ಹಿಮಪಾತದಲ್ಲಿ ಸಿಲುಕಿದ್ದ ಗರ್ಭಿಣಿ ರಕ್ಷಿಸಿದ ಸೇನಾಪಡೆ: ಅವಳಿ ಹೆತ್ತ ಮಹಿಳೆ

ಜಮ್ಮು: ಹಿಮಪಾತದಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರೂ ಸೇನಾಪಡೆ ಸಿಬ್ಬಂದಿ ನೆರವಿನಿಂದ ಸುರಕ್ಷಿತವಾಗಿ ಆಸ್ಪತ್ರೆ ಸೇರಿದ ತುಂಬು ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮನೀಡಿದ್ದಾಳೆ. ಉತ್ತರ ಕಾಶ್ಮೀರದ ಬಂಡಿಪೋರದ ಗುಲ್ಷನ್​ ಬೇಗಂ ಸುಖ ಪ್ರಸವಕ್ಕೆ ಒಳಗಾದಾಕೆ.

ಬಂಡಿಪೋರದ ಪನಾರ್​ ಸೇನಾ ಶಿಬಿರಕ್ಕೆ ವ್ಯಕ್ತಿಯೊಬ್ಬ ಕರೆ ಮಾಡಿ ತನ್ನ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಹಿಮಪಾತದಿಂದಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡ. ಆ ಸಂದರ್ಭದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಶೀತ ವಾತಾವರಣ ಇದ್ದರೂ ಎದೆಗುಂದದ ರಾಷ್ಟ್ರೀಯ ರೈಫಲ್ಸ್​ ಪಡೆಯ ಯೋಧರ ಒಂದು ತಂಡ ತಕ್ಷಣವೇ ನೆರವಿಗೆ ಧಾವಿಸಿತು.

ಗುಲ್ಷನ್​ ಬೇಗಂ ಮಲಗಿದ್ದ ಸ್ಟ್ರೆಚರ್​ ಅನ್ನು ಹೊತ್ತ ರಾಷ್ಟ್ರೀಯ ರೈಫಲ್ಸ್​ನ ಯೋಧರು ಅಂದಾಜು ಸೊಂಟ ಮಟ್ಟ ಸುರಿದಿದ್ದ ಹಿಮದಲ್ಲೆ ಅಂದಾಜು ಎರಡೂವರೆ ಕಿಲೋಮೀಟರ್​ ದೂರದವರೆಗೆ ಕಾಲ್ನಡಿಗೆಯಲ್ಲೇ ಸಾಗಿ ಬಂಡಿಪೋರ ಜಿಲ್ಲಾಸ್ಪತ್ರೆಗೆ ಆಕೆಯನ್ನು ದಾಖಲಿಸಿದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಸಿಸೇರಿಯನ್​ ಶಸ್ತ್ರಚಿಕಿತ್ಸೆ ಮಾಡಬಕಾಗಿರುವುದರಿಂದ ಆಕೆಯನ್ನು ಶ್ರೀನಗರ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.

ಅದರಂತೆ ಆಕೆಯನ್ನು ಶ್ರೀನಗರ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಬಳಿಕ ಸಿಸೇರಿಯನ್​ ಶಸ್ತ್ರಚಿಕಿತ್ಸೆ ಮೂಲಕ ಆಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಸದ್ಯ ಬಾಣಂತಿ ಮತ್ತು ಶಿಶುಗಳು ಆರೋಗ್ಯವಾಗಿವೆ.