್ಥ, ಹಿಂಸ್ರಪಶುಗಳಾದ ಹುಲಿ, ಸಿಂಹ ಮುಂತಾದುವು ಕಾಡಿನಲ್ಲಿ ಪ್ರದರ್ಶಿಸುವ ಸ್ವಭಾವ ಮತ್ತು ಚಟುವಟಿಕೆಗಳನ್ನು ಚೀನಾ ಅಂತಾರಾಷ್ಟ್ರಿಯ ರಂಗದಲ್ಲಿ ಇತರ ದೇಶಗಳ ಬಗ್ಗೆ ಪ್ರದರ್ಶಿಸುತ್ತಿದೆ!

ಚೀನಾ ತನ್ನ ಕುಟಿಲ ಯೋಜನೆಗಳನ್ನು ರೂಪಿಸಿ ಅತೀ ಕಡಿಮೆ ಅವಧಿಯಲ್ಲಿ ಜಾರಿಗೊಳಿಸುವುದರ ಹಿಂದಿರುವುದು ಅಗಾಧ ಆರ್ಥಿಕ ಸಾಮರ್ಥ್ಯ ಎಂದು ಸರಿಯಾಗಿಯೇ ಗುರುತಿಸಿರುವ ಅಧ್ಯಕ್ಷ ಟ್ರಂಪ್ ಮತ್ತವರ ಸಲಹೆಗಾರರು ಚೀನಾದ ಆರ್ಥಿಕ ಸಾಮರ್ಥ್ಯನ್ನೇ ಕುಗ್ಗಿಸಿ ಅದರ ಪರಭಕ್ಷಕ ಸ್ವಭಾವವನ್ನು ತಹಬಂದಿಗೆ ತರುವ ಯೋಜನೆಯನ್ನು ವರ್ಷದಿಂದೀಚೆಗೆ ಹಂತಹಂತವಾಗಿ ಜಾರಿಗೆ ತರುತ್ತಿದ್ದಾರೆ. ಅದರಿಂದಾಗಿ 350 ಬಿಲಿಯನ್​ಗಿಂತಲೂ ಹೆಚ್ಚು ಮೌಲ್ಯದ ಚೀನೀ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆ ಪ್ರವೇಶಿಸಲಾಗದಂತಹ ಸ್ಥಿತಿ ನಿರ್ವಣವಾಗಿದೆ ಮತ್ತು ಅಷ್ಟರ ಮಟ್ಟಿಗೆ ಚೀನೀ ಆದಾಯ ಕುಗ್ಗಿಹೋಗಿದೆ. ಚೀನೀ ನಾಯಿ ಮೊಟ್ಟೆಯಿಟ್ಟು ಕೇಡುಗಾಲವನ್ನು ಬರಮಾಡಿಕೊಂಡಿದೆ!

Leave a Reply

Your email address will not be published. Required fields are marked *