Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಪ್ರಶ್ನೆ ಪರಿಹಾರ

Thursday, 20.09.2018, 3:03 AM       No Comments

ಕಳೆದ ಕೆಲವು ತಿಂಗಳುಗಳಿಂದ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅನವಶ್ಯಕ ಆರೋಪವನ್ನು ನನ್ನ ತಲೆಗೆ ಕಟ್ಟಿ ಹಲವು ರೀತಿಯ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ನಾಲ್ವರು ಕೇಡಿಗಳ ಗುಂಪು ಹುಡುಗಿಯೋರ್ವಳನ್ನು ಎತ್ತಿಕಟ್ಟಿ ಒಬ್ಬ ಅಮಾಯಕ ಮ್ಯಾನೇಜರ್ ಕೆಲಸ ಹೋಗುವಂತೆ ಮಾಡಿದ್ದರಂತೆ. ನನಗೆ ಜೀವನಾಧಾರದ ಮೂಲಸೆಲೆಯಾದ ಕೆಲಸಕ್ಕೆ ತೊಂದರೆ ಬರಬಹುದೇ?

| ದತ್ತಮೂರ್ತಿ ಆರ್.ಕೆ. ಚಿದಂಬರಂ

ಸತ್ಯಂ ವದ, ಧರ್ಮಂ ಚರ ಎಂಬ ಲೋಕೋಕ್ತಿಯನ್ನು ನೀವು ಕೇಳಿಸಿಕೊಂಡಿರಲು ಸಾಕು. ಸತ್ಯವನ್ನೇ ನುಡಿ, ಧರ್ಮದಲ್ಲೇ ಹೆಜ್ಜೆ ಇಡು ಎಂದು ಅರ್ಥ ಇದಕ್ಕೆ. ಆದರೆ ನ್ಯಾಯದ ನಡೆ ಎಂದರೆ ದಡ್ಡತನ ಎಂದು ಅನಿಸಿಕೊಳ್ಳುವ ವರ್ತಮಾನವೂ ಸೃಷ್ಟಿಯಾದಾಗ ನಿಮ್ಮ ಕಚೇರಿಯ ಕೇಡಿಗಳ ಗುಂಪಿನಂತೆ ಎಲ್ಲ ಆಫೀಸುಗಳಲ್ಲೂ ಬಹುತೇಕ ಇಂಥದೊಂದು ಗುಂಪು ಸಮಸ್ಯೆ ತರುತ್ತಲೇ ಇರುತ್ತದೆ. ನಿಮ್ಮ ಕೆಲಸವನ್ನು ನೀವು ನಿರ್ವಹಿಸಿ. ವರ್ತಮಾನವು ಕೇಡಿಗಳಿಗೆ ಸಹಕರಿಸುವ ಸಂದರ್ಭ ಇದ್ದಾಗ ಹಲವು ಸಲ ಸತ್ಯ ಸೋಲುತ್ತದೆ. ರಾಹುದೋಷವು ಸತ್ಯವನ್ನು ಸೋಲಿಸುವ ರೀತಿಯಲ್ಲಿ ಜನ್ಮಭಾವಕ್ಕೆ ತಗುಲಿಕೊಂಡಿದೆ. ಹುಷಾರಾಗಿರಿ. ಶಿವ, ಚಂಡಿಕಾ, ನರಸಿಂಹರ ಸ್ತುತಿ ಮಾಡಿ.

ಮೂರು ತಿಂಗಳ ಹಿಂದೆ ಒಬ್ಬ ಹುಡುಗ ನನ್ನ ಬಳಿ ತನ್ನ ಪ್ರೇಮಾಲಾಪನೆ ಮಾಡಿದ. ನನಗೆ ನಿಜಕ್ಕೂ ಶಾಕ್ ಆಯಿತು. ಯಾಕೆಂದರೆ ಸಿನಿಮಾದಲ್ಲಿ ಇಂಥವನ್ನು ನೋಡಿದ್ದೇನೆ. ನಿಜಜೀವನದಲ್ಲಿ ಇದೆಲ್ಲ ಏನು ಎಂಬ ಗಾಬರಿ ಆಯ್ತು. ನನಗೆ ಆಸಕ್ತಿ ಇರಲಿಲ್ಲ. ಈಗ ಆತ ಬೇರೊಬ್ಬಳ ಜತೆ ತಿರುಗಾಡುತ್ತಿದ್ದಾನೆ. ನನಗೆ ನನ್ನಲ್ಲೇ ವಿಚಿತ್ರ ಎನಿಸುವ, ಅಸೂಯೆಯೋ ಎಂಬ ರೀತಿಯ ವಿಚಿತ್ರ ಸ್ಥಿತಿಗತಿ ಉಂಟಾಗಿದೆ. ಯಾಕೆ ಮನಸ್ಸು ನನಗೇ ಜಿಗುಪ್ಸೆ ತರುವ ರೀತಿಯಲ್ಲಿ ಯಾತನೆ ನೀಡುತ್ತಿದೆ?

| ಶಕುಂತಲಾ ತಾಳೇಕರ್ ಪಣಜಿ, ಗೋವಾ

‘ಅವರನ್ನು ಬಿಟ್ಟುಬಿಡೋಣ. ನನಗೇ ನನ್ನ ಕೆಲಸ ನೋಡಿಕೊಳ್ಳುವ ದಿಸೆಯಲ್ಲಿ ನಾನು ಪ್ರಾಮಾಣಿಕತೆ ಪ್ರದರ್ಶಿಸುತ್ತೇನೆ’ ಎಂದು ಸುಮ್ಮನಿರಿ. ವೈರುಧ್ಯ ಪದರುಗಳ ರಾಹು (ಸರ್ಪ) ನಿಮ್ಮನ್ನೀಗ ನಿಯಂತ್ರಿಸುತ್ತಿರುವ ದಶಾಕಾಲ. ಜತೆಗೆ ಮನಸ್ಸನ್ನು ನಿಯಂತ್ರಿಸಲಾಗದ ಬುವಿ ಧಾತು ಸೇರಿಕೊಂಡ ಕೇತು ನಿಮ್ಮನ್ನು ಭಾವನಾತ್ಮಕವಾಗಿ ಬದುಕಲು ಬಿಡದಂತೆ ಚಂದ್ರನನ್ನು ಘಾಸಿಸಿದ್ದಾನೆ. ಒಂದು ದೊನ್ನೆಯಲ್ಲಿ ಭತ್ತದ ಅರಳು, ಹಸುವಿನ ಹಾಲಿನ ಮೊಸರು, ತೆಂಗಿನ ತುರಿ, ತುಳಸೀದಳ ಇರಿಸಿ ಗಣಪತಿಗೆ ನೈವೇದ್ಯ ಮಾಡಿ ಸೇವಿಸಿ. ಗಣಪತಿ ಸ್ತುತಿಯಿಂದ ಶಾಂತಿ ಲಭ್ಯ.

ಬಾಲ್ಯದ ಅವಮಾನವನ್ನು ತಡೆಯಲಾಗದ ಯಾತನಾಮಯ ನೆನಪು ಈಗಲೂ ಕಿತ್ತು ತಿನ್ನುತ್ತಿವೆ. ಅವಮಾನ ಮಾಡಿದ ರಾಕ್ಷಸ ಈಗಲೂ ಬದುಕಿದ್ದಾನೆ. ಅವನಿಗೆ ಸುಮಾರು 95 ವರ್ಷ. ಕೊಟ್ಟ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದ ನನ್ನ ತಂದೆಯನ್ನು ಕೆನ್ನೆಗೆ ಬಾರಿಸಿ ಗೋಳು ಹುಯ್ದುಕೊಳ್ಳುತ್ತಿದ್ದ. ತಾಯಿಗೆ ಅವಮಾನ ಮಾಡುತ್ತಿದ್ದ. ಈಗ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಅವನ ಮನೆತನದ ಸ್ಥಿತಿ, ಮಕ್ಕಳ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದೆ. ಆದರೆ ಆತ ಅನಾರೋಗ್ಯದ ಯಾತನೆಯಲ್ಲಿ ನರಳುತ್ತಿದ್ದಾನೆ. ಇನ್ನೂ ಯಾಕೆ ಇಂಥವರು ಬದುಕಿರುತ್ತಾರೆ? ತಪ್ಪು ತಿಳಿಯಬೇಡಿ. ಅನುಭವಿಸಿದ ಅವಮಾನದಿಂದಾಗಿ ಪ್ರಶ್ನಿಸುತ್ತಿದ್ದೇನೆ.

| ಅಹಲ್ಯಾ ರಾಮ ಶೆಟ್ಟಿ ಹಾಸನ

ನಿಮ್ಮದು ಹತಾಶೆಯ ಪ್ರಶ್ನೆಯೂ ಆಗಿದೆ. ಹಿರಿಯರು ಅಥವಾ ಯಾವುದನ್ನು ತಿಳಿಯಲಾಗುವುದಿಲ್ಲವೋ ಅದನ್ನು ಭಾರತೀಯ ಸಿದ್ಧಾಂತ, ಪರಂಪರೆಯು ಅದೃಷ್ಟ ಎಂದು ಕರೆಯಿತು. ಯಾಕೆ ಯಾತನೆ ಎಂಬ ಪ್ರಶ್ನೆ ಬಂದಾಗ ಹಿಂದಿನ ಕರ್ಮ ಎಂದು ಅದನ್ನು ವಿವರಿಸಿತು. 95 ವರ್ಷದ ಮುದುಕನ ಮಕ್ಕಳು ಸುಖವಾಗಿದ್ದಾರೆ ಎಂದು ಸರ›ನೆ ನಿರ್ಣಯಕ್ಕೆ ಬರಬೇಡಿ. ಯಾರೂ ಹೇಗೆ ಕಾಣುತ್ತಾರೋ ಹಾಗೆ ಇರುವುದಿಲ್ಲ. ಈಗ ಆ ಮುದುಕ ಅನುಭವಿಸುತ್ತಿರುವ ಯಾತನೆ, ಅನಾರೋಗ್ಯ ಇತ್ಯಾದಿಗಳನ್ನು ಗಮನಿಸಿ ನಿಮಗೋ, ನಿಮ್ಮಂಥವರಿಗೋ ಕೊಟ್ಟ ನೋವು ಈಗ ಹಿಂತಿರುಗಿ ಅವನಿಗೇ ಬಡಿದಿದೆ. ಮನಸ್ಸಿನ ಮೂಲೆಯಲ್ಲಿ (ಚಂದ್ರನೊಟ್ಟಿಗಿನ ಕುಜ ನೀಚನಾಗಿರುವುದರಿಂದ ನೀಚಭಂಗ ರಾಜಯೋಗ ಹರಳುಗಟ್ಟದೆ ಇದ್ದಿರುವುದರಿಂದ) ನಿಮಗೆ ಒಂದು ಸಂಘರ್ಷವಿದೆ. ನಿರಂತರವಾಗಿ ಶಿವನ ಸ್ತುತಿ ಮಾಡಿ. ಲಿಂಬೆಯ ಹಣ್ಣಿನ ಭಾಗಗಳಲ್ಲಿ ಹಚ್ಚಿದ ದೀಪವನ್ನು ಇರುಳಲ್ಲಿ ದೇವಿಗೆ ಬೆಳಗಿ. ನೀಲ ಬೆಳಕಿನ ಬಲ್ಬ್ ಮಾತ್ರ ಮಂದವಾಗಿ ಉರಿಸಿ. ಚಂದ್ರಭಾಗಾ ದೇವಿಯನ್ನು ಧ್ಯಾನಿಸಿ. ಶ್ರೀ ರಾಜರಾಜೇಶ್ವರಿ ನೆಮ್ಮದಿಗೆ ಕಾರಣಳಾಗುತ್ತಾಳೆ.

ನನಗೆ ಎರಡು ಹೆಣ್ಣುಮಕ್ಕಳು. ಈಗ ಮೂರನೆಯವರ ಬಗೆಗೆ ಯೋಚನೆ. ಗಂಡುಮಗುವಾಗಬಹುದು ಎಂಬ ಯೋಚನೆ. ನಾನು ಮತ್ತು ನನ್ನವಳ ಕುಂಡಲಿಗಳ ಪ್ರಕಾರ ಈ ದಿಸೆಯಲ್ಲಿ ಮುಂದುವರಿಯಬಹುದೇ? ಸಲಹೆ ನೀಡಿ.

| ದಕ್ಷಿಣಾಮೂರ್ತಿ ಶೇಷಗಿರಿಯಪ್ಪ ಯಾದವಾಡ

ಸವಾಲಾಗುವ ಪ್ರಶ್ನೆಯನ್ನು ಕೇಳಿದ್ದೀರಿ. ಬದುಕಿನಲ್ಲಿ ತಾನು ಪಡೆಯುವ ವರ್ಚಸ್ಸು, ಹಣ, ಧೈರ್ಯದ ಮೂಲಕ ಗೆಲುವು, ಸುಖ, ಮಕ್ಕಳು, ನಿಕೃಷ್ಟ ಸ್ಥಿತಿಗತಿ, ಬಾಳಸಂಗಾತಿ, ಮರಣ (ಆರೋಗ್ಯ, ಅನಾರೋಗ್ಯವೂ ಸೇರಿ), ಭಾಗ್ಯ, ಮಾಡುವ ಕೆಲಸ, ಲಾಭ-ನಷ್ಟಗಳ ವಿವರ, ಚೆಲುವಾದ ತರ್ಕ, ವಿಶ್ಲೇಷಣೆಗಳನ್ನು ಜಾತಕ ಕುಂಡಲಿಯು ಆಯಾ ವ್ಯಕ್ತಿಯ ಸಂದರ್ಭದಲ್ಲಿ ಒದಗಿಸುತ್ತದೆ. ನನ್ನನ್ನು ಕೇಳುವುದಾದರೆ ಬುಧ, ಚಂದ್ರನ ಎಳೆಗಳು ನಿಮ್ಮ ಜಾತಕದಲ್ಲೂ; ಗುರು, ರಾಹುವಿನ ಎಳೆಗಳು ನಿಮ್ಮ ಮನೆಯವರ ಜಾತಕದಲ್ಲೂ ನಿಮ್ಮ ಇಚ್ಛೆಯ ದಾರಿಯ ಬೆಳಕನ್ನು ವಿಸ್ತರಿಸಲು ಆಸಕ್ತಿ ಹೊಂದಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಆಗಿದೆ.

ಈಗ ಹತ್ತು ವರ್ಷಗಳಿಂದ ಹೊರದೇಶಗಳಲ್ಲಿಯೇ ಕೆಲಸವಾಗಿದ್ದು ಭಾರತಕ್ಕೆ ಹಿಂದಿರುಗಿ ಬರುವುದೋ, ಬೇಡವೋ ಎಂಬುದು ಪ್ರಶ್ನೆಯಾಗಿದೆ. ಒಂದು ನಿರ್ಧಾರ ಇಷ್ಟು ಕಷ್ಟವೇ ಎಂಬಂತೆ ನನ್ನ ಪತ್ನಿ, ‘ಈಗ ಇರುವಲ್ಲಿಯೇ ಇರೋಣ’ ಎನ್ನುತ್ತಿದ್ದಾಳೆ. ಎರಡು ಮಕ್ಕಳು. ಒಂದಕ್ಕೆ ಐದು ವರ್ಷ. ಇನ್ನೊಂದಕ್ಕೆ ಮೂರು ವರ್ಷ. ಇಲ್ಲೀಗ ತೊಂದರೆ ಏನಿಲ್ಲ. ಮುಂದೆ ಬರಬಹುದೇ?

| ವಿಶ್ವೇಶ್ವರ ಹೆಗಡೆ ಆಮ್್ಟರ್​ಡ್ಯಾಮ್

ತೊಂದರೆ, ಸುಖ, ಶಾಂತಿ, ಸಮಾಧಾನ, ದಾರುಣತೆ ಇತ್ಯಾದಿ ಭಾರತದಲ್ಲಿ ಬರಬಹುದು ಬರಲಾರದು, ಈಗ ಇರುವಲ್ಲಿ ಬರಲಾರದು, ಬರಬಹುದು ಎಂಬುದು ಗ್ರಹಗಳ ಆಯಾ ಕಾಲದ ಚದುರಂಗದ ಆಟದ ಮೇಲೆಯೇ ಅವಲಂಬಿತ. ಗುರುಗ್ರಹವು ವಿಶಿಷ್ಟತೆಯೋ ಎಂಬಂತೆ (ಎಲ್ಲರ ಜಾತಕದಲ್ಲೂ ಹೀಗೆಯೇ ಎಂದಲ್ಲ. ನಿಮ್ಮಿಬ್ಬರ ಜಾತಕದ ದೃಷ್ಟಿಯಿಂದ ವಿಶ್ಲೇಷಣೆ ನಡೆಸಿದಾಗ) ಪಡೆದಿರುವ ಬಲ, ದೌರ್ಬಲ್ಯಗಳ ಮೂಲಕ ಪರದೇಶ ವಾಸವನ್ನು ಹರಳುಗಟ್ಟಿಸುತ್ತಿದೆ. ಆದರೆ ನಿಮ್ಮಿಬ್ಬರ ಭಿನ್ನ

ಮನಃಸ್ಥಿತಿಗಳಿಂದಾಗಿ ಈ ಕಾರಣಕ್ಕಾಗಿ ಮಾತಿನ ಚಕಮಕಿ, ಬಿಕ್ಕಟ್ಟು ನಿರ್ವಿುಸಿಕೊಳ್ಳದಿರಿ. ಮುಂದಿನ ಕೆಲವು ಸಂಭಾವ್ಯ ತೊಂದರೆಗಳನ್ನು ವಿಫಲಗೊಳಿಸಲು ಕ್ರಮವಾಗಿ ನೀವು ವಿಷ್ಣು, ಮನೆಯವರು ದುರ್ಗಾ ಸಹಸ್ರನಾಮಾವಳಿ ಓದಿ.

ನಾನೊಂದು ಪಬ್ಲಿಕ್ ಸೆಕ್ಟರ್ ಕಂಪನಿಯಲ್ಲಿ ಕೆಲಸದಲ್ಲಿರುವುದು. ಜವಾಬ್ದಾರಿಯುತ, ಒಳ್ಳೆಯ ಸಂಬಳದ ಕೆಲಸ. ಉಲ್ಲಸಿತನಾಗಿರುತ್ತೇನೆ. ಆದರೆ ಸೋಜಿಗವೋ ಎಂಬಂತೆ ಒಬ್ಬ ವ್ಯಕ್ತಿ (ಯಾರು ಎಂದು ಬೇಡ) ಷೇರುಗಳ ವಿಷಯದಲ್ಲಿ ಮಾತನಾಡಲು, ವ್ಯವಹರಿಸಲು ಬಂದ ದಿನ (ಅವನು ಬಂದವನೇ ಸುಮ್ಮನಿರುವುದಿಲ್ಲ. ಕೈ ಕುಲುಕುತ್ತಾನೆ. ಬೂದಿಯಂಥದ್ದೇನೋ ನನ್ನ ಕೈಗೆ ಲೇಪಗೊಳ್ಳುತ್ತದೆ. ಭ್ರಮೆಯಲ್ಲ ಇದು. ನಂಬಿ ಇದನ್ನು.) ನನ್ನ ಮನೆಯಲ್ಲಿ ಪತ್ನಿಯ ಜತೆಗೋ ದೆಹಲಿಯಲ್ಲಿರುವ ನಮ್ಮ ಮೇಲಧಿಕಾರಿಯ ಜತೆಗೋ ಘರ್ಷಣೆ ಆಗಿಯೇ ಆಗುತ್ತದೆ. ಏನಿದು? ಪರಿಹಾರ ಇದೆಯೇ?

| ಸಣ್ಣಸೋಮಪ್ಪ ರೆಡ್ಡಿಗಾರ್ ಮಾನ್ವಿ

‘ನಂಬಿ ಇದನ್ನು’ ಎಂದು ಹೇಳುವ ಜರೂರಿಲ್ಲ. ಜಗದ ವೈಚಿತ್ರ್ಯಳು ಅಸಂಖ್ಯ. ಲಿಂಬೆಹಣ್ಣಿಗೆ ಚುಚ್ಚಿದರೆ ತನಗೆ ನೋವು ಎಂದು ಕೂಗುವವರಿದ್ದಾರೆ. ಬೀರು ಕುಡಿದು ಮೈಯಲ್ಲಿ ಒಂದು ರೀತಿಯ ನಸುಲೇಪದ ಬೆಳಕಿನ ಪುಂಜ ತೋರುವವರಿದ್ದಾರೆ. ವಸುಂಧರೆಯಲ್ಲಿ ಏನಿಲ್ಲ, ಏನಿದೆ ಎಂಬುದನ್ನು ತಿಳಿಯುವುದು ಕಷ್ಟ. ನಿಮ್ಮ ಜಾತಕದಲ್ಲಿ ಸೂರ್ಯನಿಂದಾಗಿ ಕ್ಷೀಣವಾದ ಚಂದ್ರನು, ಬುಧನಿಂದಾಗಿಯೂ ಯಾತನೆಪಡುತ್ತಿರುವ ಅದೇ ಚಂದ್ರನು ಕೆಲವು ರೀತಿಯ ಅನೂಹ್ಯ ಸಂವೇದನೆಗಳನ್ನು ನಿಮ್ಮಲ್ಲಿ ಜಿನುಗುಗಿಸುತ್ತಾನೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಕೈ ಕುಲುಕುವುದು ಅನಿವಾರ್ಯವಾದರೂ, ಚಾತುರ್ಯದಿಂದ ದೂರದಿಂದಲೇ ಕೈಮುಗಿಯುವ ಸಂಪ್ರದಾಯಕ್ಕೆ ಅವಕಾಶ ರೂಪಿಸಿಕೊಳ್ಳಿ. ಉಪ್ಪಿನೊಂದಿಗೆ ಬೆರೆಸಿದ ಒಣ ಇಂಗು, ಸಾಸಿವೆಗಳನ್ನು ಒಂದು ಶುದ್ಧ ಕಾಗದದ ಪೊಟ್ಟಣದಲ್ಲಿ (ಸೋರದ ಹಾಗೆ) ಇಟ್ಟುಕೊಳ್ಳಿ. ‘ಪುರಾಣರೂಪಪರಮಾ ಪರತಂತ್ರ ವಿನಾಶಿನಿ’ ಎಂಬ ಸಾಲುಗಳನ್ನು 27 ಬಾರಿ ದೇವಿಯೆದುರು ಪಠಿಸಿ. ಶ್ರೀ ಸದ್ಗುರು ದತ್ತಾತ್ರೇಯ ಸಹಸ್ರನಾಮಾವಳಿ ಓದಿ. ಹಸಿರು ಬಾಳೆಲೆಯಲ್ಲಿ ಎರಡು ಬಾಳೆಹಣ್ಣು ಇರಿಸಿ, ದೇವಿಗೆ, ದತ್ತನಿಗೆ ನೈವೇದ್ಯ ಮಾಡಿ ಸೇವಿಸಿ. ಕ್ಷೇಮ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top