ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ

ನಂಜನಗೂಡು: ಕಠಿಣ ಪರಿಶ್ರಮದೊಂದಿಗೆ ಪರೀಕ್ಷೆ ಬರೆಯಲು ಸಿದ್ಧವಾದರೆ ಫಲಿತಾಂಶದ ಕುರಿತು ಭಯ ಪಡಬೇಕಾಗಿಲ್ಲ ಎಂದು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನವಿಲೂರು ಪ್ರಕಾಶ್ ಹೇಳಿದರು.

ನಗರದ ಡಾ.ಬಿಆರ್.ಅಂಬೇಡ್ಕರ್ ಭವನದಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿಷಯ ಗ್ರಹಿಕೆಗೆ ಏಕಾಗ್ರತೆ ಅತ್ಯವಶ್ಯಕವಾಗಿದ್ದು, ಪಠ್ಯ ವಿಷಯಗಳ ಓದಿನ ನಂತರ ಸಂಗತಿಗಳನ್ನು ಮನನ ಮಾಡಿಕೊಳ್ಳುವ ಜತೆಗೆ ಗ್ರಹಿಸಿದ ವಿಷಯವನ್ನು ಬರವಣಿಗೆ ರೂಪದಲ್ಲಿ ಹೊರ ಹಾಕುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯಿತಿ ಇಒ ಶ್ರೀಕಂಠರಾಜೇ ಅರಸ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಲು ಕಾರ್ಯಾಗಾರ ನೆರವಾಗಲಿದೆ ಎಂದರು.

ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಾರಾಯಣ, ಸಮಾಜ ಕಲ್ಯಾಣಾಧಿಕಾರಿ ಜನಾರ್ದನ್, ಸಂಯೋಜನಾಧಿಕಾರಿ ಸಹದೇವ್, ನಾಗರಾಜು, ಜ್ಯೋತಿ ಮತ್ತಿತರರಿದ್ದರು.