ಪ್ರತಾಪಚಂದ್ರ ಶೆಟ್ಟಿ-ಹಾಲಾಡಿ ಭೇಟಿ ರಾಜಕೀಯ ಅಚ್ಚರಿ

<ಹಲವು ದಶಕಗಳ ಬಳಿಕ ಮೊದಲ ಬಾರಿ ಪ್ರಭಾವಿ ನಾಯಕರ ನಡುವೆ ಅಭಿನಂದನೆ ನೆಪದಲ್ಲಿ ಮಾತುಕತೆ>

ವಿಜಯವಾಣಿ ಸುದ್ದಿಜಾಲ ಹಾಲಾಡಿ
ವಿಧಾನ ಪರಿಷತ್ ನೂತನ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಹೈಕಾಡಿ ಮನೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾನುವಾರ ಭೇಟಿ ನೀಡಿ ಅಭಿನಂದನೆ ಸಲ್ಲಿಸುವ ಮೂಲಕ ರಾಜಕೀಯ ಅಚ್ಚರಿ ಮೂಡಿಸಿದರು.

ಪ್ರಭಾವಿ ನಾಯಕರಾಗಿರುವ ಇಬ್ಬರು ಹಿಂದೆ ಹಲವಾರು ವೇದಿಕೆಗಳು, ಸಭೆಗಳು, ಧಾರ್ಮಿಕ ಕ್ಷೇತ್ರಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಅವರ ನಡುವೆ ಮಾತುಕತೆ ಇರಲಿಲ್ಲ. ಹಾಗಾಗಿ ಇಬ್ಬರ ಭೇಟಿಗೆ ಮಹತ್ವ ಬಂದಿದ್ದು, ಕುತೂಹಲಕ್ಕೂ ಕಾರಣವಾಗಿತ್ತು. ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಗೆ ಮುನ್ನುಡಿಯಾಗುವ ನಿರೀಕ್ಷೆಗಳಿವೆ.
ಶ್ರೀನಿವಾಸ ಶೆಟ್ಟಿಯವರೊಂದಿಗೆ ಬಿಜೆಪಿ ಬೆಂಬಲಿತ ಜಿಪಂ, ತಾಪಂ, ಗ್ರಾಪಂ ಸದಸ್ಯರು, ಕಾರ್ಯಕರ್ತರಿದ್ದರು.

ಗಣ್ಯರ ಭೇಟಿ: ಮಾಜಿ ಶಾಸಕ ಯು.ಆರ್ ಸಭಾಪತಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಜಿಪಂ ಸದಸ್ಯ ಪ್ರತಾಪ ಹೆಗ್ಡೆ ಮಾರಾಳಿ, ಸುಪ್ರೀತಾ ಉದಯ ಕುಲಾಲ ಮತ್ತಿತರರೂ ಅಭಿನಂದನೆ ಸಲ್ಲಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಇಲ್ಲಿವರೆಗೆ ಸಚಿವ ಸ್ಥಾನ ದೊರೆತಿಲ್ಲ. ಪ್ರತಾಪಚಂದ್ರ ಶೆಟ್ಟರಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಸಿಕ್ಕಿರುವುದು ಕ್ಷೇತ್ರಕ್ಕೆ ಸಂದ ಗೌರವ. ಇದು ಸೌಹಾರ್ದ ಭೇಟಿ. ಅವರ ಸಭಾಧ್ಯಕ್ಷತೆಯಲ್ಲಿ ಸದನದಲ್ಲಿ ಒಳ್ಳೆಯ ಚರ್ಚೆ ನಡೆಯಲಿ. ಮುಂದಿನ ಬೆಳವಣಿಗೆಗೆ ದೇವರು ಅನುಗ್ರಹಿಸಲಿ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ, ಕುಂದಾಪುರ