More

    ಮಕ್ಕಳಿಗೆ ಈ ಲಸಿಕೆಯನ್ನು ತಪ್ಪದೆ ಹಾಕಿಸಿ

    ಚಿಕ್ಕಮಗಳೂರು: ಪಲ್ಸ್ ಪೋಲಿಯೋ ಲಸಿಕಾ ದಿನ ಜ.19ರಂದು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಲಸಿಕೆ ಹಾಕಿಸಬೇಕೆಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪಾಲಕರಲ್ಲಿ ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿ ಅನುಷ್ಠಾನ, ಇಂದ್ರಧನುಷ್ ಅಭಿಯಾನ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    2011ರ ನಂತರ ದೇಶದಲ್ಲಿ ಪೋಲಿಯೋ ಸಂಪೂರ್ಣ ನಿಮೂಲನೆಯಾಗಿದ್ದು, ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಆದರೆ ನೆರೆಯ ದೇಶಗಳಾದ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದಲ್ಲಿ ಪೋಲಿಯೋ ವೈರಾಣುಗಳು ಕಂಡು ಬಂದಿರುವ ಹಿನ್ನೆಲೆ ನಮ್ಮಲ್ಲಿ ಎಚ್ಚರ ವಹಿಸುವುದು ಅಗತ್ಯವಿದೆ ಎಂದರು.

    ರಾಜ್ಯದಲ್ಲಿ 2007ರಿಂದ ಪೋಲಿಯೋ ಬಾಧಿತವಾಗಿರುವ ಪ್ರಕರಣಗಳು ಕಂಡು ಬಂದಿಲ್ಲ. ಆದರೆ ಹೊರ ದೇಶಗಳಿಂದ ವಲಸೆ ಬಂದಿರುವುದರಿಂದ ವೈರಾಣುಗಳು ಹರಡುವ ಸಾಧ್ಯತೆ ಇರುವುದರಿಂದ ತಡೆಯಲು ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದರು.

    ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಭು, ಜಿಲ್ಲಾ ಸರ್ಜನ್ ಕುಮಾರ್ ನಾಯಕ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರಪ್ಪ ಶಿರೋಳ್ಕರ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಇದ್ದರು.

    84804 ಮಕ್ಕಳಿಗೆ ಲಸಿಕೆ: ಜಿಲ್ಲಾದ್ಯಂತ 5 ವರ್ಷದೊಳಗಿನ 84,804 ಮಕ್ಕಳನ್ನು ಗುರುತಿಸಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ಮಕ್ಕಳಿಗೆ ಲಸಿಕೆ ಹಾಕಿಸಲು ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಬೂತ್​ಗಳನ್ನು ತೆರೆದು ಲಸಿಕೆ ಹಾಕಬೇಕು ಎಂದು ಡಿಸಿ ಡಾ. ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದರು.

    ಪಲ್ಸ್ ಪೋಲಿಯೋ ಕಾರ್ಯಕ್ರಮ ಮೂರು ದಿನ ನಡೆಯಲಿದ್ದು, ಮೊದಲನೆಯ ದಿನ ಬೂತ್​ಗಳಲ್ಲಿ ಲಸಿಕೆ ಹಾಕಲಿದ್ದು, ನಂತರ ಎರಡು ದಿನ ಮನೆಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಲಸಿಕೆಗಳ ದಾಸ್ತಾನಿಗೆ ಅಗತ್ಯವಿರುವ ಕೋಲ್ಡ್ ಸ್ಟೋರೇಜ್​ಗಳನ್ನು ಬಳಸಬೇಕು. ಇವುಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮಾರ್ಗದರ್ಶನ ನೀಡಿದರು.

    ಕೊಪ್ಪ, ತರೀಕೆರೆಯಲ್ಲಿ ಹೆಚ್ಚಿನ ಕಾಳಜಿ: ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಕಳೆದ ಬಾರಿ ತರೀಕೆರೆ ಹಾಗೂ ಕೊಪ್ಪ ವಿಭಾಗದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಂಡುಬಂದಿಲ್ಲ. ಈ ಬಾರಿ ಹಾಗಾಗದಂತೆ ಎಚ್ಚರ ವಹಿಸಬೇಕು. ಎಸ್ಟೇಟ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ವಿುಕರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸ್ಥಳಾಂತರಗೊಳ್ಳುವ ಹಿನ್ನೆಲೆಯಲ್ಲಿ ಅವರ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿ ಲಸಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಡಿಸಿ ಡಾ. ಬಗಾದಿ ಗೌತಮ್ ಅಧಿಕಾರಿಗಳಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts