ಮಾನ್ವಿ: ಗರ್ಭಿಣಿಯರು ವೈದ್ಯರು ನೀಡುವ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಬಸ್ಸಯ್ಯ ಹೇಳಿದರು.
ಇದನ್ನೂ ಓದಿ: ಗಂಡಾಂತರ ಗರ್ಭಿಣಿಯರಿಗೆ ಚಿಕಿತ್ಸೆ
ತಾಲೂಕಿನ ಕಾತರ್ಕಿ ಗ್ರಾಮದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಗರ್ಭಿಣಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗರ್ಭಿಣಿಯರು ಆರೈಕೆ, ತಾಯಂದಿರಿಗೆ ಇಲಾಖೆಯಿಂದ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತದೆ.
ಮಾತೃತ್ವ ಆರೋಗ್ಯ ತಪಾಸಣೆ ಶಿಬಿರ, ಪ್ರಧಾನಮಂತ್ರಿ ಮಾತೃತ್ವ ಸುರಕ್ಷಿತ ಯೋಜನೆ ಶಿಬಿರಗಳನ್ನು ನಡೆಸಲಾಗುತ್ತದೆ. ಪ್ರತಿ ಗುರುವಾರ ಗರ್ಭಿಣಿಯರಿಗೆ ಟಿಡಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿ ಅವಧಿಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಒಂಬತ್ತು ತಿಂಗಳ ಅವಧಿಯಲ್ಲಿ ಕನಿಷ್ಠ 4 ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರಕ್ತಹೀನತೆ, ಅಧಿಕ ರಕ್ತದೊತ್ತಡ, ಜ್ವರ, ತಡವಾದ ಹೆರಿಗೆ ನೋವು, ಕಾಮಾಲೆ ಬಗ್ಗೆ ಜಾಗೃತಿ ಇರಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಸುಧೀರ್‌ಬಾಬು, ಶರಣಪ್ಪ , ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಂಜುಳಾ, ಅತೀಫ್, ಪಾಂಡು, ಪ್ರಾಥಮಿಕ ಆರೋಗ್ಯ ಸುರಕ್ಷಿತಾಧಿಕಾರಿ ಉಷಾ ಇತರರಿದ್ದರು.