More

    ಚಾಮರಾಜನಗರದಲ್ಲಿ ಚದುರಂಗದಾಟ

    ವಿಧಾನಸಭೆ ಚುನಾವಣೆಯ ಸಮೀಪ ಕಾಲಕ್ಕೂ ಮುನ್ನವೇ ಗಡಿ ಜಿಲ್ಲೆ ಚಾಮರಾಜನಗರ ರಾಜಕೀಯ ಚದುರಂಗದಾಟದ ಮನೆಯಾಗಿ ಪರಿವರ್ತನೆಯಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ (ಮೀಸಲು ಕ್ಷೇತ್ರ) ಒಳಗೊಂಡಂತೆ ಒಟ್ಟು 4 ಕ್ಷೇತ್ರಗಳಿರುವ ಚಿಕ್ಕ ಜಿಲ್ಲೆಯಾಗಿದ್ದರೂ ಗಲ್ಲಿಗಲ್ಲಿಗಳಲ್ಲೂ ಚುನಾವಣೆ ಕಾವು ದೊಡ್ಡ ಮಟ್ಟಕ್ಕೆ ಹಬ್ಬಿದೆ. ಒಂದೆಡೆ, ಹಿಂದಿನ ಚುನಾವಣೆಗಳಿಂದಲೂ ಪ್ರಾಬಲ್ಯ ಉಳಿಸಿಕೊಂಡು ಬಂದಿರುವ ಕಾಂಗ್ರೆಸ್ ಜಿಲ್ಲೆಯನ್ನು ಮತ್ತೆ ತನ್ನ ಭದ್ರಕೋಟೆ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಮತ್ತೊಂದೆಡೆ, ಸತತ ಶ್ರಮ ವಹಿಸಿದ ಬಳಿಕ ಕಳೆದ ಚುನಾವಣೆಯಲ್ಲಿ ಗುಂಡ್ಲುಪೇಟೆಯನ್ನು ಬಿಜೆಪಿ ವಶಕ್ಕೆ ಪಡೆದಿದ್ದು, ಮುಂದಿನ ಚುನಾವಣೆಯಲ್ಲಿ ಸಾಮ್ರಾಜ್ಯ ವಿಸ್ತರಣೆ ಕನಸು ಕಾಣುತ್ತಿದೆ. ಪ್ರಮುಖ ಎದುರಾಳಿಗಳಾದ ಕಾಂಗ್ರೆಸ್-ಬಿಜೆಪಿಗೆ ಹನೂರಿನಲ್ಲಿ ಜೆಡಿಎಸ್, ಕೊಳ್ಳೇಗಾಲದಲ್ಲಿ ಬಿಎಸ್ಪಿ ಪೈಪೋಟಿ ಕೊಡಲು ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿವೆ.

    | ಕಿರಣ್ ಮಾದರಹಳ್ಳಿ ಚಾಮರಾಜನಗರ

    ಸಿಂಪಲ್ ಶೆಟ್ರು ಮುಂದೆ ನಿಲ್ಲೋರ್ಯಾರು?

    ಚಾಮರಾಜನಗರದಲ್ಲಿ ಚದುರಂಗದಾಟಚಾಮರಾಜನಗರ ವಿಧಾನಸಭಾ ಕ್ಷೇತ್ರ ಕಳೆದ ಮೂರು ಚುನಾವಣೆಗಳಿಂದಲೂ ‘ಕೈ’ ವಶದಲ್ಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ, ಉಪ್ಪಾರ ಸಮಾಜದ ನಾಯಕ, ಸಿಂಪಲ್ ರಾಜಕಾರಣಿ ಎಂದೇ ಹೆಸರಾಗಿರುವ ಸಿ. ಪುಟ್ಟರಂಗಶೆಟ್ಟಿ ಹ್ಯಾಟ್ರಿಕ್ ಗೆಲುವು ಕಂಡಿರುವ ಶಾಸಕ. ಮುಂದಿನ ಬಾರಿಗೂ ಇವರೇ ಕಾಂಗ್ರೆಸ್​ನಿಂದ ಕಣಕ್ಕಿಳಿಯುವ ಹುರಿಯಾಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿಯಲ್ಲಿ ಒಬ್ಬರ ಹಿಂದೊಬ್ಬರು ಟಿಕೆಟ್​ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಮಾಜಿ ಶಾಸಕ ದಿವಂಗತ ಸಿ.ಗುರುಸ್ವಾಮಿ ಅವರ ಪುತ್ರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೃಷಭೇಂದ್ರಪ್ಪ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ರೈತ ಮುಖಂಡ ಅಮ್ಮನಪುರ ಮಲ್ಲೇಶ್, ವೈದ್ಯ ಡಾ.ಎ.ಆರ್.ಬಾಬು, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್​ಹೆಸರು ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಮುಖವಾಗಿವೆ. ಈ ನಡುವೆ, ಕೆಲ ದಿನಗಳ ಹಿಂದಷ್ಟೇ ಜನ್ಮದಿನದ ಪ್ರಯುಕ್ತ ಬ್ಯಾನರ್​ನಲ್ಲಿ ರಾರಾಜಿಸಿದ್ದ ಕೆಆರ್​ಐಡಿಎಲ್ ಅಧ್ಯಕ್ಷ ರುದ್ರೇಶ್ ಚಿತ್ತ ಚಾಮರಾಜನಗರದತ್ತ ನೆಟ್ಟಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲ ಹೆಸರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಿಂದಿಕ್ಕಿ ಸದ್ಯಕ್ಕೆ ಮುಂಚೂಣಿಯಲ್ಲಿದ್ದಾರೆ. ಆದರೆ, ಅವರ ನಡೆ ಮಾತ್ರ ನಿಗೂಢವಾಗಿ ಉಳಿದಿದೆ.

    ಕೊಳ್ಳೇಗಾಲದಲ್ಲಿ ರಾಜಕೀಯ ಕಾಳಗ

    ಚಾಮರಾಜನಗರದಲ್ಲಿ ಚದುರಂಗದಾಟಕೊಳ್ಳೇಗಾಲ (ಮೀಸಲು) ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಮಾತ್ರವಲ್ಲದೆ ಪ್ರಾಬಲ್ಯ ಹೊಂದಿರುವ ಬಿಎಸ್ಪಿಯಲ್ಲೂ ಆಕಾಂಕ್ಷಿಗಳ ದಂಡೇ ಇದ್ದು, ಎಲ್ಲರೂ ತಂತಮ್ಮ ಪಕ್ಷಗಳ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ. ಶಾಸಕ ಎನ್.ಮಹೇಶ್ ಬಿಎಸ್ಪಿಯಿಂದ ಗೆದ್ದು ಉಚ್ಚಾಟನೆಗೊಂಡ ಬಳಿಕ ಬಿಜೆಪಿ ಸೇರಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎನ್.ಮಹೇಶ್​ಗೆ ಮುಂದಿನ ಬಾರಿಯೂ ಜನರು ಆಶೀರ್ವಾದ ಮಾಡ ಬೇಕೆಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಪ್ರಚಾರ ಮಾಡಿದ್ದರು. ಇದಾದ ಬಳಿಕ ಸ್ಪರ್ಧೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಮಾಜಿ ಶಾಸಕ ಜಿ.ಎನ್ ನಂಜುಂಡಸ್ವಾಮಿ ಬಿಜೆಪಿ ಟಿಕೆಟ್​ಗಾಗಿ ಲಾಬಿ ಮಾಡುವುದನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಉತ್ತಮ ಅವಕಾಶವಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು ಮೂವರೂ ಜನಬೆಂಬಲ ಇರುವ ನಾಯಕರು. ಇವರಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಪ್ರತಿಸ್ಪರ್ಧಿಗಳಿಗೆ ಠಕ್ಕರ್ ಕೊಡಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ರಾಜ್ಯ ರಾಜಕೀಯಕ್ಕೆ ಮರಳುತ್ತಾರೆ. ಕೊಳ್ಳೇಗಾಲದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅವರು ನಂಜನಗೂಡು ಕ್ಷೇತ್ರದತ್ತ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಎನ್.ಮಹೇಶ್ ಅವರನ್ನು ಗೆಲ್ಲಿಸಿದ್ದ ಬಿಎಸ್ಪಿ ಈ ಬಾರಿ ಮತ್ತೆ ಅಧಿಕಾರ ಉಳಿಸಿಕೊಳ್ಳಬೇಕೆಂದು ಪ್ರಯತ್ನ ನಡೆಸಿದೆ. ಜಿಪಂ ಮಾಜಿ ಸದಸ್ಯ ಕಮಲ್ ನಾಗರಾಜು, ಹೈಕೋರ್ಟ್ ವಕೀಲ ಎಚ್.ಮೋಹನ್​ಕುಮಾರ್, ನಿವೃತ್ತ ತಹಸೀಲ್ದಾರ್ ಮಹದೇವಯ್ಯ ಪ್ರಬಲ ಆಕಾಂಕ್ಷಿಗಳು. ಪೊಲೀಸ್ ಅಧಿಕಾರಿ ಬಿ.ಪುಟ್ಟಸ್ವಾಮಿ ವೃತ್ತಿಗೆ ಗುಡ್​ಬೈ ಹೇಳಿ ರಾಜಕೀಯಕ್ಕೆ ಬರಲು ಸಜ್ಜಾಗಿದ್ದಾರೆ.

    ಹನೂರಿನಲ್ಲಿ ತ್ರಿಕೋನ ಸ್ಪರ್ಧೆ

    ಚಾಮರಾಜನಗರದಲ್ಲಿ ಚದುರಂಗದಾಟಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಕೂಡ ಸ್ಪರ್ಧಾ ಕಣದಲ್ಲಿದೆ. ಕಾಂಗ್ರೆಸ್​ನಿಂದ ಮೂರು ಬಾರಿ ಗೆದ್ದಿರುವ ಶಾಸಕ ಆರ್.ನರೇಂದ್ರ ಅವರಿಗೆ ಮುಂದಿನ ಬಾರಿಯೂ ಟಿಕೆಟ್ ಪಕ್ಕಾ. ಇವರ ವಿರುದ್ಧ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಜೆಡಿಎಸ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಮತ್ತೊಮ್ಮೆ ಸ್ಪರ್ಧೆಯೊಡ್ಡಲಿದ್ದಾರೆ. ಹನೂರಿನಲ್ಲಿ ಕೆಲ ತಿಂಗಳ ಹಿಂದೆ ಆಯೋಜಿಸಿದ್ದ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಜುನಾಥ್ ಹೆಸರು ಘೋಷಣೆ ಮಾಡಿದ್ದಾರೆ. ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದನ್ನು ನಿರ್ಧರಿಸಲು ಪಕ್ಷದ ಮುಖಂಡರಿಗೆ ಸಾಧ್ಯವಾಗುತ್ತಿಲ್ಲ. ಪರಿಮಳಾ ನಾಗಪ್ಪ ಕುಟುಂಬದಿಂದ ಪುತ್ರ ಡಾ.ಪ್ರೀತನ್ ನಾಗಪ್ಪಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಯುತ್ತಿದೆ. ಚಾಮರಾಜನಗರದಂತೆ ಹನೂರು ಬಿಜೆಪಿಯಲ್ಲೂ ಆಕಾಂಕ್ಷಿಗಳ ದಂಡೇ ಇದೆ. ಜಿಲ್ಲಾ ಉಪಾಧ್ಯಕ್ಷ ಡಾ. ದತ್ತೇಶ್​ಕುಮಾರ್ ಪ್ರಬಲ ಆಕಾಂಕ್ಷಿ. ಬಲ್ಲ ಮೂಲಗಳ ಪ್ರಕಾರ ಇವರ ಹೆಸರು ವರಿಷ್ಠರ ಅಂಗಳಕ್ಕೆ ತಲುಪಿದೆ. ಒಬಿಸಿ ಮೋರ್ಚಾ ಜಿಲ್ಲಾ ಸಂಯೋಜಕ, ಉದ್ಯಮಿ ಬಿ.ವೆಂಕಟೇಶ್ ಟಿಕೆಟ್​ಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಕಾಣಿಸಿಕೊಂಡ ನಿಶಾಂತ್ ಎಂಬುವರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಬಿಜೆಪಿಯಿಂದ ಸ್ಪರ್ಧಿಸುವ ಅಭಿಲಾಷೆ ಹೊಂದಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಮನೆಯೊಂದು ನಾಲ್ಕು ಬಾಗಿಲು ಎಂಬಂತಾಗಿದೆ.

    ಗುಂಡ್ಲುಪೇಟೆಯಲ್ಲಿ ಭರ್ಜರಿ ಫೈಟ್

    ಚಾಮರಾಜನಗರದಲ್ಲಿ ಚದುರಂಗದಾಟಗುಂಡ್ಲುಪೇಟೆ ಕ್ಷೇತ್ರದ ಮುಂದಿನ ಚುನಾವಣಾ ಅಖಾಡದಲ್ಲಿ ಭರ್ಜರಿ ಫೈಟ್ ಏರ್ಪಡುವ ಸಾಧ್ಯತೆಗಳಿವೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ, ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ಎಸ್.ನಿರಂಜನ್​ಕುಮಾರ್​ಗೆ ಸ್ವಪಕ್ಷೀಯರು, ಪ್ರತಿಪಕ್ಷದವರು ಸವಾಲೊಡ್ಡುವ ಲಕ್ಷಣ ಈಗಿನಿಂದಲೇ ಗೋಚರಿಸುತ್ತಿವೆ. ನಿರಂಜನ್​ಕುಮಾರ್ ಹಾಲಿ ಶಾಸಕರಾಗಿರುವುದರಿಂದ ಮುಂದಿನ ಬಾರಿಯೂ ಪಕ್ಷದಿಂದ ಅವಕಾಶ ಸಿಗುತ್ತದೆ. ಈ ನಡುವೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ, ಚಾಮುಲ್ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಎಂ.ಪಿ.ಸುನೀಲ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿದರೆ ಜೆಡಿಎಸ್​ನಿಂದ ಸುನೀಲ್ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ ಪುತ್ರ ಗಣೇಶ್​ಪ್ರಸಾದ್ ಮತ್ತು ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಪ್ರಬಲ ಆಕಾಂಕ್ಷಿಗಳು. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರ ಗುಂಪಿನಲ್ಲಿ ಎಚ್​ಎಸ್​ಎಂ ಕುಟುಂಬ ಪ್ರಮುಖವಾದದ್ದು. ಹಾಗಾಗಿ ಸಿದ್ದು ಕಡೆಯಿಂದ ಗಣೇಶ್​ಪ್ರಸಾದ್​ಗೆ ಟಿಕೆಟ್ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಅಂತೆಯೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಗರಾಗಿರುವ ಎಚ್.ಎಸ್.ನಂಜಪ್ಪ ಕೂಡ ಟಿಕೆಟ್​ಗಾಗಿ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜಾತ್ಯತೀತ ಜನತಾದಳದಿಂದ ಮಾಜಿ ಪತ್ರಕರ್ತ ರಾಜೂಗೌಡ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಈ ಮಧ್ಯೆ, ಕೆ.ಆರ್.ನಗರದ ಶಾಸಕ ಸಾ.ರಾ. ಮಹೇಶ್ ಇಲ್ಲಿನ ರೈತ ಮುಖಂಡ ಕಡಬೂರು ಮಂಜುನಾಥ್ ಅವರನ್ನು ಸಂರ್ಪಸಿ ಚುನಾವಣೆ ಸಂಬಂಧ ಚರ್ಚೆಗಳನ್ನು ನಡೆಸಿದ್ದಾರೆ.

    ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts