More

    ನಾಯಿಗಳಿಗಾಗಿಯೇ ಪ್ರೀಮಿಯರ್ ಶೋ!: ‘ನಾನು – ಗುಂಡ’ ಚಿತ್ರತಂಡದ ಹೊಸ ಪ್ರಯತ್ನ

    ಬೆಂಗಳೂರು: ಸಿನಿಮಾ ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋ ಏರ್ಪಡಿಸಿ ಗಣ್ಯರಿಗೆ, ಪತ್ರಕರ್ತರಿಗೆ, ಆಪ್ತರಿಗೆ ಚಿತ್ರ ತೋರಿಸುವುದು ಈ ಹಿಂದಿನಿಂದಲೂ ಚಿತ್ರರಂಗದಲ್ಲಿ ರೂಢಿಸಿಕೊಂಡು ಬಂದಿರುವ ನಿಯಮ. ಆದರೆ ಇಲ್ಲೊಂದು ಚಿತ್ರತಂಡ ನಾಯಿಗಳಿಗೆ ಚಿತ್ರ ತೋರಿಸಲು ಮುಂದಾಗಿದೆ. ಅದಕ್ಕಾಗಿ ವಿಶೇಷ ಪ್ರದರ್ಶನ ಕೂಡ ಏರ್ಪಡಿಸುತ್ತಿದೆ. ಚಿತ್ರಮಂದಿರದಲ್ಲಿ ಪ್ರತಿ ನಾಯಿಗೊಂದು ಪ್ರತ್ಯೇಕ ಸೀಟು ಕೂಡ ಕಾಯ್ದಿರಿಸಿದೆಯಂತೆ.

    ‘ನಾನು ಮತ್ತು ಗುಂಡ’ ಚಿತ್ರತಂಡ ಈ ವಿನೂತನ ಯೋಜನೆ ರೂಪಿಸಿದೆ. ಈ ಚಿತ್ರಕ್ಕೆ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಮಾಡಿದ್ದು, ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ರಘು ಹಾಸನ್ ಬಂಡವಾಳ ಹಾಕಿದ್ದಾರೆ. ‘ಇದು ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ತಿಳಿಸುವ ಸಿಸಿಮಾ. ಹೀಗಾಗಿ ಈ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರೇಕ್ಷಕರು ಸಾಕುನಾಯಿಗಳ ಜತೆ ಬಂದು ಚಿತ್ರ ನೋಡುವುದರಿಂದ ಅವುಗಳ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ. ಜ.22ರಂದು ಶಾರದಾ ಚಿತ್ರಮಂದಿರದಲ್ಲಿ ಈ ಪ್ರದರ್ಶನ ಏರ್ಪಡಿಸಿದ್ದೇವೆ’ ಎನ್ನುತ್ತಾರೆ ಶ್ರೀನಿವಾಸ್ ತಿಮ್ಮಯ್ಯ.

    ‘ನಾಯಿ ಸಾಕುವ ಕ್ಲಬ್​ಗಳ ಜತೆ ಮಾತುಕತೆ ನಡೆಸಲಾಗಿದ್ದು, ನೂರಕ್ಕೂ ಹೆಚ್ಚು ನಾಯಿಗಳು ಚಿತ್ರ ಪ್ರದರ್ಶನದಲ್ಲಿ ಭಾಗಿ ಆಗಲಿವೆ. ಇದು ಸವಾಲಿನ ಕೆಲಸವಾಗಿದ್ದರೂ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮನುಷ್ಯ-ಮನುಷ್ಯನ ನಡುವೆ ಪ್ರೀತಿ, ಭಾವನಾತ್ಮಕ ಸಂಬಂಧಗಳು ಕಳಚಿಕೊಳ್ಳುತ್ತಿವೆ. ಜನರು ಆ ಪ್ರೀತಿಯನ್ನು ಪ್ರಾಣಿಗಳ ಮೂಲಕ ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನೇ ಕಥೆಯಾಗಿಸಿ ಚಿತ್ರ ಮಾಡಲಾಗಿದೆ’ ಎಂದರು ಶ್ರೀನಿವಾಸ್.

    ‘ಚಿತ್ರದಲ್ಲಿ ನಾಯಕನದ್ದು ಆಟೋ ಡ್ರೖೆವರ್ ಪಾತ್ರ. ಅನಿರೀಕ್ಷಿತವಾಗಿ ನಾಯಕನ ಮನೆ ಸೇರುವ ನಾಯಿ, ಬಳಿಕ ಮನೆಯಲ್ಲಿ ಮಗುವಿನ ಸ್ಥಾನ ಪಡೆದುಕೊಳ್ಳುತ್ತದೆ. ಈ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆದು ಕೊನೆಗೆ ನಾಯಿಯನ್ನೇ ಮನೆಯಿಂದ ಹೊರಹಾಕುವ ಅನಿವಾರ್ಯತೆ ನಾಯಕನಿಗೆ ಬರುತ್ತದೆ. ನಾಯಿಯನ್ನು ಹೊರಗೆ ಬಿಟ್ಟು ಬಂದ ಮೇಲೆ ಮನೆಯಲ್ಲಿ ಆಗುವ ಬದಲಾವಣೆ, ನಡೆಯುವ ಘಟನೆ, ಕೊನೆಗೆ ಗಂಡ-ಹೆಂಡತಿ ಜೀವನದಲ್ಲಿ ನಾಯಿ ಯಾವ ಪಾತ್ರ ಪಡೆದುಕೊಳ್ಳುತ್ತದೆ ಎಂದು ತಿಳಿಸುವುದೇ ಚಿತ್ರಕಥೆ’ ಎನ್ನುತ್ತಾರೆ ನಿರ್ದೇಶಕರು.

    ಗೃಹಿಣಿ ಪಾತ್ರದಲ್ಲಿ ಸಂಯುಕ್ತಾ ಹೊರನಾಡು ನಟಿಸಿದ್ದಾರೆ. ತನ್ನ ಪಾತ್ರಕ್ಕೆ ನಾಯಿಯೇ ಡಬ್ ಮಾಡಿರುವ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಇದೀಗ ನಾಯಿಗಳಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಿರುವುದು ಚಿತ್ರದ ಬಗ್ಗೆ ಜನರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಚಿತ್ರ ಜ.24ರಂದು ಬಿಡುಗಡೆ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts