ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಡೈರೆಕ್ಟರ್ ಎಂದು ಹೆಸರಾದವರು ಪ್ರಶಾಂತ್ ನೀಲ್. ಅವರು ಮಾಡಿದ್ದು ಉಗ್ರಂ ಮತ್ತು ಕೆಜಿಎಫ್ ಎಂಬ ಎರಡೇ ಎರಡು ಚಿತ್ರಗಳಾದರೂ, ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿ, ಅವರಿಗೆ ಅಂಥದ್ದೊಂದು ಬಿರುದನ್ನು ನೀಡಿದೆ. ಪ್ರಶಾಂತ್ ಇಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅವರಿಗೆ ಶುಭ ಕೋರಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣಕ್ಕೆ ಮರಳಿದ ಮೋಹಕತಾರೆ ರಮ್ಯಾರಿಂದ ಸಮಯ ಮೀಸಲಿಡಲು ಕರೆ…!
ಪ್ರಶಾಂತ್ ನೀಲ್ ಅವರ ಆಪ್ತವಲಯ ಮಧ್ಯರಾತ್ರಿಯೇ ಅವರನ್ನು ಭೇಟಿ, ಅವರಿಗೆ ಶುಭ ಹಾರೈಸಿದೆ. ಅಷ್ಟೇ ಅಲ್ಲ, ತಮ್ಮ ಹಿತೈಷಿಗಳು ತಮಗಾಗಿ ತಂದಿದ್ದ ಎರಡು ಕೇಕ್ಗಳನ್ನು ಪ್ರಶಾಂತ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಪ್ರಶಾಂತ್ ಅವರ ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರಳಿ, ತಿಲಕ್, ನಿರ್ಮಾಪಕ ವಿಜಯಕುಮಾರ್ ಕಿರಗಂದೂರು, ಛಾಯಾಗ್ರಾಹಕ ಭುವನ್ ಗೌಡ ಸೇರಿದಂತೆ ಹಲವರು ಭಾಗವಹಿಸಿ ಅವರಿಗೆ ಶುಭ ಕೋರಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಮೂಲಕ ಪ್ರಶಾಂತ್ ಅವರಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬ ಸಂಭ್ರಮದಲ್ಲಿರೋ ಪ್ರಿಯಾಮಣಿಯವರ ಹಾಟ್ ಫೋಟೋ ಗ್ಯಾಲರಿ ನಿಮಗಾಗಿ
ಬರೀ ಕನ್ನಡದವರೇ ಅಷ್ಟೇ ಅಲ್ಲ, ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಡಿವಿವಿ ಎಂಟರ್ಟೈನ್ಮೆಂಟ್ ಸಹ ಪ್ರಶಾಂತ್ ಅವರಿಗೆ ಶುಭ ಕೋರಿದ್ದಾರೆ. ಹಲವು ದಿನಗಳಿಂದ ಪ್ರಶಾಂತ್ ಅವರು ತೆಲುಗು ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಲೇ ಇತ್ತು. ಆದರೆ, ಪ್ರಶಾಂತ್ ಈ ವಿಷಯವಾಗಿ ಎಲ್ಲೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಇದೀಗ ತೆಲುಗು ನಿರ್ಮಾಣ ಸಂಸ್ಥೆಗಳು ಸಹ ಪ್ರಶಾಂತ್ ಹುಟ್ಟುಹಬ್ಬಕ್ಕೆ ಶುಭ ಕೋರಿರುವುದರಿಂದ, ಮುಂದಿನ ದಿನಗಳಲ್ಲಿ ಪ್ರಶಾಂತ್ ತೆಲುಗಿನಲ್ಲೂ ಚಿತ್ರ ನಿರ್ದೇಶಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಸದ್ಯಕ್ಕೆ ಪ್ರಶಾಂತ್ ಅವರು ಕೆಜಿಎಫ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನು 20 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಕ್ಕ ನಂತರ, ಚಿತ್ರೀಕರಣ ಶುರುವಾಗುವ ಸಾಧ್ಯತೆಗಳಿವೆ.