ಯಾದವೀ ಕಲಹಗಳ ಕುದಿಯುವ ಹಂಡೆಯ ಇತಿಹಾಸ…

ಯಾದವೀ ಕಲಹಗಳ ಕುದಿಯುವ ಹಂಡೆಯ ಇತಿಹಾಸ...

ಧರ್ಮ ಮತ್ತು ರಾಜಕೀಯದ ಘಾತಕ ಮಿಶ್ರಣದಿಂದಾಗಿ ಶತಮಾನಗಳಿಂದಲೂ ನಿರಂತರ ದಬ್ಬಾಳಿಕೆ, ಕ್ರೌರ್ಯ, ಯಾದವೀ ಕಲಹ, ಯುದ್ಧಗಳ ಕುದಿಯುವ ಹಂಡೆಯಾಗಿರುವ ಪಶ್ಚಿಮ ಏಶಿಯಾದ ಇತಿಹಾಸದಲ್ಲೀಗ ಮತ್ತೊಂದು ರಕ್ತರಂಜಿತ ಪುಟ ತೆರೆದುಕೊಂಡಿದೆ. ಪ್ಯಾಲೆಸ್ತೈನ್​ನ ಉಗ್ರಗಾಮಿ ಸಂಘಟನೆ ಹಮಾಸ್ ಮತ್ತು ಯೆಹೂದಿ ರಾಷ್ಟ್ರ ಇಸ್ರೇಲ್ ನಡುವೆ ಸಂಘರ್ಷ ಮತ್ತೊಮ್ಮೆ ಆರಂಭವಾಗಿದೆ.

‘ಲೆವಾಂತ್’ ಎಂದು ಕರೆಯಲಾಗುವ ಪಶ್ಚಿಮ ಏಶಿಯಾದ ಮೆಡಿಟರೇನಿಯನ್ ತೀರಪ್ರದೇಶಗಳ ಇತಿಹಾಸದ ಅರಿವಿಲ್ಲದೇ ಪ್ರಸಕ್ತ ಸಂಘರ್ಷದ ಉದ್ದೇಶಗಳು ಮತ್ತು ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಹೀಗಾಗಿ ಮೊದಲಿಗೆ ಇಸ್ರೇಲ್-ಪ್ಯಾಲೆಸ್ತೈನ್ ಸಂಘರ್ಷದ ಇತಿಹಾಸ, ನಂತರ ಪ್ರಸಕ್ತ ಸಂಘರ್ಷವನ್ನು ವಿಶ್ಲೇಷಿಸಲು ಎರಡು ಭಾಗಗಳ ಈ ಲೇಖನದಲ್ಲಿ ಪ್ರಯತ್ನಿಸುತ್ತೇನೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶಪೂರ್ವಕ ಕುತಂತ್ರದಿಂದಾಗಿ ಪಶ್ಚಿಮ ಏಶಿಯಾದ ರಕ್ತರಂಜಿತ ಇತಿಹಾಸದ ಬಗ್ಗೆ ವಾಸ್ತವಕ್ಕೆ ವಿರುದ್ಧವಾದ ಚಿತ್ರಣ ಭಾರತದಲ್ಲಿ ಪ್ರಚಲಿತವಿದೆ.

ಇಸ್ರೇಲ್​ನ ಮೂಲನಿವಾಸಿಗಳಾದ ಯೆಹೂದಿಗಳು ಖಳನಾಯಕರಂತೆ ಚಿತ್ರಿತವಾಗುವುದು ಸಾಮಾನ್ಯ. ಆದರೆ ಇತಿಹಾಸದುದ್ದಕ್ಕೂ ಅವರ ಬದುಕಿನಲ್ಲಿ ಖಳನಾಯಕರ ಪಾತ್ರ ವಹಿಸಿ, ತಮ್ಮ ಬಲಿಪಶುಗಳನ್ನೇ ಖಳನಾಯಕರನ್ನಾಗಿ ಬಿಂಬಿಸಿದ್ದು ನೆರೆಯ ಯೂರೋಪಿಯನ್ನರು ಮತ್ತು ಅರಬ್ಬರು.

ಎರಡು ಸಹಸ್ರಮಾನಗಳ ಹಿಂದೆ ರೋಮನ್ ಸಾಮ್ರಾಜ್ಯಶಾಹಿ ದುರಾಡಳಿತಕ್ಕೆ ಸಿಲುಕಿದ ಯೆಹೂದೀಯರಲ್ಲಿ ಅನೇಕರು ತಮ್ಮ ಧಾರ್ವಿುಕ ನಂಬಿಕೆಗಳನ್ನೂ, ಜೀವನ ಮೌಲ್ಯಗಳನ್ನೂ, ಇವೆರಡನ್ನೂ ಪಾಲಿಸುವ ಸ್ವಾತಂತ್ರ್ಯವನ್ನೂ ಉಳಿಸಿಕೊಳ್ಳಲು ಪೂರ್ವದೇಶಗಳತ್ತ ಓಡಿಬಂದರು. ಇವರನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಸ್ವೀಕರಿಸಿದ ದೇಶ ಭಾರತವೊಂದೇ. ಹೀಗಾಗಿ ಇಲ್ಲಿಗೆ ಬಂದ ಯೆಹೂದಿಗಳು ಜನಾಂಗೀಯ ಹಾಗೂ ಧಾರ್ವಿುಕ ಅಸ್ಮಿತೆಯನ್ನು ಉಳಿಸಿಕೊಂಡು 1948ರ ನಂತರ ಸ್ವತಂತ್ರ ಇಸ್ರೇಲ್​ಗೆ ಹಿಂತಿರುಗಿದರೆ ಇತರ ಪೌರ್ವಾತ್ಯ ನಾಡುಗಳಿಗೆ ಬಂದ ಯೆಹೂದೀಯರು ಗುರುತೇ ಇಲ್ಲದಂತೆ ಕಳೆದುಹೋಗಿದ್ದಾರೆ. ಏಳನೆಯ ಶತಮಾನದ ಆರಂಭದಲ್ಲಿ ಅರೇಬಿಯಾದಲ್ಲಿ ಜನ್ಮತಾಳಿದ ಇಸ್ಲಾಂ ಸಾಮ್ರಾಜ್ಯಶಕ್ತಿಯಾಗಿ ಬೆಳೆದು ಅದೇ ಶತಮಾನದ ನಾಲ್ಕನೆಯ ದಶಕದ ಹೊತ್ತಿಗೆ ಇಡೀ ಪಶ್ಚಿಮ ಏಶಿಯಾವನ್ನು ಆವರಿಸಿಕೊಂಡು ‘ಇಸ್ಲಾಮನ್ನು ಒಪ್ಪಿಕೊಳ್ಳಿ ಅಥವಾ ತಲೆದಂಡಕ್ಕೆ ಸಿದ್ಧರಾಗಿ’ ಎಂದು ಹೇಳಿದಾಗ ಇಸ್ರೇಲಿನಲ್ಲಿದ್ದ ಅಳಿದುಳಿದ ಯೆಹೂದೀ ಜನಾಂಗ ಪಶ್ಚಿಮದ ಯೂರೋಪ್​ನತ್ತ ಓಡಿತು. ಹೀಗೆ ಪಶ್ಚಿಮದಿಂದ ಅಪಾಯವೊದಗಿದಾಗ ಪೂರ್ವದೇಶಗಳಿಗೂ, ಪೂರ್ವದಿಂದ ಅಪಾಯವೊದಗಿದಾಗ ಪಶ್ಚಿಮದೇಶಗಳಿಗೂ ಓಡಿದ ಯೆಹೂದಿಗಳಿಗೆ ಭಾರತದಲ್ಲಿ ದೊರೆತ ಮಾನವೀಯ ಸ್ವಾಗತ ಯುರೋಪ್​ನಲ್ಲಿ ಸಿಗಲಿಲ್ಲ. ಅಲ್ಲಿನ ಕ್ರಿಶ್ಚಿಯನ್ ಸಮಾಜಗಳು ಯೆಹೂದಿಗಳನ್ನು ನಿಕೃಷ್ಟವಾಗಿ ಕಂಡವು ಮತ್ತು ಅವರಿಗೆ ಗೌರವಯುತ ಸಾಮಾಜಿಕ ಸ್ಥಾನಮಾನ ನೀಡಲು ನಿರಾಕರಿಸಿದವು. ಜತೆಗೆ ರಾಜಕೀಯ ಹಾಗೂ ಆಡಳಿತಾತ್ಮಕ ಅಧಿಕಾರದಿಂದಲೂ ವಂಚಿತವಾದ ಯೆಹೂದಿ ಜನಾಂಗಕ್ಕೆ ಮುಕ್ತವಾಗಿ ಉಳಿದದ್ದು ಆರ್ಥಿಕ ಕ್ಷೇತ್ರವೊಂದೇ. ಅದರಲ್ಲಿ ಯಶಸ್ವಿಯಾದರೂ ಅವರ ಆರ್ಥಿಕ ಸಾಮರ್ಥ್ಯವೂ, ಚಟುವಟಿಕೆಗಳೂ ಯೂರೋಪಿನಲ್ಲಿ ನಗೆಪಾಟಲಿಗೆ, ಕ್ರೂರ ವ್ಯಂಗ್ಯಕ್ಕೆ ತುತ್ತಾದವು.

ಹೀಗೆ ಯೂರೋಪಿಯನ್ ಸಮಾಜಗಳ ಸೆಮೆಟಿಕ್-ವಿರೋಧಿ ಮನೋಭಾವ ದಿಂದಾಗಿಯೇ ತಮ್ಮ ಪ್ರತ್ಯೇಕತೆಯನ್ನು ಶತಮಾನಗಳವರೆಗೆ ಉಳಿಸಿಕೊಂಡ ಯೆಹೂದೀಯರು ಹತ್ತೊಂಬತ್ತನೆಯ ಶತಮಾನದಲ್ಲಿ ತಮ್ಮ ಇತಿಹಾಸದತ್ತ ಮುಖಮಾಡಿದರು. ಪರದೇಶದಲ್ಲಿನ ನಿಕೃಷ್ಟ ಬದುಕು ಅಂತ್ಯಗೊಂಡು ತಾವೂ ವಿಶ್ವ ಸಮುದಾಯದಲ್ಲಿ ಗೌರವಯುತರಾಗಿ ತಲೆಯೆತ್ತಿ ಬಾಳಬೇಕಾದರೆ ತಾಯ್ನಾಡಿಗೆ ಅಂದರೆ ಇಸ್ರೇಲ್​ಗೆ ಹಿಂತಿರುಗುವುದೊಂದೇ ಮಾರ್ಗ ಎಂಬ ನಿರ್ಧಾರಕ್ಕೆ ಅವರು ಬಂದರು. ಥಿಯೋಡೋರ್ ಹರ್ಜ‚ಲ್​ರಂತಹ ಯೂರೋಪಿಯನ್ ಯೆಹೂದೀ ಬುದ್ಧಿಜೀವಿಗಳು ಝಿಯೋನಿಸ್ಟ್ ಮೂವ್​ವೆುಂಟ್ ಚಾಲನೆಗೊಳಿಸಲು ಇದೇ ಪ್ರೇರಣೆ. ಆದರೆ ಅವರು ತೊರೆದುಹೋಗಿದ್ದ ಇಸ್ರೇಲ್ ಸಂಪೂರ್ಣವಾಗಿ ಬದಲಾಗಿಹೋಗಿತ್ತು, ಐತಿಹಾಸಿಕವಾಗಿ ‘ಇಸ್ರೇಲ್’ ಎಂಬ ಹೆಸರಿಗೆ ಪ್ರತಿಸ್ಪರ್ಧಿಯಾಗಿದ್ದ ‘ಪ್ಯಾಲೆಸ್ತೈನ್’ ಎಂಬ ಹೆಸರಿನಿಂದ ಅಧಿಕೃತವಾಗಿ ಕರೆಸಿಕೊಳ್ಳುತ್ತಿತ್ತು, ಅಲ್ಲಿನ ಜನ ಮುಸ್ಲಿಮರಾಗಿದ್ದು ತಮ್ಮನ್ನು ನೆರೆಯ ಅರಬ್ಬರೊಂದಿಗೆ ಗುರುತಿಸಿಕೊಳ್ಳುತ್ತಿದ್ದರು ಮತ್ತವರು ರಾಜಕೀಯವಾಗಿ ಅಟೋಮಾನ್ ತುರ್ಕಿ ಸಾಮ್ರಾಜ್ಯದ ಪ್ರಜೆಗಳಾಗಿದ್ದರು.

ಪ್ಯಾಲೆಸ್ತೈನ್ ಮುಸ್ಲಿಮರು ತಮ್ಮ ನೆಲಕ್ಕೆ ಯೆಹೂದೀಯರ ವಲಸೆಯನ್ನು ವಿರೋಧಿಸಿದರೂ ಆ ದಿನಗಳ ಅಂತಾರಾಷ್ಟ್ರೀಯ ರಾಜಕಾರಣ ಯೆಹೂದಿಗಳಿಗೆ ಬೆಂಬಲಕರವಾಗಿತ್ತು. ಮೊದಲ ಮಹಾಯುದ್ಧದಲ್ಲಿ ಜರ್ಮನಿಯ ಪರ ನಿಂತ ತುರ್ಕಿಯ ಕಷ್ಟಗಳನ್ನು ವೃದ್ಧಿಸುವ ಉದ್ದೇಶದಿಂದಲೇ, ಪ್ಯಾಲೆಸ್ಟೈನ್​ನಲ್ಲಿ ಸ್ವತಂತ್ರ ಯೆಹೂದಿ ರಾಷ್ಟ್ರ ನಿರ್ವಿುಸಲು ತಾನು ಸಹಕರಿಸುವುದಾಗಿ ಬ್ರಿಟನ್ 1917ರಲ್ಲಿ ಘೊಷಿಸಿತು. ಯುದ್ಧದ ನಂತರ ತುರ್ಕಿ ಛಿದ್ರಗೊಂಡು ಲೀಗ್ ಆಫ್ ನೇಷನ್ಸ್​ನ ತೀರ್ವನದಂತೆ ಪ್ಯಾಲೆಸ್ತೈನ್ ಬ್ರಿಟಿಷ್ ಅಧಿಕಾರಕ್ಕೆ ಬಂದದ್ದು ಯೆಹೂದಿಗಳಿಗೆ ವರದಾನವಾಯಿತು. ನಂತರ ಜರ್ಮನಿಯಲ್ಲಿ ಹಾಗೂ ತಾನು ಆಕ್ರಮಿಸಿಕೊಂಡ ಯೂರೋಪಿಯನ್ ದೇಶಗಳಲ್ಲಿ ಹಿಟ್ಲರ್ ಯೆಹೂದಿಗಳ ಮಾರಣಹೋಮಗೈಯತೊಡಗಿದಾಗ ಪ್ಯಾಲೆಸ್ತೈನ್​ಗೆ ಯೆಹೂದ್ಯರ ವಲಸೆ ತೀವ್ರವಾಯಿತು. ಅದಕ್ಕೆ ಮುಸ್ಲಿಮರ ವಿರೋಧವೂ ಹೆಚ್ಚಿ ಹಿಂಸಾಚಾರ ಯಾವ ಮಟ್ಟಕ್ಕೇರಿತೆಂದರೆ ಶಾಂತಿಯನ್ನು ಕಾಪಾಡಲು 80 ಸಾವಿರ ಸೈನಿಕರ ಅಗತ್ಯ ಬಿತ್ತು. ಎರಡನೆಯ ಮಹಾಯುದ್ಧದಿಂದಾಗಿ ಜಝುರಿತಗೊಂಡಿದ್ದ ಬ್ರಿಟಿಷ್ ಅರ್ಥವ್ಯವಸ್ಥೆಗೆ ಇದು ಅನಗತ್ಯ ಹೊರೆಯಾಗಿ ಕಂಡಿತು. ಪರಿಣಾಮವಾಗಿ ಪ್ಯಾಲೆಸ್ತೈನ್ ಅನ್ನು ಲೀಗ್ ಆಫ್ ನೇಷನ್ಸ್​ನ ಉತ್ತರಾಧಿಕಾರಿಯಾದ ವಿಶ್ವಸಂಸ್ಥೆಗೆ ಒಪ್ಪಿಸಿ ಕೈತೊಳೆದುಕೊಳ್ಳಲು ಬ್ರಿಟನ್ ನಿರ್ಧರಿಸಿತು. ಅರಬ್ಬರು ಹಾಗೂ ಯೆಹೂದ್ಯರು ಪ್ಯಾಲೆಸ್ತೈನ್​ನಲ್ಲಿ ಸಹಬಾಳ್ವೆ ನಡೆಸುವುದು ಸಾಧ್ಯವೇ ಇಲ್ಲ ಎಂದು ತನ್ನ ಸಮಿತಿಯೊಂದರ ಸರ್ವೇಕ್ಷಣೆಯಿಂದ ಅರಿತ ವಿಶ್ವಸಂಸ್ಥೆ ಪ್ಯಾಲೆಸ್ತೈನ್ ಅನ್ನು ವಿಭಜಿಸಿ ಎರಡು ಸ್ವತಂತ್ರ ರಾಷ್ಟ್ರಗಳನ್ನು ಸೃಷ್ಟಿಸುವ ನಿರ್ಣಯ ಕೈಗೊಂಡಿತು. ಈ ವ್ಯವಸ್ಥೆಯಲ್ಲಿ ಯೆಹೂದಿಗಳಿಗೆ 55% ಹಾಗೂ ಅರಬ್ಬರಿಗೆ 45% ನೆಲ ಹಂಚಿಕೆಯಾಗಿತ್ತು. ಈ ವ್ಯವಸ್ಥೆಯನ್ನು ಯೆಹೂದ್ಯರು ಒಪ್ಪಿಕೊಂಡರೆ ಅರಬ್ಬರು ತಿರಸ್ಕರಿಸಿದರು. ಪ್ಯಾಲೆಸ್ತೈನ್​ನ ವಿಭಜನೆ ಅನುಮೋದಿಸಿ ವಿಶ್ವಸಂಸ್ಥೆ ಮತ್ತೊಮ್ಮೆ ನಿರ್ಣಯ ಕೈಗೊಂಡಿತು. ಈ ಬಾರಿಯೂ ಅರಬ್ಬರು ವಿರೋಧಿಸಿದರು. ಇದು ಮತ್ತೊಮ್ಮೆ ಪುನರಾವರ್ತನೆಯಾದಾಗ ರೋಸಿದ ಯೆಹೂದೀ ನಾಯಕರು ‘ವಿಶ್ವಸಂಸ್ಥೆಯ ನಿರ್ಣಯ ಅರಬ್ಬರಿಗೆ ಸಮ್ಮತವಿರಲೀ, ಇಲ್ಲದೇ ಇರಲಿ, ನಮಗಂತೂ ಸಮ್ಮತ. ಮೇ 15, 1948ರಂದು ಪ್ಯಾಲೆಸ್ತೈನ್​ನಿಂದ ಬ್ರಿಟಿಷ್ ಸೇನೆ ಹೊರನಡೆದೊಡನೇ ನಾವು ವಿಶ್ವಸಂಸ್ಥೆ ನಮಗೆ ನೀಡಿರುವ ಪ್ರದೇಶಗಳಲ್ಲಿ ಸ್ವತಂತ್ರ ಇಸ್ರೇಲನ್ನು ಸ್ಥಾಪಿಸಿಕೊಳ್ಳುತ್ತೇವೆ’ ಎಂದು ಘೊಷಿಸಿದರು. ಹೀಗೆ ಮೇ 15, 1948ರ ಸಂಜೆ 6 ಗಂಟೆಗೆ ಸರಿಯಾಗಿ ಇಸ್ರೇಲ್ ಉದಯಿಸಿತು.

ಎಲ್ಲ ತಯಾರಿಯನ್ನೂ ವ್ಯವಸ್ಥಿತವಾಗಿ ಮಾಡಿಕೊಂಡು ಯೆಹೂದೀ ನಾಯಕರು ಇಸ್ರೇಲನ್ನು ಸ್ಥಾಪಿಸಿದರು. ಆದರೆ ಇಂತಹ ಯಾವುದೇ ತಯಾರಿಯೂ ಪ್ಯಾಲೆಸ್ತೈನ್​ನ ಅರಬ್ ಪಾಳಯದಲ್ಲಿ ನಡೆದಿರಲಿಲ್ಲ. ನೆರೆಯ ಅರಬ್ ರಾಷ್ಟ್ರಗಳ ಸಹಾಯದಿಂದ ಇಸ್ರೇಲ್​ನ ಸ್ಥಾಪನೆಯನ್ನೇ ಯಶಸ್ವಿಯಾಗಿ ತಡೆಗಟ್ಟಬಹುದೆಂದು ನಂಬಿದ್ದ ಅವರೀಗ ಕಂಗಾಲಾದರು. ವಿಶ್ವಸಂಸ್ಥೆ ನೀಡಿದ್ದ ಪ್ರದೇಶಗಳಲ್ಲಿ ಸ್ವತಂತ್ರ ಪ್ಯಾಲೆಸ್ತೈನ್ ನಿರ್ವಿುಸಿಕೊಂಡು ನೆಮ್ಮದಿಯಾಗಿರಲು ಅಗತ್ಯವಾದ ಮುತ್ಸದ್ದಿತನ ತೋರದ ಅರಬ್ ನಾಯಕರು ಘರ್ಷಣೆಯ ಹಾದಿಗಿಳಿದರು. ಅವರ ಋಣಾತ್ಮಕ ನಿಲುವುಗಳು ಸುತ್ತಲ ಅರಬ್ ರಾಷ್ಟ್ರಗಳಲ್ಲಿಯೂ ಮಾನ್ಯತೆ ಪಡೆದದ್ದು ಮುಂದಿನ ಎಲ್ಲಾ ದುರಂತಗಳಿಗೂ ಮೂಲವಾಯಿತು.

ಇಸ್ರೇಲ್ ಸ್ಥಾಪನೆಯಾದ ಮರುಗಳಿಗೆಯೇ ಸುತ್ತಲಿನ ಜೋರ್ಡಾನ್, ಸಿರಿಯಾ, ಲೆಬನಾನ್, ಈಜಿಪ್ಟ್​ಗಳ ಕಡೆಯಿಂದ ದಾಳಿಗೊಳಗಾಯಿತು. ಈ ಸಂಯುಕ್ತ ಅರಬ್ ದಾಳಿ ಯಶಸ್ವಿಯಾಗಿ ಇಸ್ರೇಲ್ ಮೊಳಕೆಯಲ್ಲೇ ಮುರುಟಿಹೋಗುತ್ತದೆಂದೂ, ಇಡೀ ಪ್ಯಾಲೆಸ್ತೈನ್ ತಮ್ಮದಾಗುತ್ತದೆಂದೂ ನಂಬಿದ್ದ ಅರಬ್ಬರಿಗೆ ಅಂತಿಮವಾಗಿ ಆದದ್ದು ಭ್ರಮನಿರಸನ. ಯುದ್ಧದಲ್ಲಿ ಅರಬ್ ದೇಶಗಳು ಸೋತುಹೋದವು, ಜತೆಗೇ ವಿಶ್ವಸಂಸ್ಥೆ ಅರಬ್ಬರಿಗೆ ನೀಡಿದ್ದ ಪ್ರದೇಶಗಳಲ್ಲಿ ಅರ್ಧದಷ್ಟನ್ನು ಇಸ್ರೇಲ್ ಆಕ್ರಮಿಸಿಕೊಂಡು ಅರಬ್ಬರಿಗಾಗಿ ಪಶ್ಚಿಮದ ಮೂಲೆಯಲ್ಲಿ ಒಂದು ತುಂಡು ಗಾಜಾವನ್ನೂ ಪೂರ್ವದಲ್ಲಿ ಜೋರ್ಡಾನ್ ನದಿಯ ಪಶ್ಚಿಮ ತಟಕ್ಕೆ ಹೊಂದಿಕೊಂಡಂತೆ ವೆಸ್ಟ್ ಬ್ಯಾಂಕ್ ಅನ್ನು ಮಾತ್ರ ಉಳಿಸಿತು. ಅಳಿದುಳಿದ ಪ್ರದೇಶಗಳನ್ನಾದರೂ ತಮ್ಮ ಆಡಳಿತಕ್ಕೆ ತೆಗೆದುಕೊಂಡು ಸ್ವತಂತ್ರ ಪ್ಯಾಲೆಸ್ತೈನ್ ಸ್ಥಾಪಿಸಿ, ವಿಶ್ವಸಂಸ್ಥೆಯ ಮಾನ್ಯತೆ ಪಡೆದು, ಕಳೆದುಹೋದ ಪ್ರದೇಶಗಳನ್ನು ಮರಳಿ ಪಡೆಯಲು ರಾಜತಾಂತ್ರಿಕ ಉಪಾಯಗಳನ್ನು ರೂಪಿಸುವಂತಹ ಮುತ್ಸದ್ಧಿತನವನ್ನು ಪ್ರದರ್ಶಿಸುವುದರಲ್ಲಿ ಅರಬ್ಬರು ಸಂಪೂರ್ಣವಾಗಿ ವಿಫಲವಾದರು. ಹೀಗಾಗಿ ಗಾಜಾವನ್ನು ಈಜಿಪ್ಟ್​ನ ಆಡಳಿತಕ್ಕೂ, ವೆಸ್ಟ್ ಬ್ಯಾಂಕ್ ಅನ್ನು ಜೋರ್ಡಾನ್​ನ ಆಡಳಿತಕ್ಕೂ ಒಪ್ಪಿಸಲಾಯಿತು. ‘ಶಾಂತಿಗಾಗಿ ಅರಬ್ಬರಿಂದ ಕೇವಲ ಒಂದು ಟೆಲಿಫೋನ್ ಕರೆಗಾಗಿ ಕಾಯುತ್ತಿದ್ದೇವೆ’ ಎಂಬ ಇಸ್ರೇಲಿ ಹೇಳಿಕೆ ವರ್ಷವರ್ಷಗಳವರೆಗೆ ಅರಣ್ಯರೋದವಾಗುಳಿಯಿತು. ಈ ನಡುವೆ 1964ರಲ್ಲಿ ಅಸ್ತಿತ್ವಕ್ಕೆ ಬಂದ ಪ್ಯಾಲೆಸ್ತೈನ್ ಲಿಬರೇಶನ್ ಆರ್ಗನೈಜೇಸನ್ (ಪಿಎಲ್​ಓ) ಅರಬ್ ದೇಶಗಳ ಸಹಕಾರ ಹಾಗೂ ಬಹುಪಾಲು ಅಲಿಪ್ತ ದೇಶಗಳ ರಾಜತಾಂತ್ರಿಕ ಬೆಂಬಲ ಗಳಿಸಿಕೊಂಡದ್ದರಿಂದಾಗಿ ಸಂಘರ್ಷ ಮುಂದುವರಿಯಿತು. ತಾವು ಹಿಡಿದ ಮಾರ್ಗ ಶಾಂತಿಯತ್ತ ಕರೆದೊಯ್ಯುತ್ತಿಲ್ಲ ಎಂದು ಕೊನೆಗೂ ಅರಬ್ ನಾಯಕರಿಗೆ ಮನವರಿಕೆಯಾಗುವ ಹೊತ್ತಿಗೆ ಮತ್ತೆರಡು ಯುದ್ಧಗಳು ಘಟಿಸಿದ್ದವು.

1967ರ ‘ಆರು ದಿನಗಳ ಯುದ್ಧ’ಕ್ಕೆ ಕಾರಣವಾದದ್ದು ಈಜಿಪ್ಟ್ ಮತ್ತು ಜೋರ್ಡಾನ್​ಗಳ ತಂಟೆಕೋರ ನೀತಿಗಳು. ಈ ದೇಶಗಳು ಅಖಾಬಾ ಕೊಲ್ಲಿಯ ಮೂಲಕ ಕೆಂಪುಸಮುದ್ರ, ಅದರಾಚೆಯ ಹಿಂದೂಮಹಾಸಾಗರಕ್ಕೆ ಇಸ್ರೇಲ್​ಗಿದ್ದ ಒಂದೇ ಸಮುದ್ರ ಮಾರ್ಗವನ್ನು ಮುಚ್ಚಿಹಾಕಿದ್ದಲ್ಲದೇ ಸುಯೆಜ್ ಕಾಲುವೆಯ ಮೂಲಕ ಇಸ್ರೇಲೀ ಹಡಗುಗಳು ಸಂಚರಿಸುವುದನ್ನೂ ನಿರ್ಬಂಧಿಸಿದವು. ಇದರಿಂದಾಗಿ ಇಸ್ರೇಲೀ ಹಡಗುಗಳು ಹಿಂದೂಮಹಾಸಾಗರಕ್ಕೆ ಬರಬೇಕಾದರೆ ಹತ್ತಿರದ ಕೆಂಪುಸಮುದ್ರದ ಹಾದಿ ಬಿಟ್ಟು ಮೆಡಿಟರೇನಿಯನ್ ಸಮುದ್ರದಲ್ಲಿ ಪಶ್ಚಿಮಕ್ಕೆ ಸಾಗಿ, ಜಿಬ್ರಾಲ್ಟರ್ ದಾಟಿ, ಇಡೀ ಆಫ್ರಿಕಾ ಖಂಡವನ್ನು ಸುತ್ತಿಕೊಂಡು ಗುಡ್​ಹೋಪ್ ಭೂಶಿರದ ಮೂಲಕ ಬರಬೇಕಾಗುವಂತಹ ಪರಿಸ್ಥಿತಿ ನಿರ್ವಣವಾಯಿತು. ಇಸ್ರೇಲ್ ಪ್ರತಿಕಾರ್ಯಾಚರಣೆ ಕೈಗೊಂಡು ಕೇವಲ ಆರೇ ದಿನಗಳಲ್ಲಿ ಈಜಿಪ್ಟ್​ನ ಸಿನಾಯ್ ಪರ್ಯಾಯದ್ವೀಪ ಆಕ್ರಮಿಸಿಕೊಂಡು ಅಖಾಬಾ ಕೊಲ್ಲಿಯಿಂದ ಈಜಿಪ್ಟ್ ಕಾಲ್ತೆಗೆಯುವಂತೆ ಮಾಡಿತು. ಆ ಹಾದಿಯಲ್ಲಿ ಅದು ಗಾಜಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಾಗಿತ್ತು. ಜತೆಗೆ, ವೆಸ್ಟ್ ಬ್ಯಾಂಕ್​ನಿಂದ ಜೋರ್ಡಾನಿಯರನ್ನೂ ಹೊರಗಟ್ಟಿತು. ಅಲ್ಲಿಗೆ ಪ್ಯಾಲೆಸ್ತೈನೀಯರ ಎಲ್ಲ ಪ್ರದೇಶಗಳೂ ಇಸ್ರೇಲಿನ ಕೈಸೇರಿದವು. ಜತೆಗೆ ಸಿರಿಯಾದ ಗೋಲಾನ್ ಬೆಟ್ಟಪ್ರದೇಶಗಳ ಮೇಲೂ ಇಸ್ರೇಲ್ ಹಿಡಿತ ಸಾಧಿಸಿತು.

ಈ ಯುದ್ಧದ ಪರಿಣಾಮವಾಗಿ ಸುಮಾರು ಎರಡೂವರೆ ಲಕ್ಷ ಪ್ಯಾಲೆಸ್ತೀನೀಯರು ನಿರಾಶ್ರಿತರಾಗಿ ನೆರೆಯ ಜೋರ್ಡಾನ್​ನಲ್ಲಿ ಆಶ್ರಯ ಪಡೆದರು. ಆದರೆ ಅಲ್ಲಿಯೂ ಅವರ ಬದುಕು ಸುಗಮವಾಗಲಿಲ್ಲ. ಪ್ಯಾಲೆಸ್ತೈನ್ ಗೆರಿಲ್ಲಾಗಳು ತಮಗೆ ಆಶ್ರಯ ನೀಡಿದ ಜೋರ್ಡಾನ್​ನ ರಾಜಪ್ರಭುತ್ವವನ್ನೇ ಕಿತ್ತೊಗೆದು, ಆ ದೇಶವನ್ನೇ ತಮ್ಮ ಕೈಗೆ ತೆಗೆದುಕೊಳ್ಳಲು ಸೆಪ್ಟೆಂಬರ್ 1970ರಲ್ಲಿ ಪಿತೂರಿ ನಡೆಸಿದರು. ಜೋರ್ಡಾನ್ ಸೇನೆ ಸಾವಿರಕ್ಕೂ ಹೆಚ್ಚಿನ ಪ್ಯಾಲೆಸ್ತೀನೀ ಗೆರಿಲ್ಲಾಗಳನ್ನು ಕೊಂದಿತು. ಇತಿಹಾಸದಲ್ಲಿ ‘ಬ್ಲಾ್ಯಕ್ ಸೆಪ್ಟೆಂಬರ್’ ಎಂದು ಗುರುತಿಸಲ್ಪಡುವ ಈ ಘಟನಾವಳಿಗಳ ಪರಿಣಾಮವಾಗಿ ಪಿಎಲ್​ಓ ಜೋರ್ಡಾನ್​ನಿಂದ ಗಡಿಪಾರಾಗಿ ಲೆಬನಾನ್​ಗೆ ಓಡುವಂತಾಯಿತು. ಅರಾಜಕತೆಯಲ್ಲಿ ಬೇಯುತ್ತಿದ್ದ ಆ ದೇಶದಲ್ಲಿ ಇವರದ್ದೇ ದರಬಾರು ಮುಂದಿನ ಹನ್ನೆರಡು ವರ್ಷ ಅವ್ಯಾಹತವಾಗಿ ಸಾಗಿತು. ಲೆಬನೀಸ್ ಪ್ರದೇಶಗಳ ಮೂಲಕ ಉತ್ತರ ಇಸ್ರೇಲ್ ಮೇಲೆ ದಾಳಿಯೆಸಗುತ್ತಿದ್ದ ಪ್ಯಾಲೆಸ್ತೈನ್ ಗೆರಿಲ್ಲಾಗಳ ವಿರುದ್ಧ 1982ರಲ್ಲಿ ಕಾರ್ಯಾಚರಣೆ ಕೈಗೊಂಡ ಇಸ್ರೇಲ್ ಬೈರೂತ್ ನಗರವನ್ನು ವಶಕ್ಕೆ ತೆಗೆದುಕೊಂಡು ಅಲ್ಲಿದ್ದ ಪಿಎಲ್​ಓ ಗೆರಿಲ್ಲಾಗಳನ್ನು ಹೊರಗಟ್ಟಿತು. ಪಿಎಲ್​ಓ ಓಡಿಹೋಗಿ ಕೊನೆಗೆ ನೆಲೆನಿಂತದ್ದು ದೂರದ ಟ್ಯುನೀಸಿಯಾದಲ್ಲಿ.

ಈ ನಡುವೆ 1974ರಲ್ಲಿ ಇಸ್ರೇಲ್​ನ ರಕ್ಷಣಾ ಕೊರತೆಗಳ ಬಗ್ಗೆ ಸೋವಿಯೆತ್ ಯೂನಿಯನ್ ನೀಡಿದ ತಪ್ಪು ಸಲಹೆಗಳನ್ನು ನಂಬಿ ಈಜಿಪ್ಟ್ ಹಠಾತ್ ದಾಳಿ ನಡೆಸಿತು. ಇದರ ಉದ್ದೇಶ 1967ರಲ್ಲಿ ಕಳೆದುಕೊಂಡಿದ್ದ ಸಿನಾಯ್ ಪ್ರದೇಶವನ್ನು ಮರಳಿ ಪಡೆದುಕೊಳ್ಳುವುದಾಗಿತ್ತು. ಈ ದಾಳಿಗೆ ಈಜಿಪ್ಟ್ ಆಯ್ದುಕೊಂಡ ಸಮಯ ಯೆಹೂದಿಗಳ ವಾರ್ಷಿಕ ‘ಯೋಂ ಕಿಪ್ಪುರ್’ ಉಪವಾಸದ ದಿನಗಳು. ಈ ಯುದ್ಧವನ್ನು ಇಸ್ರೇಲ್ ತುಸು ಪ್ರಯಾಸದಿಂದಲೇ ಜಯಿಸಿತು. ನಂತರ ಈಜಿಪ್ಟ್​ನ ಅದ್ಯಕ್ಷ ಅನ್ವರ್ ಸದಾತ್ ಶಾಂತಿಯುತ ಮಾತುಕತೆಗಳ ವಿವೇಕಯುತ ನಿರ್ಧಾರ ಕೈಗೊಂಡರು. ಪರಿಣಾಮವಾಗಿ ಮೊದಲಿಗೆ ರುಮೇನಿಯಾ ನಂತರ ಅಮೆರಿಕಾದ ಮಧ್ಯಸ್ಥಿಕೆಗಳ ಮಾತುಕತೆಗಳು ಫಲ ನೀಡಿ 1978ರಲ್ಲಿ ಕ್ಯಾಂಪ್ ಡೇವಿಡ್​ನಲ್ಲಿ ಒಪ್ಪಂದಕ್ಕೆ ಸಹಿ ಬಿದ್ದು, ಈಜಿಪ್ಟ್ ಅಧಿಕೃತವಾಗಿ ಇಸ್ರೇಲ್​ನ ಅಸ್ತಿತ್ವವನ್ನು ಮಾನ್ಯಮಾಡಿತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸಿನಾಯ್ ಪರ್ಯಾಯದ್ವೀಪವನ್ನು ಈಜಿಪ್ಟ್​ಗೆ ಹಿಂತಿರುಗಿಸಿತು. ಯಾವುದೇ ಅರಬ್ ರಾಷ್ಟ್ರದ ಜತೆ ಮೈತ್ರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳುತ್ತಿದ್ದ ಇಸ್ರೇಲ್​ನ ಶಾಂತಿನಿಷ್ಠೆ ಜಗತ್ತಿಗೆ ಮನವರಿಕೆಯಾಯಿತು. 1982ರಲ್ಲಿ ಬೈರೂತ್​ನಿಂದ ಟ್ಯುನೀಸಿಯಾಗೆ ಅಟ್ಟಲ್ಪಟ್ಟ ಮೇಲೆ ಪಿಎಲ್​ಓಗೂ ಇದು ಅರಿವಾಯಿತು. ಅದರ ಅಧ್ಯಕ್ಷ ಯಾಸೆರ್ ಅರಾಫತ್ ಹಿಂಸಾಮಾರ್ಗ ತೊರೆಯುತ್ತಿರುವುದಾಗಿ ನವೆಂಬರ್ 15, 1988ರಂದು ಘೊಷಿಸಿದರು. ಮುಂದೆ ನಡೆದದ್ದು ಇತಿಹಾಸ.

ನಾರ್ವೆಯ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳು ಫಲಪ್ರದಗೊಂಡು ಸೆಪ್ಟೆಂಬರ್ 13, 1993ರಂದು ವಾಷಿಂಗ್​ಟನ್​ನಲ್ಲಿ ಒಪ್ಪಂದಕ್ಕೆ ಸಹಿ ಬಿತ್ತು. ಇಸ್ರೇಲ್​ನ ಅಸ್ತಿತ್ವವನ್ನು ಪಿಎಲ್​ಓ ಕೊನೆಗೂ ಒಪ್ಪಿಕೊಂಡಿತು. ಪ್ರತಿಯಾಗಿ ಸ್ವತಂತ್ರ ಪ್ಯಾಲೆಸ್ತೈನ್ ನಿರ್ವಣದ ಪ್ರಕ್ರಿಯೆಗೆ ಇಸ್ರೇಲ್ ಚಾಲನೆ ನೀಡಿತು. ಮೊದಲಿಗೆ ಗಾಜಾ ಮತ್ತು ವೆಸ್ಟ್ ಬ್ಯಾಂಕ್​ನ ಜೆರಿಕೋ ಪಟ್ಟಣಗಳನ್ನು ಪಡೆದುಕೊಂಡ ಪ್ಯಾಲೆಸ್ತೀನ್ ಅರಬ್ಬರಿಗೆ ಹಂತಹಂತವಾಗಿ ವೆಸ್ಟ್ ಬ್ಯಾಂಕ್​ನ ಇತರ ಪ್ರದೇಶಗಳ ಮೇಲೆ ಅಧಿಕಾರ ದಕ್ಕಿತು. 1996ರಲ್ಲಿ ನಡೆದ ಚುನಾವಣೆಗಳಲ್ಲಿ ಪಿಎಲ್​ಓ ಅಧ್ಯಕ್ಷ ಯಾಸೆರ್ ಅರಾಫತ್ ಪ್ಯಾಲೆಸ್ತೈನ್​ನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಶಾಂತಿ ಪ್ರಕ್ರಿಯೆಯನ್ನು ಹಾಳುಗೆಡವಿದ್ದು 2006ರ ಗಾಜಾದ ಪ್ರಾಂತೀಯ ಚುನಾವಣೆಗಳಲ್ಲಿ ಜಯಗಳಿಸಿದ ಹಮಾಸ್. ಮೊದಲಿಗೆ ವೆಸ್ಟ್ ಬ್ಯಾಂಕ್​ನಲ್ಲಿ ಅಧಿಕಾರದಲ್ಲಿದ್ದ ಫತಾ (ಪಿಎಲ್​ಓನ ಅಂಗವಾದ ಶಾಂತಿಪರ ಪಕ್ಷ) ವಿರುದ್ಧವೇ 2007ರಲ್ಲಿ ಸಂಘರ್ಷಕ್ಕಿಳಿದ ಹಮಾಸ್ 2008ರಲ್ಲಿ ಇಸ್ರೇಲ್ ಜತೆಗೇ ಕಾಳಗಕ್ಕಿಳಿಯಿತು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

TAGGED:
Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…