ಬೆಂಗಳೂರು: ಇತ್ತೀಚೆಗೆ ವೃಂದಾವನಸ್ಥರಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೆಸರಿನಲ್ಲಿ ಒಂದು ಲಕ್ಷ ರೂ. ಮೌಲ್ಯದ ರಾಷ್ಟ್ರೀಯ ಪ್ರತಿಭಾ ಪಾರಿತೋಷಕ ಸ್ಥಾಪಿಸಲಾಗಿದೆ ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಪ್ರತಿವರ್ಷ ಗುರುಗಳ ಆರಾಧನೆ ಸಂದರ್ಭ ‘ಶ್ರೀ ವಿಶ್ವೇಶ ಸೋದರಿ ಸಭಾ ಪ್ರತಿಭಾ ಪಾರಿತೋಷಕ’ ಪ್ರದಾನ ಮಾಡಲಾಗುತ್ತದೆ. ದ್ವೈತ ವೇದಾಂತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪರೀಕ್ಷೆ ನಡೆಸಿ ಗರಿಷ್ಠ ಅಂಕ ಗಳಿಸಿದ ಒಬ್ಬರಿಗೆ ಪಾರಿತೋಷಕ ಪ್ರದಾನವಾಗಲಿದೆ. ನಮ್ಮ ಮಠ ಪ್ರತಿ ವರ್ಷ ನಡೆಸುತ್ತಿರುವ ಮಾಧ್ವ ರಾದ್ಧಾಂತ ಸಂವರ್ಧಿನಿ ಸಭೆಯ ಅರವತ್ತಕ್ಕೂ ಹೆಚ್ಚಿನ ಅಧಿವೇಶನಗಳಲ್ಲಿ ಶ್ರೀ ವಿಶ್ವೇಶತೀರ್ಥರು ಸಕ್ರಿಯವಾಗಿ ಭಾಗವಹಿಸಿ ದಾಖಲೆ ನಿರ್ವಿುಸಿದ್ದರು. ಸಂವರ್ಧಿನಿ ಸಭಾವನ್ನು ಅವರು ‘ಸೋದರಿ’ಸಭಾ ಎಂದೇ ಕರೆಯುತ್ತಿದ್ದರು. ಆದ ಕಾರಣ ಪ್ರತಿಭಾ ಪಾರಿತೋಷಕಕ್ಕೆ ಅವರ ಹೆಸರನ್ನೇ ಇಡಲಾಗಿದೆ ಎಂದು ಶ್ರೀ ವಿದ್ಯೇಶತೀರ್ಥರು ಹೇಳಿದ್ದಾರೆ.