ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ. ಸೆಕೆಂಡ್ ಇನ್ನಿಂಗ್ಸ್ನ ಮೊದಲನೇ ಎಲಿಮಿನೇಷನ್ ಇಂದು ನಡೆಯಬೇಕಿದೆ. ಶನಿವಾರ ಯಾರನ್ನೂ ಸೇಫ್ ಮಾಡದ ಕಿಚ್ಚ ಭಾನುವಾರ ಪ್ರಶಾಂತ್ ಅವರನ್ನು ಮನೆಯಿಂದ ಹೊರಗೆ ಕರೆಯಲಿದ್ದಾರೆ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಎಲಿಮಿನೇಷನ್ ಸಮಯದಲ್ಲಿ ಪ್ರಶಾಂತ್ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆಯಾದರೂ ನಿಜಕ್ಕೂ ಅವರು ಎಲಿಮಿನೇಟ್ ಆಗಿರುವುದೇ ಇಲ್ಲ. ಪ್ರಶಾಂತ್ ಅವರೊಂದಿಗೆ ಸಣ್ಣದೊಂದು ಗೇಮ್ ಅನ್ನು ಸ್ವತಃ ಬಿಗ್ಬಾಸ್ ಆಡುತ್ತಾರೆ.
ಎಲಿಮಿನೇಟ್ ಆಗಿ ಪ್ರಶಾಂತ್ ಅವರು ಮನೆಯಿಂದ ಹೊರಗೆ ಬಂದ ನಂತರ ಕಿಚ್ಚ ಮನೆಯ ಮಂದಿಗೆಲ್ಲ ಒಂದು ಗೇಮ್ ಹೇಳುತ್ತಾರೆ. ಪ್ರಶಾಂತ್ ಅವರು ಎಲಿಮಿನೇಟ್ ಆಗಿಲ್ಲ. ಸ್ವಲ್ಪ ಹೊತ್ತಲ್ಲಿ ಅವರು ಬರುತ್ತಾರೆ. ಆಗ ನೀವ್ಯಾರೂ ಅವರು ಕಾಣಿಸುತ್ತಿದ್ದಾರೆ ಎನ್ನುವಂತೆ ವರ್ತಿಸಬಾರದು. ಪ್ರಶಾಂತ್ ಕಾಣಿಸುತ್ತಲೇ ಇಲ್ಲ ಎನ್ನುವಂತೆ ಮಾಡಬೇಕು ಎಂದು ಹೇಳುತ್ತಾರೆ. ಅದರಂತೆ ಸ್ಪರ್ಧಿಗಳು ಮಾಡುತ್ತಾರೆ ಕೂಡ. ಎಲಿಮಿನೇಟ್ ಎಂದು ಹೊರಗೆ ಕರೆದು ಮತ್ತೆ ಒಳಗೆ ಕಳುಹಿಸಿ, ಈಗ ಯಾರಿಗೂ ನಾನು ಕಾಣುತ್ತಲೇ ಇಲ್ಲವೇ ಎನ್ನುವ ಗೊಂದಲಗಳಲ್ಲಿ ಬಿದ್ದ ಪ್ರಶಾಂತ್ ಅವರ ಪೇಚಾಟವನ್ನು ಇಂದಿನ ಬಿಗ್ಬಾಸ್ ಸಂಚಿಕೆಯಲ್ಲಿ ನೀವು ನೋಡಬಹುದು. ಅದರ ಸಣ್ಣದೊಂದು ಪ್ರೋಮೋ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. (ಏಜೆನ್ಸೀಸ್)