More

    ಕಾಲು ಇಲ್ಲಿ ತಲೆ ಅಲ್ಲಿ, ಚೀನಿ ತುತ್ತೂರಿ ಕೈಲಿ!

    ಕಾಲು ಇಲ್ಲಿ ತಲೆ ಅಲ್ಲಿ, ಚೀನಿ ತುತ್ತೂರಿ ಕೈಲಿ!ಲಂಡನ್​ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದು ಅಲ್ಲಿನ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಅಲ್ಲ. ಅವೆಲ್ಲವೂ ಖಾಸಗಿ ಕಾರ್ಯಕ್ರಮಗಳು. ಅಲ್ಲಿನ ಸರ್ಕಾರದ ಯಾವುದೇ ಪ್ರಮುಖ ವ್ಯಕ್ತಿ ರಾಹುಲ್​ರನ್ನು ಅಧಿಕೃತವಾಗಿ ಭೇಟಿಯಾದಂತೆ ಕಾಣುವುದಿಲ್ಲ. ಈ ಅರಿವಿನೊಂದಿಗೆ ರಾಹುಲ್ ಗಾಂಧಿ ಅಲ್ಲಿ ಆಡಿದ ಎರಡು ಮಾತುಗಳ ಅವಲೋಕನವನ್ನು ಕೈಗೆತ್ತಿಕೊಳ್ಳೋಣ.

    ಕೇಂಬ್ರಿಜ್ ಯೂನಿವರ್ಸಿಟಿಯ ಜಜ್ ಬಿಸಿನೆಸ್ ಸ್ಕೂಲ್​ನಲ್ಲಿ ಅವರ ಭಾಷಣವನ್ನು ಆಯೋಜಿಸಿದ್ದು ಅಲ್ಲಿನ ಪ್ರಾಧ್ಯಾಪಕ ಮತ್ತು ಯುನಿವರ್ಸಿಟಿಯ ಪ್ರೋ ವೈಸ್ ಚಾನ್ಸಲರ್ ಕಮಾಲ್ ಮುನೀರ್. ಪಾಕಿಸ್ತಾನಿ ಮೂಲದ ಇವರು ಬ್ರಿಟನ್​ನಲ್ಲಿ ಪಾಕ್ ಸೇನೆಯ ಐಎಅಐನ ಅಕಾಡೆಮಿಕ್ ಮುಖ ಎಂದು ಹೇಳಲಾಗುತ್ತದೆ. ಇಲ್ಲಿ ರಾಹುಲ್ ಮಾತುಗಳಲ್ಲಿ ಭಾರತದ ಪ್ರಜಾಪ್ರಭುತ್ವದ ಕುರಿತಾಗಿನ ಅನಿಸಿಕೆಗಳು ಪ್ರಮುಖವಾಗಿದ್ದವು. ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿದುಹೋಗಿದೆ, ಪ್ರಜಾಪ್ರಭುತ್ವದ ರಕ್ಷಕರಾದ ಅಮೆರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳು ಗಮನಿಸುತ್ತಿಲ್ಲ, ಭಾರತದಲ್ಲಿ ಫ್ಯಾಸಿಸ್ಟ್ ವ್ಯವಸ್ಥೆ ಇದೆ ಎಂಬುದು ಅವರ ಮಾತಿನ ತಿರುಳಾಗಿತ್ತು.

    ಅಮೆರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳನ್ನು ಪ್ರಜಾಪ್ರಭುತ್ವದ ರಕ್ಷಕರು ಎಂದು ಬಣ್ಣಿಸಿದ್ದು ಮತ್ತು ಅವು ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲವಾಗಿರುವುದನ್ನು ಗಮನಿಸುತ್ತಿಲ್ಲ ಎನ್ನುವ ರಾಹುಲ್ ಮಾತಿನಲ್ಲಿ ಆ ದೇಶಗಳು ಭಾರತದ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹವಿದ್ದಂತೆ ಕಾಣುತ್ತದೆ. ಅಂದರೆ ಆ ದೇಶಗಳು ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೈತೂರಿಸಬೇಕು ಮತ್ತು ಇಲ್ಲಿನ ರಾಜಕೀಯ ವ್ಯವಸ್ಥೆ ಬದಲಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಆಶಯ ಎನ್ನುವುದು ಸುಸ್ಪಷ್ಟ. ನಮ್ಮ ದೇಶದ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಬೇಕೆಂದು ಹೊರಗಿನ ಶಕ್ತಿಗಳನ್ನು ಆಹ್ವಾನಿಸುವುದು ‘ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡುವೆ’ ಎಂದು ಅವರು ಲೋಕಸಭಾ ಸದಸ್ಯರಾಗಿ ತೆಗೆದುಕೊಂಡ ಪ್ರಮಾಣವಚನಕ್ಕೆ ವಿರುದ್ಧವಾಗುತ್ತದೆ. ಅಲ್ಲದೆ ಅವರು ವಿದೇಶಗಳ ಯಾವ ಬಗೆಯ ಮಧ್ಯಪ್ರವೇಶವನ್ನು ಬಯಸಬಹುದು? ಮೊದಲಿಗೆ ಅಮೆರಿಕಾ ಮತ್ತು ಯುರೋಪಿಯನ್ ದೇಶಗಳನ್ನು ಪ್ರಜಾಪ್ರಭುತ್ವದ ರಕ್ಷಕರು ಎಂದು ಅವರು ವರ್ಣಿಸುವುದೇ ಸತ್ಯಕ್ಕೆ ಅಪಚಾರವಾಗುತ್ತದೆ. ಆ ದೇಶಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸರ್ವಾಧಿಕಾರಿ ದೇಶಗಳನ್ನು, ಪ್ರಜಾಪ್ರಭುತ್ವದ ದಮನಕಾರಿ ಸರ್ಕಾರಗಳನ್ನು ಪೋಷಿಸಿದ್ದು, ಸಮರ್ಥಿಸಿದ್ದು, ಬೆಂಬಲಿಸಿದ್ದು ಇತ್ತೀಚಿನ ಇತಿಹಾಸದಲ್ಲಿಯೇ ಹೇರಳವಾಗಿ ದಾಖಲಾಗಿದೆ. ಅಮೆರಿಕಾ ನಮ್ಮ ವಿರುದ್ಧ ಪಾಕಿಸ್ತಾನಿ ಸರ್ವಾಧಿಕಾರಿಗಳನ್ನು, ಸೋವಿಯತ್ ಯೂನಿಯನ್ ವಿರುದ್ಧ ಜಾಗತಿಕವಾಗಿ ಪಶ್ಚಿಮದ ಚಿಲಿಯಿಂದ ಪೂರ್ವದ ಪಿಲಿಫಿನ್ಸ್​ವರೆಗೆ ಹಲವಾರು ಸರ್ವಾಧಿಕಾರಿ ಪ್ರಭುತ್ವಗಳನ್ನು ಬೆಳೆಸಿದ್ದನ್ನು ನೋಡಿದ್ದೇವೆ. ಸೋವಿಯತ್ ಯೂನಿಯನ್ ವಿರುದ್ಧ ಉಪಯೋಗಕ್ಕೆ ಬರುತ್ತದೆ ಎಂಬ ಕಾರಣಕ್ಕಾಗಿ ಚೀನಾವನ್ನು ಬೆಂಬಲಿಸಿದ್ದು, ಅದರ ರಾಜತಾಂತ್ರಿಕ ಮತ್ತು ಆರ್ಥಿಕ ಶಕ್ತಿಯನ್ನು ಅಗಾಧವಾಗಿ ಬೆಳೆಸಿದೆ. ಇಂದು ಅದೇ ಚೀನಾ ಜಗತ್ ಕಂಟಕವಾಗಿ ಬೆಳೆದು ನಿಂತಿದೆ.

    ಇನ್ನು ಅವು ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಲು ಜಾಗತಿಕವಾಗಿ ಏನೇನು ಮಾಡುತ್ತವೆ ಎನ್ನುವುದನ್ನು ನೋಡಿದರೆ ನಿರಾಶೆಯಷ್ಟೇ ಅಲ್ಲ, ನೋವೂ ಆಗುತ್ತದೆ. ಇರಾಕ್, ಅಫ್ಘಾನಿಸ್ತಾನ, ಲಿಬಿಯಾ, ಸಿರಿಯಾ, ಸರ್ಬಿಯಾ, ಯೂಕ್ಲಿನ್​ನಂತಹ ಹಲವುಹತ್ತು ದಾರುಣ ಉದಾಹರಣೆಗಳು ನಮ್ಮೆದುರಿಗಿವೆ.

    ಭಾರತದ ಪ್ರಸಕ್ತ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ಆ ದೇಶಗಳ ಸೇನಾ ಮಧ್ಯಪ್ರವೇಶ ಅಗತ್ಯ ಎಂದು ರಾಹುಲ್ ಬಯಸಿರಲಾರರು. ಇರಾನ್, ಉತ್ತರ ಕೊರಿಯಾ, ಕ್ಯೂಬಾ ಮತ್ತಿತರ ದೇಶಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿ ಆರ್ಥಿಕ ಸಂಕಟಕ್ಕೆ ದೂಡಿದಂತೆ ಭಾರತವನ್ನು ದೂಡಬೇಕು ಎಂದು ಅವರು ಬಯಸುತ್ತಾರೆಯೇ? ಹಾಗೆಯೇ ಇರಬಹುದು. ಇದರ ವಿಶ್ಲೇಷಣೆಗೆ ಪೂರಕವಾಗಿ ಅವರು ಚೀನಾದ ಬಗ್ಗೆ ಆಡಿದ ಮಾತುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

    ಚೀನಾ ಸೌಹಾರ್ದತೆ ಬಯಸುವ ದೇಶ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದು ಇಲ್ಲಿ ಮುಖ್ಯವಾಗುತ್ತದೆ. ಪ್ರಸಕ್ತ ಜಾಗತಿಕ ವಿದ್ಯಮಾನಗಳು ಈ ಮಾತಿಗೆ ಸಂಪೂರ್ಣ ವಿರುದ್ಧವಾದ ಸಾಕ್ಷಿಯನ್ನು ಒದಗಿಸುತ್ತವೆ. ತನ್ನ ಸುತ್ತಲಿನ ಎಲ್ಲಾ 21 ದೇಶಗಳ ಜೊತೆಗೂ ನೆಲ-ಜಲ ಗಡಿವಿವಾದಗಳನ್ನು ಬೆಳೆಸಿಕೊಂಡಿರುವ ದೇಶ ಚೀನಾ. ಪೂರ್ವ ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರಗಳಲ್ಲಿ ಅತಿಕ್ರಮಣ, ದಬ್ಬಾಳಿಕೆ ನಡೆಸುತ್ತಿರುವ ಅದು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತನ್ನ ನಿಲುವನ್ನು ವಿರೋಧಿಸದಂತೆ, ತನ್ನ ಅತಿಕ್ರಮಣವನ್ನು ಒಪ್ಪಿಕೊಳ್ಳುವಂತೆ ಅದು ಜಪಾನ್, ದಕ್ಷಿಣ ಕೊರಿಯಾ, ತೈವಾನ್, ವಿಯೆಟ್ನಾಂ, ಇಂಡೋನೇಷಿಯಾ ಮತ್ತು ಪಿಲಿಫಿನ್ಸ್ ದೇಶಗಳನ್ನು ಒತ್ತಾಯಿಸುತ್ತಿದೆ ಮತ್ತು ಅದಕ್ಕಾಗಿ ಮತ್ತೆಮತ್ತೆ ಸೇನಾ ಬೆದರಿಕೆ ಒಡ್ಡುತ್ತಿದೆ. ಪುಟ್ಟ ರ್ಕಿಗಿಸ್ತಾನದಿಂದ 1,200 ಚದರ ಕಿಲೋಮೀಟರ್ ಪ್ರದೇಶವನ್ನು ಈಗಾಗಲೇ ಕಿತ್ತುಕೊಂಡಿದೆ ಮತ್ತು ಆ ದೇಶದ 45% ನೆಲದ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಹವಣಿಸುತ್ತಿದೆ. ತನ್ನನ್ನು ನಂಬಿಗಸ್ತ ಮಿತ್ರ ಎಂದು ಬಗೆಯುವ ರಷ್ಯಾದ ನೆಲದ ಮೇಲೇ ಅದು ಕಣ್ಣುಹಾಕಿದೆ! ಇನ್ನು ಭಾರತದ ಕುರಿತಾಗಿ ಚೀನಾ ವರ್ತಿಸುತ್ತಿರುವ ಬಗೆ ಯಾವ ಭಾರತೀಯನಿಗೆ ತಿಳಿಯದು? ದೊಕ್ಲಾಂ, ಗಲ್ವಾನ್ ಮತ್ತು ಇತ್ತೀಚೆಗೆ ಅರುಣಾಚಲ ಪ್ರದೇಶ ಗಡಿಯಲ್ಲಿಯೇ ನಡೆದ ಘಟನೆಗಳು ರಾಹುಲ್ ಗಮನದಿಂದ ಹೇಗೆ ತಾನೆ ದೂರ ಹೋಗಲು ಸಾಧ್ಯ? ಭಾರತವನ್ನು ಸುತ್ತುವರಿಯಲು ಅದು ನಡೆಸುತ್ತಿರುವ ಆಟಗಳನ್ನು ಪ್ರತ್ಯೇಕವಾಗಿ ಹೇಳಬೇಕೇ? ಇಷ್ಟಾಗಿಯೂ ಚೀನಾ ಬಗ್ಗೆ ಪ್ರಶಂಸೆಗೈಯ್ಯುವ ಅಗತ್ಯ ರಾಹುಲ್​ಗೆ ಏಕೆ ಬಂದಿದೆ? ಇದಕ್ಕೆ ಉತ್ತರ ಆಗಸ್ಟ್ 2008ರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಚೀನಿ ಕಮ್ಯುನಿಸ್ಟ್ ಪಕ್ಷದ ಜೊತೆಗಿನ ರಹಸ್ಯ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದರಲ್ಲಿ ಅಡಗಿದೆ. ಆ ಒಪ್ಪಂದವಾದ ನಂತರ ಅವರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಗಡಿವಿವಾದಕ್ಕೆ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಚೀನಾದ ಹಿತಾಸಕ್ತಿಗಳಿಗೆ ಅನುಕೂಲಕರವಾಗಿ ನಡೆದುಕೊಳ್ಳತೊಡಗಿದ್ದನ್ನು ಕಾಣುತ್ತೇವೆ. ಒಪ್ಪಂದವಾದ ಒಂದೇ ತಿಂಗಳಲ್ಲಿ ಲಡಾಖ್​ನ ಕೊಂಗ್​ಕಾ ಕಣಿವೆಯಲ್ಲಿ ಚೀನಾ ಅತಿಕ್ರಮಣ ಮಾಡಿತು. ನಂತರ ಏಪ್ರಿಲ್ 2013ರಲ್ಲಿ ಉತ್ತರದ ದೆಪ್​ಸಂಗ್​ನಲ್ಲಿ ಚೀನಿಯರು 19 ಕಿಮೀ ಒಳನುಗ್ಗಿ ಬರಲು ಯುಪಿಎ ಸರ್ಕಾರ ಅವಕಾಶ ಮಾಡಿಕೊಟ್ಟಿತು. ಅದೇ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಶ್ಯಾಮ್ ಸರಣ್ ಹೇಳುವ ಪ್ರಕಾರ ಯುಪಿಎ ಅಧಿಕಾರಾವಧಿಯಲ್ಲಿ ನಮ್ಮ ದೇಶದ 640 ಚದರ ಕಿಮೀ ಪ್ರದೇಶವನ್ನು ಚೀನಾ ತನ್ನದಾಗಿಸಿಕೊಂಡಿತು! ಆಗಿನ ರಕ್ಷಣಾ ಮಂತ್ರಿ ಎ.ಕೆ. ಆಂಟನಿ ಲೋಕಸಭೆಯಲ್ಲಿಯೇ ಹೇಳಿದ ಪ್ರಕಾರ ಗಡಿಪ್ರದೇಶಗಳಲ್ಲಿ ಭಾರತದ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವುದು ಯುಪಿಎ ಸರ್ಕಾರಕ್ಕೆ ಬೇಕಾಗಿರಲಿಲ್ಲ, ಯಾಕೆಂದರೆ ಅದು ಚೀನಿಯರನ್ನು ಕೆರಳಿಸುತ್ತದೆ ಎನ್ನುವುದು ಆ ಸರ್ಕಾರದ ಭಯವಾಗಿತ್ತು!

    ಹಾಗೆಯೇ ಸರ್ಕಾರಿ ಒಡೆತನದ ಮೂರು ಲಸಿಕೆ ತಯಾರಿಕಾ ಘಟಕಗಳನ್ನು ಮುಚ್ಚಿ ಅದೇ ಲಸಿಕೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆಯನ್ನು ಯುಪಿಎ ಸರ್ಕಾರ ಮಾಡಿತು. ಇವು ಕೆಲವು ಉದಾಹರಣೆಗಳು ಮಾತ್ರ. ಇವೆಲ್ಲವೂ ಬಹುಶಃ ರಾಹುಲ್ ಗಾಂಧಿ ಸಹಿಹಾಕಿದ ಒಪ್ಪಂದಕ್ಕೆ ಅನುಗುಣವಾಗಿಯೇ ಇದ್ದಿರಬೇಕು. ಇದೇ ರಾಹುಲ್ ದೊಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ಚೀನಿ ದೂತಾವಾಸಕ್ಕೆ ಭೇಟಿ ನೀಡಿದ್ದರು. ಇದೆಲ್ಲಾ ಹೇಳುವುದು ಬಹುಶಃ ಭಾರತದಲ್ಲಿ ಮತ್ತು ಜಗತ್ತಿನ ವಿವಿಧೆಡೆ ಚೀನಿ ತುತ್ತೂರಿಯನ್ನು ಊದುವುದು ಅವರು ಸಹಿಹಾಕಿದ ಒಪ್ಪಂದದ ನಿಬಂಧನೆಗಳ ಭಾಗವಾಗಿರಬಹುದು. ಈಗ ಲಂಡನ್​ನಲ್ಲಿ ಮಾಡಿದ್ದು ಅದರ ಮುಂದುವರಿಕೆಯಷ್ಟೇ. ಒಪ್ಪಂದಕ್ಕೆ ಸಹಿ ಹಾಕಿ ಚೀನೀಯರಿಂದ ಹಣ ಗಿಟ್ಟಿಸಿಕೊಂಡದ್ದಕ್ಕೆ ಪ್ರತಿಯಾಗಿ ಇದೆಲ್ಲವನ್ನೂ ಮಾಡಲೇಬೇಕಾಗಿದೆಯೇ ಎಂಬ ಅನುಮಾನ ಮೂಡುತ್ತದೆ.

    ಭಾರತ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವುದರಿಂದ ಹಾನಿ ಅನುಭವಿಸುತ್ತಿರುವ ಪ್ರಮುಖ ದೇಶವೆಂದರೆ ಚೀನಾ. ಬಹಳಷ್ಟು ಪಾಶ್ಚಾತ್ಯ ಕೈಗಾರಿಕೋದ್ಯಮಿಗಳು ಚೀನಾವನ್ನು ತೊರೆದು ಭಾರತದತ್ತ ಮುಖ ಮಾಡಿದ್ದಾರೆ. ಒಂದುಕಾಲದಲ್ಲಿ ಮೊಬೈಲ್ ಫೋನ್​ಗಳ ಉತ್ಪಾದನೆಯಲ್ಲಿ ಚೀನಾದ ಏಕಸ್ವಾಮ್ಯವಿತ್ತು. ಇಂದು ಅದನ್ನು ಭಾರತ ಮುರಿಯುತ್ತಿದೆ ಮತ್ತು ಜಗತ್ತಿನ ಎರಡನೆಯ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ದೇಶವಾಗಿ ಬೆಳೆದಿದೆ. 2014ರಲ್ಲಿ ಈ ದೇಶದಲ್ಲಿ ಇದ್ದದ್ದು ಕೇವಲ ಎರಡು ಮೊಬೈಲ್ ಉತ್ಪಾದಕ ಘಟಕಗಳು. ಇಂದು 125 ದಾಟಿದೆ. ಸ್ಯಾಮ್ಸಂಗ್ ತನ್ನ ಅತಿ ದೊಡ್ಡ ಉತ್ಪಾದನಾ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಿದೆ. ಆಪಲ್ ಫೋನ್​ಗಳ ತಯಾರಕ ಫಾಕ್ಸ್​ಕಾನ್ ಚೀನಾದಲ್ಲಿ ವ್ಯವಹಾರ ಬಂದ್ ಮಾಡಿ ಭಾರತಕ್ಕೆ ಬರುತ್ತಿದೆ. ಇಲ್ಲಿ ಒಂದು ಲಕ್ಷ ಭಾರತೀಯರಿಗೆ ಉದ್ಯೋಗ ನೀಡಿ ಕಾರ್ಖಾನೆ ಸ್ಥಾಪಿಸಲು ಅದು ಕಾರ್ಯಯೋಜನೆ ಆರಂಭಿಸಿದೆ. ಇದರಿಂದ ಸಹಜವಾಗಿಯೇ ಚೀನಿ ಸರ್ಕಾರ ಅಸ್ವಸ್ಥಗೊಂಡಿದೆ. ಭಾರತ ಆರ್ಥಿಕವಾಗಿ ಸದೃಢಗೊಂಡರೆ ಅದರ ಸೇನಾಶಕ್ತಿಯೂ ಅಗಾಧವಾಗಿ ವೃದ್ಧಿಸುತ್ತದೆ. ಅಲ್ಲಿಗೆ ಏಶಿಯಾ ಮತ್ತು ಹಿಂದೂ ಮಹಾಸಾಗರ ವಲಯಗಳಲ್ಲಿ ಚೀನಾದ ಮಹತ್ವಾಕಾಂಕ್ಷಿ ಯೋಜನೆಗಳೆಲ್ಲವೂ ಮುರಿದುಬೀಳುತ್ತವೆ. ಹೀಗಾಗುವುದನ್ನು ತಡೆಯಬೇಕಾದರೆ ಭಾರತದ ಆರ್ಥಿಕ ಪ್ರಗತಿಗೆ ಮೊದಲ ಕೊಡಲಿಯೇಟು ಬೀಳಬೇಕು. ಹೀಗಾಗಿ ಭಾರತ ವ್ಯವಹಾರಕ್ಕೆ ಅನುಕೂಲಕರವಾದ ದೇಶ ಅಲ್ಲ ಎಂದು ಜಾಗತಿಕವಾಗಿ ಬಿಂಬಿಸಿ ಕೈಗಾರಿಕೋದ್ಯಮಿಗಳು ಭಾರತದತ್ತ ಮುಖ ಮಾಡದಂತೆ, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಭಾಗಿಯಾಗದಂತೆ ತಡೆಯುವುದು ಚೀನಾದ ನೀತಿಯಾಗಿದೆ. ಅದಕ್ಕಾಗಿ ಜಾಗತಿಕ ವೇದಿಕೆಗಳಲ್ಲಿ ಭಾರತದ ಹೆಸರು ಕೆಡಿಸುವ ಕೆಲಸವಾಗಬೇಕಾಗಿದೆ. ಅದನ್ನು ಭಾರತದ ರಾಜಕೀಯ ನಾಯಕನೊಬ್ಬನೇ ಮಾಡಿದರೆ ಸರಿ. ಅದಕ್ಕಾಗಿ ಚೀನಾಗೆ ಸಿಕ್ಕಿರುವ ವ್ಯಕ್ತಿ ರಾಹುಲ್ ಗಾಂಧಿ. ಯಾಕೆಂದರೆ ಅಂತಹ ಕೆಲಸವನ್ನು ಬಹಿರಂಗವಾಗಿ ಮಾಡಲು ಇಲ್ಲಿನ ಎಡಪಂಥೀಯರೂ ತಯಾರಿಲ್ಲ!

    ಪಾದಯಾತ್ರೆಯಲ್ಲಿ ಭಾರತದಲ್ಲಿ ಕಂಡದ್ದು ನಿರುದ್ಯೋಗ, ಅಶಾಂತಿ ಎಂದೆಲ್ಲಾ ಹೇಳುವ ಮೂಲಕ ರಾಹುಲ್ ಗಾಂಧಿ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಲಂಡನ್ನಿ ನಲ್ಲಿ ಕೂತು ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ, ಜನರು ಅಶಾಂತಿಯಲ್ಲಿದ್ದಾರೆ, ಅದರರ್ಥ ಸರ್ಕಾರದ ವಿರುದ್ಧ ಸಿಡಿದೆಳಲಿದ್ದಾರೆ, ಹೀಗಾಗಿ ಇಲ್ಲಿ ನೀವು ಹೂಡುವ ಹಣ ಸುರಕ್ಷಿತ ಅಲ್ಲ ಎಂದು ವಿದೇಶಿ ಕೈಗಾರಿಕೋದ್ಯಮಿಗಳಿಗೆ ಸಂದೇಶ ರವಾನಿಸುತ್ತಿದ್ದಾರೆ. ಅಂದರೆ ಈ ಮೂಲಕ ವಿದೇಶಿ ಬಂಡವಾಳ ಹರಿವು ಭಾರತಕ್ಕೆ ಬಾರದಂತೆ, ವಿದೇಶಿ ಕೈಗಾರಿಕೆಗಳು ಚೀನಾದಿಂದ ಭಾರತಕ್ಕೆ ವರ್ಗಾವಣೆಯಾಗದಂತೆ ತಡೆಯುವ ಕರೆನೀಡುವ ಅವರ ಪ್ರಯತ್ನ ಚೀನಾದ ನೀತಿಯ ಒಂದು ಭಾಗದಂತೆ ಕಾಣುತ್ತಿದೆ. ಇದು ಸಹ ಅವರು ಸಹಿಹಾಕಿದ ಒಪ್ಪಂದದ ಕಲಂಗಳಿಗೆ ಅನುಗುಣವಾಗಿಯೇ ಇರಬೇಕು.

    ರಾಹುಲ್​ರ ಚೀನಿ ತುತ್ತೂರಿ ಇಷ್ಟಕ್ಕೇ ನಿಲ್ಲುವುದಿಲ್ಲ. ಭಾರತ ಒಂದು ರಾಷ್ಟ್ರವಲ್ಲ, ಅದೊಂದು ರಾಜ್ಯಗಳ ಒಕ್ಕೂಟ ಎಂದು ಹಿಂದೆ ಹೇಳಿದ್ದ ಈ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನೇತಾರ ಇಂದು ಚೀನಾ ಒಂದು ರಾಷ್ಟ್ರ ಎಂದು ಹೇಳುತ್ತಾರೆ. ಆ ದೇಶಕ್ಕೆ ರಾಷ್ಟ್ರೀಯತೆಯನ್ನು ನೀಡಿರುವುದು ಅಲ್ಲಿ ಹರಿಯುವ ಹಳದಿ ನದಿ ಎಂದು ತೀರ್ಪು ಕೊಡುತ್ತಾರೆ. ಈ ‘ಹಳದಿ ರೋಗ’ಕ್ಕೇನು ಕಾರಣ? ವಿವಿಧ ಭಾಷಿಕ ಜನತೆಗಳನ್ನು ಪೋಷಿಸುತ್ತಲೇ ತಾವೆಲ್ಲರೂ ಒಂದೇ ಎಂಬ ಭಾವೈಕ್ಯತೆಯನ್ನು ಅವರಲ್ಲಿ ಮೂಡಿಸಿರುವ ದಕ್ಷಿಣದ ವೈ ಗೈನಿಂದ ಹಿಡಿದು ಉತ್ತರದ ಜೀಲಂವರೆಗಿನ ಭಾರತೀಯ ನದಿಗಳ ಪರಿಚಯ ಇವರಿಗಿಲ್ಲವೇ? ಐದು ತಿಂಗಳುಗಳ ಪಾದಯಾತ್ರೆಯಲ್ಲಿ ಈ ನದಿಗಳು ಎದುರಾದಾಗ ಕಣ್ಣು ಮುಚ್ಚಿಕೊಂಡರೇ? ಅಂದರೆ ಅವರ ಪಾದಗಳಷ್ಟೇ ಭಾರತದ ನೆಲದಲ್ಲಿದ್ದವು, ತಲೆ ಬೇರಾವುದೋ ದೇಶದಲ್ಲಿತ್ತು! ‘ಗಂಗೆ ಚ ಯಮುನೆಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು’ ಘೊಷವನ್ನು ಇವರೆಂದೂ ಕೇಳಿಲ್ಲವೇ? ಕೊನೆಯ ಪಕ್ಷ ನಮ್ಮ ರಾಷ್ಟ್ರಗೀತೆಯ ಒಂದು ಸಾಲು ಇವರಿಗೆ ನೆನಪಾಗುವುದಿಲ್ಲವೇ? ಈ ವ್ಯಕ್ತಿ ಈ ಮಣ್ಣಿನಿಂದ ಅದೆಷ್ಟು ದೂರ!

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts