ದೇವೇಗೌಡರ ಸೋಲಿಗೆ ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್​ ರೇವಣ್ಣ ಕಾರಣ: ಪ್ರೀತಂ ಗೌಡ

ಹಾಸನ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್​ ಎಲ್ಲಿದೆ ಅನ್ನೋದನ್ನು ಹುಡುಕಿ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ನವರು ಕಳೆದುಹೋಗಿದ್ದರು. ಆದರೆ, ಈ ಚುನಾವಣೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂದು ಹಾಸನ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.

ಕಳೆದು ಹೋದರೆ ಹುಡುಕಿಕೊಂಡು ಬರಬಹುದು. ಆದರೆ, ನಾಪತ್ತೆಯಾದವರನ್ನು ಹುಡುಕಲು ಸಾಧ್ಯವಿಲ್ಲ. ಹಾಸನದಲ್ಲೂ ಇದು ಹೊರತಾಗಿಲ್ಲ. ಹಾಸನದಲ್ಲಿ ಬಿಜೆಪಿ ವ್ಯವಸ್ಥಿತವಾಗಿ ಚುನಾವಣೆ ಮಾಡಿದೆ. ಜಿಲ್ಲೆಯಲ್ಲಿ ಹತಾಶವಾಗುವಂತಹ ಫಲಿತಾಂಶ ಬಂದಿಲ್ಲ. ದೇಶದಲ್ಲಿ ಅಭಿವೃದ್ಧಿಯಾಗಬೇಕು ಅಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಮಹಾಘಟಬಂಧನ್​ ದೇಶದಲ್ಲಿ ವಿಫಲವಾಗಿದೆ. ಹಾಸನದಲ್ಲಿ ಮಾತ್ರ ಅದು ಸಫಲವಾಗಿದೆ. ಹೀಗಾಗಿ ಇಲ್ಲಿ ಜೆಡಿಎಸ್​ ಗೆದ್ದಿದೆ ಎಂದು ಪ್ರೀತಂ ಗೌಡ ತಿಳಿಸಿದರು.

ಹಾಸನದ ಜನರು ದೇವೇಗೌಡರು ಸ್ಪರ್ಧಿಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ, ಕುಟುಂಬ ರಾಜಕಾರಣ ವಿಸ್ತಾರ ಮಾಡುವುದಕ್ಕೆ ಹೋಗಿ ಅವರು ಯಡವಟ್ಟು ಮಾಡಿಕೊಂಡರು. ಕಿಚನ್​ ಕ್ಯಾಬಿನಟ್​ನಲ್ಲಿ ತೀರ್ಮಾನ ಮಾಡಿ, ದೇವೇಗೌಡರನ್ನು ತುಮಕೂರಿಗೆ ಕಳುಹಿಸಿದರು. ದೇವೇಗೌಡರ ಸೋಲಿಗೆ ರೇವಣ್ಣ, ಭವಾನಿ ರೇವಣ್ಣ ಮತ್ತು ಪ್ರಜ್ವಲ್​ ರೇವಣ್ಣ ಕಾರಣ. ನಿಖಿಲ್​ ಕುಮಾರಸ್ವಾಮಿ ಅವರ ಸೋಲಿಗೆ ರೇವಣ್ಣ ಅವರಿಗೆ ಮ್ಯಾನ್​ ಆಫ್​ ದಿ ಮ್ಯಾಚ್​ ಕೊಡಬೇಕು ಎಂದು ಪ್ರೀತಂ ಗೌಡ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಸುಮಲತಾ ಅವರ ಗೆಲುವಿನಲ್ಲಿ ರೇವಣ್ಣ ಪ್ರಮುಖ ಕಾರಣಕರ್ತರು. ಅವರು ಉಡಾಫೆ ಮಾತನ್ನಾಡುವುದನ್ನು ಮೊದಲು ಕಡಿಮೆ ಮಾಡಬೇಕು. ಮೋದಿಯವರ ವಿಚಾರದಲ್ಲಿ ಅವರು ಮಾತನಾಡಿದ್ದಕ್ಕೆ ಬದ್ಧವಾಗಿರಬೇಕು. ಮೋದಿ ಗೆದ್ದರೆ ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದರು. ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಪ್ರೀತಂ ಗೌಡ ತಿಳಿಸಿದರು.

Leave a Reply

Your email address will not be published. Required fields are marked *