ಪುತ್ತೂರು: ಕೌಕ್ರಾಡಿ ಮನೆ ಬಡ ದಲಿತ ವೃದ್ದ ದಂಪತಿಯ ಮನೆಯನ್ನು ಕೆಡವಿ ದೌರ್ಜ್ಯನ್ಯ ನಡೆಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ವೃದ್ಧ ದಂಪತಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಮತ್ತು ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ದಲಿತ, ರೈತ, ಕಾರ್ಮಿಕ, ಯುವಜನ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಪುತ್ತೂರು ತಾಲೂಕು ಆಡಳಿತ ಸೌಧದ ಎದುರಿನ ಅಮರ್‌ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.
ಸಿಪಿಐಎಂ ಮುಖಂಡ ನ್ಯಾಯವಾದಿ ಪಿ.ಕೆ.ಸತೀಶನ್ ಮಾತನಾಡಿ ಸರ್ಕಾರದ ಅಧಿಕಾರಿಗಳು ಮಾಡಿದ ತಪ್ಪನ್ನು ಒಪ್ಪದೆ ಅದನ್ನು ಸಮರ್ತನೆ ಮಾಡುವುದು ಸರಿಯಲ್ಲ. ಮೇಲಧಿಕಾರಿಗಳು ಕೂಡಾ ಅದಕ್ಕೆ ಪ್ರೋತ್ಸಾಹಿಸುವುದು ಇನ್ನೂ ದೊಡ್ಡ ತಪ್ಪು. ಬಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ನ್ಯಾಯವಾದಿ ಬಿ ಎಮ್ ಭಟ್ ಮಾತನಾಡಿ ಕಾನೂನು ಬಾಹಿರವಾಗಿ ಹೈಕೋರ್ಟ್ ಆದೇಶ ಉಲ್ಲಂಘಿಸಿ, ಸಂವಿಧಾನಕ್ಕೆ ವಿರುದ್ಧವಾಗಿ ಯಾರೋ ಎಜೆಂಟ್‌ಗೆ ಬೇಕಾಗಿ ಕಡಬ ತಹಸೀಲ್ದಾರ್ ಕಾರ್ಯಚರಣೆ ಮಾಡಿದ ಅಮಾಯಕ ರಾಧಾಮ್ಮ ದಂಪತಿಯ ಮನೆ ದ್ವಂಸ ಮಾಡಿದ್ದಾರೆ. ಒಂದು ವೇಳೆ ರಾಧಾಮ್ಮನ ಮನೆ ದ್ವಂಸ ಮಾಡಲು ಆದೇಶ ಇದ್ದರೆ ತೋರಿಸಿ. ಅನ್ಯಾಯಕ್ಕೆ ಒಳಗಾಗಿರುವ ದಂಪತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕೂರಿಸಿ ಉಪವಾಸ ಸತ್ಯಾಗ್ರಹ ಮಾಡಿಯಾದರೂ ಅವರಿಗೆ ನ್ಯಾಯ ಕೊಡಿಸುತ್ತೇವೆ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಸುರೇಶ್ ಭಟ್ ಮಾತನಾಡಿ ಸ್ವಾತಂತ್ರ್ಯ ಬಂದರೂ, ಇನ್ನೂ ಬ್ರಿಟೀಷ್ ಆಳ್ವಿಕೆಯಲ್ಲಿ ಇದ್ದಂತೆ ಕಾಣುತ್ತಿದೆ. ರಾಧಾಮ್ಮ ದಂಪತಿಗೆ ಮನೆ ಕಟ್ಟಿಕೊಡದಿದ್ದರೆ ನಾವು ತಾಲೂಕು ಕಚೇರಿಯ ಮುಂದೆ ಟೆಂಟ್ ಹಾಕಿ ಕೂತುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದಲಿತ ಹಕ್ಕುಗಳ ದ.ಕ. ಜಿಲ್ಲಾ ಉಪಾಧ್ಯಕ್ಷೆ ಈಶ್ವರಿ ಶಂಕರ್, ರೈತ ಸಂಘದ ಮುಖಂಡ ರೂಪೇಶ್ ರೈ, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ, ಬೆಳ್ತಂಗಡಿ ಯುತ್ ಕಾಂಗ್ರೆಸ್‌ನ ಹಕೀಂ, ಸುಳ್ಯ ರೈತ ಸಂಘದ ಶ್ಯಾಮ ಭಟ್, ದಿವಾಕರ್, ಲೋಹಿತಾಕ್ಷ, ಮಾದವ ಗೌಡ, ಪತ್ರಕರ್ತ ಸುಬ್ರಹ್ಮಣ್ಯ ಶಗ್ರಿತ್ತಾಯ ಮಾತನಾಡಿದರು.
ತಾಲೂಕು ಅಡಳಿತ ಸೌಧದ ಮುಂದೆ ಹೋಗಿ ಹೋರಾಟದ ಗೀತೆಯನ್ನು ಹಾಡಿದರು. ಸಹಾಯಕ ಕಮೀಷನರ್ ಅವರು ಮನವಿ ಸ್ವೀಕರಿಸಲು ಬಾರದಿದ್ದಾಗ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಸಮಾಧಾನಿಸಿದಾಗ ಮತ್ತೆ ಕಚೇರಿ ಅಧಿಕಾರಿಗಳಿಂದ ಮನವಿ ಸ್ವೀಕರಿಸಿ ಮುಖಂಡರು ಸಹಾಯಕ ಕಮೀಷನರ್ ಕಚೇರಿಗೆ ತೆರಳಿ ವಾಸ್ತವ ವಿಚಾರ ಮನವರಿಕೆ ಮಾಡಿದರು.