ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸಕ್ಕೆ ಕಾಂಗ್ರೆಸ್‌ ನಾಯಕರ ಭೇಟಿ, ಸಾಂತ್ವನ

ಹಾಸನ: ಶಾಸಕ ಪ್ರೀತಂ ಗೌಡ ನಿವಾಸದ ಮೇಲೆ ಜೆಡಿಎಸ್‌ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್‌ ಮುಖಂಡರು ಇಂದು ಪ್ರೀತಂ ಗೌಡ ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಮಾಜಿ ಸಚಿವ ಎ.ಮಂಜು ಭೇಟಿ ನೀಡಿ, ಶಾಸಕರ ಮನೆಗೆ ಬಂದು ಗಲಭೆ ಮಾಡಿದ್ದು ಅವಮಾನ. ರಾಜಕೀಯದಲ್ಲಿ ಯಾರೂ ಶತ್ರು ಅಲ್ಲ, ಮಿತ್ರರೂ ಅಲ್ಲ. ಮಾಜಿ ಪ್ರಧಾನಿಯ ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿ ಮನೆ ಮೇಲೆ ಆತ ಇಲ್ಲದ ವೇಳೆ ಈ ಘಟನೆ ನಡೆದಿದ್ದು ಖಂಡನೀಯ. ಸಮಿಶ್ರ ಸರ್ಕಾರದಲ್ಲಿ ಈ ಘಟನೆ ನಡೆದಿದ್ದು ಮುಜುಗರದ ವಿಚಾರ. ಆಡಿಯೋ ವಿಚಾರ ತೀರ್ಮಾನ ಆಗದೆ ಈ ರೀತಿ ನಡೆದಿದ್ದು ಸರಿ ಅಲ್ಲ ಎಂದರು.

ಪ್ರೀತಂ ತಾಯಿ ತನ್ನ ಮಗ ತಪ್ಪು ಮಾಡಿದರೆ ಅದು ತಪ್ಪು ಎಂದು ಹೇಳಿದ್ದಾರೆ. ಹಲ್ಲೆಯನ್ನು ಯಾವುದೇ ಪಕ್ಷದವರು ಮಾಡಿದರೂ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನನ್ನ ಭೇಟಿ ರಾಜಕೀಯ ಉದ್ದೇಶದಿಂದಲ್ಲ. ದೇವೇಗೌಡರು ಆಗಮಿಸಿ ಈ ಘಟನೆ ಬಗ್ಗೆ ಸಾಂತ್ವನ ಹೇಳಬೇಕು. ಇದು ಮಾಜಿ ಪ್ರಧಾನಿ ಜಿಲ್ಲೆ ಹಾಸನಕ್ಕೆ ಆದ ಅವಮಾನ. ಪದೇ ಪದೆ ಜೆಡಿಎಸ್‌ನವರು ಹಲ್ಲೆ ಮಾಡುವಂತ ಘಟನೆ ನಡೆದರೂ ರಾಜ್ಯ ಕಾಂಗ್ರೆಸ್ ನಾಯಕರು ಯಾಕೆ ಮೌನ ವಹಿಸಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು ಎಂದು ಹೇಳಿದರು.

ಕಾಂಗ್ರೆಸ್‌ ನಾಯಕ ಬಾಗೂರು ಮಂಜೇಗೌಡ ಭೇಟಿ

ಶಾಸಕ ಪ್ರೀತಂ ಗೌಡ ಮನೆಗೆ ಕಾಂಗ್ರೆಸ್‌ನ ಬಾಗೂರು ಮಂಜೇಗೌಡ ಆಗಮಿಸಿ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯಲ್ಲಿ ಕ್ಷೇತ್ರದ‌ ಪ್ರಥಮ ಪ್ರಜೆ ಮೇಲೆ ಜೆಡಿಎಸ್ ಗೂಂಡಾಗಿರಿ ನಡೆದಿದೆ. ವೈಯುಕ್ತಿಕವಾಗಿ ಅವರಿಗೆ ಸಾಂತ್ವನ ಹೇಳಲು ಬಂದಿದ್ದೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ‌ಜಿಪಂ ಸದಸ್ಯ ಶ್ರೇಯಸ್ ಕಾರಿನ ಮೇಲೆ ‌ಕಲ್ಲು ಎತ್ತಿ ಹಾಕಿದರೂ ಕೂಡ ಪ್ರಜ್ವಲ್ ರೇವಣ್ಣ ವಿರುದ್ಧ ಇದ್ದ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದ್ದಾರೆ. ಶ್ರೀ ಸಾಮಾನ್ಯರಿಗೆ‌ ಭಯದ ವಾತಾವರಣ ಇದೆ ಎಂದರು.

ಪ್ರೀತಂಗೌಡ ಮನೆಯ ಬಳಿ ನಡೆದ ಘಟನೆ ಖಂಡನೀಯ. ರಾಜಕೀಯ ಉದ್ದೇಶದಿಂದ ಇಲ್ಲಿಗೆ ಬಂದಿಲ್ಲ. ಕ್ಷೇತ್ರದ‌ ಸಾಮಾನ್ಯ ಮನುಷ್ಯನಾಗಿ ಇಲ್ಲಿಗೆ ಬಂದಿದ್ದೇನೆ. ಹಾಸನದ‌ ಜನತೆ ಈ ದಬ್ಬಾಳಿಕೆಗೆ ಕಡಿವಾಣ ಹಾಕುವ ಸಂದರ್ಭ ಬರುತ್ತದೆ. ಇದನ್ನು ವಿಮುಕ್ತಿಗೊಳಿಸುವ ಕೆಲಸ‌ ಕ್ಷೇತ್ರದ‌ ಜನತೆ‌ ಕೈಯಲ್ಲಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)