ಆಕ್ಸ್‌ಬರ್ಗ್‌ನಲ್ಲಿ ಪ್ರಶಾಂತ್ ಅಂತ್ಯಸಂಸ್ಕಾರ

ಉಡುಪಿ: ಜರ್ಮನಿಯ ಮ್ಯೂನಿಚ್‌ನಲ್ಲಿ ದುಷ್ಕರ್ಮಿಯ ದಾಳಿಗೆ ಬಲಿಯಾದ ಬಿ.ವಿ ಪ್ರಶಾಂತ್ ಬಸ್ರೂರು ಮೃತದೇಹದ ಅಂತ್ಯಸಂಸ್ಕಾರ ಗುರುವಾರ ಸಾಯಂಕಾಲ ನೆರೆವೇರಿದೆ.

ಆಕ್ಸ್‌ಬರ್ಗ್‌ನಲ್ಲಿ ಹಿಂದು ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆದಿದ್ದು, ಪ್ರಶಾಂತ್ ಅವರ ತಾಯಿ ವಿನಯ, ಸ್ಮಿತಾ ಅವರ ತಂದೆ ಡಾ.ಚಂದ್ರಮೌಳಿ, ತಾಯಿ ವಿದ್ಯಾ ಸೇರಿದಂತೆ ಪ್ರಶಾಂತ್ ಅವರ ಸಹದ್ಯೋಗಿಗಳು, ಸ್ನೇಹಿತರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತಿದ್ದು, ಸಂಪೂರ್ಣ ಗುಣಮುಖರಾಗಲು ಎರಡು, ಮೂರು ವಾರ ಬೇಕಾಗಬಹುದು ಎಂಬ ಮಾಹಿತಿ ಲಭಿಸಿದೆ.

24 ಲಕ್ಷ ರೂ. ಸಂಗ್ರಹ: ಗೋ ಫಂಡ್ ಮೀ ವೆಬ್‌ಸೈಟ್ ಮೂಲಕ ಪ್ರಶಾಂತ್ ಕುಟುಂಬಕ್ಕೆ ನೆರವಾಗಲು ನಡೆಯುತ್ತಿರುವ ದೇಣಿಗೆ ಸಂಗ್ರಹಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮಂಗಳವಾರ ರಾತ್ರಿ ಹೊತ್ತಿಗೆ ಸುಮಾರು 20 ಲಕ್ಷ ರೂ. ಸಂಗ್ರಹವಾಗಿದ್ದನ್ನು ‘ವಿಜಯವಾಣಿ’ ವರದಿ ಮಾಡಿತ್ತು. ಈಗ ಗುರುವಾರ ರಾತ್ರಿ ಹೊತ್ತಿಗೆ ಈ ಮೊತ್ತ 31,213 ಯೂರೋ (24.16 ಲಕ್ಷ ರೂ.)ಗೆ ಮುಟ್ಟಿದೆ. 464 ಮಂದಿ ದೇಣಿಗೆ ನೀಡಿದವರ ಪಟ್ಟಿಯಲ್ಲಿದ್ದಾರೆ. ನೆರವಾದವರಲ್ಲಿ ಭಾರತೀಯರೇ ಹೆಚ್ಚಿದ್ದು, ಕೆಲವು ವಿದೇಶೀಯರೂ ಸಹಾಯಹಸ್ತ ಚಾಚಿದ್ದಾರೆ. ಪ್ರಶಾಂತ್ ಅವರ ಗೆಳೆಯರೇ ಸೇರಿಕೊಂಡು ಈ ಅಭಿಯಾನ ಆರಂಭಿಸಿದ್ದು, 25,000 ಯೂರೋ (19.29 ಲಕ್ಷ ರೂ.) ಸಂಗ್ರಹಿಸುವುದು ಅಭಿಯಾನದ ಗುರಿಯಾಗಿತ್ತು. ಒಂದೇ ದಿನದಲ್ಲಿ ಈ ಗುರಿಯ ಸನಿಹ ತಲುಪಿದ್ದು, ಈಗ ಮೂರನೇ ದಿನ ಗುರಿ ಮೀಟಿ ದೇಣಿಗೆ ಸಂಗ್ರಹ ಮುಂದುವರಿದಿದೆ ಎಂದು www.gofundme.com ಹೇಳಿದೆ.