ಹಾಸನ: ಮದುವೆ ಆಗುವುದಾಗಿ ಯುವತಿಯೊಬ್ಬಳನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಹೊಂದಿದ್ದ ಯುವಕನೀಗ ಉಲ್ಟಾ ಹೊಡೆದಿದ್ದು, ನ್ಯಾಯಕ್ಕಾಗಿ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಅರಕಲಗೂಡು ತಾಲೂಕಿನ ಇಬ್ಬಡಿ ಗ್ರಾಮದ 24 ವರ್ಷದ ಅವಿವಾಹಿತ ಯುವಕನೊಬ್ಬನಿಂದ ಅನ್ಯಾಯವಾಗಿದ್ದು, ಆತನ ಮಗು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಆರಂಭದಲ್ಲಿ ಮದುವೆ ಆಗುವುದಾಗಿ ನಂಬಿಸಿದ್ದ ಯುವಕನು ಬಲವಂತ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಈಗ 6 ತಿಂಗಳ ಗರ್ಭಿಣಿಯಾಗಿದ್ದರೂ ಮದುವೆ ಆಗುತ್ತಿಲ್ಲ ಎಂದು ಯುವತಿ ಕಣ್ಣೀರಿಟ್ಟಿದ್ದಾಳೆ. ನ್ಯಾಯ ಕೊಡಿಸಬೇಕೆಂದು ಪೊಲೀಸರ ಮೊರೆ ಹೋಗಿದ್ದಾಳೆ. ಇದನ್ನೂ ಓದಿರಿ ಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳಿಂದ ಹೀನಾಯ ಕೃತ್ಯ!
ಯುವಕ ಮತ್ತು ಯುವತಿ ಇಬ್ಬರೂ ಈ ಮೊದಲು ಬೆಂಗಳೂರಿನಲ್ಲಿ ನೆಲೆಸಿದ್ದರು. ಆ ವೇಳೆ ಇಬ್ಬರಿಗೂ ಪರಿಚಯ, ಪ್ರೀತಿಗೆ ತಿರುಗಿದೆ. ಕಳೆದ ವರ್ಷ ಗ್ರಾಮಕ್ಕೆ ವಾಪಸ್ ಬಂದಿದ್ದ ಯುವಕ ತಾಲೂಕಿನಲ್ಲೇ ವಾಸವಿದ್ದ. ಆ ವೇಳೆ ಯುವತಿಯೂ ಹಿಂತಿರುಗಿದ್ದಳು. ಬಳಿಕ ಯುವಕನೇ ಯುವತಿಯನ್ನು ಅಪ್ಪೆ ಆಟೋದಲ್ಲಿ ಶುಂಠಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ. ಬೆಂಗಳೂರಿನಲ್ಲಿ ನೆಲೆಸಿದ್ದ ವೇಳೆಯೂ ಯುವತಿಯ ರೂಮಿಗೆ ಬಂದು ಹೋಗುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಹೊಂದಿದ್ದು, ಆಕೆ ಗರ್ಭಿಣಿ ಆಗುತ್ತಿದ್ದಂತೆ ಕೈಕೊಟ್ಟಿದ್ದಾನೆ. ಈ ಬಗ್ಗೆ ಸ್ವತಃ ಯುವತಿಯೇ ಅರಕಲಗೂಡು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ. ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.