ಆಜಾದ್ ಕಾಶ್ಮೀರಕ್ಕಿರುವ ಆಜಾದಿ ಎಷ್ಟು?

2006ರ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ವರದಿ ಉಲ್ಲೇಖಿಸಿರುವಂತೆ ಮುಝಾಫರಾಬಾದ್​ನ ನಿವಾಸಿಯೊಬ್ಬನ ಹೇಳಿಕೆ ಇದು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನತೆ ಪಾಕಿಸ್ತಾನವನ್ನು ನೋಡುವ ಬಗೆ ಏನೆಂದು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಜಮ್ಮು ಮತ್ತು ಕಾಶ್ಮೀರದ ಒಂದು ತುಂಡನ್ನು ಪಾಕಿಸ್ತಾನ ಗಳಿಸಿಕೊಂಡದ್ದೇ ದುರಾಕ್ರಮಣದ ಮೂಲಕ. ನೆಲದಾಹ, ಸುಳ್ಳು, ಮೋಸ, ಕ್ರೌರ್ಯಗಳಿಂದ ಕೂಡಿದ ಆ ದುರಾಕ್ರಮಣ ಇತಿಹಾಸದ ಒಂದು ಕಪ್ಪು ಅಧ್ಯಾಯ.

ಇಂದು ‘ಆಜಾದ್ ಕಶ್ಮೀರ್’ ಎಂದು ಕರೆಸಿಕೊಳ್ಳುತ್ತಿರುವ ಪ್ರದೇಶದಲ್ಲಿ 1947 ರಲ್ಲಿ ಎಂಥ ಪರಿಸ್ಥಿತಿ ಇತ್ತೆನ್ನುವುದನ್ನು ಇತಿಹಾಸಕ್ಕೆ ಅಪಚಾರವಾಗದಂತೆ ಇಲ್ಲಿ ದಾಖಲಿಸಲೇಬೇಕು. ಪಾಕಿಸ್ತಾನಕ್ಕೆ ಹೊಂದಿಕೊಂಡಿದ್ದ ಮೀರ್​ಪುರ್, ಕೋಟ್ಲಿ, ಪೂಂಛ್ ಹಾಗೂ ಮುಝಾಫರಾಬಾದ್ ಜಿಲ್ಲೆಗಳ ಭೂಮಾಲಿಕರು ಮತ್ತು ಪ್ರಭಾವಿ ವ್ಯಕ್ತಿಗಳು ಮಹಾರಾಜ ಹರಿಸಿಂಗ್ ವಿರುದ್ಧ ದಂಗೆಯೆದ್ದಿದ್ದ ದಿನಗಳು ಅವು. ಪರಿಣಾಮವಾಗಿ ಆ ಜಿಲ್ಲೆಗಳ ಮೇಲೆ ಶ್ರೀನಗರದ ಹಿಡಿತ ಸಾಕಷ್ಟು ಸಡಿಲವಾಗಿಹೋಗಿತ್ತು. ಜತೆಗೆ, ಅಲ್ಲಿಯ ಜನತೆ ಜನಾಂಗೀಯವಾಗಿ ಪಂಜಾಬಿಗಳಿಗೆ ಹತ್ತಿರದವರು ಮತ್ತು ಧಾರ್ವಿುಕವಾಗಿ ಸುನ್ನಿಗಳು ಕೂಡ. ಈ ಎಲ್ಲಾ ಕಾರಣಗಳಿಂದಾಗಿ ಆ ಜಿಲ್ಲೆಗಳ ಜನರು ಅಂದು ಸಹಜವಾಗಿಯೇ ಪಾಕಿಸ್ತಾನದ ಪರವಾಗಿದ್ದರು. ಆದರೆ ಪಾಕಿಸ್ತಾನದ ಕಣ್ಣು ಇಡೀ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನದ ಮೇಲಿತ್ತು. ಮುಸ್ಲಿಂ ಬಹುಸಂಖ್ಯಾತವಾಗಿದ್ದ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನ ಪಾಕಿಸ್ತಾನದ ಭಾಗ ಆಗೇ ಆಗುತ್ತದೆಂದು ಮುಸ್ಲಿಂ ಲೀಗ್ ನಾಯಕರು ನಂಬಿದ್ದರಷ್ಟೇ. ಆ ನಂಬಿಕೆ ಅದೆಷ್ಟು ಬಲವಾಗಿತ್ತೆಂದರೆ ಶ್ರೀನಗರದ ದಾಲ್ ಸರೋವರದಲ್ಲಿ ವಿಹರಿಸಲೆಂದು ಜಿನ್ನಾ ಸಾಹೇಬರು ಹೌಸ್ ಬೋಟ್ ಒಂದನ್ನು ಖರೀದಿಸಿ ಇಟ್ಟುಕೊಳ್ಳುವಷ್ಟು! . ಆದರೆ ಪಾಕಿಸ್ತಾನದ ರಾಜಕೀಯ, ರಾಜತಾಂತ್ರಿಕ ಕೊನೆಗೆ ಆರ್ಥಿಕ ಒತ್ತಡಗಳು ಸಹಾ ಮಹಾರಾಜ ಹರಿಸಿಂಗ್​ನ ಮನವನ್ನು ಪಾಕಿಸ್ತಾನದತ್ತ ಹೊರಳಿಸುವುದರಲ್ಲಿ ವಿಫಲವಾದವು.

ಆಗ ಪಾಕಿಸ್ತಾನ ಹಿಡಿದದ್ದು ಬಲಪ್ರಯೋಗದ ಹಾದಿ. ಲಭ್ಯ ಮಾಹಿತಿಗಳ ಪ್ರಕಾರ ಅದಕ್ಕೆ ಸಿದ್ಧತೆ ಆರಂಭಿಸಿದ್ದು ರಾವಲ್ಪಿಂಡಿಯಲ್ಲಿದ್ದ ಪಾಕ್ ಸೇನೆ. ಕರಾಚಿಯಲ್ಲಿದ್ದ ರಾಜಕೀಯ ನಾಯಕತ್ವಕ್ಕೆ ಪರಿಸ್ಥಿತಿಯ ಮೇಲೆ ಪೂರ್ಣ ಹಿಡಿತವಾಗಲೀ, ವಿದ್ಯಮಾನಗಳ ಪೂರ್ಣ ಚಿತ್ರಣವಾಗಲೀ ಇರಲಿಲ್ಲ. ಕಾಶ್ಮೀರದ ಮೇಲಿನ ಸೇನಾಕ್ರಮಣದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಜಗತ್ತನ್ನು ನಂಬಿಸುವುದಕ್ಕಾಗಿ ಪಾಕ್ ಸೇನೆ ಅನುಸರಿಸಿದ್ದು ಕುಯುಕ್ತಿ ಹಾಗೂ ಸುಳ್ಳಿನ ಹಾದಿ. ಆಕ್ರಮಣದ ಯೋಜನೆಯ ರೂವಾರಿ ಮೇಜರ್ ಜನರಲ್ ಅಕ್ಬರ್ ಖಾನ್ ತನಗೆ ಜನರಲ್ ತಾರಿಖ್ ಎಂಬ ಹೆಸರಿಟ್ಟುಕೊಂಡಿದ್ದ. ಜನರಲ್ ತಾರಿಖ್ ಇಸ್ಲಾಮಿಕ್ ಇತಿಹಾಸದಲ್ಲಿ ಒಂದು ಮುಖ್ಯ ಹೆಸರು. ಈತ ಮಧ್ಯಯುಗದಲ್ಲಿ ದಕ್ಷಿಣ ಸ್ಪೇನ್​ನಲ್ಲಿ ಇಸ್ಲಾಮಿಕ್ ಅಧಿಕಾರವನ್ನು ಸ್ಥಾಪಿಸಿ ಇಸ್ಲಾಮನ್ನು ಯೂರೋಪಿನ ನೆಲಕ್ಕೆ ಕೊಂಡೊಯ್ದಿದ್ದ. ಕಾಶ್ಮೀರದಲ್ಲಿ ಕಾಫಿರ್ ಆಡಳಿತವನ್ನು ಅಂತ್ಯಗೊಳಿಸಿ ಇಸ್ಲಾಮಿಕ್ ಶಾಸನವನ್ನು ಸ್ಥಾಪಿಸಿ ಆಧುನಿಕ ಜನರಲ್ ತಾರಿಖ್ ಆಗುವ ಮಹತ್ವಾಕಾಂಕ್ಷೆ ಅಕ್ಬರ್ ಖಾನ್​ನದು. ಕಾಶ್ಮೀರದ ಮೇಲೆ ಆಕ್ರಮಣವೆಸಗಲು ಅತ ಗಡಿನಾಡು ಪ್ರಾಂತ್ಯದ ಐದುಸಾವಿರ ಪಠಾಣರನ್ನು ಒಟ್ಟುಗೂಡಿಸಿ, ಅವರಿಗೆ ಶಸ್ತ್ರಾಸ್ತ್ರ ನೀಡಿದ. ದಾಳಿಗೆ ಸಜ್ಜಾಗಿ ನಿಂತ ಶಸ್ತ್ರಸಜ್ಜಿತ ಅಫ್ರೀದಿ ಬುಡಕಟ್ಟು ಸೇನೆಗೆ ಅಕ್ಬರ್ ಖಾನ್ ಹೇಳಿದ್ದು- ‘ಶ್ರೀನಗರ ತಲುಪುವವರೆಗೆ ಎಲ್ಲಿಯೂ ನಿಲ್ಲಬೇಡಿ. ಶ್ರೀನಗರ ಸೇರಿ ಅಲ್ಲಿ ಪಾಕಿಸ್ತಾನೀ ಧ್ವಜವನ್ನು ಹಾರಿಸಿದ ಮೇಲೆ ಕಾಶ್ಮೀರದ ನೆಲ ಪಾಕಿಸ್ತಾನಕ್ಕೆ, ಅಲ್ಲಿನ ಐಶ್ವರ್ಯ ಮತ್ತು ಹೆಣ್ಣುಗಳು ನಿಮಗೆ’.

ಪಾಕಿಸ್ತಾನೀಯರಿಗೆ ಕಾಶ್ಮೀರದ ಜನತೆಯ ಬಗ್ಗೆ ಯಾವ ಅಭಿಪ್ರಾಯವಿತ್ತು ಎನ್ನುವುದರ ಸ್ಪಷ್ಟ ಸೂಚನೆ ಇದರಿಂದ ದೊರೆಯುತ್ತದೆ. ಅವರಿಗೆ ಬೇಕಾಗಿದ್ದುದು ಕೇವಲ ಕಾಶ್ಮೀರದ ನೆಲ ಅಷ್ಟೇ, ಜನ ಅಲ್ಲ. ‘ಕಾಶ್ಮೀರಿ ಸಹೋದರ ಸಹೋದರಿಯರ ಮೇಲೆ ಭಾರತ ಅತ್ಯಾಚಾರವೆಸಗುತ್ತಿದೆ’, ‘ಮುಗ್ಧ ಕಾಶ್ಮೀರಿಗಳನ್ನು ಕಾಫಿರ್ ಭಾರತೀಯರ ದಬ್ಬಾಳಿಕೆಯಿಂದ ಕಾಪಾಡಬೇಕು’ ಎಂಬ ಪಾಕಿಸ್ತಾನದ ಎಪ್ಪತ್ತೆರಡು ವರ್ಷಗಳ ಕೂಗಿನ ಹಿಂದಿನ ಪ್ರಾಮಾಣಿಕತೆಯ ಮಟ್ಟ ತಿಳಿಯಲು ಅಕ್ಬರ್ ಖಾನ್​ನ ಮಾತುಗಳು ಸಾಕು.

ಅಕ್ಟೋಬರ್ 22ರ ರಾತ್ರಿ ಕಾಶ್ಮೀರವನ್ನು ಪ್ರವೇಶಿಸಿದ ದಾಳಿಕೋರರು ಮರುದಿನ ಬೆಳಿಗ್ಗೆ ಮುಝಾಫರಾಬಾದ್ ಪಟ್ಟಣವನ್ನು ವಶಪಡಿಸಿಕೊಂಡರು. ಮಹಾರಾಜ ಹರಿಸಿಂಗ್ ಶಾಸನದ ವಿರುದ್ಧ ಆ ಪ್ರದೇಶದಲ್ಲಿ ಅದಾಗಲೇ ದಂಗೆ ಜಾರಿಯಲ್ಲಿದ್ದ ಕಾರಣ ಅಲ್ಲಿನ ನಿವಾಸಿಗಳು ದಾಳಿಕೋರರನ್ನು ಉತ್ಸಾಹದಿಂದ ಸ್ವಾಗತಿಸಿದರು. ಆದರೆ ಅಂತಹದೇ ಸ್ವಾಗತ ಶ್ರೀನಗರಕ್ಕೆ ಮೂವತ್ತಾರು ಕಿಲೋಮೀಟರ್ ಹತ್ತಿರದ ಬಾರಾಮುಲ್ಲಾದಲ್ಲಿ ಅವರಿಗೆ ದೊರೆಯಲಿಲ್ಲ. ಅವರ ಪೈಶಾಚಿಕ ಮನಸ್ಥಿತಿ ಅನಾವರಣಗೊಳ್ಳಲು ಅಷ್ಟು ಸಾಕಾಯಿತು. ಸಂಯಮ ಕಳೆದುಕೊಂಡ ದಾಳಿಕೋರರು ಅಕ್ಬರ್ ಖಾನ್​ನ ಆದೇಶಕ್ಕೆ ವಿರುದ್ಧವಾಗಿ ಬಾರಾಮುಲ್ಲಾದಲ್ಲೇ ಕೊಲೆಸುಲಿಗೆ, ಲೂಟಿ, ಮಾನಭಂಗಗಳಲ್ಲಿ ತೊಡಗಿ ಒಂದೂವರೆ ದಿನ ಕಳೆದುಬಿಟ್ಟರು. ದಾಳಿಕೋರರು ಬಾರಾಮುಲ್ಲಾ ಪ್ರವೇಶಿಸಿದಾಗ ಅಲ್ಲಿದ್ದ ಜನಸಂಖ್ಯೆ ನಲವತೆôದು ಸಾವಿರ, ಆರು ತಿಂಗಳ ನಂತರ ಭಾರತೀಯ ಸೇನೆ ಆ ಪಟ್ಟಣವನ್ನು ವಿಮೋಚನೆಗೊಳಿಸಿದಾಗ ಅಲ್ಲಿದ್ದದ್ದು ನಾಲ್ಕು ಸಾವಿರದ ಇನ್ನೂರು ಜನ ಮಾತ್ರ! ಬಹುತೇಕ ಎಲ್ಲ ಮಹಿಳೆಯರೂ ಮಾನಭಂಗಕ್ಕೊಳಗಾಗಿದ್ದರು. ಚರ್ಚ್ ನಲ್ಲಿದ್ದ ಯೂರೋಪಿಯನ್ ಸನ್ಯಾಸಿನಿಯರಿಗೂ ಅದೇ ಗತಿಯಾಗಿತ್ತು. ಆ ಮಹತ್ವಪೂರ್ಣ ಮೂವತ್ತಾರು ಗಂಟೆಗಳಲ್ಲೇ ಮಹಾರಾಜ ಹರಿಸಿಂಗ್ ಕಾಶ್ಮೀರವನ್ನು ಭಾರತದ ಭಾಗವಾಗಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತೀಯ ಸೇನೆ ಕಾಶ್ಮೀರ ಕಾರ್ಯಾಚರಣೆಗೆ ತುರ್ತು ತಯಾರಿ ಆರಂಭಿಸಿದ್ದು. ಇದ್ಯಾವುದೂ ಈ ನರರಾಕ್ಷಸ ದಾಳಿಕೋರರ ಗಮನಕ್ಕೆ ಬಂದಿರಲಿಲ್ಲ. ನಂತರ, ಅಕ್ಬರ್ ಖಾನ್​ನ ಸೂಚನೆಯಂತೆ ಎಚ್ಚೆತ್ತು ಶ್ರೀನಗರದತ್ತ ಸಾಗಿದರೂ, ಅವರು ರಾಜಧಾನಿಗೆ ಮೂವತ್ತು ಕಿಲೋಮೀಟರ್ ದೂರದಲ್ಲಿರುವಾಗಲೇ ಭಾರತೀಯ ವಿಮಾನಗಳು ಶ್ರೀನಗರದ ವಿಮಾನನಿಲ್ದಾಣದಲ್ಲಿ ಇಳಿಯತೊಡಗಿದ್ದವು. ಅಲ್ಲಿಗೆ ಶ್ರೀನಗರದಲ್ಲಿ ಪಾಕಿಸ್ತಾನೀ ಧ್ವಜ ಹಾರಿಸುವ ಅಕ್ಬರ್ ಖಾನ್​ನ ಆಸೆ ಇತಿಹಾಸ ಸೇರಿತು.

ಒಂದುವೇಳೆ ಆ ದಾಳಿಕೋರರು ಬಾರಾಮುಲ್ಲಾದಲ್ಲಿ ನಿಲ್ಲದೆ ನೇರವಾಗಿ ಶ್ರೀನಗರಕ್ಕೆ ಸಾಗಿದ್ದರೆ ಏನಾಗಬಹುದಿತ್ತು? ಬಹುಶಃ ಬಾರಾಮುಲ್ಲಾದಲ್ಲಿ ನಡೆದ ಕರಾಳ ಕೃತ್ಯಗಳು ಹಲವು ಪಟ್ಟು ಹೆಚ್ಚಿನ ಮಟ್ಟದಲ್ಲಿ ಶ್ರೀನಗರಲ್ಲಿ ಘಟಿಸುತ್ತಿದ್ದವು. ಅಂದರೆ ಬಾರಾಮುಲ್ಲಾದ ಜನ ತಮ್ಮ ಮಾನ ಪ್ರಾಣಗಳನ್ನು ಬಲಿಕೊಟ್ಟು ತಮಗರಿವಿಲ್ಲದಂತೆ ಶ್ರೀನಗರದ ತಮ್ಮ ಸೋದರ-ಸೋದರಿಯರನ್ನು ಕಾಪಾಡಿದರೇ? ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ಹೌದು ಎಂದಾದರೂ ಅದನ್ನು ತುಂಬ ನೋವಿನಿಂದ ಹೇಳಬೇಕಾಗಿದೆ. ಆ ದಿನಗಳ ಕರಾಳ ಕೃತ್ಯಗಳು ನಮಗೆ ನೋವು ತಂದರೂ ಅದು ಪಾಕಿಸ್ತಾನೀಯರಿಗೆ ಸಂಭ್ರಮದ ಕ್ಷಣಗಳು. ಮುಝಾಫರಾಬಾದ್​ನಲ್ಲಿ ದಾಳಿಕೋರರಿಗೆ ಸಿಕ್ಕಿದ ಸ್ವಾಗತ ಇಡೀ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನದಲ್ಲಿ ದೊರೆಯುತ್ತದೆಂದು ಭಾವಿಸಿದ್ದ ಪಾಕ್ ಸೇನೆ ಅಕ್ಟೋಬರ್ 24ರಂದು ತನ್ನ ವಶದಲ್ಲಿದ್ದ ಪ್ರದೇಶವನ್ನು ತಾನು ಮಹಾರಾಜ ಹರಿಸಿಂಗ್​ನ ದಮನಕಾರಿ ಆಡಳಿತದಿಂದ ವಿಮೋಚನೆಗೊಳಿಸಿರುವುದಾಗಿ ಘೊಷಿಸಿ, ಆಜಾದ್ ಅಂದರೆ ಸ್ವತಂತ್ರ ಜಮ್ಮು ಮತ್ತು ಕಾಶ್ಮೀರವನ್ನು ಸ್ಥಾಪಿಸಿತು. ಅಂದಿನಿಂದ ಅಕ್ಟೋಬರ್ 24 ಅನ್ನು ಆಜಾದ್ ಕಾಶ್ಮೀರದ ಸ್ವಾತಂತ್ರ್ಯ ದಿನವೆಂದು ಆಚರಿಸಲಾಗುತ್ತಿದೆ.

ಅಕ್ಟೋಬರ್ 27ರಂದು ಭಾರತೀಯ ಸೇನೆ ದಾಳಿಕೋರರ ವಿರುದ್ಧ ಕಾರ್ಯಾಚರಣೆಯನ್ನಾರಂಭಿಸಿತು. ತತ್​ಕ್ಷಣ ಮಾರುವೇಷದ ಪಾಕ್ ಸೈನಿಕರು ದಾಳಿಕೋರರೊಂದಿಗೆ ಸೇರಿ ಕಾದಾಟಕ್ಕಿಳಿದರು. ಪರಿಣಾಮವಾಗಿ ಪಾಕ್ ಹಿಡಿತಕ್ಕೆ ಬಿದ್ದ ಪ್ರದೇಶಗಳು ವಿಸ್ತಾರವಾಗುತ್ತ ಸಾಗಿದರೂ, ಶ್ರೀನಗರ ತಲುಪುವ ಅವರ ಪ್ರಯತ್ನ ಯಶಸ್ವಿಯಾಗುವ ಸಾಧ್ಯತೆ ಕಾಣಲಿಲ್ಲ. ಅಂತಿಮವಾಗಿ ಪಾಕ್ ಸೇನೆ ಮಾರ್ಚ್ 1948ರಲ್ಲಿ ತನ್ನೆಲ್ಲ ಮುಖವಾಡಗಳನ್ನೂ ಕಳಚಿ ನೇರವಾಗಿ ಯುದ್ಧಕ್ಕಿಳಿಯಿತು. ಆದಾಗ್ಯೂ, ಮುಂದಿನ ತಿಂಗಳುಗಳಲ್ಲಿ ಭಾರತೀಯ ಸೇನೆಯ ಕೈ ಮೇಲಾಗಿ 1949 ಜನವರಿ 1ರಂದು ಕದನವಿರಾಮ ಘೊಷಣೆಯಾಗಿ ಪ್ರಥಮ ಕಾಶ್ಮೀರ ಯುದ್ಧ ಮುಕ್ತಾಯವಾದಾಗ ಪಾಕಿಸ್ತಾನದ ಕೈಯಲ್ಲುಳಿದದ್ದು ಉತ್ತರದ ವಿಶಾಲ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ, ಅದರ ದಕ್ಷಿಣದಲ್ಲಿ ಕಿರಿದಾದ ಉದ್ದನೆಯ ಒಂದು ಪಟ್ಟಿ. ಗಿಲ್ಗಿಟ್ ಮತ್ತು ಬಾಲ್ಟಿಸ್ತಾನಗಳನ್ನು ಕಾಶ್ಮೀರದ ಭಾಗವಲ್ಲವೆಂದೂ, ಅದು ದೇಶವಿಭಜನೆಯ ಪರಿಣಾಮವಾಗಿ ತನಗೆ ನೇರವಾಗಿ ಬಂದ ಪ್ರದೇಶವೆಂದೂ ಪಾಕಿಸ್ತಾನ ವಾದಿಸಿ ಆ ಪ್ರದೇಶಕ್ಕೆ ಪ್ರತ್ಯೇಕ ರಾಜಕೀಯ ಸ್ಥಾನಮಾನ ನೀಡಿದ್ದನ್ನು ಈಗಾಗಲೇ ವಿವರವಾಗಿ ಹೇಳಿದ್ದೇನೆ. ದಕ್ಷಿಣದ, 1947 ಅಕ್ಟೋಬರ್ 24ರಂದು ಪಾಕಿಸ್ತಾನ ಆಜಾದ್ ಜಮ್ಮು ಮತ್ತು ಕಾಶ್ಮೀರ ಎಂದು ಘೊಷಿಸಿದ್ದ ಸ್ವತಂತ್ರ ಕಾಶ್ಮೀರದ ವಿಸ್ತೀರ್ಣ ಕದನವಿರಾಮದ ಹೊತ್ತಿಗೆ ಸಾಕಷ್ಟು ಕುಗ್ಗಿ ಕೇವಲ 400 ಕಿಲೋಮೀಟರ್ ಉದ್ದ, 16ರಿಂದ 64 ಕಿಲೋಮೀಟರ್ ಅಗಲದ, 13,297 ಕಿಲೋಮೀಟರ್ ವಿಸ್ತೀರ್ಣದ ಪುಟ್ಟ ಪ್ರದೇಶವಷ್ಟೇ. ಅಲ್ಲಿನ ಸರ್ಕಾರವನ್ನು ಜಮ್ಮು ಮತ್ತು ಕಾಶ್ಮೀರದ ಅಧಿಕೃತ ಸರ್ಕಾರವೆಂದು ಬಣ್ಣಿಸುತ್ತ ಪಾಕಿಸ್ತಾನ ಅದನ್ನೊಂದು ಸಾಕುನಾಯಿಯಂತೆ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟದಂತಹ ತನಗೆ ಅನುಕೂಲವೆನಿಸುವ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಕರೆದೊಯ್ದು ಪ್ರದರ್ಶನ ಮಾಡುತ್ತಿದೆ.

ಇಲ್ಲಿ ಪ್ರಶ್ನೆಯೇಳುವುದು ‘ಆಜಾದ್ ಕಾಶ್ಮೀರ’ಕ್ಕೆ ಎಷ್ಟು ‘ಅಜಾದಿ’ ಇದೆ ಎಂದು. 1947ರಿಂದ 1970ರವರೆಗೆ ಅಲ್ಲಿನ ಆಡಳಿತಗಾರರು ಪಾಕ್ ಸರ್ಕಾರದಿಂದ ನೇಮಕವಾಗುತ್ತಿದ್ದರು ಮತ್ತು ಅವರಿಗೆ ಸಹಕಾರಿಯಾಗಿ ನಿಂತದ್ದು ಪಾಕ್ ಸೇನೆ. ಜನತೆಗೆ ನಾಗರಿಕ ಹಕ್ಕುಗಳಾಗಲೀ, ಸ್ವತಂತ್ರ ಮಾಧ್ಯಮವಾಗಲೀ ಇರಲಿಲ್ಲ. ಪರಿಣಾಮವಾಗಿ ಪಾಕಿಸ್ತಾನದ ಬಗ್ಗೆ ಭ್ರಮನಿರಸನಗೊಂಡ ಜನತೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸತೊಡಗಿದರು. ಎಚ್ಚ್ಚೆತ್ತ ಪಾಕ್ ಸರ್ಕಾರದ ಕ್ರಮಗಳಿಂದಾಗಿ 1970ರಲ್ಲಿ ಪ್ರದೇಶದ ಜನತೆ ಶಾಸನಸಭೆಗಾಗಿ ಮೊತ್ತಮೊದಲಿಗೆ ತಮ್ಮ ಪ್ರತಿನಿಧಿಗಳನ್ನು ಆರಿಸುವಂತಾಯಿತು. ಆದರೆ ಆ ಶಾಸನಸಭೆಗೆ ಯಾವುದೇ ಅಧಿಕಾರವಿರಲಿಲ್ಲ, ಅದು ಬೇರೆಯ ಮಾತು.

ತಂತಮ್ಮ ಕಾಶ್ಮೀರಗಳನ್ನು ಭಾರತ ಮತ್ತು ಪಾಕಿಸ್ತಾನಗಳು ತಮ್ಮೊಳಗೆ ಹಂತಹಂತವಾಗಿ ಅಂತರ್ಗತ ಗೊಳಿಸಿಕೊಳ್ಳುವ ಬಗ್ಗೆ 1972ರ ಶಿಮ್ಲಾ ಮಾತುಕತೆಗಳ ಸಂದರ್ಭದಲ್ಲಿ ಇಂದಿರಾ ಗಾಂಧಿ ಮತ್ತು ಜುಲ್ಪಿಕರ್ ಆಲಿ ಭುಟ್ಟೋ ನಡುವೆ ತೆರೆಮರೆಯಲ್ಲಿ ಅನಧಿಕೃತ ಒಪ್ಪಂದವೊಂದು ಉಂಟಾದ ನಂತರ ಎರಡೂ ಕಾಶ್ಮೀರಗಳಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರವಾದವು. ಶೇಖ್ ಅಬ್ದುಲ್ಲಾರನ್ನು ಬಂಧನದಿಂದ ಬಿಡುಗಡೆಗೊಳಿಸಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿಸುವ ಪ್ರಯತ್ನಕ್ಕೆ ಇಂದಿರಾ ಗಾಂಧಿ ಮುಂದಾದರೆ ಆಜಾದ್ ಕಾಶ್ಮೀರದಲ್ಲಿ ಸಾಂವಿಧಾನಿಕ ಚಟುವಟಿಕೆಗಳಿಗೆ ಭುಟ್ಟೋ ಚಾಲನೆಯಿತ್ತರು. ಆಜಾದ್ ಕಾಶ್ಮೀರಕ್ಕೊಂದು ಸಂವಿಧಾನ ರಚನೆಯಾಯಿತು. ಅದಕ್ಕನುಗುಣವಾಗಿ ಶಾಸನಸಭೆ, ಅಧ್ಯಕ್ಷ, ಪ್ರಧಾನಮಂತ್ರಿ, ಸರ್ವೇಚ್ಚ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬಂದವು. ಆದರೆ ಇವ್ಯಾವುದಕ್ಕೂ ನಿಜವಾದ ಅರ್ಥದಲ್ಲಿ ಯಾವುದೇ ಅಧಿಕಾರವಿಲ್ಲ. ಸಂವಿಧಾನದ 4(7)(7)ನೇ ವಿಧಿಯ ಪ್ರಕಾರ ಪಾಕಿಸ್ತಾನದ ಜತೆ ಆಜಾದ್ ಕಾಶ್ಮೀರದ ಅಂತಿಮ ವಿಲೀನವನ್ನು ಯಾವೊಬ್ಬ ಪ್ರಜೆಯಾಗಲೀ, ಪಕ್ಷವಾಗಲೀ ವಿರೋಧಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ! ಅಷ್ಟೇ ಅಲ್ಲ, ಶಾಸನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪಾಕಿಸ್ತಾನದ ಜತೆಗೆ ಕಾಶ್ಮೀರದ ಅಂತಿಮ ವಿಲೀನವನ್ನು ಬೆಂಬಲಿಸುವ ಪತ್ರವೊಂದಕ್ಕೆ ಕಡ್ಡಾಯವಾಗಿ ಸಹಿ ಹಾಕಬೇಕಾಗುತ್ತದೆ. ಆ ಬಗೆಯಾಗಿ ಚುನಾವಣೆಗಳು ನಡೆದ ನಂತರ ಬಹುಮತ ಪಡೆದ ಪಕ್ಷದಿಂದ ಪ್ರಧಾನಮಂತ್ರಿ ಮತ್ತು ಅಧ್ಯಕ್ಷರು ನಾಮಾಂಕಿತವಾಗುವುದು ಪಾಕಿಸ್ತಾನದ ಸರ್ಕಾರದಿಂದ. ಸವೋಚ್ಚ ನ್ಯಾಯಾಲಯ ಪಾಕಿಸ್ತಾನ ಸರ್ಕಾರದ ಕೈಗೊಂಬೆ. ಇಷ್ಟು ಸಾಲದು ಎಂಬಂತೆ, ಅಲ್ಲಿ ಸ್ವತಂತ್ರ ಮಾಧ್ಯಮಗಳು ಇಲ್ಲವೇ ಇಲ್ಲ ಮತ್ತು ವಿದೇಶೀ ಮಾಧ್ಯಮಗಳಿಗೆ ಇಲ್ಲಿ ಕಾಲಿಡಲು ಅವಕಾಶವಿಲ್ಲ.

ಇಂತಹ ಆಜಾದಿಯನ್ನು ವಿರೋಧಿಸಿ ಅಂದಿನಿಂದಲೂ ಪ್ರತಿಭಟನೆಗಳು ನಡೆಯುತ್ತಿವೆ. ಭಾರತೀಯ ಕಾಶ್ಮೀರದಲ್ಲಿ ಪ್ರತಿಭಟನೆಕಾರರು ಸಹಸ್ರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದುದು 1990ರ ದಶಕದ ಆದಿಯಲ್ಲಿ ಮಾತ್ರ. ಆದರೆ ಆಜಾದ್ ಕಶ್ಮೀರದಲ್ಲಿನ ಪ್ರತಿಭಟನೆಗಳಲ್ಲಿ ಇಂದಿಗೂ ಮೈಲುಗಟ್ಟಲೆ ಜನರಿರುತ್ತಾರೆ. ಸ್ಥಳೀಯ ಪೊಲೀಸ್ ಅಲ್ಲದೇ ಪಾಕ್ ಸೇನೆ ಸಹಾ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಗೋಲಿಬಾರ್ ನಡೆಸುವುದು ಸಾಮಾನ್ಯವಾಗಿದೆ. ಪಾಕ್ ಅಧಿಪತ್ಯವನ್ನು ವಿರೋಧಿಸುವವರು ಐಎಸ್​ಐ ಕೈಗೆ ಸಿಕ್ಕು ಕಣ್ಮರೆಯಾಗುವ ಪ್ರಕರಣಗಳು ಹೆಚ್ಚಾಗುತ್ತಿವೆಯೆಂದು ಯುನೈಟೆಡ್ ಕಶ್ಮೀರ್ ಪೀಪಲ್ಸ್ ನ್ಯಾಷನಲ್ ಪಾರ್ಟಿ, ಆಜಾದ್ ಕಶ್ಮೀರ್ ಘಟಕದ ಅಧ್ಯಕ್ಷ ಅಫ್ಜಾಲ್ ಸುಲೇರಿಯಾ ಆಪಾದಿಸಿದ್ದಾರೆ. ತಮ್ಮ ಮಾತೃಭೂಮಿಯನ್ನು ಪಾಕ್ ದಬ್ಬಾಳಿಕೆಯಿಂದ ಕಾಪಾಡುವುದು ತಮ್ಮ ಪಕ್ಷದ ಗುರಿ ಎಂದವರು ಘೊಷಿಸುತ್ತಾರೆ. ಮೂಲಭೂತ ಅವಶ್ಯಕತೆಗಳ ಕೊರತೆಯಿಂದಾಗಿ ಮಹಿಳೆಯರೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. 2005 ಮತ್ತು 2012ರ ಭೂಕಂಪ ಮತ್ತು 2014ರ ಪ್ರವಾಹದ ಸಂದರ್ಭಗಳಲ್ಲಿ ಸರ್ಕಾರ ಜನತೆಯ ಸಂಕಷ್ಟಗಳನ್ನು ನಿರ್ಲಕ್ಷಿಸಿದ್ದರಿಂದಾಗಿ ಪ್ರತಿಭಟನೆಗಳು ಉಗ್ರರೂಪ ತಾಳಿದ್ದವು. ಇದಾವುದೂ ಭಾರತೀಯ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ! ಇದಕ್ಕೆ ಕಾರಣವೇನು? ಆಜಾದ್ ಕಾಶ್ಮೀರದಲ್ಲಿನ ಮಾನವಹಕ್ಕುಗಳ ಉಲ್ಲಂಘನೆ ಮತ್ತು ಪಾಕ್ ಸೇನೆಯ ದಮನಕಾರಿ ಕೃತ್ಯಗಳನ್ನು ಬಿಬಿಸಿ ಮತ್ತು ಅಲ್ ಜಜೀರಾದಂತಹ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಭಾರತದ ಕಾಶ್ಮೀರದಲ್ಲಿ ನಡೆಯುವ ಪ್ರಕರಣಗಳಂತೆ ಹೊರಜಗತ್ತಿಗೆ ತೋರಿಸುತ್ತವೆ! ಇದೆಲ್ಲದರ ಹಿಂದೆ ಇರುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಭಾರತ-ವಿರೋಧಿ ಷಡ್ಯಂತ್ರಗಳನ್ನು ಹೊರಜಗತ್ತಿನ ಮುಂದೆ ಅನಾವರಣಗೊಳಿಸುವ ಸಮಯವಿದು.

Leave a Reply

Your email address will not be published. Required fields are marked *